ಕಲಾವಿದರಿಗೆ ಇಲ್ಲಿ ಫ್ಯಾನ್ಸ್ ಸಿಗ್ತಾರೆ ಗೊತ್ತಾ ? ಯಹಾವಿಯಿಂದ ಹೊಸ ಪ್ರಯೊಗ..!

ಟೀಮ್​​ ವೈ.ಎಸ್​.

0

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಸಿದ್ಧಿ ಪಡೆಯಲು ಮತ್ತು ಗುರುತಿಸಿಕೊಳ್ಳಲು ಪ್ರತಿಭೆ ಮತ್ತು ಸೃಜನಶೀಲತೆಯಷ್ಟೇ ಸಾಲದು. ಬಲಿಷ್ಟವಾದ ನೆಟ್‍ವರ್ಕ್, ಸರಿಯಾದ ಜನರನ್ನು ತಲುಪುವುದು ಕೂಡಾ ಅಷ್ಟೇ ಮುಖ್ಯ. ಜೊತೆಗೆ ಯಶಸ್ಸು ಪಡೆಯಲು ಸರಿಯಾದ ವೇದಿಕೆ ಕೂಡಾ ಲಭ್ಯವಾಗಬೇಕು. 2015ರ ಫೆಬ್ರವರಿಯಲ್ಲಿ ಆರಂಭವಾದ ದೆಹಲಿ ಮೂಲದ ಯಾಹವಿ ಡಾಟ್ ಕಾಮ್, ಕಲಾವಿದರಿಗೆ ಸರಿಯಾದ ಅವಕಾಶಗಳನ್ನು ಹುಡುಕಲು, ಸರಿಯಾದ ಜನರನ್ನು ತಲುಪಲು, ಪ್ರಚಾರಕರು, ಅಭಿಮಾನಿಗಳನ್ನು ಪಡೆಯಲು ವೇದಿಕೆ ಕಲ್ಪಿಸಿಕೊಡುತ್ತಿದೆ. ಇದಕ್ಕಾಗಿ ಅದು ಯಾವುದೇ ಶುಲ್ಕ ವಿಧಿಸುತ್ತಿಲ್ಲ.

ಯಾಹವಿ.ಕಾಮ್ ಆರಂಭಗೊಂಡ ಬಳಿಕ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ. ದೆಹಲಿ-ರಾಷ್ಟ್ರರಾಜಧಾನಿ ವಲಯದಲ್ಲಿ ಸಂಗೀತಗಾರರು, ಏಕವ್ಯಕ್ತಿ ಪ್ರದರ್ಶಕರು, ಬ್ಯಾಂಡ್‍ಗಳು ಸೇರಿದಂತೆ ಸುಮಾರು 2000ಕ್ಕೂ ಹೆಚ್ಚು ನೋಂದಾಯಿತ ಗ್ರಾಹಕರನ್ನು ಪಡೆದಿದೆ. ಆಗಸ್ಟ್ ವೇಳೆಗೆ ಸಂಗೀತ ಕ್ಷೇತ್ರದಿಂದ ಏನಿಲ್ಲವೆಂದರೂ 10,000 ನೋಂದಾಯಿತ ಗ್ರಾಹಕರನ್ನು ಪಡೆಯುವುದು ಯಾಹವಿ.ಕಾಂನ ಗುರಿಯಾಗಿದೆ.

ಕಲಾವಿದರ ವಲಯದಲ್ಲಿ, ಮಧ್ಯವರ್ತಿಗಳ ಹಾವಳಿ ತುಂಬಾ ಇದೆ. ಇದರಿಂದ ನಿಜವಾದ ಪ್ರತಿಭೆಗಳಿಗೆ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಯಾಹವಿ.ಕಾಂ ಮೂಲಕ ನಾವು ಇಡೀ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಉದ್ದೇಶಿಸಿದ್ದೇವೆ. ಬೇಡಿಕೆ ಮತ್ತು ಪೂರೈಕೆಗಳ ಮಧ್ಯೆ ವ್ಯಾಪಕ ವಿನಿಮಯಕ್ಕೆ ಅವಕಾಶ ಕಲ್ಪಿಸಿದ್ದೇವೆ. ಈ ವೇದಿಕೆ ಮೂಲಕ ಕಲಾವಿದರು ಎಲ್ಲರನ್ನೂ ತಲುಪಬಹುದಾಗಿದೆ, ಎನ್ನುತ್ತಾರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯೇಶ್ ಶರ್ಮಾ.

ಸ್ಪಷ್ಟ ದೂರದೃಷ್ಟಿಯ ಸೂಪರ್ ಐಡಿಯಾ !

ಸಮಾಜಕ್ಕೆ ಏನಾದರೂ ಅರ್ಥಗರ್ಭಿತ ಸೇವೆ ಸಲ್ಲಿಸಬೇಕು ಎನ್ನುವು ಮಹತ್ತರ ಧ್ಯೇಯೋದ್ದೇಶದೊಂದಿಗೆ ಶರ್ಮಾ ಅವರು ಯಾಹವಿ.ಕಾಂ ಅನ್ನು ಸ್ಥಾಪಿಸಿದರು. ಇದಕ್ಕಾಗಿ ಒಂದು ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಇದನ್ನು ಸಾಂಸ್ಕೃತಿಕ ಮಾಪನವಾಗಿ ಬಳಸಬೇಕೆಂದು ನಿರ್ಧರಿಸಿದ್ದರು. ಕಲಾವಿದರ ಸಮಸ್ಯೆಗಳನ್ನು ನಿವಾರಿಸಿ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದ್ದರು.

ಇದನ್ನು ಕಾರ್ಯರೂಪಕ್ಕೆ ಇಳಿಸುವ ವೇಳೆ ಹಲವು ಸವಾಲುಗಳು ಎದುರಾಗಿದ್ದವು. ಜನರಿಗೆ ಇದರ ಕಾರ್ಯವಿಧಾನ, ಇದರ ಉಪಯೋಗ ಎಲ್ಲವನ್ನೂ ವಿವರಿಸಿ ಹೇಳುವುದು ಕಷ್ಟವಾಗಿತ್ತು. ಆನ್‍ಲೈನ್ ಮೂಲಕ ಕಲಾವಿದರನ್ನು ಹುಡುಕುವುದು, ಅವರನ್ನು ಪ್ರಮೋಟ್ ಮಾಡುವುದು ಎಲ್ಲವೂ ಸವಾಲಿನ ಕೆಲಸವಾಗಿತ್ತು. ಕಲಾವಿದರಿಗೆ ಬೆಳೆಯಲು, ಪ್ರಸಿದ್ಧಿ ಪಡೆಯಲು ವೇದಿಕೆ ಕಲ್ಪಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು.

ಸ್ಪರ್ಧೆಯಲ್ಲಿ ಮುಂದೆ ಸಾಗಿದ್ದು…

ಭಾರತದ ಪ್ರಮುಖ ನಗರಗಳ ಪಬ್‍ಗಳಲ್ಲಿ, ರೆಸ್ಟೋರೆಂಟ್‍ಗಳಲ್ಲಿ ಲೈವ್ ಪ್ರದರ್ಶನಕ್ಕೆ ಹೆಚ್ಚು ಹೆಚ್ಚು ಅವಕಾಶ ಸಿಗಲಾರಂಭಿಸಿದೆ. ಇದರಿಂದಾಗಿ, ಪ್ರದರ್ಶನ ಕಲೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುತ್ತಿರುವ ಕಲಾವಿದರ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗಿದೆ.

ಕ್ಯೂಕಿ, ಗಿಗ್‍ಸ್ಟಾರ್ಟ್ ಮೊದಲಾದ ಸಂಸ್ಥೆಗಳ ಆಗಮನದೊಂದಿಗೆ, ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆ ಬೆಳೆಯತೊಡಗಿದೆ. ಆದಾಯ ಪ್ರಮಾಣವೂ ವಾರ್ಷಿಕ 1000 ಕೋಟಿ ರೂಪಾಯಿವರೆಗೆ ತಲುಪಿದೆ.

ಈ ಮಾರುಕಟ್ಟೆಗೆ ಯಾಹವಿ.ಕಾಂ ಹೊಸ ಸಂಸ್ಥೆ. ಆದರೆ, ಎಲ್ಲರಿಗಿಂತ ಭಿನ್ನವಾಗಿ ನೆಲೆಯೂರಲು ಯತ್ನಿಸುತ್ತಿದೆ. ಪ್ರದರ್ಶನಕ್ಕಾಗಿ ಮಾರುಕಟ್ಟೆ ಹುಡುಕುವುದು, ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳನ್ನು ಪಡೆಯುವುದು, ಅಭಿಮಾನಿಗಳ ಜೊತೆ ಸಂವಹನ ನಡೆಸುವುದು ಸೇರಿದಂತೆ ಕಲಾವಿದರ ಹಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವತ್ತ ಯಾಹವಿ.ಕಾಂ ದೃಷ್ಟಿ ನೆಟ್ಟಿದೆ.

ಫೇಸ್‍ಬುಕ್ ಸೇರಿದಂತೆ, ಹಲವು ಸಾಮಾಜಿಕ ಜಾಲತಾಣಗಳಲ್ಲಿ ಯಾಹವಿ.ಕಾಂಅನ್ನು ಪ್ರಚಾರ ಮಾಡುವ ಮೂಲಕ ಕಲಾವಿದರನ್ನು ಹುಡುಕುವ ಕಾರ್ಯ ಮಾಡಲಾಯಿತು. ಕಲಾವಿದರ ಆಯ್ಕೆ ವಿಚಾರದಲ್ಲಿ ಯಾವುದೇ ಕಠಿಣ ನೀತಿಗಳನ್ನು ಯಾಹವಿ.ಕಾಂ ಪಾಲಿಸಲಿಲ್ಲ. ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಲು ಕಲಾವಿದರಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿಲ್ಲ.

ಯಶಸ್ಸಿನ ಏಣಿಯಲ್ಲಿ...

ಕಳೆದ ಒಂದು ತಿಂಗಳಿನಲ್ಲಿ, ಯಾಹವಿ.ಕಾಂ ದಕ್ಷಿಣ ದೆಹಲಿಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಝ್ ಸೇರಿದಂತೆ ವೈವಿಧ್ಯಮಯ ಸಂಗೀತ ಸಂಸ್ಕೃತಿಯನ್ನು ರಾಜಧಾನಿಯಲ್ಲಿ ಪ್ರಚಾರ ಮಾಡಲು ಮತ್ತಷ್ಟು ಸಂಗೀತ ಉತ್ಸವಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.

ಸಧ್ಯಕ್ಕೆ ನಾವು ಕಲಾವಿದರಿಗೆ ಆಗಲಿ, ಕ್ಲಬ್, ರೆಸ್ಟೋರೆಂಟ್‍ಗಳಿಗಾಗಲೀ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ನಮ್ಮ ಆದಾಯದ ಮೂಲ ಕೇವಲ ಜಾಹೀರಾತು ಮತ್ತು ಸಬ್ಕ್ರಿಪ್ಷನ್ ಆಗಿದೆ ಎನ್ನುತ್ತಾರೆ ಶರ್ಮಾ.

ಸಂಸ್ಥೆಯ ವಿಸ್ತರಣೆ ದೃಷ್ಟಿಯಿಂದ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಪುಣೆ, ಕೋಲ್ಕತ್ತಾ ಮತ್ತು ಈಶಾನ್ಯ ಭಾರತದಲ್ಲೂ ಚಟುವಟಿಕೆ ಆರಂಭಿಸಲು ನಿರ್ಧರಿಸಿದೆ.

ಸಂಸ್ಥೆಯ ಸಾಂಸ್ಥಿಕ ಸ್ವರೂಪವೂ ವಿಭಿನ್ನವಾಗಿದ್ದು, ಸಧ್ಯಕ್ಕೆ 40 ಮಂದಿ ಉದ್ಯೋಗಿಗಳಿದ್ದಾರೆ. ವಹಿವಾಟು, ಆಪರೇಷನ್, ಉತ್ಪನ್ನಗಳು ಮತ್ತು ಮಾರ್ಕೆಟಿಂಗ್ ತಂಡಗಳನ್ನೂ ಹೊಂದಿದೆ. ಪ್ರತಿ ವಿಭಾಗದಲ್ಲೂ ಪರಿಣತರಿದ್ದಾರೆ.

ಮುಂದಿನ ಹಾದಿ..

ಮುಂದಿನ ಒಂದು ವರ್ಷದಲ್ಲಿ, ಯಾಹವಿ.ಕಾಂ ಬೇಡಿಕೆ ಮತ್ತು ಪೂರೈಕೆ ಎರಡೂ ವಿಭಾಗಗಳಿಂದಲೂ ನೋಂದಣಿಗಳನ್ನು ವ್ಯಾಪಕವಾಗಿ ಮಾಡುವ ಮೂಲಕ ತನ್ನ ವೇದಿಕೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಉದ್ದೇಶಿಸಿದೆ. ತಂತ್ರಜ್ಞಾನ ಮತ್ತು ಆಡಳಿತ ವಿಭಾಗದಲ್ಲಿ ಅಪರಿಮಿತ ಜ್ಞಾನ ಹೊಂದಿರುವ ನಾಯಕತ್ವವು, ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಕಾರ್ಯಾಚರಿಸಲು ಬಳಿಕ, ಜಾಗತಿಕ ಮಟ್ಟದಲ್ಲಿ ಪದಾರ್ಪಣೆ ಮಾಡುವ ಗುರಿ ಹೊಂದಿದೆ ಎನ್ನುತ್ತಾರೆ ಶರ್ಮಾ.

ದಕ್ಷಿಣ ಏಷ್ಯಾದಲ್ಲಿ ಆರಂಭಿಸುವ ಮೂಲಕ, ಮಧ್ಯ ಯೂರೋಪ್ ಸೇರಿದಂತೆ 2016ರ ವೇಳೆಗೆ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರ್ಯಸೂಚಿ ಸಿದ್ಧಪಡಿಸಿದ್ದೇವೆ. ಸಂಗೀತ, ನೃತ್ಯ, ಹಾಸ್ಯ ಸೇರಿದಂತೆ ಎಲ್ಲಾ ಪ್ರಕಾರಗಳ ಕಲೆಗಳನ್ನು ನಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಲಿದ್ದೇವೆ.

Related Stories