'ಮೋದಿ ಮತ್ತು ಕಪ್ಪುಹಣ': ಸೋಲೋ, ಗೆಲುವೋ..? 

ಆಶುತೋಷ್, ಎಎಪಿ ಮುಖಂಡ 

0

ನನ್ನ ಮೊಬೈಲ್​ಗೆ ಇದ್ದಕ್ಕಿದ್ದಂತೆ ಫ್ಲಾಶ್ ನ್ಯೂಸ್ ಬಂದಿತ್ತು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಅಂತಾ. ನನಗೆ ಆಶ್ಚರ್ಯ, ಗಡಿಯಲ್ಲಿ ಗುಂಡಿನ ಚಕಮಕಿ ಬಿಟ್ಟರೆ ಇನ್ಯಾವುದೇ ಬಿಕ್ಕಟ್ಟು ಎದುರಾಗಿಲ್ಲ, ಅಂದ್ಮೇಲೆ ಮೋದಿ ಯಾವ ವಿಷಯದ ಬಗ್ಗೆ ಮಾತನಾಡಬಹುದು ಅನ್ನೋ ಕುತೂಹಲ. 8 ಗಂಟೆಯಾಗ್ತಿದ್ದಂತೆ ಟಿವಿ ಆನ್ ಮಾಡಿದೆ, ಪ್ರಧಾನಿ ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿದ್ರು. ಆಗ್ಲೇ ಹೊಸ ಬಾಂಬ್ ಹಾಕಿದ್ರು, ಮಧ್ಯರಾತ್ರಿಯಿಂದ್ಲೇ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸುತ್ತಿದೆ ಅಂತಾ ಪ್ರಕಟಿಸಿದ್ರು. ಕಪ್ಪುಹಣ ನಿಯಂತ್ರಣ ಇದರ ಉದ್ದೇಶ. ಕೂಡಲೇ ನನ್ನ ಪರ್ಸ್ ತೆಗೆದು ನೋಡಿದೆ, 500ರ ಮೂರು ನೋಟುಗಳಿದ್ವು, ಅದಕ್ಕೆ ಬೆಲೆಯೇ ಇಲ್ಲ ಎನಿಸಿಬಿಡ್ತು. ಇದು ಕೇವಲ ಕಾಗದದ ತುಣುಕು ಎನಿಸಿತ್ತು.

ರಾತ್ರಿ 12ಗಂಟೆಯಾಗುವುದರೊಳಗೆ 500ರ ನೋಟನ್ನು ಬಳಸಿಬಿಡೋಣ ಎಂದುಕೊಂಡ ನಾನು ನನ್ನ ಸ್ನೇಹಿತರೊಡನೆ ಹೊರಗಡೆ ಹೋಗಿ ಏನಾದ್ರೂ ತಿನ್ನೋಣ ಅಂತಾ ಪ್ಲಾನ್ ಮಾಡಿದ್ದೆ. ನಾವು ಸ್ವಾದಿಷ್ಟ ಭೋಜನ ಮಾಡಿದ್ವಿ, ಊಟದುದ್ದಕ್ಕೂ ಪ್ರಧಾನಿ ನಿರ್ಧಾರ ಅತ್ಯಂತ ದಿಟ್ಟತನದಿಂದ ಕೂಡಿದ್ದು ಎನಿಸಿತ್ತು. ಆದ್ರೆ ನಿಜವಾಗಿಯೂ ಅವರು ಕಪ್ಪುಹಣ ನಿಯಂತ್ರಿಸಲು ಮುಂದಾಗಿದ್ದಾರಾ? ಆ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರಾ? ಈ ಹೋರಾಟದಲ್ಲಿ ಅವರು ಗೆಲ್ಲುತ್ತಾರೋ ಸೋಲುತ್ತಾರೋ? ಅನ್ನೋ ಪ್ರಶ್ನೆ ಕಾಡಲಾರಂಭಿಸಿತ್ತು.

ನಿಜ ಹೇಳಬೇಕಂದ್ರೆ ನನಗೆ ಗೊಂದಲವಿತ್ತು. ಇದು ಬಹುಷಃ ಅವರ ಪಬ್ಲಿಕ್ ಇಮೇಜ್ ಅನ್ನು ಹೆಚ್ಚಿಸಬಹುದು, ಭ್ರಷ್ಟಾಚಾರದ ವಿರುದ್ಧ ಹೋರಾಟಗಾರ ಎನಿಸಿಕೊಂಡು ರಾಜಕೀಯ ಲಾಭ ಪಡೆಯುತ್ತಾರೆ ಎಂಬ ಆಲೋಚನೆಯೂ ಬಂದಿತ್ತು. ಅಷ್ಟರಲ್ಲಾಗ್ಲೇ ಪೆಟ್ರೋಲ್ ಬಂಕ್​ಗಳಲ್ಲಿ ಜನ ಕ್ಯೂ ನಿಂತಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ನೋಟು ನಿಷೇಧದ ಸುದ್ದಿ ಕೇಳಿ ಎಲ್ಲರೂ ಕಂಗಾಲಾಗಿದ್ರು.

ಮಾರನೇ ದಿನ ಎಲ್ಲಾ ಕಡೆ ಅವ್ಯವಸ್ಥೆ ಮತ್ತು ಅರಾಜಕತೆ. ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಕಿಲೋ ಮೀಟರ್​ಗಟ್ಟಲೆ ಉದ್ದದ ಕ್ಯೂ. ನೋಟು ನಿಷೇಧದ ಘೋಷಣೆ ರಾಜಕೀಯದ ಬಣ್ಣವನ್ನೇ ಬದಲಾಯಿಸಿದೆ. ಅದೇ ರೀತಿ ಮತ್ತೊಮ್ಮೆ ಆಗಲು ಸಾಧ್ಯವಿಲ್ಲ. ಈಗ ಎರಡು ವಾರ ಕಳೆದಿದೆ, ರಾಜಕೀಯ ರೇಖೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಕಲ್ಪನೆಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಇದು ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಅವರು ಘೋಷಿಸಿರುವ ಸಮರ, ನನ್ನ ಪಾಲಿಗೆ ನುಂಗಲಾರದ ತುತ್ತು.

2014 ಚುನಾವಣೆ ಸಂದರ್ಭದಲ್ಲಿ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೂ ತಲಾ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲು ಭ್ರಷ್ಟಾಚಾರವೇ ಕಾರಣ. ಹಾಗಾಗಿಯೇ ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 50ಕ್ಕಿಂತಲೂ ಕಡಿಮೆಯಾಯ್ತು. 20ನೇ ಶತಮಾನದಲ್ಲಿ ಭಾರತದ ರಾಜಕೀಯವನ್ನು ಆಳಿದ ಪಕ್ಷ ಭವಿಷ್ಯದಲ್ಲಿ ಮತ್ತೆ ಉನ್ನತಿ ಹೊಂದುವುದು ಅನುಮಾನ ಎನ್ನುತ್ತಾರೆ ಪಂಡಿತರು.

ಮೋದಿ ಅವರು ಕಪ್ಪುಹಣದ ವಿರುದ್ಧ ಹೋರಾಡಲೇಬೇಕಾಯ್ತು. ವಿಶೇಷವಾಗಿ ವಿದೇಶಗಳಲ್ಲಿ, ಅದರಲ್ಲೂ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣವನ್ನು ವಾಪಸ್ ತರಲೇಬೇಕಾಗಿದೆ. ಯಾಕಂದ್ರೆ ಭಾರತೀಯರ ಜೊತೆ ಸ್ವಿಸ್ ಬ್ಯಾಂಕ್ ರೊಮ್ಯಾಂಟಿಕ್ ಸಂಬಂಧ ಹೊಂದಿದೆ. ಭ್ರಷ್ಟರು, ಭಾರತೀಯರನ್ನು ಲೂಟಿಹೊಡೆದವರು, ಶ್ರೀಮಂತರೆಲ್ಲ ಸ್ವಿಡ್ಜರ್ಲೆಂಡ್​ನ ಬ್ಯಾಂಕ್ನಲ್ಲಿ ಹಣ ಇಟ್ಟಿದ್ದಾರೆ. ಅದು ಅತ್ಯಂತ ಪ್ರಬಲ ಬ್ಯಾಂಕ್. ಯಶಸ್ವಿ ರಾಜಕಾರಣಿಗಳು, ಹೆಸರು ಮಾಡಿದವರೆಲ್ಲರ ಖಾತೆಯೂ ಅಲ್ಲಿದೆ.

ಬಿಜೆಪಿಯ ಹಿರಿಯ ಮುತ್ಸದ್ದಿ, ನರೇಂದ್ರ ಮೋದಿ ಅವರ ರಾಜಕೀಯ ಗುರು ಎಲ್.ಕೆ.ಅಡ್ವಾಣಿ 2009ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಪ್ಪುಹಣದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹಲವು ಬಾರಿ ಸುದ್ದಿಗೋಷ್ಠಿಗಳಲ್ಲಿ, ಚುನಾವಣಾ ರ್ಯಾಲಿಗಳಲ್ಲಿ ಆ ಬಗ್ಗೆ ಮಾತನಾಡಿದರೂ 2009ರ ಎಲೆಕ್ಷನ್​ನಲ್ಲಿ ಕಪ್ಪುಹಣ ದೊಡ್ಡ ವಿಚಾರವಾಗಲೇ ಇಲ್ಲ. ಜಾಗತಿಕ ರಿಸೆಶನ್ ಬಳಿಕವೂ ದೇಶದ ಆರ್ಥಿಕ ಅಭಿವೃದ್ಧಿ ಶೇ.9ರಷ್ಟಿದ್ದುದೇ ಅದಕ್ಕೆ ಕಾರಣ. ಮನಮೋಹನ್ ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದ್ರು. ಆದ್ರೆ 2011ರ ನಂತರ ರಾಜಕಾರಣದ ರೂಪ ಬದಲಾದಂತೆ ಕಪ್ಪುಹಣದ ವ್ಯಾಖ್ಯಾನವೂ ಬದಲಾಯ್ತು.

ಅಣ್ಣಾ ಚಳವಳಿ ದೇಶವನ್ನು ನಿಷ್ಕ್ರಿಯತೆಯಿಂದ ಬಡಿದೆಬ್ಬಿಸಿತ್ತು. ಮನಮೋಹನ್ ಸಿಂಗ್ ಸರ್ಕಾರದ ಸುತ್ತ ಹಗರಣಗಳ ಹುತ್ತವೇ ಬೆಳೆದಿತ್ತು. ಕಾಂಗ್ರೆಸ್ ಅತ್ಯಂತ ಭ್ರಷ್ಟ ಹಾಗೂ ನಾಚಿಕೆಯಿಲ್ಲದ ಪಕ್ಷವಾಗಿ ಮಾರ್ಪಟ್ಟಿತ್ತು. ಆರ್ಥಿಕ ಅಭಿವೃದ್ಧಿಯೂ ಕುಂಠಿತವಾಯ್ತು. ಜಾಗತಿಕ ಬಿಕ್ಕಟ್ಟಿನಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಆಗ್ಲೇ ಮೋದಿ ಎಂಬ ಚಮತ್ಕಾರ ಜನ್ಮತಳೆದಿತ್ತು. ಭ್ರಷ್ಟಾಚಾರ ರಹಿತ ವ್ಯಕ್ತಿತ್ವ, ಕಠಿಣ ಹಾಗೂ ಕಷ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಛಾತಿ ಅವರಿಗಿತ್ತು. ದೇಶ ಅವರ ಅಲೆಯಲ್ಲಿ ಕೊಚ್ಚಿ ಹೋಯ್ತು, ಮನಮೋಹನ್ ಸಿಂಗ್ ಹೋದ್ರು, ಮೋದಿ ಬಂದ್ರು.

ಕೊಟ್ಟ ಮಾತಿನಂತೆ 100 ದಿನಗಳಲ್ಲಿ ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪುಹಣ ವಾಪಸ್ ತರಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ವಿಶೇಷ ತನಿಖಾ ದಳ ನೇಮಕವಷ್ಟೇ ಅವರಿಂದ ಸಾಧ್ಯವಾಗಿದ್ದು, ಅದು ಕೂಡ ಹಲ್ಲು ಕಿತ್ತ ಹಾವಿನಂತಾಗಿದೆ. ಚುನಾವಣೆ ಸಂದರ್ಭಗಳಲ್ಲಿ ಹೇಳಿದ್ದನ್ನೆಲ್ಲ ಗಂಭೀರವಾಗಿ ಪರಿಗಣಿಸಬಾರದು ಎಂದುಬಿಟ್ರು ಅಮಿತ್ ಶಾ. ಗಮನಿಸಬೇಕಾದ ಅಂಶವೆಂದ್ರೆ ದೇಶದಲ್ಲಿ ಅತ್ಯಂತ ದುಬಾರಿ ಕ್ಯಾಂಪೇನ್ ಅಂದ್ರೆ ಮೋದಿ ಅವರ ಚುನಾವಣಾ ಪ್ರಚಾರ.

ಅದಕ್ಕಾಗಿ 10,000-20,000 ಕೋಟಿ ರೂಪಾಯಿ ಖರ್ಚಾಗಿರಬಹುದು. ದೊಡ್ಡ ದೊಡ್ಡ ಕಾರ್ಪೊರೇಟ್ ಹೌಸ್ಗಳೆಲ್ಲ ತಮ್ಮ ತಿಜೋರಿ ಓಪನ್ ಮಾಡಿಬಿಟ್ಟಿದ್ದವು. ಮೋದಿ ಯಾವತ್ತೂ ಈ ಖರ್ಚು ವೆಚ್ಚದ ಲೆಕ್ಕ ಕೊಟ್ಟಿಲ್ಲ. ಅದರ ಬಗ್ಗೆ ಮಾತನಾಡಿಲ್ಲ. ಚುನಾವಣಾ ಆಯೋಗದ ಪ್ರಕಾರ ಬಿಜೆಪಿ ಮೋದಿ ಪ್ರಚಾರಕ್ಕಾಗಿ ಶೇ.80ರಷ್ಟು ಪಕ್ಷದ ನಿಧಿಯನ್ನು ಬಳಸಿದೆ. ಯಾರನ್ನು ಬೇಕಾದ್ರೂ ಕೇಳಿ ಅವರು ಹೇಳ್ತಾರೆ ಅದೆಲ್ಲ ಕಪ್ಪುಹಣ, ಅಕ್ರಮ ಹಣ ಅಂತ.

ಕಳೆದ ಎರಡೂವರೆ ವರ್ಷಗಳಿಂದ ಪ್ರಧಾನಿ ಗದ್ದುಗೆ ಮೇಲೆ ಕುಳಿತಿರುವ ಮೋದಿ ಲೋಕಪಾಲ್ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ. 12 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿದ್ದ ಅವರು, ಲೋಕಾಯುಕ್ತರ ನೇಮಕಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಲೋಕಾಯುಕ್ತ, ಸರ್ಕಾರ ಮತ್ತು ಇತರೆಡೆಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಸ್ಥೆ. ಅವರ ಕ್ಯಾಬಿನೆಟ್ನಲ್ಲಿರುವ ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಹಲವು ಭ್ರಷ್ಟರಿಗೆ ಮಂತ್ರಿ ಪದವಿ ನೀಡಿದ್ದಾರೆ. ದೆಹಲಿ ಎಎಪಿ ಸರ್ಕಾರ ನೇಮಿಸಿದ್ದ ಭ್ರಷ್ಟಾಚಾರ ವಿರೋಧಿ ಬ್ಯೂರೋವನ್ನು ಕಿತ್ತು ಹಾಕಿದ್ದಾರೆ.

ಎರಡು ಪ್ರಮುಖ ಕಂಪನಿಗಳಿಂದ ಹಣ ಪಡೆದಿರುವ ಗಂಭೀರ ಆರೋಪ ಅವರ ಮೇಲಿದೆ. ಸರ್ಕಾರಿ ಏಜೆನ್ಸಿಗಳಲ್ಲಿ ಈ ಬಗ್ಗೆ ಅಧಿಕೃತ ದಾಖಲೆಯಿದೆ. ಆದ್ರೆ ಈ ಆರೋಪಕ್ಕೆ ಪ್ರಧಾನಿ ಪ್ರತಿಕ್ರಿಯಿಸಿಲ್ಲ. ಭಾರತೀಯ ವ್ಯವಸ್ಥೆಯಿಂದ ಅವರು ಕಪ್ಪುಹಣವನ್ನು ಕಿತ್ತು ಹಾಕ್ತಾರೆ, ಭ್ರಷ್ಟಾಚಾರವನ್ನು ಮೋದಿ ಬುಡಸಮೇತ ಕಿತ್ತೊಗೆಯುತ್ತಾರೆಂದು ನಾವೆಲ್ಲ ನಂಬಬೇಕೆಂದು ಅವರು ಅಂದುಕೊಳ್ಳುತ್ತಿದ್ದಾರೆ. ನಾವದನ್ನು ನಂಬಬೇಕೆ? ಅದು ರಾಜಕೀಯವಲ್ಲವೇ? ಶುದ್ಧ ಹಾಗೂ ಸರಳ ರಾಜಕೀಯ?

ಮೋದಿ ಅವರ ನಿರ್ಧಾರದ ಬಗ್ಗೆ ದೇಶದಲ್ಲಿ ಜನಾಭಿಪ್ರಾಯ ಧ್ರುವೀಕೃತವಾಗಿದೆ. ಅವರು ಕಪ್ಪುಹಣದ ವಿರುದ್ಧ ಹೋರಾಡುತ್ತಿರುವಂತೆ ಬಿಂಬಿಸಲ್ಪಡುತ್ತಿದ್ದಾರೆ. ಇಮೇಜ್ ಮೇಕ್ಓವರ್ ಮಾಡಿಕೊಳ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗ್ತಾರಾ ಅಥವಾ ಇದೊಂದು ದೊಡ್ಡ ಪ್ರಮಾದವೋ ಅನ್ನೋದನ್ನು ಈಗಲೇ ಹೇಳುವುದು ಅಸಾಧ್ಯ. ಸ್ವಲ್ಪ ಸಮಯ ಕಳೆಯಲಿ, ಹಣವಿಲ್ಲದೆ ಪರದಾಡುವ ಜನರ ಮನಸ್ಸು ಬದಲಾಗಲೂಬಹುದು. ಇದು ಮೋದಿ ಹಾಗೂ ಜನಸಾಮಾನ್ಯರಿಗೆ ಅತ್ಯಂತ ಕುತೂಹಲದ ಹಾಗೂ ಒತ್ತಡದ ಸಮಯ.  

ವಿ.ಸೂ: ಇದು ಲೇಖಕರ ಅಭಿಪ್ರಾಯ. ಇದಕ್ಕೂ 'ಯುವರ್​ ಸ್ಟೋರಿ'ಗೂ ಯಾವುದೇ ಸಂಬಂಧವಿಲ್ಲ.. 

ಇದನ್ನೂ ಓದಿ...

"ಮಿಸ್ಟರ್‍ ಏಷ್ಯಾ" ಈ ಬೆಂಗಳೂರು ಬಲಾಢ್ಯ..!

ಹಿಂದೂ ಮಹಾಸಾಗರದಲ್ಲಿರೋ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾಗಿದೆ 'ಅಡಿಡಾಸ್' ಶೂ..


Related Stories

Stories by YourStory Kannada