ಹೂಗ್ಲಿ ದಡದ ಬ್ಯುಸಿನೆಸ್ ಸಾಮ್ರಾಟ : ರಾಜ್ ಕುಮಾರ್ ಗುಪ್ತಾರ ಅಪರೂಪದ ಯಶೋಗಾಥೆ..!

ಟೀಮ್​​ ವೈ.ಎಸ್​. ಕನ್ನಡ

ಹೂಗ್ಲಿ ದಡದ ಬ್ಯುಸಿನೆಸ್ ಸಾಮ್ರಾಟ : ರಾಜ್ ಕುಮಾರ್ ಗುಪ್ತಾರ ಅಪರೂಪದ ಯಶೋಗಾಥೆ..!

Thursday December 03, 2015,

3 min Read

ಆ ವ್ಯಕ್ತಿ ಅಂದು ತಿಂಗಳಿಗೆ ಕೇವಲ 60 ರೂಪಾಯಿ ಸಂಬಳ ಪಡೆಯುತ್ತಾ , 200 ಚದರ ಅಡಿಯಷ್ಟು ಬಾಡಿಗೆಯ ಜಾಗದಲ್ಲಿ ಬದುಕುತ್ತಿದ್ದ. ಆದ್ರೆ ಇಂದು ಅದೇ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ದಿಮೆಯ ಸಾಮ್ರಾಟ. ಕಡು ಬಡತನದಲ್ಲಿ ಹುಟ್ಟಿದ್ರೂ ಆತನ ಕಠಿಣ ಪರಿಶ್ರಮ ಹಾಗೂ ಸಕಾಲದ ಬುದ್ಧಿವಂತಿಕೆ ಆತನನ್ನ ಇಂದು ಬ್ಯುಸಿನೆಸ್ ಕಿಂಗ್ ಆಗಿ ರೂಪಿಸಿದೆ. ಇದು ಕೊಲ್ಕತ್ತಾ ಮೂಲದ ಉದ್ಯಮಿ ರಾಜ್ ಕುಮಾರ್ ಗುಪ್ತಾರ ಯಶೋಗಾಥೆ.

image


ಕೊಲ್ಕತ್ತಾದ ಹೂಗ್ಲಿ ನದಿ ದಡದಲ್ಲಿ ಆಧುನಿಕ ವಿನ್ಯಾಸಗಳೊಂದಿಗೆ ತಲೆ ಎತ್ತಿರುವ ಬಹುಮಹಡಿ ಕಟ್ಟಡಗಳ ನಿರ್ಮಾತೃ ಮುಕ್ತಿ ಗ್ರೂಪ್. ಕೊಲ್ಕತ್ತಾದಲ್ಲಿ ದೊಡ್ಡ ಕಟ್ಟಡಗಳನ್ನ ಅತ್ಯದ್ಭುತಾಗಿ ರೂಪಿಸಿದ ಹೆಗ್ಗಳಿಕೆ ಈ ಕಂಪೆನಿಗಿದೆ. ಈ ಹೆಸರಾಂತ ಕಂಪೆನಿಯ ರೂವಾರಿ ರಾಜ್ ಕುಮಾರ್ ಗುಪ್ತಾ. 1984ರಲ್ಲಿ ಹೂಗ್ಲಿ ಜಿಲ್ಲೆಯಲ್ಲಿ ಮೊದಲ ರೆಸಿಡೆನ್ಶಿಯಲ್ ಅಪಾರ್ಟ್ ಮೆಂಟ್ ನಿರ್ಮಿಸುವುದರೊಂದಿಗೆ ಮುಕ್ತಿ ಗ್ರೂಪ್ ಆಫ್ ಕಂಪೆನಿ ಅಸ್ಥಿತ್ವ ಪಡೆಯಿತು. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮುಕ್ತಿ ಗ್ರೂಪ್ ಆಪ್ ಕಂಪನಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರುಪತ್ಯ ಸಾಧಿಸಿತ್ತಲ್ಲದೆ, ಮಲ್ಟಿಫ್ಲೆಕ್ಸ್, ಇಂಟರ್ ನ್ಯಾಷನಲ್ ಹೊಟೇಲ್ಸ್, ರೆಸ್ಟೋರೆಂಟ್ಸ್ ಸೇರಿದಂತೆ ಹಲವು ಅಪಾರ್ಟ್ ಮೆಂಟ್ ಗಳಿಗೆ ಅಡಿಗಲ್ಲು ಹಾಕಿಕೊಟ್ಟಿದೆ.

ನಮ್ರತೆ ಹಾಗೂ ಸರಳತೆಯನ್ನ ರೂಢಿಸಿಕೊಂಡಿರುವ ರಾಜ್ ಕುಮಾರ್ ಗುಪ್ತಾ, ತಮ್ಮ ಬದುಕಿನಲ್ಲಿ ಉದ್ಯಮಕ್ಕೆ ಎಷ್ಟು ಆದ್ಯತೆ ಕೊಟ್ಟಿದ್ದಾರೋ ಅಷ್ಟೇ ಸಾಮಾಜಿಕ ಕಾರ್ಯಗಳಿಗೂ ಒತ್ತುಕೊಟ್ಟಿದ್ದಾರೆ. ಬದುಕಿನ ಯಶಸ್ಸಿನ ಬಗ್ಗೆ ಅವರು ಹೊಂದಿರೋ ವಿಚಾರಧಾರೆಗಳು, ನಡೆದು ಬಂದ ಹಾದಿ ನಿಜಕ್ಕೂ ಅದ್ಭುತವೆನಿಸುತ್ತದೆ.

ಆರಂಭಿಕ ದಿನಗಳು..

ರಾಜ್ ಕುಮಾರ್ ಗುಪ್ತಾ ಹುಟ್ಟಿದ್ದು ಪಂಜಾಬ್ ನ ಒಂದು ಬಡ ಕುಟುಂಬದಲ್ಲಿ.. ಶಾಲಾ ದಿನಗಳನ್ನ ಪೂರೈಸುವುದಕ್ಕೆ ಸಾಕಷ್ಟು ಪರದಾಡಿದ್ದ ಗುಪ್ತಾ, ಆಗಿನ ಕಲ್ಕತ್ತಾಕ್ಕೆ ವಲಸೆ ಬಂದು ಪಿಯುಸಿ ಶಿಕ್ಷಣ ಮುಗಿಸಿದ್ರು. 1978ರಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ತಿಂಗಳಿಗೆ 60 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದ್ರು. ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ರಾಜ್ ಕುಮಾರ್ ಗುಪ್ತಾ ನಂತ್ರ ಸೇರಿದ್ದು ಹಿಂದೂಸ್ತಾನ್ ಮೋಟರ್ಸ್ ಕಂಪೆನಿಗೆ. ಅಲ್ಲಿ ಅವರಿಗೆ ಸಿಕ್ತಾ ಇದ್ದಿದ್ದು ತಿಂಗಳಿಗೆ ನೂರಿಪ್ಪತ್ತೈದು ರೂಪಾಯಿ ಸಂಬಳ.. ಐದಾರು ವರ್ಷಗಳ ಕಾಲ ದುಡಿದ ಗುಪ್ತಾ, ಮಾರ್ಕೆಟಿಂಗ್ ಹಾಗೂ ವಹಿವಾಟುಗಳ ಸೂಕ್ಷ್ಮತೆಗಳನ್ನ ತಿಳಿದುಕೊಂಡ್ರು.. ಬಳಿಕ ತಮ್ಮ ಸ್ವಂತ ಕಂಪೆನಿಯನ್ನ ಆರಂಭಿಸಿದ್ರು..

image


ಯಶಸ್ಸಿಗೆ ಮುನ್ನುಡಿ ಬರೆದ ಸಾಮಾಜಿಕ ಕಾರ್ಯ..

200 ಚದರ ಅಡಿ ಜಾಗದಲ್ಲಿ ಗುಪ್ತಾ ಅವರ ಇಡೀ ಕುಟುಂಬ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ರೂ, ಕೈಲಾಗದವರಿಗೆ ಏನನ್ನಾದ್ರೂ ಸಹಾಯ ಮಾಡಲೇಬೇಕು ಅಂತ ಅವರು ಯೋಚಿಸುತ್ತಿದ್ರು. ಆದ್ರೆ ಅವರ ಆ ಉದ್ದೇಶವನ್ನ ಆತ್ಮೀಯರ ಬಳಿ ಹಂಚಿಕೊಂಡಾಗ ಅವರಿಂದ ಸಿಕ್ಕಿದ್ದು ನಿರಾಸೆಯ ಪ್ರತಿಕ್ರಿಯೆ.. ನಾವೇ ಬದುಕಲು ಕಷ್ಟಪಡುತ್ತಿರುವಾಗ ಇನ್ನೊಬ್ಬರಿಗೆ ನೆರವಾಗುವುದು ಹೇಗೆ ಅನ್ನೋ ಪ್ರಶ್ನೆಗಳು ಎದುರಾದ್ವು. ಹೀಗಿದ್ರೂ ತಮ್ಮನ್ನು ತಾವು ರೂಪಿಸಿಕೊಂಡ ಬಗೆಯನ್ನ ಗುಪ್ತಾ ಸ್ವಾರಸ್ಯಕರವಾಗಿ ವಿವರಿಸುತ್ತಾರೆ.

ನನ್ನ ಉದ್ದೇಶಕ್ಕೆ ಸೂಕ್ತ ಬೆಂಬಲ ಸಿಗದೇ ಇದ್ರೂ, ನಾನು ಸುಮ್ಮನಿರಲು ಸಿದ್ಧನಿರಲಿಲ್ಲ. ಯಾಕಂದ್ರೆ ತುತ್ತು ಅನ್ನಕ್ಕೂ ಗತಿ ಇಲ್ಲದೆ ನನಗಿಂತಲೂ ಹೀನಸ್ಥಿತಿಯಲ್ಲಿರುವ ಅದೆಷ್ಟೋ ಜನ್ರನ್ನ ನೋಡಿದ್ದೆ. ಹೀಗಾಗಿ ಏನನ್ನಾದ್ರೂ ಮಾಡಲೇಬೇಕು ಅಂತ ನಿರ್ಧರಿಸಿ ಆ ಜನರಿಗಾಗಿ ನನ್ನ ಆದಾಯದ ದೊಡ್ಡ ಭಾಗವನ್ನ ಸಾಮಾಜಿಕ ಕಾರ್ಯಗಳಿಗೆ ತೆಗೆದಿಡಲು ನಿರ್ಧರಿಸಿದೆ. ಇದೇ ವೇಳೆ ಕೊಲ್ಕತ್ತಾದ ಸ್ಟೇಷನ್ ಗಳಲ್ಲಿ ಕುಡಿಯಲು ಶುದ್ಧನೀರಿಗೂ ಪರದಾಡುವ ಅದೆಷ್ಟೋ ಮಂದಿ ನನ್ನ ಗಮನ ಸೆಳೆದ್ರು. ಹೀಗಾಗಿ ಅವರ ದಾಹ ತಣಿಸಲು ಮೊದಲ ಯೋಜನೆ ರೂಪಿಸಿ ನನ್ನ ಗೆಳೆಯರೊಂದಿಗೆ ಹಂಚಿಕೊಂಡೆ. ಅವರೂ ಸಹಾಯ ಮಾಡಲು ಮನಸ್ಸು ಮಾಡಿ ತಿಂಗಳಿಗೆ ಐವತ್ತರಿಂದ ಅರುವತ್ತು ರೂಪಾಯಿ ದೇಣಿಗೆ ಸಂಗ್ರಹಿಸಲು ಶುರುಮಾಡಿದ್ರು. ಅಲ್ಲಿಂದ ತಮ್ಮ ಸಾಮಾಜಿಕ ಕಾರ್ಯ ಶುರುವಾಯ್ತು ಅಂತ ರಾಜ್ ಕುಮಾರ್ ಗುಪ್ತಾ ತಮ್ಮ ಹಳೆಯ ದಿನಗಳನ್ನ ಮೆಲುಕು ಹಾಕುತ್ತಾರೆ.

image


ಬಡವರಿಗೆ ವರವಾದ ಹೋಮಿಯೋ ಪತಿ ಕ್ಲಿನಿಕ್..

ದಿನಗಳು ಉರುಳುತ್ತಿದ್ದಂತೆ ಜನರಿಗೆ ಇನ್ನೂ ಹೆಚ್ಚಿನದ್ದು ಏನನ್ನಾದ್ರೂ ಮಾಡಬೇಕು ಅಂತ ಅಂದುಕೊಂಡಿದ್ದೆ. ಅಲ್ಲದೆ ಬಡಜನರಿಗೊಸ್ಕರ ಉಚಿತ ಹೋಮಿಯೋಪತಿ ಕ್ಲಿನಿಕ್ ಆರಂಭಿಸುವ ಯೋಜನೆಯನ್ನ ಗೆಳೆಯರೊಂದಿಗೆ ಹಂಚಿಕೊಂಡೆ. ಆದ್ರೆ ಇದು ತುಂಬಾ ದುಬಾರಿಯಾಗಬಹುದು ಹಾಗೂ ಫೇಲ್ಯೂರ್ ಆಗ್ಬೋದು ಅಂತ ಅವರು ಆತಂಕ ವ್ಯಕ್ತಪಡಿಸಿದ್ರೂ ಮನವೊಲಿಸಿದೆ..

image


ಹೋಮಿಯೋಪತಿ ಕ್ಲಿನಿಕ್ ಆರಂಭಿಸಲು 80 ಚದರ ಅಡಿ ವಿಸ್ತೀರ್ಣದ ಗ್ಯಾರೇಜೊಂದನ್ನ ತಿಂಗಳಿಗೆ 40 ರೂಪಾಯಿ ಬಾಡಿಗೆ ಲೆಕ್ಕಾಚಾರದಲ್ಲಿ ಪಡೆದುಕೊಂಡೆವು. ಹಳೆಯ ಕೆಲವು ಫರ್ನಿಚರ್ ಗಳನ್ನ ಕೇಳಿ ಪಡೆದೆವು. ಹೀಗಾಗಿ ಕ್ಲಿನಿಕ್ ಗೆ ಬೇಕಾದ ಬೆಂಚು, ಸ್ಟೂಲ್ ಗಳು ದೊರೆತವು. ಯಾರೋ ಒಬ್ಬರು ಮೆಡಿಸಿನ್ ಕಿಟ್ ಒದಗಿಸಿದ್ರು. ಜೊತೆಗೆ ನಾವೆಲ್ಲಾ ಸೇರಿ ಸಣ್ಣ ಮೊತ್ತದ ಹಣಕ್ಕೆ ಡಾಕ್ಟರ್ ಒಬ್ಬರನ್ನ ಸಂಜೆ 6 ಗಂಟೆಯಿಂದ 8 ಗಂಟೆವರೆಗೂ ಪ್ರತೀ ದಿನ ಬಂದು ಸೇವೆ ಒದಗಿಸುವಂತೆ ಕೇಳಿಕೊಂಡೆವು. ಕೇವಲ 15 ದಿನಗಳಲ್ಲಿ ಎಲ್ಲವೂ ಸಿದ್ಧವಾಯ್ತು. ಅದು ಅತ್ಯಂತ ಸಣ್ಣ ಜಾಗದಲ್ಲಿ ರೆಡಿಯಾಗಿದ್ದ ಕ್ಲಿನಿಕ್ ಆಗಿದ್ರೂ ಯಾರಾದ್ರೂ ಒಬ್ಬ ದೊಡ್ಡ ವ್ಯಕ್ತಿ ಅದನ್ನ ಉದ್ಘಾಟಿಸಬೇಕು ಅಂತ ಇಚ್ಛಿಸಿದೆವು. ಹೀಗಾಗಿ ಹೋಮಿಯೋಪತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಹಿಂದೂಸ್ತಾನ್ ಮೋಟಾರ್ಸ್ ನ ಅಧ್ಯಕ್ಷ ಎನ್ ಕೆ ಬಿರ್ಲಾ ಅವರ ಮೂಲಕವೇ ಕ್ಲಿನಿಕ್ ಆರಂಭಿಸಿದ್ವಿ. ಇದರೊಂದಿಗೆ ನಮ್ಮ ಸಾಮಾಜಿಕ ಸೇವೆ ಇನ್ನಷ್ಟು ದೊಡ್ಡ ಮಟ್ಟಿಗೆ ಬೆಳೆಯಿತು. ಆಗ ನಾನು ಜನರಿಂದ ಹೆಚ್ಚು ಗುರುತಿಸಲ್ಪಡಲು ಶುರುವಾಗಿ ರೋಟರಿ ಕ್ಲಬ್​​​ನ ಸದಸ್ಯತ್ವ ಪಡೆದೆ. ಇದು ದೊಡ್ಡ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯ್ತು. ಹೀಗೆ ಜನಸೇವೆಯಿಂದಲೇ ತಾನು ಇನ್ನಷ್ಟು ಬೆಳೆಯಲು ಸಾಧ್ಯವಾಯ್ತು ಅಂತ ರಾಜ್ ಕುಮಾರ್ ಗುಪ್ತಾ ತಮ್ಮ ಅಂದಿನ ದಿನಗಳನ್ನ ಮೆಲುಕು ಹಾಕುತ್ತಾರೆ.

ಜನರ ನಡುವೆಯೇ ಬದುಕು ಆರಂಭಿಸಿದ ನನ್ನ ಮೇಲೆ ಸಮಾಜ ಹಾಗೂ ಉದ್ದಿಮೆ ನಂಬಿಕೆ ಇಟ್ಟಿತು. ಆಸ್ಪತ್ರೆ, ಅಪಾರ್ಟ್ ಮೆಂಟ್, ಕಾಂಪ್ಲೆಕ್ಸ್ ನಿರ್ಮಾಣದ ಪ್ರಾಜೆಕ್ಟ್ ಗಳು ಸುಲಭವಾಗಿ ಸಿಕ್ಕಲು. ಅವುಗಳನ್ನ ಗುಣಮಟ್ಟದೊಂದಿಗೆ ಸಕಾಲದಲ್ಲಿ ನಿರ್ಮಿಸಿಕೊಟ್ಟಿದ್ದೇ ಯಶಸ್ಸಿಗೆ ಪ್ರಮುಖ ಕಾರಣ ಅನ್ನೋದು ರಾಜ್ ಕುಮಾರ್ ಗುಪ್ತಾ ಅವರ ಮನದ ಮಾತು.

ಲೇಖಕರು: ರಾಖಿ ಚಕ್ರಬೊರ್ತಿ

ಅನುವಾದಕರು: ಬಿಆರ್ ಪಿ