ಉದ್ಯಮ ಆರಂಭಕ್ಕೂ ಮುನ್ನ..ಸಂದೀಪ್ ಸಬರ್‍ವಾಲ್ ಯಶಸ್ಸಿನ ಮಂತ್ರ

ಟೀಮ್​​ ವೈ.ಎಸ್​​.

ಉದ್ಯಮ ಆರಂಭಕ್ಕೂ ಮುನ್ನ..ಸಂದೀಪ್ ಸಬರ್‍ವಾಲ್ ಯಶಸ್ಸಿನ ಮಂತ್ರ

Saturday October 10, 2015,

2 min Read

ಜೀವನದಲ್ಲಿ ಏಳು ಬೀಳು ಇದ್ದಿದ್ದೇ. ಸೋತಾಗ ಕಂಗೆಡದೆ ಗೆದ್ದಾಗ ಬೀಗದೇ ಇದ್ದಲ್ಲಿ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು. ಅದರಲ್ಲೂ ಸ್ವಂತ ಉದ್ಯಮದಲ್ಲಿ ರಿಸ್ಕ್ ಇದ್ದಿದ್ದೇ. ಹಾಗಾಗಿ ಮೊದಲೇ ಮುನ್ನಚ್ಚೆರಿಕೆ ತೆಗೆದುಕೊಳ್ಳುವುದು ಒಳಿತು. ಸೋಹನ್‍ಲಾಲ್ ಕಮೊಡಿಟಿ ಮ್ಯಾನೇಜ್‍ಮೆಂಟ್‍ನ ಗ್ರೂಪ್ ಸಿಇಓ ಸಂದೀಪ್ ಸಬರ್‍ವಾಲ್ ಉದ್ಯಮ ಆರಂಭಿಸುವ ಮುನ್ನ ಗಮನದಲ್ಲಿಡಬೇಕಾದ 6 ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಅವರ ಸ್ವಂತ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. 18 ವರ್ಷಗಳ ಹಿಂದೆ ಸಂದೀಪ್ ಸಬರ್‍ವಾಲ್ ತಮ್ಮ ಕುಟುಂಬದ ಬೇಳೆಕಾಳುಗಳ ಉದ್ಯಮಕ್ಕೆ ಸಾಥ್ ಕೊಟ್ಟಿದ್ದರು. ಅಗತ್ಯ ವಸ್ತುಗಳ ಅಲಭ್ಯತೆ, ಸಂಗ್ರಹಿಸಿಟ್ಟ ಧಾನ್ಯಗಳ ನಷ್ಟ, ಫಸಲಿಗೆ ತಗುಲುವ ರೋಗಬಾಧೆ, ಹಣಕಾಸಿನ ಮುಗ್ಗಟ್ಟು ಹೀಗೆ ಹಲವು ಸಮಸ್ಯೆಗಳನ್ನು ಸಂದೀಪ್ ಸಬರ್‍ವಾಲ್ ಎದುರಿಸಿದ್ದಾರೆ. ಇದಕ್ಕೆಲ್ಲ ಪರಿಹಾರ ಹುಡುಕುತ್ತಲೇ ಎಸ್‍ಎಲ್‍ಸಿಎಂ ಅನ್ನು ಯಶಸ್ಸಿನತ್ತ ಕೊಂಡೊಯ್ದಿದ್ದಾರೆ. ಆದ್ರೆ ಅವರ ಈ ಪಯಣ ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಒಳ್ಳೆಯ ಹಾಗೂ ಕೆಟ್ಟ ನಿರ್ಧಾರಗಳೆರಡೂ ಪಾಠ ಕಲಿಸಿವೆ ಎನ್ನುತ್ತಾರೆ ಸಂದೀಪ್ ಸಬರ್‍ವಾಲ್. ಅವರು ನೀಡಿರುವ ಸಲಹೆಗಳನ್ನು ಒಂದೊಂದಾಗಿ ನೋಡೋಣ.

image


1. ನಿಮ್ಮ ಮೇಲೆ ನಂಬಿಕೆಯಿರಲಿ

ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಲ್ಲಿ ಮಾತ್ರ ಉಳಿದವರು ನಿಮ್ಮನ್ನು ನಂಬುತ್ತಾರೆ. ನಿಮ್ಮ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು, ಜನರಿಗೆ ಅದನ್ನು ಮನದಟ್ಟು ಮಾಡಲು ನಿಮ್ಮ ಕಲ್ಪನೆಗಳನ್ನು ನೀವು ನಂಬಲೇಬೇಕು. ಇದಕ್ಕಾಗಿ ಹಗಲಿರುಳು ಶ್ರಮಿಸಬೇಕು. ಯಶಸ್ಸನ್ನು ಸಾಧಿಸಬೇಕೆಂದ ದೃಢಸಂಕಲ್ಪವಿರಬೇಕು. ಸಂದೀಪ್ ಎಸ್‍ಎಲ್‍ಸಿಎಂ ಆರಂಭಿಸುವ ಸಂದರ್ಭದಲ್ಲಿ ಜನರಿಂದ ಅಂತಹ ಪ್ರೋತ್ಸಾಹವೇನೂ ಸಿಕ್ಕಿರಲಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರಲ್ಲೂ ಆಶಾಭಾವನೆ ಇರಲಿಲ್ಲ. ಹೊಸ ಬಗೆಯ ಉತ್ಪನ್ನಗಳು ಮತ್ತು ಸೇವೆಯನ್ನು ಪರಿಚಯಿಸುವ ಮೂಲಕ ಸಂದೀಪ್ ಹೊಸ ಅಲೆಯನ್ನೇ ಎಬ್ಬಿಸಿದರು. ಕೃಷಿ ವಲಯದ ಬಗೆಗಿನ ದೃಷ್ಟಿಕೋನ ಬದಲಾಯಿಸುವುದೇ ಸವಾಲಾಗಿತ್ತು. ಆದನ್ನೆಲ್ಲ ಮೆಟ್ಟಿನಿಂತು ಸಂದೀಪ್ ಆಮೂಲಾಗ್ರ ಬದಲಾವಣೆ ತಂದಿದ್ದಾರೆ.

2. ತಪ್ಪು ನಿರ್ಧಾರಗಳು ಪ್ರಮಾದವೇನಲ್ಲ..!

ಮನುಷ್ಯರು ಇರುವುದೇ ತಪ್ಪು ಮಾಡುವ ಸಲುವಾಗಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೆಲವೊಮ್ಮೆ ಅಸಾಧ್ಯ. ಯೋಚಿಸಿ ತೆಗೆದುಕೊಂಡ ನಿರ್ಧಾರಗಳು ತಪ್ಪೆಂದು ಸಾಬೀತಾಗುವ ಸಂದರ್ಭಗಳೂ ಬರುತ್ತವೆ. ಆಗ ತಪ್ಪುಗಳನ್ನು ನಿರ್ಲಕ್ಷಿಸಿ, ಸರಿಯಾದುದನ್ನು ಆಯ್ಕೆ ಮಾಡಿಕೊಂಡು ಮುಂದಡಿ ಇಡಬೇಕು.

3. ಗ್ರಾಹಕರಿಗೆ ಹೆಚ್ಚು ಆದ್ಯತೆ ನೀಡಿ..

ಗ್ರಾಹಕರು ಖುಷಿಯಿಂದ, ತೃಪ್ತಿಯಿಂದ ಇದ್ದರೆ ಯಶಸ್ಸು ನಿಮ್ಮನ್ನು ಅರಸಿ ಬರುತ್ತದೆ. ಗ್ರಾಹಕರು ಖರ್ಚೇ ಇಲ್ಲದ ಜಾಹೀರಾತಿದ್ದಂತೆ. ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವತ್ತ ಗಮನವಿರಲಿ. ನಂಬಲರ್ಹ ಸೇವೆಯನ್ನು ನೀವು ಕೊಡಲೇಬೇಕು. ಎಸ್‍ಎಲ್‍ಎಂಸಿ ಕೂಡ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

4. ಸಲಹೆಗಳಿಗೆ ಸದಾ ಸ್ವಾಗತವಿರಲಿ

ನೀವು ಟಾಪ್ ಬ್ಯುಸಿನೆಸ್ ಸ್ಕೂಲ್‍ನ ಟಾಪರ್ ಆಗಿದ್ದರೂ ಸಲಹೆಗಳನ್ನು ಸದಾಕಾಲ ಸ್ವೀಕರಿಸಬೇಕು. ಒಂದೊಳ್ಳೆ ಯೋಚನೆ ಯಾರಿಗಾದರೂ ಬರಬಹುದು. ಹಾಗಾಗಿ ಬಾಸ್‍ಗಿರಿ ತೋರದೇ ಎಲ್ಲರಿಂದಲೂ ಸಲಹೆ ಪಡೆಯಬೇಕು. ನಿಮ್ಮ ಸಂಸ್ಥೆಗೆ ಸಂಬಂಧಪಡದವರ ಸಲಹೆಯನ್ನೂ ಆಲಿಸಬೇಕು. ಅಂತಿಮ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಆದರೆ ತೀರ್ಮಾನಕ್ಕೆ ಬರಲಾಗದಂತಹ ಸಂದರ್ಭದಲ್ಲಿ ಸಲಹೆ ಪಡೆಯಿರಿ.

5. ನಿಮ್ಮ ತಂಡದ ಮೇಲೆ ನಂಬಿಕೆಯಿರಲಿ..

ನೀವು ದಿನದ ಬಹುತೇಕ ಸಮಯವನ್ನು ನಿಮ್ಮ ತಂಡದೊಂದಿಗೆ ಕಳೆಯುತ್ತೀರಾ. ಅವರು ನಿಮ್ಮ ಎರಡನೇ ಕುಟುಂಬವಿದ್ದಂತೆ. ಪರಸ್ಪರ ನಂಬಿಕೆ, ವಿಶ್ವಾಸ ಹಾಗೂ ಒಗ್ಗಟ್ಟು ಕಂಪನಿಯ ಬೆಳವಣಿಗೆಗೆ ಸಹಾಯಕಾರಿ. ಅಕಸ್ಮಾತ್ ಕೆಲವರು ಸಂಸ್ಥೆಗೆ ತಕ್ಕವರಲ್ಲ ಎನಿಸಿದರೆ ಅವರ ಬಗ್ಗೆ ಕಠೋರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

6. ನಿಮ್ಮ ಬಗ್ಗೆ ನಿಮಗೆ ಕಾಳಜಿಯಿರಲಿ..

ಒತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಉದ್ಯಮದ ಯಶಸ್ಸಿಗೆ ಸಮಯ ಹಾಗೂ ತ್ಯಾಗದ ಅಗತ್ಯವಿದೆ. ಇದು ನಿಮ್ಮ ಮೇಲೆ ಒತ್ತಡ ಉಂಟುಮಾಡಬಹುದು. ಆರೋಗ್ಯ ಹದಗೆಡಬಹುದು. ನಿಮ್ಮ ಉದ್ಯಮಕ್ಕೆ ಆರೋಗ್ಯಕರ ನಾಯಕನ ಅಗತ್ಯವಿರುವುದರಿಂದ ಕಾಳಜಿ ವಹಿಸಿ.

ಹೀಗೆ ಉದ್ಯಮಿಗಳಿಗೆ ಯಶಸ್ಸಿನ ಮಂತ್ರ ಹೇಳಿಕೊಟ್ಟಿರುವ ಸಂದೀಪ್ ಸಬರ್‍ವಾಲ್ ಅವರ ಎಸ್‍ಎಲ್‍ಸಿಎಂ ಕಂಪನಿ ಕೃಷಿ ವಲಯದಲ್ಲಿ ಮುಂಚೂಣಿಯಲ್ಲಿದೆ. 17 ರಾಜ್ಯಗಳಲ್ಲಿ 760 ಉಗ್ರಾಣಗಳು, 15 ಕೋಲ್ಡ್ ಸ್ಟೋರೇಜ್‍ಗಳನ್ನು ಹೊಂದಿದೆ.