ಸ್ವಾನ್ ಸೂಟ್ಸ್ ಸಕ್ಸಸ್ ಕಹಾನಿ..

ಟೀಮ್​​ ವೈ.ಎಸ್​​.

0

ಬದುಕು ಕಲ್ಲು ಮುಳ್ಳಿನ ಹಾದಿ ಅನ್ನೋದು ಸುಳ್ಳಲ್ಲ. ಅದನ್ನೆಲ್ಲ ಮೆಟ್ಟಿ ನಿಲ್ಲುವುದೇ ನಮ್ಮ ನಿಮ್ಮೆಲ್ಲರ ಮುಂದಿರುವ ಸವಾಲು. ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಜೀವನ ಹೂವಿನ ಹಾದಿಯಾಗುವುದರಲ್ಲಿ ಅನುಮಾನವೇ ಬೇಡ. ಸ್ವಾನ್ ಸೂಟ್ಸ್​​​ನ ಮಾಲಕಿ ರಂಜನಾ ನಾಯ್ಕ್ ಕೂಡ ಹೀಗೆ ಪರಿಶ್ರಮದಿಂದಲೇ ಯಶಸ್ಸು ಸಾಧಿಸಿದ್ದಾರೆ. ಬದುಕಿನ ಏಳು ಬೀಳುಗಳನ್ನೆಲ್ಲ ಸಮನಾಗಿ ಸ್ವೀಕರಿಸಿ ಶ್ರೇಷ್ಠ ಉದ್ಯಮಿ ಎನಿಸಿಕೊಂಡಿದ್ದಾರೆ. ಹೈದ್ರಾಬಾದ್‍ನಲ್ಲಿ ಅಪಾರ್ಟ್‍ಮೆಂಟ್ ಸೇವೆಯನ್ನು ನೀಡ್ತಿದ್ದಾರೆ. ಹೈದ್ರಾಬಾದ್‍ನ ನಾಲ್ಕು ಕಡೆಗಳಲ್ಲಿ ಸ್ವಾನ್ ಸೂಟ್ಸ್ ಗ್ರಾಹಕರಿಗೆ ಸೇವೆ ಒದಗಿಸ್ತಾ ಇದೆ.

ಉದ್ಯಮ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆಯಲು ರಂಜನಾ ನೂರಾರು ಸವಾಲುಗಳನ್ನು ಎದುರಿಸಿದ್ದಾರೆ. 2006ರಲ್ಲಿ ಮಾಜಿ ಸಹೋದ್ಯೋಗಿಯೊಬ್ಬರಿಂದ ರಂಜನಾ ಅಪಾರ್ಟ್‍ಮೆಂಟ್ ಫ್ರಾಂಚೈಸಿ ಪಡೆದುಕೊಂಡ್ರು. ಒಂದು ವರ್ಷ ಬ್ಯುಸಿನೆಸ್ ಚೆನ್ನಾಗೇ ಇತ್ತು. ದಿನ ಕಳೆದಂತೆ ವಹಿವಾಟು ಕಡಿಮೆಯಾಗಿತ್ತು. ಬೆಂಗಳೂರು ಹಾಗೂ ಹೈದ್ರಾಬಾದ್ ಸೇರಿ 10 ಲಕ್ಷುರಿ ಅಪಾರ್ಟ್‍ಮೆಂಟ್‍ಗಳ 30 ಕೋಣೆಗಳನ್ನು ಅವರು ನೋಡಿಕೊಳ್ತಿದ್ರು. ಹೈದ್ರಾಬಾದ್ ಮಾರ್ಕೆಟ್‍ನಿಂದ ಪಾಲುದಾರಿಕೆ ಹಿಂಪಡೆದ ಆತ 5 ಅಪಾರ್ಟ್‍ಮೆಂಟ್‍ಗಳ 15 ಕೋಣೆಗಳನ್ನು ರಂಜನಾಗೆ ಬಿಟ್ಟುಕೊಟ್ರು.

ಅದೇ ಸಮಯದಲ್ಲಿ ಸ್ಟಾಂಡರ್ಡ್ ಚಾರ್ಟರ್ಡ್ಸ್​​​ ಟೆಲಿಕಾಲಿಂಗ್ ಸೆಂಟರ್‍ನಲ್ಲೂ ಪಾಲುದಾರರಾಗಿದ್ರಿಂದ ಸ್ವಾನ್ ಸೂಟ್ಸ್ ಕಡೆ ರಂಜನಾಗೆ ಹೆಚ್ಚು ಗಮನಹರಿಸಲಾಗಲಿಲ್ಲ. ಜೊತೆಗೆ 2006ರಲ್ಲಿ ರಂಜನಾ ಹೆಣ್ಣು ಮಗುವಿನ ತಾಯಿಯಾಗಿದ್ರು. ಹಾಗಾಗಿ ಉದ್ಯಮದತ್ತ ಚಿತ್ತ ಹರಿಸೋದು ಮತ್ತಷ್ಟು ಕಠಿಣವಾಯ್ತು.

ದೃಢಸಂಕಲ್ಪವೇ ರಂಜನಾರ ಮತ್ತೊಂದು ಹೆಸರು..!

ಜೀವನದಲ್ಲಿ ಸುಲಭವಾಗಿ ಯಾವುದನ್ನೂ ಬಿಟ್ಟುಕೊಡಬಾರದು ಅನ್ನೋದು ರಂಜನಾರ ಪಾಲಿಸಿ. ಹಾಗಾಗಿಯೇ ಸತತ ಎರಡು ವರ್ಷ ಕಷ್ಟಪಟ್ರೂ ಅವರು ಧೃತಿಗೆಡಲಿಲ್ಲ. ಈ ವಹಿವಾಟು ಸುಗಮವಾಗಲು ಏನು ಮಾಡಬೇಕು ಅನ್ನೋ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ರು. ಕೊನೆಗೂ ಈ ಪ್ರಯತ್ನ ಫಲಿಸಿತು. ಮಾರುಕಟ್ಟೆಯ ತಂತ್ರಗಳನ್ನೆಲ್ಲ ಅರಿತಿದ್ದ ರಂಜನಾ ಉದ್ಯಮದಲ್ಲಿ ಒಂದೊಂದಾಗಿಯೇ ಯಶಸ್ಸಿನ ಮೆಟ್ಟಿಲೇರಿದ್ರು. ಸ್ವಾನ್ ಸೂಟ್ಸ್ ಅಪಾರ್ಟ್‍ಮೆಂಟ್ ರೂಮ್‍ಗಳ ಸಂಖ್ಯೆ 15ರಿಂದ 40ಕ್ಕೆ ಏರಿಕೆಯಾಯ್ತು. 2009ರಲ್ಲಿ 4 ತಿಂಗಳು ರಂಜನಾ ವಿಶೇಷ ತರಬೇತಿ ಕೂಡ ಪಡೆದ್ರು. ಅಲ್ಲಿ ಸಾವಿರಾರು ಮಹಿಳಾ ಉದ್ಯಮಿಗಳನ್ನು ಭೇಟಿಯಾಗಿ ಚರ್ಚಿಸಿದ್ರಿಂದ ತಮ್ಮ ಕಾರ್ಯವೈಖರಿಗೆ ಹೊಸ ಆಯಾಮವೇ ಸಿಕ್ಕಿತ್ತು ಎನ್ನುತ್ತಾರೆ ರಂಜನಾ.

ಶೈಕ್ಷಣಿಕ ಜೀವನ...

ರಂಜನಾ ಲೈಫ್ ಸೈನ್ಸ್ ಪದವೀಧರೆ. ಹೈದ್ರಾಬಾದ್‍ನಲ್ಲೇ ಹುಟ್ಟಿ ಬೆಳೆದವರು. ಕಾರ್ಪೊರೇಟ್ ಕಮ್ಯೂನಿಕೇಷನ್ಸ್‍ನಲ್ಲಿ ಡಿಪ್ಲೋಮಾ ಕೂಡ ಮಾಡಿದ್ದಾರೆ. ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ರಂಜನಾರ ತಂದೆ ಔಷಧ ವ್ಯಾಪಾರಿ, ತಾಯಿ ಮುಖ್ಯೋಪಾಧ್ಯಯಿನಿ. ಸಹೋದರ ಎಂಜಿನಿಯರ್. ಎನ್‍ಐಐಟಿ ಸೇರಿದ್ದಾಗಲೇ ರಂಜನಾಗೆ ಬಾಳ ಸಂಗಾತಿಯೂ ಸಿಕ್ಕಿದ್ರು. ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‍ನಲ್ಲಿ ಕೆಲಸ ಮಾಡ್ತಿದ್ದ ಪತಿ ಕೂಡ ತಮಗೆ ಪ್ರೋತ್ಸಾಹ ನೀಡಿದ್ದಾರೆ ಅಂತಾ ರಂಜನಾ ಖುಷಿಯಿಂದ ಹೇಳಿಕೊಳ್ತಾರೆ.

ಸ್ವಾನ್ ಸೂಟ್ಸ್ ಸಕ್ಸಸ್...

2009ರ ವೇಳೆಗೆಲ್ಲಾ ಸ್ವಾನ್ ಸೂಟ್ಸ್ ಭರ್ಜರಿಯಾಗಿ ನಡೀತಿತ್ತು. ಉದ್ಯಮದ ಮೇಲೆ ಹಿಡಿತ ಸಾಧಿಸಲು ಏನು ಮಾಡಬೇಕು ಅನ್ನೋದನ್ನ ರಂಜನಾ ಚೆನ್ನಾಗೇ ತಿಳಿದುಕೊಂಡಿದ್ರು. ಪ್ರವಾಸಿಗರು ಹಾಗೂ ಎನ್‍ಆರ್‍ಐಗಳತ್ತ ಸಹ ಸ್ವಾನ್ ಸೂಟ್ಸ್ ಗಮನಹರಿಸಿತ್ತು. ಸದ್ಯ 250 ಕಂಪನಿಗಳೊಂದಿಗೆ ಟೈಅಪ್ ಮಾಡಿಕೊಂಡಿರೋ ಸ್ವಾನ್ ಸೂಟ್ಸ್ ಹೈದ್ರಾಬಾದ್‍ನಲ್ಲಿ 95 ಸುಸಜ್ಜಿತ ಕೋಣೆಗಳನ್ನ ಹೊಂದಿದೆ.

ಯಶಸ್ವಿ ಉದ್ಯಮಿ...

ಸಿಎನ್‍ಬಿಸಿ ಎಮರ್ಜಿಂಗ್ ಇಂಡಿಯಾದ ಮಹಿಳೆಯರ ವಿಭಾಗದಲ್ಲಿ ರಂಜನಾ ಫೈನಲಿಸ್ಟ್ ಆಗಿದ್ರು. ವಿಠಲ್ ವಾಯ್ಸನ ಸದಸ್ಯೆಯಾಗಿದ್ದ ಅವರು, ಚೆರಿ ಬ್ಲೇರ್ ಫೌಂಡೇಶನ್‍ನಲ್ಲಿ ವಿಶ್ವಸನೀಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಲೇಖಕಿ ರಶ್ಮಿ ಬನ್ಸಾಲ್ ಅವರು ಪಟ್ಟಿ ಮಾಡಿರುವ ವಿಶ್ವದ 25 ಪ್ರೇರಣಾತ್ಮಕ ಮಹಿಳಾ ಉದ್ಯಮಿಗಳ ಪೈಕಿ ರಂಜನಾ ಅವರ ಹೆಸರೂ ಇದೆ. ಇನ್ನು ಹೊಸದಾಗಿ ಉದ್ದಿಮೆ ಆರಂಭಿಸುವವವರಿಗೆಲ್ಲ ರಂಜನಾ ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ನಿಮ್ಮ ಸಮಸ್ಯೆಗಳ ಮೇಲೆ ಹಿಡಿತ ಸಾಧಿಸಿ, ಯಶಸ್ಸು ಅಷ್ಟು ಸುಲಭವಾಗಿ ಸಿಗೋದಿಲ್ಲ ಹಾಗಾಗಿ ಕಠಿಣ ಪರಿಶ್ರಮ ಬೇಕೇಬೇಕು ಅನ್ನೋದು ರಂಜನಾ ಅವರ ಅಭಿಪ್ರಾಯ. ಸಂಸಾರದ ಜೊತೆಜೊತೆಗೆ ವೃತ್ತಿಯನ್ನೂ ಮುಂದುವರಿಸಿಕೊಂಡು ಹೋಗುತ್ತಿರುವ ಮಹಿಳೆಯರೇ ರಂಜನಾ ಅವರ ಪಾಲಿನ ರೋಲ್ ಮಾಡೆಲ್. ಇವರ ಯಶಸ್ಸಿನ ಪಯಣ ಹೀಗೆಯೇ ಮುಂದುವರಿಯಲಿ.

Related Stories