ಸಂಪ್ರದಾಯವೆಂಬ ಸಂಕೋಲೆಯಿಂದ ಮುಕ್ತಿ - ಅಫ್ಘಾನ್ ಮಹಿಳೆಯರ ಸಬಲೀಕರಣಕ್ಕೆ ಯುವತಿಯ ಹೋರಾಟ

ಟೀಮ್​ ವೈ.ಎಸ್​. ಕನ್ನಡ

ಸಂಪ್ರದಾಯವೆಂಬ ಸಂಕೋಲೆಯಿಂದ ಮುಕ್ತಿ - ಅಫ್ಘಾನ್ ಮಹಿಳೆಯರ ಸಬಲೀಕರಣಕ್ಕೆ ಯುವತಿಯ ಹೋರಾಟ

Tuesday February 16, 2016,

6 min Read

ಫರಿಶ್ತೆ ಫೊರೊಗ್ ಒಬ್ಬ ನಿರಾಶ್ರಿತೆಯಾಗಿ ಬದುಕು ಆರಂಭಿಸಿದವರು. ಆಕೆಯ ಪೋಷಕರು ಅಫ್ಘಾನಿಸ್ತಾನದ ಯುಎಸ್‍ಎಸ್‍ಆರ್ ಆಕ್ರಮಣದ ಸಮಯದಲ್ಲಿ ಇರಾನ್‍ಗೆ ವಲಸೆ ಹೋಗಿದ್ದರು. ಫರಿಶ್ತೆ ಕೂಡ ಇರಾನ್‍ನಲ್ಲೇ ಜನಿಸಿದ್ದಾರೆ. ಅಲ್ಲೇ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದಾರೆ. ತಾಲಿಬಾನ್ ಆಡಳಿತ ಪತನಗೊಂಡು ಒಂದು ವರ್ಷದ ಬಳಿಕ ಫರಿಶ್ತೆ ಕುಟುಂಬದವರು ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಲು ನಿರ್ಧರಿಸಿದ್ರು. ನಿರಾಶ್ರಿತರಾಗಿ ಬದುಕು ಸವೆಸುವುದು ನಿಜಕ್ಕೂ ಕಠಿಣ ಎನ್ನುತ್ತಾರೆ ಫರಿಶ್ತೆ. ಶಿಕ್ಷಣ, ಸಾಮಾಜಿಕ ಸೇವೆಗಳು, ಮತ್ತು ಅಸಂಖ್ಯಾತ ಇತರ ಸೇವೆಗಳಿಗೆ ಪ್ರವೇಶ ಪಡೆಯುವುದು ನಿಜಕ್ಕೂ ಕಷ್ಟಕರ. ಈ ಎಲ್ಲ ಅಭಾವಗಳ ಹೊರತಾಗಿಯೂ ಪೋಷಕರು ನಮಗಾಗಿ ಹಲವು ತ್ಯಾಗಗಳನು ಮಾಡಿದ್ದಾರೆ. 8 ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಿದ್ದಾರೆ ಅನ್ನೋದು ಅವರ ಹೆಮ್ಮೆಯ ನುಡಿ.

image


ಶಿಕ್ಷಣದ ನಿಜವಾದ ಮೌಲ್ಯವನ್ನು, ಅದಕ್ಕಾಗಿ ಯಾರು ಹೋರಾಡಿರುತ್ತಾರೋ ಅವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಶಿಕ್ಷಣದಿಂದ ವಂಚಿತರಾದವರಿಗೂ ನೆರವಾಗಲು ಬಯಸುತ್ತಾರೆ. ಇಂತಹ ಅನುಭವಗಳನ್ನು ಪಡೆದು, ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಲು ಪಣ ತೊಟ್ಟ ಫರಿಶ್ತೆ ಕೂಡ `ಕೋಡ್ ಟು ಇನ್‍ಸ್ಪೈರ್' ಎಂಬ ಕೋಡಿಂಗ್ ಸ್ಕೂಲ್ ಒಂದನ್ನು ಆರಂಭಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಮ್ಮ ಮೇಲಿನ ಹಿಡಿತ ತಮ್ಮ ಕೈಯಲ್ಲೇ ಇರುವಂತಹ ಅವಕಾಶವನ್ನು ಕಲ್ಪಿಸಿರುವುದು ಇದೇ ಮೊದಲು.

ಇದನ್ನು ಓದಿ

ಟೇಸ್ಟಿ..ಟೇಸ್ಟಿ.. ರುಚಿ ರುಚಿ... ನಾಗಪುರದ ಆರೇಂಜ್​​ಗೆ ಸಿಲಿಕಾನ್​ ಸಿಟಿಯಲ್ಲಿ ಡಿಮ್ಯಾಂಡ್​​​..!

ಕೋಡ್ ಟು ಇನ್‍ಸ್ಪೈರ್...

``ವಿಶ್ವದ ಎಲ್ಲ ಭಾಗಗಳಲ್ಲೂ ತಂತ್ರಜ್ಞಾನ ಉದ್ಯಮದಲ್ಲಿ ಮಹಿಳೆಯರ ಸಂಖ್ಯೆ ದಯನೀಯ ಸ್ಥಿತಿಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ಶೇ.85ರಷ್ಟು ಮಹಿಳೆಯರು ಅನಕ್ಷರಸ್ಥರು. ಕೇವಲ ಶಿಕ್ಷಣದ ಹಕ್ಕನ್ನು ಒದಗಿಸುವುದು ಮಾತ್ರವಲ್ಲ, ಮಹಿಳೆಯರಿಗೆ ವಿಶೇಷ ತಾಂತ್ರಿಕ ಶಿಕ್ಷಣ ಒದಗಿಸುವುದೇ ಫರಿಶ್ತೆ ಅವರ ಉದ್ದೇಶ. ``ಇದು ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ತೀರಾ ಸಂಪ್ರದಾಯವಾದಿ ದೇಶ. ಬಹುತೇಕ ಎಲ್ಲ ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಶಿಕ್ಷಕಿಯರಾಗಲಿ ಎಂದೇ ಬಯಸುತ್ತಾರೆ. ಇದು ಸಮಾಜದಲ್ಲಿ ಅತ್ಯಂತ ಗೌರವಯುತ ಹುದ್ದೆ, ವೇತನವೂ ಚೆನ್ನಾಗಿರುತ್ತೆ ಜೊತೆಗೆ ಕೇವಲ ಮಹಿಳೆಯರೊಂದಿಗೆ ಮಾತ್ರ ಸಂಪರ್ಕವಿರುತ್ತೆ. ಕಂಪ್ಯೂಟರ್ ಸೈನ್ಸ್‍ನಲ್ಲಿ ಪದವಿ ಪಡೆದವರು ಕೂಡ ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದುರದೃಷ್ಟವಶಾತ್ ಅವರು ಕಲಿತಿದ್ದನ್ನು, ಕಲಿಸುವಂತಹ ಅವಕಾಶ ಸಿಗುವುದಿಲ್ಲ. ಅವರು ಪ್ರೋಗ್ರಾಮಿಂಗ್‍ನಲ್ಲಿ ಎಕ್ಸ್‍ಪರ್ಟ್ ಆಗಿದ್ರೂ ಅವರಿಗೆ ಹೆಚ್ಚು ಅನುಭವವಿಲ್ಲದ ಬೇಸಿಕ್ ಕಂಪ್ಯೂಟರ್ ಅಥವಾ ಗಣಿತ ಕಲಿಸುವ ಅವಕಾಶ ಸಿಗಬಹುದು. ಮಹಿಳೆಯರಿಗೆ ಮನೆಯಿಂದ ದೂರ ಪ್ರಯಾಣ ಮಾಡಿ ಉದ್ಯೋಗ ಮಾಡಲು ಅವಕಾಶವಿಲ್ಲ.

image


ಐಟಿ ಕ್ಷೇತ್ರದಲ್ಲಿ ಮುಂದುವರಿಯಲು ಇಚ್ಛಿಸಿರುವ ಪ್ರತಿಯೊಬ್ಬರೂ ಅಫ್ಘಾನಿಸ್ತಾನದಲ್ಲಿ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿಯೇ ನಾನು `ಕೋಡ್ ಟು ಇನ್‍ಸ್ಪೈರ್' ಆರಂಭಿಸಿದೆ. ಇದು ಅತ್ಯಂತ ಸುರಕ್ಷಿತವಾದ ಕೋಡಿಂಗ್ ಶಾಲೆ, ಇಲ್ಲಿ ವಿದ್ಯಾರ್ಥಿನಿಯರು ಕೇವಲ ಕೋಡ್‍ಗಳನ್ನು ಮಾತ್ರ ಕಲಿಯಬಹುದು. ಅಷ್ಟೇ ಅಲ್ಲ ಆನ್‍ಲೈನ್‍ನಲ್ಲೇ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು. ಕೆಲಸಕ್ಕಾಗಿ ಅವರು ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾದ ಅಗತ್ಯವಿರುವುದಿಲ್ಲ, ಸಂಪ್ರದಾಯಗಳ ಸುಳಿಯಲ್ಲಿ ಸಿಕ್ಕು ಆರಂಭಕ್ಕೂ ಮುನ್ನವೇ ವೃತ್ತಿ ಜೀವನವನ್ನು ಬಲಿಕೊಡಬೇಕಾದ ಆತಂಕವಿರುವುದಿಲ್ಲ. ಅವರು ಆನ್‍ಲೈನ್‍ನಲ್ಲೇ ಕೆಲಸ ಮಾಡಬಹುದು, ಆನ್‍ಲೈನ್‍ನಲ್ಲೇ ವೇತನವನ್ನೂ ಪಡೆಯಬಹುದು. ಇದು ಕೋಡ್ ಟು ಇನ್‍ಸ್ಪೈರ್‍ನ ಪರಿಕಲ್ಪನೆ'' ಅಂತಾ ಫರಿಶ್ತೆ ವಿವರಿಸ್ತಾರೆ.

ಗೊಂದಲವೆನಿಸುವ ಅನುಭವ...

ಕಂಪ್ಯೂಟರ್ ಸೈನ್ಸ್‍ನಲ್ಲಿ ಪದವಿ ಪಡೆದ ಫರಿಶ್ತೆ ಜರ್ಮನಿಗೆ ತೆರಳಿದ್ರು. ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಬರ್ಲಿನ್‍ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ್ರು. 2010ರಲ್ಲಿ ಕಾಬೂಲ್‍ಗೆ ಮರಳಿದ ಅವರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ್ರು. ಅದು ಅವರ ಪಾಲಿಗೆ ಗೊಂದಲವೆನಿಸುವ ಅನುಭವವಾಗಿತ್ತು. ``ಯೂನಿವರ್ಸಿಟಿಗೆ ಸೇರಿದ ಮೊದಲ ಮಹಿಳಾ ಬೋಧಕಿ ನಾನು. ಮೊದಲ ದಿನ ನನಗಿನ್ನೂ ನೆನಪಿದೆ, ಜಾವಾ ಪ್ರೋಗ್ರಾಮಿಂಗ್ ಕಲಿಸಲು ಮಹಿಳಾ ಪ್ರೊಫೆಸರ್ ಬರ್ತಿದ್ದಾರೆ ಅಂತಾ ಬೋರ್ಡ್ ಮೇಲೆ ಬರೆಯಲಾಗಿತ್ತು. ಹಿಂದಿನ ಶಿಕ್ಷಕರೆಲ್ಲ ಜರ್ಮನಿಯಿಂದ ಬಂದವರಾಗಿದ್ದರು, ಅವರು ಇಂಗ್ಲಿಷ್‍ನಲ್ಲಿ ಸೂಚನೆಗಳನ್ನು ಕೊಡುತ್ತಿದ್ದುದರಿಂದ ಅದನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗ್ತಿರಲಿಲ್ಲ. ನಾನು ಫಾರ್ಸಿ ಅಥವಾ ದಾರಿ ಭಾಷೆಯಲ್ಲಿ ಪಾಠ ಮಾಡ್ತಾ ಇದ್ದಿದ್ರಿಂದ ಎಲ್ಲರೂ ಅರ್ಥಮಾಡಿಕೊಳ್ಳಲು ಸಾಧ್ಯವಾಯ್ತು'' ಎನ್ನುತ್ತಾರೆ ಫರಿಶ್ತೆ. ಇಡೀ ಡಿಪಾರ್ಟ್‍ಮೆಂಟ್‍ನಲ್ಲಿ ಕೇವಲ 200-250 ವಿದ್ಯಾರ್ಥಿಗಳಿದ್ರು. ಮೊದಲ ದಿನ ಕ್ಲಾಸ್‍ನಲ್ಲಿದ್ದವರು 7-8 ಮಂದಿ ಮಾತ್ರ, ಎಲ್ಲರೂ ವಿದ್ಯಾರ್ಥಿನಿಯರೇ. ಒಬ್ಬ ಮಹಿಳೆಯಿಂದ ಪಾಠ ಕಲಿಯುವುದು ಅಸಾಧ್ಯ, ಮಹಿಳಾ ಪ್ರೊಫೆಸರ್ ಕ್ಲಾಸ್‍ಗೆ ನಾವ್ಹೇಗೆ ಹೋಗೋದು ಅನ್ನೋ ಮನಸ್ಥಿತಿ ವಿದ್ಯಾರ್ಥಿಗಳಲ್ಲಿತ್ತು. ಹೆಣ್ಣಿನಿಂದ ಜಾವಾ ಕಲಿಯೋದು ಅಗೌರವದ ವಿಷಯ ಎಂದೇ ಅವರಿಗೆ ಅನಿಸಿತ್ತು.

image


ಕೆಲ ವಾರಗಳ ನಂತರ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ ಕ್ಲಾಸ್‍ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ರು. ಅವರಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ. ನಾನು ಅವರ ಮಾತೃಭಾಷೆಯಲ್ಲಿ ಪಾಠ ಮಾಡ್ತಾ ಇದ್ದೆ. ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯ್ತು, ನೂರರ ಗಡಿ ದಾಟಿತ್ತು. ಕೆಲವರು ಮಹಿಳಾ ಪ್ರೊಫೆಸರ್‍ಗಳ ಬಗ್ಗೆ ಕೆಟ್ಟದಾಗಿ ಬರೆದು ಅದನ್ನು ವಿಶ್ವವಿದ್ಯಾನಿಲಯದ ಗೋಡೆಗಳ ಮೇಲೆ ಅಂಟಿಸುತ್ತಿದ್ರು. ಅದು ನಮ್ಮನ್ನು ಅಧೀರರನ್ನಾಗಿಸುತ್ತಿತ್ತು. ಶಿಕ್ಷಕಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೆಲವರು ಇಮೇಲ್ ಕೂಡ ಕಳುಹಿಸುತ್ತಿದ್ರು. ಇದು ನಮ್ಮ ಸಂಸ್ಕøತಿಗೆ ಮತ್ತು ಇಸ್ಲಾಂಗೆ ವಿರುದ್ಧವಾದದ್ದು ಎಂದೆಲ್ಲ ಬರೆಯುತ್ತಿದ್ದರು. ಆದ್ರೆ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಅಪಾರ ಬೆಂಬಲ ಕೂಡ ವ್ಯಕ್ತವಾಗಿತ್ತು. ವಿರೋಧಿಸುವುದಕ್ಕಿಂತ ಸಹಕರಿಸುವುದು ಉತ್ತಮ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಮಯ ಬೇಕಿತ್ತು.

ಬೋಧನಾ ವೃತ್ತಿ ಫರಿಶ್ತೆ ಅವರ ಪಾಲಿಗೆ ಆದರ್ಶಮಯವಾಗಿತ್ತು. ಏನು ವೈವಿದ್ಯತೆಗಳನ್ನು ಮಾಡಬಹುದು ಎಂಬ ಬಗ್ಗೆ ಕುತೂಹಲಿಯಾಗಿದ್ದರು. ``ನಾನು ಜರ್ಮನಿಗೆ ತೆರಳಿದಾಗ ಅಲ್ಲಿನ ಮುಕ್ತ ಶಿಕ್ಷಣ ವ್ಯವಸ್ಥೆ ಇಷ್ಟವಾಗಿತ್ತು. ಸಾಂಘಿಕ ಕೆಲಸದ ವಾತಾವರಣ ಅಲ್ಲಿತ್ತು. ಅಫ್ಘಾನಿಸ್ತಾನದಲ್ಲಿ ತರಗತಿಯಲ್ಲಿ ಕೈ ಮೇಲಕ್ಕೆತ್ತಲು, ಪ್ರಶ್ನೆ ಕೇಳಲು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಯಾಕಂದ್ರೆ ಶಿಕ್ಷಕರಿಗೆ ಅದು ಇಷ್ಟವಾಗದೇ ಇರಬಹುದು, ಅದಕ್ಕೆ ಸಾಮಾಜಿಕ ಅಡ್ಡಿಗಳು ಕೂಡ ಇರಬಹುದು. ಶಿಕ್ಷಣದ ವಾತಾವರಣ ಮುಕ್ತ ಕಲಿಕೆಯ ಸುತ್ತ ಇರಬೇಕು. ಸ್ಥಿರ ಪ್ರಶ್ನಾವಳಿ ಮತ್ತು ಆಪ್ತ ಸಲಹೆ ಇದ್ದರೆ ಚೆನ್ನ. ನಾನು ಅಫ್ಘಾನಿಸ್ತಾನಕ್ಕೆ ಮರಳಿದಾಗ ಇದನ್ನೆಲ್ಲ ನನ್ನ ತರಗತಿಯಲ್ಲಿ ಅಳವಡಿಸಲು ನಿರ್ಧರಿಸಿದ್ದೆ.

image


ವಿದ್ಯಾರ್ಥಿನಿಯರು ಒಮ್ಮೆಯೂ ಕೈ ಮೇಲಕ್ಕೆತ್ತಿದ್ದನ್ನು ನಾನು ನೋಡಿಲ್ಲ, ಪ್ರಶ್ನೆಗಳಿದ್ದರೂ ಅದನ್ನವರು ಕೇಳಿಲ್ಲ. ಅವರಿಗೆ ನಾಚಿಕೆ ಇರಬಹುದು ಅಥವಾ ತಮ್ಮ ಬಗ್ಗೆ ಹಾಸ್ಯ ಮಾಡಬಹುದೆಂಬ ಅಂಜಿಕೆಯಿಂದ ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ. ತರಗತಿ ಮುಗಿದ ಬಳಿಕ ಅವರು ನಮ್ಮನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಹೇಳಿಕೊಳ್ತಾರೆ. ಆಗೆಲ್ಲ ನಾನು ತರಗತಿಯಲ್ಲಿ ಪಾಠ ಮಾಡಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳುವಂತೆ, ಅರ್ಥಮಾಡಿಕೊಳ್ಳುವಂತೆ ಸಲಹೆ ನೀಡಿದ್ದೇನೆ'' ಅಂತಾ ಅವರು ವಿವರಿಸಿದ್ದಾರೆ.

ಪರಿಹಾರ ಅರಸುತ್ತ...

ಡಿಜಿಟಲ್ ಸಾಕ್ಷರತೆಯ ಕೊರತೆ ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದರಿಂದ ಹೆಚ್ಚು ಅನಾನುಕೂಲ ಆಗುತ್ತಿರುವುದು ಯುವತಿಯರಿಗೆ. ಅಘ್ಘಾನಿಸ್ತಾನದಲ್ಲಿ ಹುಡುಗಿಯರಿಗೆ ಇಂಟರ್ನೆಟ್ ಬಳಸುವ ಅವಕಾಶವಿಲ್ಲ. ಯಾಕಂದ್ರೆ ಇಂಟರ್ನೆಟ್ ಕೆಫೆಗಳಿಗೆ ಹೋಗುವುದು ಅಸಾಧ್ಯದ ಮಾತು, ಅಲ್ಲಿ ಹುಡುಗರದ್ದೇ ಪಾರಮ್ಯವಿರುತ್ತದೆ ಅನ್ನೋದು ಒಂದು ಕಾರಣವಾದ್ರೆ, ಬಹುತೇಕ ಕುಟುಂಬಗಳು ಹೆಣ್ಣು ಮಕ್ಕಳನ್ನು ಹೊರಕ್ಕೆ ಕಳುಹಿಸಲು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಅವು ತೀರಾ ದುಬಾರಿ. ಪ್ರತಿ ಗಂಟೆಗೆ 1-2 ಡಾಲರ್ ಹಣ ಪಡೆಯುತ್ತಾರೆ, ಇದು ಒಂದು ಕುಟುಂಬದ ಪ್ರತಿದಿನದ ಖರ್ಚು.

ಹೆಣ್ಣುಮಕ್ಕಳ ಸಬಲೀಕರಣಕ್ಕೆ ಉದ್ಯಮವೊಂದೇ ದಾರಿ ಎಂದು ಅವರಿಗನಿಸಿತ್ತು. ``ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಪುರುಷರ ಪ್ರಾಭಲ್ಯವಿದೆ. ಅಲ್ಲಿ ಉದ್ಯಮಿಯಾಗಿ ಸಂಸ್ಥೆಯೊಂದನ್ನು ಆರಂಭಿಸುವುದು ಸುಲಭದ ಮಾತಲ್ಲ. ಇದನ್ನು ಸಮಾಜ ಕೂಡ ಒಪ್ಪುತ್ತಿಲ್ಲ. ಮಹಿಳೆಯೊಬ್ಬಳು ವೆಬ್‍ಸೈಟ್ ಒಂದನ್ನು ನಿರ್ವಹಿಸುತ್ತ, ಬ್ಯುಸಿನೆಸ್ ಮಾಡುವುದು ನಮಗಿಷ್ಟವಿಲ್ಲ ಎನ್ನುತ್ತಾರೆ ಪ್ರತಿಯೊಬ್ಬರು. 2014ರ ಡಿಸೆಂಬರ್ ವೇಳೆಗೆ ಅಫ್ಘಾನಿಸ್ತಾನದ ಬಹುತೇಕ ವಸತಿ ಪ್ರದೇಶಗಳು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಒಳಗೊಂಡಿದ್ದವು. ಶೇ.8ರಷ್ಟು ಮಂದಿ ಇಂಟರ್ನೆಟ್ ಸೇವೆ ಬಳಸಿದ್ರೆ, ಶೇ.85ರಷ್ಟು ಜನರು ಸೆಲ್ ಫೋನ್ ಬಳಸಲಾರಂಭಿಸಿದ್ರು. ಡಿಜಿಟಲ್ ವಲಯದಲ್ಲಿ ಸಂಭಾವ್ಯ ಉದ್ಯೋಗ ಮಾರುಕಟ್ಟೆ ಕೂಡ ಪ್ರಚಂಡವಾಗಿತ್ತು''. ಕೋಡಿಂಗ್ ಬಗ್ಗೆ ವಿಶೇಷ ತರಬೇತಿ ನೀಡುವುದು ಫರಿಶ್ತೆ ಅವರ ಉದ್ದೇಶವಾಗಿತ್ತು. ಪ್ರತಿ ವಿದ್ಯಾರ್ಥಿಗೂ ಕಂಪ್ಯೂಟರ್ ಬಳಕೆಗೆ ಅವಕಾಶ ಕಲ್ಪಿಸುವುದು ಕೂಡ ಅವರ ಗುರಿ.

ಪ್ರತಿರೋಧ...

``ಅಫ್ಘಾನಿಸ್ತಾನದಂತಹ ಒಂದು ಸಂಕುಚಿತ ಸಮಾಜದಲ್ಲಿ ಹೊಚ್ಚ ಹೊಸ ಪರಿಕಲ್ಪನೆಯನ್ನು ಪರಿಚಯಿಸುವುದು ಸುಲಭವಲ್ಲ, ಕೆಲವು ಪ್ರತಿರೋಧಗಳನ್ನು ಎದುರಿಸುವುದು ಅನಿವಾರ್ಯ. ನಾವು ಕೂಡ ಅದನ್ನು ಎದುರಿಸಬೇಕಾಯ್ತು. ಅಫ್ಘಾನಿಸ್ತಾನದ ಸಂಪ್ರದಾಯಗಳನ್ನು ಗೌರವಿಸುತ್ತಲೇ `ಕೋಡ್ ಟು ಇನ್‍ಸ್ಪೈರ್'ಗಾಗಿ ಕೆಲಸ ಮಾಡಬೇಕೆಂದು ನಾನು ನಿರ್ಧರಿಸಿದ್ದೆ. ಹೆಣ್ಣುಮಕ್ಕಳಿಗೆ ತೊಂದರೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ. ಹಾಗಾಗಿ ನಮ್ಮ ಕೆಲಸದಲ್ಲಿ ಆದಷ್ಟು ಪಾರದರ್ಶಕತೆ ಕಾಪಾಡಿಕೊಳ್ಳುವುದು ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚು ಫೋಕಸ್ ಮಾಡುವುದು ನಮ್ಮ ಉದ್ದೇಶ'' ಅನ್ನೋದು ಫರಿಶ್ತೆ ಅವರ ಸ್ಪಷ್ಟ ನುಡಿ.

ಅವರ ದೃಷ್ಟಿಕೋನ ಅರ್ಥಮಾಡಿಕೊಳ್ಳುವಂಥದ್ದೇ. ಆದ್ರೆ ಹೆಣ್ಣುಮಕ್ಕಳಿಗೆ ಮೂಲಭೂತ ಹಕ್ಕುಗಳು ಸಿಗದೆ, ಕೆಲ ಸಂಪ್ರದಾಯಗಳನ್ನು ಕೈಬಿಡದೇ ಯಾವುದೇ ಪ್ರಗತಿಪರ ಬದಲಾವಣೆ ಹೇಗೆ ಸಾಧ್ಯ?

ಫರಿಶ್ತೆ ಯಾವುದಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಮಹಿಳಾ ಸ್ವಾತಂತ್ರ್ಯದ ವಿರುದ್ಧ ಕಟುವಾದ ವಿಮರ್ಷೆ ಮಾಡುವವರ ವಿರುದ್ಧ ಹಣಕ್ಕೆ ಗೆಲುವಾಗಲಿದೆ ಎಂಬ ವಿಶ್ವಾಸ ಅವರಿಗಿದೆ. ತಮ್ಮ ಮಗಳಿಗೆ ಅವಕಾಶ ಕೊಟ್ರೆ ಆಕೆ ಕೋಡ್ ಟು ಇನ್‍ಸ್ಪೈರ್‍ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿ ಎಷ್ಟು ಹಣಗಳಿಸಬಹುದು ಎಂಬುದು ಅರ್ಥವಾಗುತ್ತಿದ್ದಂತೆ ಪೋಷಕರು ಅವರನ್ನು ಉದ್ಯೋಗಕ್ಕೆ ಕಳಿಸಲು ಸಮ್ಮತಿಸುತ್ತಿದ್ದಾರೆ.

ಅಫ್ಘಾನಿಸ್ತಾನದಲಿ ಬಿಟ್‍ಕಾಯ್ನ್ ಪರಿಚಯ...

ಅಫ್ಘಾನಿಸ್ತಾನದಲ್ಲಿ ಬಿಟ್‍ಕಾಯ್ನ್ ಅನ್ನು ಪರಿಚಯಿಸಿದ ಮೊಟ್ಟ ಮೊದಲ ವ್ಯಕ್ತಿ ಫರಿಶ್ತೆ. ಇದೊಂದು ಹಣಪಾವತಿಯ ವಿಧಾನ. ಆದ್ರೆ ಅಫ್ಘಾನಿಸ್ತಾನದಲ್ಲಿ ಬಿಟ್‍ಕಾಯ್ಸ್ ಅಥವಾ ಇತರ ಯಾವಿದೇ ಕರೆನ್ಸಿ ಬಳಕೆ ಸುಲಭವಲ್ಲ ಎನ್ನುತ್ತಾರೆ ಫರಿಶ್ತೆ. ಕೇವಲ ತಂತ್ರಜ್ಞಾನ ಮಾತ್ರವಲ್ಲ ಅಲ್ಲಿನ ಮೂಲಸೌಕರ್ಯಗಳ ಕೊರತೆ ಕೂಡ ಇದಕ್ಕೆ ಕಾರಣ. ಇಂಟರ್ನೆಟ್‍ನಲ್ಲೇ ಹಣಕಾಸು ವಹಿವಾಟು ಹೇಗೆ ಅಂತಾ ಯುವತಿಯರು ಸಂಶಯ ವ್ಯಕ್ತಪಡಿಸ್ತಾರೆ. ವಾಲೆಟ್‍ಗಳ ಸೃಷ್ಟಿ ಮತ್ತು ಕರೆನ್ಸಿ ಬಳಕೆ ಬಗ್ಗೆ ತಿಳಿಸಿಕೊಟ್ಟ ಮೇಲೆ ಅವರು ಖುಷಿಯಾಗಿದ್ದಾರೆ. ಅವರ ಬಳಿ ಹಣವಿದೆ ಅನ್ನೋದು ಅವರಿಗೆ ಮಾತ್ರ ಗೊತ್ತು, ಜೊತೆಗೆ ಇಂತಹ ಸ್ವಾಯತ್ತತೆಯ ಅನುಭವ ಅವರಿಗೆ ಹಿಂದೆಂದೂ ಆಗಿಲ್ಲ.

image


ಬಹುತೇಕ ಮನೆಗಳಿಗೆ ಶಿಪ್ಪಿಂಗ್ ಹಾಗೂ ಬಿಲ್ಲಿಂಗ್ ವಿಳಾಸವೇ ಇರುವುದಿಲ್ಲ. ಆದ್ದರಿಂದ ಹುಡುಗಿಯರಿಗೆ ಬಿಟ್‍ಕಾಯ್ನ್ ಹಣ ಖರ್ಚು ಮಾಡಲು ಮಳಿಗೆಗಳು ಸಿಗುವುದಿಲ್ಲ. ಮ್ಯಾಗಝೀನ್‍ಗಳ ಡಿಜಿಟಲ್ ಕಾಪಿ ಹಾಗೂ ಸಾಫ್ಟ್‍ವೇರ್‍ಗಳನ್ನು ಮಾತ್ರ ಅವರು ಕೊಂಡುಕೊಳ್ಳಬಹುದು. ಅಫ್ಘಾನ್‍ನ ಅಫ್ಘನಿ ಜೊತೆಗೆ ಬಿಟ್‍ಕಾಯ್ನ್ ಅನ್ನು ಬದಲಾಯಿಸಿಕೊಳ್ಳುವುದೇ ಬಹುದೊಡ್ಡ ಸವಾಲು. ಅಫ್ಘಾನಿಯನ್ನು ಬೆಂಬಲಿಸುವಂತಹ ವೇದಿಕೆ ಕೂಡ ಇಲ್ಲ. ಹಾಗಾಗಿ ಫರಿಶ್ತೆ ಬಿಟ್‍ಕಾಯ್ನ್ ಅನ್ನು ಅಫ್ಘಾನಿಗೆ ಬದಲಾಯಿಸಿಕೊಡುತ್ತಾರೆ.

ಬಿಟ್‍ಕಾಯ್ನ್ ಹಿಂದಿರುವ ಪರಿಕಲ್ಪನೆಯೇ ಅದ್ಭುತ. ಹುಡುಗಿಯರಂತೂ ಇದನ್ನು ಇಷ್ಟಪಡುತ್ತಾರೆ. ಅವರು ಹಿಂದೆಂದೂ ಅನುಭವಿಸದ ಸ್ವಾತಂತ್ರ್ಯ ತಂದುಕೊಡುತ್ತದೆ. ಆದ್ರೆ ಅಫ್ಘಾನಿಸ್ತಾನದೊಳಗೆ ಕಾರ್ಯನಿರ್ವಹಿಸುವುದು ಕಷ್ಟ. ಈ ಸಮಸ್ಯೆಯನ್ನು ಶಿಕ್ಷಣದ ಮೂಲಕ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಿಧಾನವಾಗಿ ಇಂಟರ್ನೆಟ್ ಬಳಕೆ ಬಗ್ಗೆ ಅಫ್ಘನ್ ಜನತೆ ಆಸಕ್ತಿ ತೋರುತ್ತಿದ್ದಾರೆ. ವಿವಿಧ ಆಯ್ಕೆಗಳ ಮೂಲಕ ನಾವು ಸಾಕ್ಷರತೆ ತರುವ ಪ್ರಯತ್ನದಲ್ಲಿದ್ದೇವೆ. ಅದಕ್ಕೆ ಸಮಯ ಬೇಕು. ಸುದೀರ್ಘ ದೃಷ್ಟಿಕೋನವನ್ನು ನಾವು ಹೊಂದಿದ್ದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವ ವಿಶ್ವಾಸ ಅವರದ್ದು.

ದೃಷ್ಟಿಕೋನ...

ಯಶಸ್ವಿ ಕ್ರೌಡ್‍ಫಂಡಿಂಗ್ ಕ್ಯಾಂಪೇನ್ ಮೂಲಕ `ಕೋಡ್ ಟು ಇನ್‍ಸ್ಪೈರ್'ಗೆ ಬಂಡವಾಳ ಸಂಗ್ರಹಿಸಲಾಗಿದೆ. 15-25 ವರ್ಷಗಳವರೆಗಿನ ಯುವತಿಯರೆಲ್ಲ ಇಲ್ಲಿ ಕೋಡ್ ಕಲಿಯುತ್ತಿದ್ದಾರೆ. ನಗರದಲ್ಲಿ ಇಂತಹ ಇನ್ನಷ್ಟು ಲ್ಯಾಬ್‍ಗಳನ್ನು ತೆರೆಯುವ ಆಲೋಚನೆ ಅವರಿಗಿದೆ. ಕಾರ್ಪೊರೇಟ್ ದಿಗ್ಗಜರು ಕೂಡ `ಕೋಡ್ ಟು ಇನ್‍ಸ್ಪೈರ್' ಅನ್ನು ಬೆಂಬಲಿಸಿದ್ದಾರೆ. ಸದ್ಯ `ಕೋಡ್ ಟು ಇನ್‍ಸ್ಪೈರ್'ನ ಮುಖ್ಯ ಕಚೇರಿ ನ್ಯೂಯಾರ್ಕ್‍ನಲ್ಲಿದೆ.

ಸಲಹೆ...

``ಯಾವಾಗಲೂ ನಿಮ್ಮ ಕಲ್ಪನೆಯನ್ನು ಸಾಕಾರಗೊಳಿಸುವ ಅವಕಾಶಗಳಿರುತ್ತವೆ. ಅದಕ್ಕಾಗಿ ಪ್ರಯತ್ನಿಸಿ''.

ಲೇಖಕರು: ರಾಖಿ ಚಕ್ರವರ್ತಿ

ಅನುವಾದಕರು: ಭಾರತಿ ಭಟ್

ಇದನ್ನು ಓದಿ

1. ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್..! www.kasadhathoutti.comನಲ್ಲಿ ಎಲ್ಲದಕ್ಕೂ ಪರಿಹಾರ..!

2. ಪ್ರತಿನಿತ್ಯ 100 ನಿರಾಶ್ರಿತರಿಗೆ ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ

3. ಹೊಂಡಾ ಸಿಟಿ ಕಾರು ಮಾರಿ ಬೈಸಿಕಲ್ ಖರೀದಿಸಿದ ಸಾಹಸಿ ಮಹಿಳೆ...!