ಅಪ್ರತಿಮ ಕಲಾಸಾಧಕರು ಎ.ಎಸ್.​ಮೂರ್ತಿ..

ವಿಜಯಾ ಉಪಾಧ್ಯಾಯ

0

ಪ್ರತಿ ಜೀವಕೋಶದಲ್ಲೂ ಆ ಜೀವಿಯ ಇಡೀ ಗುಣಲಕ್ಷಣಗಳು ಅಡಕವಾಗಿದ್ದು ಅದು ಅನಂತ ಸಾಧ್ಯತೆಗಳನ್ನು ಹೊಂದಿರುತ್ತದೆ. ಕೇವಲ ಒಂದು ಜೀವಕೋಶದಿಂದ ಆರಂಭವಾಗುವ ಜೀವಿಯ ಅಸ್ಥಿತ್ವ ಮುಂದೆ ಕೋಶ ವಿಭಜನೆಗೊಂಡು ದೇಹ ಬೆಳೆದಂತೆ ಆಯಾ ಸ್ಥಿತಿಗತಿಗನುಸಾರವಾಗಿ ಕೋಶಗಳು ಆಕಾರ ಪಡೆಯುತ್ತವೆ. ತಮ್ಮ ಅಂತಿಮ ಸ್ವರೂಪಕ್ಕೆ ತಕ್ಕ ಹಾಗೆ ವರ್ತಿಸುತ್ತವೆ. ಅಗತ್ಯವಿದ್ದಷ್ಟೆ ಕೆಲಸ ಮಾಡುತ್ತವೆ. ಈ ಮಾತು ಈಗ ಏಕೆಂದರೆ ಇದನ್ನೇ ನಾವು ಪ್ರತಿ ಮನುಷ್ಯನ ಕ್ರಿಯಾಶಕ್ತಿಗೆ/ಪ್ರತಿಭೆಗೆ ಅನ್ವಯಿಸುವುದಾದರೆ ಪ್ರತಿ ಮನುಷ್ಯನೂ ಒಬ್ಬ ಸಾಧಕನೇ. ಅವನಲ್ಲಿ ಆ ಸಾಮರ್ಥ್ಯವಿರುತ್ತದೆ. ಆದರೆ ಅದು ವ್ಯಕ್ತವಾಗುವ ಮಾಧ್ಯಮ ಬೇರೆ. ಸೃಷ್ಟಿಕರ್ತ ಎಲ್ಲರಿಗೂ ನೀಡಿರುವ ಡಿಎನ್‍ಎ ಮೂಲ ರಚನೆ ಒಂದೇ. ಸೇವಿಸುವ ಜಲ, ವಾಯು ಒಂದೇ. ಒಬ್ಬನೇ ಸೂರ್ಯ ನಮಗೆ ಶಾಖ, ಬೆಳಕು ನೀಡುತ್ತಿದ್ದಾನೆ. ಆದರೆ ಇವೆಲ್ಲವನ್ನು ಬಳಸುವ ರೀತಿ, ನೋಡುವ ಪರಿ, ಪರಿಕಲ್ಪನೆ ಬೇರೆ ಬೇರೆ. ಸೇಬು ಬೀಳುವುದನ್ನು ಎಲ್ಲರೂ ನೋಡಿದ್ದರೂ ನ್ಯೂಟನ್ ಮಾತ್ರ ಚಲನದ ನಿಯಮಗಳನ್ನು ಪ್ರತಿಪಾದಿಸಿದನು. ಕುಡಿಯುವ ನೀರಿನಂದಲೇ ವಿದ್ಯುತ್ ಕೂಡ ದೊರೆಯುತ್ತದೆ. ಅದರಿಂದಲೇ ಉಗಿಬಂಡಿ ಓಡುತ್ತದೆ. ಆದ್ದರಿಂದ ವ್ಯಕ್ತಿ ತನಗಿರುವ ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ತನಗೆ ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.

ಸಾಮಿ ವಿವೇಕಾನಂದರು ಹೇಳಿದಂತೆ ಪ್ರತಿ ಆತ್ಮವೂ ದೈವತ್ವವನ್ನು ಹೊಂದಿರುತ್ತದೆ. ಮಾನವನಿಂದ ದೇವನಾಗುವ ದಾರಿಯನ್ನು ನಾವು ಕಂಡುಕೊಳ್ಳಬೇಕಷ್ಟೆ. ದೇವನೆಂದರೆ ಜನರು ನಮ್ಮನ್ನು ಪೂಜೆ ಮಾಡಬೇಕೆಂದು ಅಲ್ಲ, ಬದಲಿಗೆ ಆ ದೇವನಂತೆ ಜನರನ್ನು ಹೇಗಿದ್ದಾರೋ ಹಾಗೆಯೇ ಸ್ವೀಕರಿಸುವುದು. ದೇವರು ಜನರಿಗೆ ಆಕರಗಳನ್ನು ಕೊಟ್ಟು ಆಕಾರಗಳನ್ನು ಮಾಡಿ ಎಂದು ಅವರ ಪಾಡಿಗೆ ಬಿಟ್ಟಿದ್ದಾನೆ. ಚಿತ್ತ ಕೊಟ್ಟು ಚಿಂತನೆ ಮಾಡಿ, ಸಾಧನೆಯ ಬೀಜದ ಬಿತ್ತನೆ ಮಾಡಿ ಎಂದಿದ್ದಾನೆ. ತಾನೇ ಜಗದ ಸೃಷ್ಟಿ ಮಾಡಿ ನಮಗೆ ಮಾದರಿಯಾಗಿದ್ದಾನೆ. ನೀನೂ ಏನಾದರೂ ಸೃಷ್ಟಿಸು ಎಂದು ಸ್ಪೂರ್ತಿ ಕೊಟ್ಟಿದ್ದಾನೆ. ಸ್ಪೂರ್ತಿ ಬತ್ತದ ಚಿಲುಮೆ. ಪ್ರಯತ್ನಪಟ್ಟರೆ ಖಂಡಿತಾ ಹೊಸ ಯೋಚನೆಗಳು, ಆವಿಷ್ಕಾರಗಳು ನಮ್ಮಿಂದ ಸಾಧ್ಯ. ನಮ್ಮ ಬದುಕಿಗೆ ದಾರಿ ದೀಪವಾಗಿ ಹಲವಾರು ಸ್ಪೂರ್ತಿ ದೀಪಕಗಳು ಈ ಹಿಂದೆ ಬಂದು ಹೋಗಿದ್ದಾರೆ. ಈಗಲೂ ನಮ್ಮ ನಡುವೆ ಇದ್ದಾರೆ. ಅವರ ಬದುಕು, ಸಾಧನೆಯನ್ನು ಅರಿತು ನಮ್ಮ ಬಾಳನ್ನು ಬೆಳಗಿಸೋಣ, ಏನಂತೀರಾ..?

ಅದರ ಮೊದಲ ಹೆಜ್ಜೆಯಾಗಿ ಶ್ರೀಯುತ ಎ.ಎಸ್.ಮೂರ್ತಿಯವರ ಪರಿಚಯ ಮಾಡಿಕೊಳ್ಳೋಣ. ಇವರು ಪ್ರಖ್ಯಾತ ನಾಟಕಕಾರ, ರಂಗಕರ್ಮಿ, ಅಂಕಣಕಾರ, ಓರ್ವ ಉತ್ತಮ ಕಲಾವಿದರಾಗಿದ್ದರು. ಮುಖ್ಯವಾಗಿ ಕಲೆಗಾಗಿ ತಮ್ಮಿಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂದು ಮನರಂಜನೆಗೆ ಹಲವಾರು ಮಾಧ್ಯಮಗಳು ಇವೆ. ಪ್ರಪಂಚವೇ ಬೆರಳ ತುದಿಯಲ್ಲಿದೆ. ಆದರೆ ಅಂತರ್ಜಾಲ ಬಿಡಿ, ದೂರದರ್ಶನವೂ ಇಲ್ಲದೆ 60-70 ವರ್ಷಗಳ ಹಿಂದಿನ ಕಾಲಾವಧಿಯಲ್ಲಿ ಜನರು ಹೇಗೆ ಸಮಯ ಕಳೆಯುತ್ತಿದ್ದರು? ಆಗ ಅವರಿಗೆ ಸಂಗೀತ, ನೃತ್ಯ, ನಾಟಕಗಳು, ಮನರಂಜನೆಗೆ ದಾರಿಯಾಗಿದ್ದವು. ಆ ಸಮಯದಲ್ಲಿ ಹುಟ್ಟಿ ಬೆಳೆದು ನೂರಾರು ನಾಟಕಗಳನ್ನು ಬರೆದು ನಾಟಕರಂಗಕ್ಕೆ ಹೊಸ ಆಯಾಮ ಕೊಟ್ಟವರು ಶ್ರೀ ಎ.ಎಸ್.ಮೂರ್ತಿಯವರು.

ಇವರ ತಂದೆ ಅಕ್ಕಿ ಹೆಬ್ಬಾಳ್ ಸುಬ್ಬರಾಯರು - ಅ.ನ.ಸುಬ್ಬರಾಯರೆಂದೇ ಖ್ಯಾತರು. ತಾಯಿ ಗೌರಮ್ಮ. ಅನಸು ಅವರು ಹೆಸರಾಂತ ಕಲಾವಿದರು. ತಾವು ಕಷ್ಟದಲ್ಲಿದ್ದರೂ ಬಡವರಿಗೆ ಸಹಾಯ ಮಾಡುವವರು. ಸರ್ ಎಂ.ವಿಶ್ವೇಶ್ವರಯ್ಯನವರು ಹೇಳಿದ `ಸ್ವಾತಂತ್ರ್ಯವೇ ಸ್ವ ಸ್ವಾವಲಂಬನೆಯೇ ಸ್ವತಂತ್ರದ ಹಾದಿ' ಎಂಬ ಮಾತಿನಿಂದ ಪ್ರಭಾವಿತರಾಗಿ ಅ.ನ.ಸು ಕರ್ನಾಕಟದ ಮೊತ್ತಮೊದಲ ಖಾಸಗಿ ಕಲಾಶಾಲೆಯಾದ `ಕಲಾಮಂದಿರ'ವನ್ನು 1919ರಲ್ಲಿ ಆರಂಭಿಸಿದರು. ಆ ಮೂಲಕ ಬಡವರಿಗೆ, ನಿರಾಶ್ರಿತರಿಗೆ ಆಶ್ರಯ, ಕುಶಲ ಕಲಾ ಶಿಕ್ಷಣ ಕೊಟ್ಟು ತಮ್ಮ ಕಾಲಮೇಲೆ ನಿಲ್ಲುವ ದಾರಿ ಹೇಳಿಕೊಟ್ಟಿದ್ದರು. ಮೂರ್ತಿಯವರಿಗೆ ಶಾಲಾ ದಿನಗಳಲ್ಲೇ ಹಾಡು, ನೃತ್ಯ, ನಾಟಕಗಳ ಬಗ್ಗೆ ಒಲವಿದ್ದು ಶ್ರೀ ಟಿ.ಪಿ.ಕೈಲಾಸಂ ಅವರಿಂದ ಪ್ರಭಾವಿತಗೊಂಡಿದ್ದರು.

ಆರ್ಯ ವಿದ್ಯಾಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಓದಿದ ಮೇಲೆ ಅವರ ಕುಟುಂಬದ ವಾಸ ಆಗ ಅಲಸೂರು ಕಲಾ ಮಂದಿರಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಲ್ಲಿಯೇ ತಂದೆ ಬಳಿ ಮೂರ್ತಿಗಳು ಚಿತ್ರಕಲೆಯನ್ನು ಅಭ್ಯಾಸ ಮಾಡಿದರು. ಜೊತೆಗೆ ಪ್ರಯೋಗಶೀಲರಾದ ಅ.ನ.ಸು ಮೊದಲ ಫ್ರೇಂ ಕಂಪನಿ ಆರಂಭಿಸಿದರು. ಫ್ರೇಂಗೆ ಸಂಬಂಧಿಸಿದ ಕೆಲಸ, ಫ್ರೇಂ ಪಾಲಿಷ್ ಮಾಡತೊಡಗಿದರು. ಮುಂದೆ ಅ.ನ.ಸು ಸೀರೆ ಪ್ರಿಂಟ್ ಮಾಡುವ ಕಾರ್ಖಾನೆ ಆರಂಭಿಸಿದಾಗ ಬಟ್ಟೆ ಅಚ್ಚೊತ್ತಿ ಹಲವು ವಿನ್ಯಾಸ ತಯಾರಿಸುವ ಬ್ಲಾಕ್ ಪ್ರಿಂಟಿಂಗ್, ಆ ವಿನ್ಯಾಸಕ್ಕೆ ಬಣ್ಣ ತುಂಬುವ ಬಣ್ಣಗಳ ಮಿಶ್ರಣವನ್ನು ಕಲಿತರು. ಕಲಾ ಮಂದಿರ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದು ವೇದಿಕೆಯಾಗಿತ್ತು. ಹೆಸರಾಂತ ಸಾಹಿತಿಗಳು, ಕವಿಗಳು, ಕಲಾವಿದರು ಸೇರಿ ಸಂವಾದ ನಡೆಸುತ್ತಿದ್ದರು. ತಂದೆಯವರ ಆದರ್ಶ, ಕಲಾಮಂದಿರದ ವಾತಾವರಣ ಇವೆರಡೂ ಮೂರ್ತಿಯವರ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯಕವಾಯಿತು.

ಸಾಧನೆಯ ಮೈಲಿಗಲ್ಲುಗಳು...

ನಾಟಕ ಸಂಸ್ಥೆ - ತಾರುಣ್ಯದಲ್ಲಿ (ಹೆಸರಾಂತ ಚಿತ್ರ ನಿರ್ದೇಶಕ, ಗೀತ ರಚನೆಕಾರ ಕು.ರ.ಸೀತಾರಾಮಶಾಸ್ತ್ರಿಯವರ ನಾಟಕದಿಂದ ಎ.ಎಸ್.ಮೂರ್ತಿಯವರಿಗೆ ನಾಟಕದಲ್ಲಿ ಅವಕಾಶಗಳು ಹೆಚ್ಚಾಯಿತು) ತಮ್ಮ ಆಪ್ತ ಸ್ನೇಹಿತರಾದ ರಾಮನಾಥ್, ದೊಡ್ಡಪ್ಪನ ಮಗ ಸಿ.ಎಲ್.ಶ್ರೀನಿವಾಸ ಮೂರ್ತಿ ಹಾಗೂ ಇನ್ನಿತರರನ್ನು ಸೇರಿಸಿಕೊಂಡು ಅ.ನ.ಸು ಅವರು `ಮಾಯಾವರ' ಎಂಬ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಒಂದು ರೀತಿಯಲ್ಲಿ ಅದು ಚಿತ್ರಾ ಸಂಸ್ಥೆಯ ಆರಂಭ ಎಂದು ಹೇಳಬಹುದು. ಮೊದಲಿಗೆ ಬೇರೆಯವರ ನಾಟಕಗಳನ್ನು ಅಭಿನಯಿಸುತ್ತ ಮುಂದೆ ತಾವೇ ನೂರಾರು ನಾಟಕಗಳನ್ನು ಬರೆದು ನಿರ್ದೇಶಿಸಿದರು. ಸಾಹಿತ್ಯ ಪ್ರಧಾನವಾದರೂ ಸಾಮಾಜಿಕ ಕಳಕಳಿ ಇರುತ್ತಿದ್ದ ಇವರ ನಾಟಕಗಳು ಎಷ್ಟು ಜನಪ್ರಿಯವಾಗಿದ್ದವೆಂದರೆ ಆಗ ಹೆಚ್ಚಿನ ಎಲ್ಲಾ ಶಾಲಾ ಕಾಲೇಜುಗಳ ವಾರ್ಷಿಕೋತ್ಸವಕ್ಕೆ ಇವರ ನಾಟಕಗಳನ್ನೇ ಆಯ್ಕೆ ಮಾಡುತ್ತಿದ್ದರು. ಚಿತ್ರಾ ನಾಟಕ ಸಂಸ್ಥೆ ಅದೆಷ್ಟೋ ಹೊಸ ಹೊಸ ಲೇಖಕರ ಪ್ರತಿಭೆಗೆ ವೇದಿಕೆಯಾಯಿತು. ನಟ ನಟಿಯರ ಅಭಿನಯ ಸಾಮಥ್ರ್ಯಕ್ಕೆ ಪ್ರೋತ್ಸಾಹ ನೀಡಿತ್ತು. ವೈವಿದ್ಯಮಯ ನಾಟಕಗಳನ್ನು ಪ್ರದರ್ಶಿಸಿ ಪ್ರಯೋಗಶೀಲತೆಗೆ ಹೆಸರಾಯಿತು.

ಆಕಾಶವಾಣಿ ಈರಣ್ಣ...

ಖ್ಯಾತ ಪತ್ರಕರ್ತ ವೈಯನ್ಕೆ ಅವರು ಹೇಳಿದಂತೆ ಸ್ಕ್ರಿಪ್ಟ್ & ಇಮ್ಯಾಜಿನೇಶನ್ ಮೂರ್ತಿಯವರ ದೈವದತ್ತ ವರ. ಮತ್ತು ಒಳ್ಳೆಯ ಕಂಠ, ವಾಕ್‍ಪ್ರತಿಭೆಯೂ ಇದ್ದು ಆಕಾಶವಾಣಿ ಸೇರಿಕೊಂಡರು. ವೆಂಕಣ್ಣನ ಸಾಹಸಗಳು, ಸಮಾಜದ ಅವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲುವ ಮಿ.ಎಕ್ಸ್ ಎಂಬ ಸರಣಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಬಹುಮುಖ್ಯವಾಗಿ ಸುತ್ತಮುತ್ತಲಿನ ಸನ್ನಿವೇಶಗಳನ್ನು, ಸಮಸ್ಯೆಗಳನ್ನು ವಿನೂತನ ಧಾಟಿಯಲ್ಲಿ ಪ್ರಸ್ತುತಪಡಿಸುವ ಮಣ್ಣಿನ ಮಗನಾದ ಈರಣ್ಣನ ಮನೆಮಾತು ಕಾರ್ಯಕ್ರಮ ಎಲ್ಲರ ಮನೆಮಾತಾಗಿಬಿಟ್ಟಿತು. ಕೇವಲ ಐದು ನಿಮಿಷಗಳ ಅವಧಿಯ ಒಂದು ಮಾತು ಕಾರ್ಯಕ್ರಮದಲ್ಲಿ ಮನಮುಟ್ಟುವಂತೆ ಮಾತನಾಡಿ, ಕೇಳುಗರಲ್ಲಿ ಜವಾಬ್ಧಾರಿ, ಸಾಮಾಜಿಕ ಪ್ರಜ್ಞೆ ಮೂಡಿಸಿದ್ದು ಇವರ ಹೆಗ್ಗಳಿಕೆ. ಮಲ್ಲಿಗೆ ಪತ್ರಿಕೆಯಲ್ಲಿ `ಒಂದೊಂದೆ ಮಾತು' ಅಂಕಣದಲ್ಲಿ ಸಾಂಸ್ಕೃತಿಕ ಕಲೆಗಳ ಬಗ್ಗೆ ಸಂಕ್ಷಿಪ್ತವಾಗಿ ನಾಲ್ಕೈದು ಸಾಲುಗಳಲ್ಲಿ ಬರೆಯುತ್ತಿದ್ದರು.

ಬೀದಿ ನಾಟಕ...

ಎ.ಎಸ್.ಮೂರ್ತಿ ಹಾಗೂ ಕಿ.ರಂ.ನಾಗರಾಜುರವರು ಸೇರಿ ಕಟ್ಟಿದ `ಗೆಳೆಯರ ಗುಂಪು' ಎಂಬ ತಂಡ 1973ರಲ್ಲಿ ಕರ್ನಾಟಕದ ಪ್ರಥಮ ಬೀದಿ ನಾಟಕ `ಕಟ್ಟು' ಪ್ರದರ್ಶಿಸುವ ಮೂಲಕ ನಾಟಕದ ಪ್ರಸ್ತುತಿಗೆ ವಿಭಿನ್ನ ಶೈಲಿಯನ್ನು ತೋರಿಸಿಕೊಟ್ಟಿತು. ಆಗಿನ ತುರ್ತುಪರಿಸ್ಥಿತಿಯ ದಿನಗಳಲ್ಲಿ ವ್ಯವಸ್ಥೆಯ ಬದಲಾವಣೆಯ ಆಕಾಂಕ್ಷೆ, ಜನರ ನಿರೀಕ್ಷೆ, ಅದಕ್ಕೆ ತಕ್ಕ ಸಂದರ್ಭ ಸನ್ನಿವೇಶಗಳೇ ಬೀದಿ ನಾಟಕದ ವಸ್ತುಗಳಾಗುತ್ತಿದ್ದವು. ಇದಕ್ಕೆ ಸಂಬಂಧಿಸಿದಂತೆ `ಬೀದಿ' ಎಂಬ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು. `ನೋಡು ಪತ್ರಿಕೆ' ಎಂಬ ಪ್ರಥಮ ವಿಡಿಯೋ ಮ್ಯಾಗಝೀನ್ ಅನ್ನು ಪ್ರಕಟಿಸಿದರಾದರೂ ಅದಕ್ಕೆ ತಕ್ಕ ಮಾನ್ಯತೆ, ಪ್ರಚಾರ ಅವರಿಗೆ ಸಿಗಲಿಲ್ಲ. ಕನ್ನಡ ಲೇಖಕಿಯರಿಗೆ ಒಂದು ವೇದಿಕೆಯಾಗಲೆಂದು `ಕರ್ನಾಟಕ ಲೇಖಕಿಯರ ಸಂಘ' ಆರಂಭಿಸಿದರು. ಅ.ನ.ಸು ಅವರು ವಿಧಿವಶರಾದ ನಂತರ ಅವರ ನೆನಪಿಗೆ 1981ರಲ್ಲಿ `ಅ.ನ.ಸು ಸ್ಮಾರಕ ಅಭಿನಯ ತರಂಗ' ಎಂಬ ಭಾನುವಾರದ ನಾಟಕಶಾಲೆಯನ್ನು ಆರಂಭಿಸಿದ್ದರು. ವಿದ್ಯಾರ್ಹತೆಗಿಂತ ಪ್ರತಿಭೆಗೆ ಮನ್ನಣೆ ನೀಡುವ ಈ ಶಾಲೆಯಲ್ಲಿ ವಿವಿಧ ಪ್ರಕಾರಗಳ ನಾಟಕಗಳನ್ನು ಭಿನ್ನ ರೀತಿಯಲ್ಲಿ ಹಲವಾರು ಕಡೆ ಪ್ರದರ್ಶಿಸಿ, ಜನಪ್ರಿಯ ತಂಡವೆಂದು ಖ್ಯಾತಿ ಪಡೆದಿದೆ. ಹಲವಾರು ವಿದ್ಯಾರ್ಥಿಗಳು ಈ ಶಾಲೆಯ ಸದುಪಯೋಗ ಪಡೆಯುತ್ತಿದ್ದಾರೆ.

`ಪಪೆಟ್ ಲ್ಯಾಂಡ್' ಎಂಬ ಮಹಿಳೆಯರೇ ಸೂತ್ರದ ಗೊಂಬೆಯಾಡಿಸುವ ಪ್ರಥಮ ಮಹಿಳಾ ಗೊಂಬೆಯಾಟ ತಂಡದ ರೂವಾರಿಯಾದರು. ತರಬೇತಿ ನೀಡಿದವರು ಮೂರ್ತಿಯವರ ದೊಡ್ಡಪ್ಪನ ಮಗನಾದ ಶ್ರೀ ಎ.ಎಲ್.ಶ್ರೀನಿವಾಸಮೂರ್ತಿಯವರು. ಈ ತಂಡ ರಾಜ್ಯಾದ್ಯಂತ ಪ್ರದರ್ಶನ ನೀಡಿತಲ್ಲದೆ, ರಾಷ್ಟ್ರಾದ್ಯಂತ ಪ್ರಚಾರ ಪಡೆದಿತ್ತು. ದೂರದರ್ಶನಕ್ಕಾಗಿ ಮಗ ಶ್ರೀ ಎ.ಎಂ.ಪ್ರಕಾಶ್ ಜೊತೆ `ನೀವು-ನಾವು' ಎಂಬ ಗೊಂಬೆಯಾಟವನ್ನು ನಡೆಸಿಕೊಟ್ಟರು. ಕೇವಲ 15 ನಿಮಿಷಗಳಲ್ಲಿ ಮಕ್ಕಳಲ್ಲಿ ಕೌತುಕ ಮೂಡಿಸುತ್ತಲೇ ಸಂದೇಶವನ್ನು ಹೇಳುವ ರೀತಿ `ಜಿಗಿ ಜಿಗಿ ಬೊಂಬೆಯಾಟ'ವೆಂದು ಬಹಳ ಜನಪ್ರಿಯವಾಯಿತು.

ಮಕ್ಕಳ ನಿರ್ಮಲ ಮನಸ್ಸಿನ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರಲ್ಲಿರುವ ಪ್ರತಿಭೆಯನ್ನು ಪೋಷಿಸಿ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುವಂತೆ `ಬಿಂಬ' ಎಂಬ ವಾರಾಂತ್ಯದ ತರಗತಿಗಳನ್ನು 1989ರಲ್ಲಿ ಆರಂಬಿಸಿದರು. ಅ.ನ.ಸು ಅವರು ಕನಸು ಕಂಡಿದ್ದಂತೆ ಇದು ಈಗ ಸತತ 26ನೇ ವರ್ಷವೂ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮಕ್ಕಳ ನಾಟಕ, ಕವಿಮೇಳ, ಕಥಾ ಲೋಕ, ಮೂಕಾಭಿನಯ, ಮಕ್ಕಳ ಕಟಕಟೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಒಳಗೊಂಡ `ಬಿಂಬ' ಚಿತ್ರರಂಗಕ್ಕೆ, ಕಿರುತೆರೆಗೆ ಅನೇಕ ಪ್ರತಿಭೆಗಳನ್ನು ಕಾಣಿಕೆ ನೀಡಿದೆ.

ಅ.ನ.ಸು ಆರಂಭಿಸಿದ ಕಲಾಶಾಲೆ, `ಕಲಾಮಂದಿರ'ವನ್ನು ನಾಡಿನ ಹೆಸರಾಂತ ಕಲಾವಿದರ ನೆರವಿನಿಂದ ಒಂದು ಮಾದರಿ ಕಲಾಶಾಲೆಯನ್ನಾಗಿ ಬೆಳೆಸುವಲ್ಲಿ ಮೂರ್ತಿಗಳು ಮಹತ್ತರ ಪಾತ್ರ ವಹಿಸಿದ್ದರು. ಈಗ ಶ್ರೀಯುತರ ಮಗ ಶ್ರೀ ಎ.ಎಂ.ಪ್ರಕಾಶ್, ಕಲಾಮಂದಿರದ ಪ್ರಾಂಶುಪಾಲರಾಗಿದ್ದಾರೆ. ಈ ಕಲಾಶಾಲೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿದ್ದು, ಆಸಕ್ತರು ಎಸ್‍ಎಸ್‍ಎಲ್‍ಸಿ/ಪಿಯುಸಿ ನಂತರ 5 ವರ್ಷಗಳ ಬಿಬಿಎ ಚಿತ್ರಕಲಾ ಪದವಿಯನ್ನು ಪಡೆಯಬಹುದಾಗಿದೆ.

ಶ್ರೀ ಎ.ಎಸ್.ಮೂರ್ತಿಗಳ ಸಾಧನೆಯ ಹಾದಿಯಲ್ಲಿ ತಮಗೆದುರಾದ ಈರ್ಷೆ , ಅಪಮಾನ, ಅಡ್ಡಿ ಆತಂಕದ ಕಲ್ಲುಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿ ಮುಂದೆ ಸಾಗಿದವರು. ತನ್ನ ಬದುಕಿನ ದಾರಿ ತಾನೇ ಮಾಡಿಕೊಳ್ಳುತ್ತಾ, ಬೆಳೆಯುತ್ತಾ ಹೋದವರು. ಜೊತೆಗೆ ಬಂದವರನ್ನು ಬೆಳೆಯಗೊಟ್ಟವರು. ಕಮ್ಮಾರನು ಕಿಡಿ ಹೊತ್ತಿ ಬೆಂಕಿ ಪ್ರಜ್ವಲಿಸುವ ಹಾಗೆ ಮಾಡಿದಂತೆ ಬೇರೆಯವರಲ್ಲಿ ಪ್ರತಿಭೆಯ ಸಣ್ಣ ಹೊಳಪು ಕಂಡರೂ ಅವರನ್ನು ಹುರಿದುಂಬಿಸಿ ಅವರು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದವರು. ಇವರ ಬಳಿ ತರಬೇತಿ ಪಡೆದ ಅದೆಷ್ಟೋ ಮಂದಿ ಸಿನಿ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿದರು. ರಾಷ್ಟ್ರವ್ಯಾಪಿ ಖ್ಯಾತಿಯ ಪ್ರಕಾಶ್ ರೈ, ರಮೇಶ್ ಅರವಿಂದ್, ಬಿ.ಸುರೇಶ್, ಯುವ ಸಂಗೀತ ಪ್ರತಿಭೆ ರೋಹಿತ್ ಭಟ್, ಇವರೆಲ್ಲ ಕೆಲವು ಉದಾಹರಣೆಗಳಷ್ಟೇ. ಮೂರ್ತಿಯರವ ಮೊಮ್ಮಕ್ಕಳಾದ ಖ್ಯಾತ ಹಾಡುಗಾರ್ತಿ ಶ್ರೀಮತಿ ಎಂ.ಡಿ.ಪಲ್ಲವಿ, ಡಾ.ಕಶ್ಯಪ್, ಚಿತ್ರಶ್ರೀ, ಅನ್ವಿತಾ ಹಾಗೂ ಇನ್ನಿತರರು,ಮಗಳು ಇಂದಿರಾ ಸುಂದರ್​​ ಸೇರಿದಂತೆ ಇಡೀ ಕುಟುಂಬವೇ ಕಲಾವಿದರಾಗಿದ್ದು ತಮ್ಮ ಹಿರಿಯರು ಆರಂಭಿಸಿದ ಕಲಾಮಂದಿರ, ಅಭಿನಯ ತರಂಗ, ವಿಜಯ ನಗರ ಮತ್ತು ಹನುಮಂತ ನಗರ ಬಿಂಬ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಶ್ರೀ ಎ.ಎಸ್.ಮೂರ್ತಿಯವರ `ಕಲೆಯೇ ಕಾಯಕ' ತತ್ವದಿಂದ ಪ್ರೇರಿತರಾಗಿ ಬೇರೆ ಯುವ ಪ್ರತಿಭೆಗಲಿಗೂ ಮಾರ್ಗದರ್ಶನ ನೀಡುತ್ತ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ಲೇಖಕರು: ಶ್ರೀಮತಿ ವಿಜಯಾ ಉಪಾಧ್ಯಾಯ   

Related Stories