ನನ್ನ ಚೆನ್ನೈ...

ಟೀಮ್​​ ವೈ.ಎಸ್​. ಕನ್ನಡ

0

ಕೊನೆಗೂ ಇಂದು ನಾನು ಸಹಜ ಬದುಕಿಗೆ ಮರಳಿದ್ದೇನೆ. ನದಿಯಂತಾಗಿದ್ದ ರಸ್ತೆಗಳೆಲ್ಲ ಈಗ ಮೊದಲಿನಂತಾಗಿವೆ. ವಿದ್ಯುತ್ ಇಲ್ಲದೆ ಕತ್ತಲಲ್ಲಿದ್ದ ಚೆನ್ನೈನಲ್ಲೀಗ ಬೆಳಕು ಮೂಡಿದೆ. ಆದ್ರೆ ಇಂಟರ್ನೆಟ್ ಸಂಪರ್ಕ ಮಾತ್ರ ಇನ್ನೂ ಸಂಪೂರ್ಣವಾಗಿ ಸರಿಹೋಗಿಲ್ಲ, ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ. ಕಳೆದ ಒಂದು ವಾರ ನನಗೆ ಆಸರೆಯಾಗಿದ್ದು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಮಾತ್ರ. ಬೇರೆ ಎಲ್ಲಾ ಮೊಬೈಲ್ ನೆಟ್‍ವರ್ಕ್‍ಗಳು ಇಲ್ಲದೇ ಇದ್ದ ಸಂದರ್ಭದಲ್ಲೂ ಬಿಎಸ್‍ಎನ್‍ಎಲ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಮೊಬೈಲ್ ಡಾಟಾ ಕೂಡ ವರ್ಕ್ ಆಗ್ತಾ ಇದ್ದಿದ್ರಿಂದ ನಾನು ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಯ್ತು.

ಮೊದಲ ದಿನದಿಂದಲೇ ಆ ಕರಾಳ ನೆನಪುಗಳನ್ನು ಮೆಲುಕು ಹಾಕೋಣ. ಇಡೀ ನಗರ ಅನುಭವಿಸಿದ ನರಕಯಾತನೆಗಾಗಿ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಇದೆಲ್ಲಾ ಶುರುವಾಗಿದ್ದು ಡಿಸೆಂಬರ್ 1ರಿಂದ. ಅಂದು ವರುಣದೇವ ಧೋ ಎಂದು ಸುರಿದಿದ್ದ. ರಸ್ತೆಗಳೆಲ್ಲ ತುಂಬಿ ಹರಿದು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ರೂ, ದಿನ ಕಳೆಯುವಷ್ಟರಲ್ಲಿ ಜನಜೀವನ ಸಹಜವಾಗಿತ್ತು. ಮಳೆಯ ನಡುವೆಯೇ ಅಗತ್ಯ ವಸ್ತುಗಳ ಖರೀದಿಗಾಗಿ ತೆರಳಿದ್ದೆವು. ಚೆನ್ನೈ ಮಹಾನಗರದ ಹೃದಯಭಾಗದಲ್ಲೇ ವಾಸವಾಗಿದ್ರೂ ಬುಧವಾರ ರಾತ್ರಿಯವರೆಗೆ ನನಗೆ ವರುಣನ ರೌದ್ರನರ್ತನದಿಂದಾದ ಪರಿಣಾಮಗಳ ಬಿಸಿ ತಟ್ಟಿರಲಿಲ್ಲ. ಎಂದಿನಂತೆ ನಾನು `ತಮಿಳ್ ಯುವರ್ ಸ್ಟೋರಿ'ಗಾಗಿ ಲೇಖನಗಳನ್ನು ಎಡಿಟ್ ಮಾಡುತ್ತಿದ್ದೆ. ಆದ್ರೆ ನನ್ನ ಮೊಬೈಲ್ ಡಾಟಾದ ಹಾಟ್‍ಸ್ಪಾಟ್ ಮಾತ್ರ ತುಂಬಾನೇ ನಿಧಾನವಾಗಿತ್ತು.

ಅಂದು ಡಿಸೆಂಬರ್ 2, ಬುಧವಾರ. ಆ ದಿನದ ಕೆಲಸವನ್ನೆಲ್ಲ ಮುಗಿಸಿ, ಟಿವಿಯಲ್ಲಿ ವಾರ್ತೆ ನೋಡುತ್ತ ಕುಳಿತಿದ್ದೆ. ನದಿ, ಸರೋವರಗಳ ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರೆಲ್ಲ ಭಾರೀ ಮಳೆಯಿಂದ ಹೇಗೆ ಸಂಕಷ್ಟಪಡುತ್ತಿದ್ದಾರೆ ಅನ್ನೋ ವಿಷಯದ ಬಗ್ಗೆ ಚರ್ಚೆಯಾಗುತ್ತಿತ್ತು. ಮನೆ ಅಥವಾ ಫ್ಲಾಟ್ ಕೊಂಡುಕೊಳ್ಳುವ ಮುನ್ನ ಜನರು ಅದನ್ನೆಲ್ಲ ಗಮನಿಸುವುದೇ ಇಲ್ಲ ಎಂದು ನಾನು ಕೂಡ ಒಂದು ಕಮೆಂಟ್ ಪಾಸ್ ಮಾಡಿದ್ದೆ. ಆದ್ರೆ ಕರಾಳ ರಾತ್ರಿ ನನಗಾಗಿ ಕಾದಿದೆ ಎಂಬುದರ ಅರಿವಿಲ್ಲದೆ, ಹಾಸಿಗೆ ಮೇಲೆ ಉರುಳಿದ್ದೆ.

ಬೆಳಗ್ಗೆ 6 ಗಂಟೆಯ ಸಮಯ, ನಾನಿನ್ನೂ ಗಾಢ ನಿದ್ದೆಯಲ್ಲಿದ್ದೆ. ಇದ್ದಕ್ಕಿದ್ದಂತೆ ನನ್ನ ತಂದೆಯ ಚೀರಾಟ ಕಿವಿಗೆ ಬಿತ್ತು. ಎದುರಿನ ರಸ್ತೆಯಲ್ಲಿ ಪೊಲೀಸ್ ವಾಹನಗಳು ಭರ್ರನೆ ಸದ್ದು ಮಾಡುತ್ತ ಸಾಗುತ್ತಿದ್ವು. ಪಕ್ಕದ ಮನೆಯ ಬಾಗಿಲಲ್ಲಿ ನಿಂತಿದ್ದ ಮಹಿಳೆ ನೀರು, ನೀರು ಎಂದು ಕೂಗಿಕೊಳ್ತಾ ಇದ್ಲು. ಕಳೆದ ರಾತ್ರಿ ಸುರಿದ ವರ್ಷಧಾರೆಯ ರಭಸಕ್ಕೆ ರಸ್ತೆ ಮೇಲೆಲ್ಲೋ 2 ಇಂಚು ನೀರು ನಿಂತಿರಬೇಕು, ಅದಕ್ಯಾಕಿಷ್ಟು ಗಾಬರಿ ಅಂತಾ ನಾನು ಆಶ್ಚರ್ಯಪಟ್ಟಿದ್ದೆ. ನನ್ನ ನಿದ್ದೆ ಹಾಳು ಮಾಡ್ತಿದ್ದಾರಲ್ಲಾ ಅಂದುಕೊಂಡೆ. ಅಷ್ಟರಲ್ಲಿ, ನಮ್ಮ ಮನೆಯೊಳಗೆ ನೀರು ಅಂತಾ ನನ್ನಪ್ಪ ಮತ್ತೆ ಕೂಗಿಕೊಂಡ್ರು. ಕೂಡಲೇ ಎದ್ದು ಗೇಟ್‍ನೆಡೆಗೆ ಓಡೋಡಿ ಬಂದೆ, ಅಷ್ಟರಲ್ಲಾಗ್ಲೇ ಸುತ್ತಮುತ್ತಲ ರಸ್ತೆಗಳಿಂದ ನಮ್ಮ ಮನೆಯೊಳಕ್ಕೆ ನೀರು ನುಗ್ಗಿ ಬರ್ತಾ ಇತ್ತು. ಮಳೆ ಕೂಡ ಇರಲಿಲ್ಲ, ಅದೆಲ್ಲಿಂದ ನೀರು ಬರುತ್ತಿದೆ ಅನ್ನೋ ಗೊಂದಲ ನನಗೆ. ಏನಾಗುತ್ತಿದೆ ಅನ್ನೋದೇ ನನಗರ್ಥವಾಗಲಿಲ್ಲ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನೀರನ್ನು ನಾನು ಕೂಡ ಎಲ್ಲರ ಜೊತೆ ಸೇರಿ ನೋಡುತ್ತ ನಿಂತೆ. ಮಣ್ಣು ಮತ್ತು ಮೂಟೆಗಳನ್ನು ಅಡ್ಡ ಇಟ್ಟು ಮನೆಯೊಳಕ್ಕೆ ನೀರು ನುಗ್ಗದಂತೆ ತಡೆಯಲು ನಾವೆಲ್ಲ ಹರಸಾಹಸಪಟ್ಟೆವು. ಈ ಕಸರತ್ತು ಘಂಟೆಗಟ್ಟಲೆ ಸಾಗಿತ್ತು, ಇಡೀ ಚೆನ್ನೈ ನಗರದಲ್ಲಿ ವಿದ್ಯುತ್ ಇರಲಿಲ್ಲ, ಫೋನ್ ಸಿಗ್ನಲ್‍ಗಳು ಕೂಡ ಕಾರ್ಯನಿರ್ವಹಿಸುತ್ತಿರಲಿಲ್ಲ.

ಹತ್ತಾರು ಘಂಟೆಗಳ ಬಳಿಕ ನೀರಿನ ಮಟ್ಟ ಕಡಿಮೆಯಾಗಿತ್ತು, ಅದೃಷ್ಟವಶಾತ್ ನನ್ನ ಮನೆಗೂ ವಿದ್ಯುತ್ ಸಂಪರ್ಕ ಸಿಕ್ಕಿತ್ತು. ಕೂಡಲೇ ಟಿವಿ ಆನ್ ಮಾಡಿ, ಇದ್ದಕ್ಕಿದ್ದಂತೆ ನೀರು ನುಗ್ಗಿದ್ದಕ್ಕೆ ಕಾರಣ ಹುಡುಕಲು ಮುಂದಾದೆ. ಅಲ್ಲೇ ಹತ್ತಿರ ತುಂಬಿ ಹರಿಯುತ್ತಿದ್ದ ನದಿಯಿಂದ ಬಂದ ಪ್ರವಾಹ ಇದಾಗಿತ್ತು. ನಮ್ಮ ಏರಿಯಾದಲ್ಲೂ ಹೀಗೆ ಪ್ರವಾಹ ಸ್ಥಿತಿ ತಲೆದೋರಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ. ನಿಜಕ್ಕೂ ಈಗ ನಾವೆಲ್ಲ ತೊಂದರೆಯಲ್ಲಿದ್ದೇವೆ. ಇಡೀ ಚೆನ್ನೈ ಮಹಾಮಳೆಗೆ ಸಿಕ್ಕು ಮುಳುಗಿ ಹೋಗಿತ್ತು. ಮನೆಗಳಲ್ಲಿ 5-10 ಅಡಿ ನೀರು ನಿಂತಿತ್ತು. ನೆಲ ಮಹಡಿಯಲ್ಲಿರುವವರ ಪರಿಸ್ಥಿತಿಯಂತೂ ದೇವರಿಗೇ ಪ್ರೀತಿ. ಮಳೆ ನೀರು ಪಾಲಾದ ಬೈಕ್, ಕಾರುಗಳಿಗಂತೂ ಲೆಕ್ಕವೇ ಇಲ್ಲ. ಅಂತಹ ಭಯಾನಕ ಸ್ಥಿತಿಗೆ ನನ್ನನ್ನು ಸಿಲುಕಿಸದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ಯಾಕಂದ್ರೆ ನಾನು ಸುರಕ್ಷಿತವಾಗಿದ್ದೇನೆ.

ಗುರುವಾರ ಇಂಟರ್ನೆಟ್ ಸಂಪರ್ಕ ಮರಳಿ ದೊರೆತಿತ್ತು. ಅಷ್ಟರಲ್ಲಾಗ್ಲೇ ಫೇಸ್‍ಬುಕ್ ಮತ್ತು ಟ್ವಿಟ್ಟರ್ ತುಂಬೆಲ್ಲಾ ಮೆಸೇಜ್‍ಗಳ ಮಳೆಯಾಗಿತ್ತು. ನೂರಾರು ಕರೆಗಳು, ವಿದೇಶದಲ್ಲಿದ್ದ ಮಕ್ಕಳಿಗಂತೂ ಆತಂಕ, ಚೆನ್ನೈನಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋ ಕಳಕಳಿಯ ಸಂದೇಶಗಳು ಹರಿದು ಬಂದಿದ್ವು. ಹೆತ್ತವರು ಸುರಕ್ಷಿತವಾಗಿದ್ದಾರೋ ಇಲ್ಲವೋ ಅನ್ನೋ ಆತಂಕ ಅವರಲ್ಲಿ ಮನೆಮಾಡಿತ್ತು. ಅದನ್ನೆಲ್ಲ ನೋಡಿ ನನಗೆ ವಿಶ್ರಾಂತಿಯೇ ಬೇಕೆನಿಸಲಿಲ್ಲ, ವರದಿಗಾರಿಕೆಯ ದಿನಗಳು ನೆನಪಿಗೆ ಬಂದ್ವು. ಕೂಡಲೇ ಯಾರ್ಯಾರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಬಗ್ಗೆ ಸ್ನೇಹಿತರು ಹಾಗೂ ಹಳೆ ಕಾಲೇಜು ಗ್ರೂಪ್‍ಗಳಿಂದ ವಾಟ್ಸ್‍ಆ್ಯಪ್‍ನಲ್ಲಿ ಮಾಹಿತಿ ಪಡೆದೆ. ಇಡೀ ದಿನ ಫೋನ್ ಕರೆ, ಸಂದೇಶಗಳ ಮೂಲಕ ನಾಪತ್ತೆಯಾದವರ ಹುಡುಕಾಟಕ್ಕಾಗಿ ಶ್ರಮಪಟ್ಟೆ. ಅವರಲ್ಲಿ ಕೆಲವರು ಸಂಪರ್ಕಕ್ಕೆ ಸಿಕ್ಕಿದ್ರೆ, ಇನ್ನು ಕೆಲವರನ್ನು ತಲುಪಲು ಸಾಧ್ಯವಾಗಲಿಲ್ಲ. ಯಾಕಂದ್ರೆ ಅವರೆಲ್ಲ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ರು. ಮುಂದೆ ಇನ್ನಷ್ಟು ಸಂಕಷ್ಟ ಕಾದಿದೆಯೆಂದು ನನಗೆ ಅನಿಸಿತ್ತು.

ಗರ್ಭಿಣಿ ಮಹಿಳೆ ವೈದ್ಯರ ನಿರೀಕ್ಷೆಯಲ್ಲಿದ್ರೆ, ವೃದ್ಧ ದಂಪತಿಗೆ ತುರ್ತು ಚಿಕಿತ್ಸೆ ಬೇಕಿತ್ತು, ಹಸುಗೂಸುಗಳು ಹಾಲಿಲ್ಲದೇ ಚಡಪಡಿಸ್ತಾ ಇದ್ವು. ಹೀಗೆ ಇಂತಹ ಮೆಸೇಜ್ ಹಾಗೂ ಕರೆಗಳ ಮಹಾಪೂರವೇ ಹರಿದು ಬರ್ತಾ ಇತ್ತು. ಇದಕ್ಕಾಗಿಯೇ ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಸ್ವಯಂಸೇವಕರ ತಂಡ ರಚಿಸಿ ಅವರಿಗೆಲ್ಲ ಸಹಾಯಹಸ್ತ ಚಾಚಲಾಯ್ತು. ನಾನು ಕೂಡ ನನ್ನ ಕೈಲಾದಷ್ಟು ಪ್ರಯತ್ನಪಟ್ಟೆ. ಆದ್ರೆ ಮನೆಯಲ್ಲೇ ಕುಳಿತು ಇದನ್ನೆಲ್ಲಾ ಮಾಡ್ತಾ ಇದ್ರೂ ನನಗೆ ತೃಪ್ತಿ ಇರಲಿಲ್ಲ. ಪ್ರವಾಹಕ್ಕೆ ಸಿಲುಕಿರುವ ಜನರ ಬಳಿ ತೆರಳಿ, ನಾಪತ್ತೆಯಾದವರನ್ನು ಒಂದೆಡೆ ಸೇರಿಸಬೇಕೆಂದು ನಿರ್ಧರಿಸಿದೆ. ಅದೆಷ್ಟೋ ಮನೆಗಳಲ್ಲಿ ತುತ್ತು ಅನ್ನವಿಲ್ಲದೆ, ಕುಡಿಯಲು ನೀರು ಸಿಗದೆ ವೃದ್ಧರು, ಮಕ್ಕಳು ಸಂಕಷ್ಟದಲ್ಲಿದ್ರು. ಮನೆಯಿಂದ ಹೊರಬರೋಣ ಅಂದ್ರೆ, ಎದೆಯುದ್ದಕ್ಕೂ ನಿಂತಿದ್ದ ನೀರು ಅಡ್ಡಿಯಾಗಿತ್ತು. ಅವರಿಗೆಲ್ಲ ನಾವು ಕುಡಿಯುವ ನೀರು, ಅಗತ್ಯ ಔಷಧಿಗಳನ್ನು ಒದಗಿಸಿದೆವು. ಇದನ್ನೆಲ್ಲ ನೋಡಿ ಅವರು ಅಕ್ಷರಶಃ ಕಣ್ಣೀರಾಗಿದ್ರು. 5 ದಿನಗಳಿಂದ ಮನೆಗಳ ಮೇಲೆ ನಿಂತಿದ್ದ ಅವರಲ್ಲಿ ಕೃತಜ್ಞತಾ ಭಾವವಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧಿಕರು ಮತ್ತು ಮಕ್ಕಳಿಗೆ ತಾವು ಸುರಕ್ಷಿತವಾಗಿರುವ ಬಗ್ಗೆ ತಿಳಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ರು. ಅವರಲ್ಲಿ ಕೆಲವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದ ಸಮಾಧಾನ ನಮ್ಮಲ್ಲಿತ್ತು.

ಇನ್ನೂ ಎರಡು ದಿನ ಈ ಕಾರ್ಯವನ್ನು ಮುಂದುವರಿಸಲು ನಾನು ನಿರ್ಧರಿಸಿದ್ದೆ. ಶುಕ್ರವಾರ ಮತ್ತು ಶನಿವಾರ ನನ್ನ ಸ್ನೇಹಿತರೆಲ್ಲ ಪ್ರವಾಹ ಸಂತ್ರಸ್ಥರಿಗೆ ಕುಡಿಯುವ ನೀರು, ಬಿಸ್ಕೆಟ್, ಹಾಲು ಪೂರೈಸಲು ನೆರವಾದ್ರು. ಇಷ್ಟು ವೇಗವಾಗಿ ಸಹಾಯಕ್ಕೆ ಧಾವಿಸಿದ ಸ್ನೇಹಿತರ ಬಗ್ಗೆ ನನಗೆ ಹೆಮ್ಮೆಯಿದೆ. ನಾವು 4 ಜನ 2 ಕಾರ್‍ಗಳಲ್ಲಿ ಪ್ರತ್ಯೇಕವಾಗಿ ತೆರಳಿದೆವು. ವೃದ್ಧಾಶ್ರಮ, ಮತ್ತು ಆಸ್ಪತ್ರೆಗಳಲ್ಲಿರುವ ಅಸಹಾಯಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದೆವು. ಪ್ರವಾಹಕ್ಕೆ ಸಿಕ್ಕು ನಲುಗಿದ ಪ್ರದೇಶಗಳನ್ನು ನೋಡಿದ್ರೆ, ಕರುಳು ಕಿತ್ತು ಬರುವಂತಿತ್ತು. ನನ್ನ ಸ್ನೇಹಿತನೊಬ್ಬ ನಿರಾಶ್ರಿತರಿಗಾಗಿ 200 ಪ್ಯಾಕೆಟ್‍ಗಳಷ್ಟು ಆಹಾರ ತಯಾರಿಸಿ ಕಳುಹಿಸಿಕೊಟ್ಟಿದ್ದ.

ಈಗ ಚೆನ್ನೈಗೆ ಎಲ್ಲಾ ಕಡೆಯಿಂದ ಸಹಾಯ ದೊರೆತಿದೆ. ಸ್ವಯಂ ಸೇವಕರು ಅಗತ್ಯ ವಸ್ತುಗಳನ್ನು ಪೂರೈಸಲು ಟೊಂಕಕಟ್ಟಿ ನಿಂತಿದ್ದಾರೆ. ಆದ್ರೆ ಜನರಿಗೆ ಈಗ ಮಾನವೀಯತೆಯ ಶಕ್ತಿಯ ಅರಿವಾಗಿದೆ. ನೆಲಮಹಡಿಯಲ್ಲಿ ವಾಸವಿದ್ದವರಿಗೆಲ್ಲ ಅಕ್ಕಪಕ್ಕದ ಮನೆಯವರು ಆಶ್ರಯ ಕೊಟ್ಟಿದ್ದಾರೆ. ದೇವಸ್ಥಾನ, ಮಸೀದಿ ಮತ್ತು ಚರ್ಚ್‍ಗಳಲ್ಲಿ ಪ್ರವಾಹ ಪೀಡಿತರಿಗೆ ನೆಲೆ ಕಲ್ಪಿಸಲಾಗಿದೆ. ನಾನು ಕೂಡ ನನ್ನ ಎಂದಿನ ಕೆಲಸಕ್ಕೆ ಮರಳಿದ್ದೇನೆ. ನನ್ನ ಚೆನ್ನೈಗಾಗಿ ಅಲ್ಪ ಕರ್ತವ್ಯ ನಿರ್ವಹಿಸಲು ಸಿಕ್ಕ ಅವಕಾಶಕ್ಕಾಗಿ ನಾನು ಚಿರರುಣಿ.

ಲೇಖಕರು: ಇಂದುಜಾ
ಅನುವಾದಕರು: ಭಾರತಿ ಭಟ್​​​