ಮಕ್ಕಳಿಗಾಗಿ ವಿಶೇಷ ಸಲೂನ್: "ಸ್ಟಾರ್‍ಫಿಶ್"ನತ್ತ ಪೋಷಕರ ಚಿತ್ತ

ಟೀಮ್​ ವೈ.ಎಸ್​​.

ಮಕ್ಕಳಿಗಾಗಿ ವಿಶೇಷ ಸಲೂನ್: "ಸ್ಟಾರ್‍ಫಿಶ್"ನತ್ತ ಪೋಷಕರ ಚಿತ್ತ

Monday November 09, 2015,

2 min Read

ಮರ್ಯಾ ಲಾನೆವಾಲಾ ಅವರಿಗೆ ತಮ್ಮ ಚಿಕ್ಕ ಮಗಳ ಹೇರ್ ಕಟ್ ಎಲ್ಲಿ ಮಾಡಿಸೋದು ಅನ್ನೋ ಚಿಂತೆ. ಅವರು ಯಾವಾಗ್ಲೂ ಹೋಗ್ತಾ ಇದ್ದ ಸಲೂನ್‍ನಲ್ಲಿ ಕಿರಿಯ ಸಿಬ್ಬಂದಿಯೊಬ್ಬ ಹೇರ್ ಕಟ್ ಮಾಡ್ತಾ ಇದ್ದ. ಆತ ಅನನುಭವಿಯಾಗಿರೋದ್ರಿಂದ ಅವನ ಕೈಯಲ್ಲಿ ಚಿಕ್ಕ ಮಗುವಿನ ಕೂದಲು ಕತ್ತರಿಸುವುದು ಅಪಾಯಕಾರಿ ಅಂತಾ ಮರ್ಯಾ ಅವರಿಗೆ ಅನಿಸಿತ್ತು. ಆದ್ರೆ ಕೇವಲ ಇದೊಂದೇ ಸಂದರ್ಭದಿಂದ `ಸ್ಟಾರ್‍ಫಿಶ್' ಆರಂಭಿಸುವ ಆಲೋಚನೆ ತಮಗೆ ಬಂದಿರಲಿಲ್ಲ ಎನ್ನುತ್ತಾರೆ ಮುಂಬೈನ್ `ಸ್ಟಾರ್‍ಫಿಶ್ ಕಿಡ್ಸ್' ಸಲೂನ್‍ನ ಸಹ ಸಂಸ್ಥಾಪಕಿ ಮರ್ಯಾ ಲಾನೆವಾಲಾ.

image


ಸ್ಟಾರ್‍ಫಿಶ್ ಮಕ್ಕಳಿಗಾಗಿಯೇ ಇರುವ ಸಲೂನ್. ಇಲ್ಲಿ ಹೇರ್ ಕಟ್, ಪೆಡಿಕ್ಯೂರ್, ಮೆನಿಕ್ಯೂರ್, ನೇಲ್ ಆರ್ಟ್ ಮಾಡಲಾಗುತ್ತೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಇವನ್ನೆಲ್ಲ ಮಾಡೋದು ವಿಶೇಷ. ಮರ್ಯಾ ಹಾಗೂ ಪ್ರೀತಿ ಹರ್ಕರೆ ಜೊತೆಯಾಗಿ ವಿವಿಧ ನಗರಗಳಲ್ಲಿ ಮಕ್ಕಳ ಸಲೂನ್ ಬಗ್ಗೆ ಸಮೀಕ್ಷೆ ನಡೆಸಿದ್ರು. ಪ್ರತಿಯೊಬ್ಬ ಪೋಷಕರೂ ಮಕ್ಕಳಿಗಾಗಿ ಪ್ರತ್ಯೇಕ ಸಲೂನ್ ಆರಂಭಿಸೋ ಯೋಜನೆಯನ್ನು ಸ್ವಾಗತಿಸಿದ್ರು. ತಮ್ಮ ಜೊತೆಗೆ ಮಕ್ಕಳು ವಯಸ್ಕರ ಕ್ಷೌರದಂಗಡಿಗೆ ಬಂದ್ರೆ ಅಲ್ಲಿ ಬಳಸುವ ರಾಸಾಯನಿಕಗಳು ಅವರ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂಬ ಆತಂಕ ಪೋಷಕರಿಗಿತ್ತು. ಅಷ್ಟೇ ಅಲ್ಲ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಎಲ್ಲವನ್ನೂ ತಿಳಿದುಕೊಳ್ಳುವುದು ಅಪಾಯಕಾರಿ ಅನ್ನೋದು ಅವರ ಅಭಿಪ್ರಾಯ. ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಿದ ಮರ್ಯಾ 2014ರಲ್ಲಿ `ಸ್ಟಾರ್‍ಫಿಶ್ ಕಿಡ್ಸ್' ಸಲೂನ್ ಅನ್ನು ಆರಂಭಿಸಿದ್ರು. ಒಂದೂವರೆ ವರ್ಷಗಳೊಳಗೆ ಜನಪ್ರಿಯತೆ ಪಡೆಯಬೇಕೆಂಬ ಹಂಬಲ ಮರ್ಯಾ ಅವರಿಗಿತ್ತು. ಆದ್ರೆ ಈಗಾಗ್ಲೇ ಟೈರ್ 2, ಟೈರ್ 3 ನಗರಗಳ ಜನತೆ ಫ್ರಾಂಚೈಸಿಗಾಗಿ ದುಂಬಾಲು ಬಿದ್ದಿದ್ದಾರೆ.

ಸಾರ್ವಜನಿಕ ಸಂಪರ್ಕ ಸುಲಲಿತ...

ಸಲೂನ್‍ನ ಸಹ ಸಂಸ್ಥಾಪಕಿ ಪ್ರೀತಿ ಭೋಪಾಲ್ ಮೂಲದವರು. ಆದ್ರೆ ಉನ್ನತ ವ್ಯಾಸಂಗ ಮಾಡಿದ್ದೆಲ್ಲ ಮುಂಬೈನಲ್ಲಿ. ಇನ್ನು ಮರ್ಯಾ ಮುಂಬೈನಲ್ಲೇ ಹುಟ್ಟಿ ಬೆಳೆದವರು. ಸಹಜವಾಗಿಯೇ ತಮ್ಮ ಉದ್ಯಮವನ್ನು ಮುಂಬೈನಲ್ಲೇ ಆರಂಭಿಸಲು ಇವರಿಬ್ರೂ ನಿರ್ಧರಿಸಿದ್ರು. ಹಣಕಾಸು ಮತ್ತು ಸಂವಹನ ವಿಭಾಗದಲ್ಲಿ ಪಿಆರ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಮೂರು ವರ್ಷಗಳಿಂದ ಮರ್ಯಾ ಹಾಗೂ ಪ್ರೀತಿ ಸಹೋದ್ಯೋಗಿಗಳಾಗಿದ್ರು. ಇಬ್ಬರ ಮಧ್ಯೆ ಗಾಢವಾದ ಸ್ನೇಹವೂ ಬೆಳೆದಿತ್ತು. ಜೊತೆಯಾಗಿ ಏನನ್ನಾದ್ರೂ ಸಾಧಿಸೋಣ ಅಂತಾ ನಿರ್ಧರಿಸಿದ್ರು. ಪಿಆರ್ ವೃತ್ತಿಯಲ್ಲಿದ್ದಿದ್ರಿಂದ ಈ ಉದ್ಯಮವನ್ನು ಸಂಭಾಳಿಸುವುದು ಕಷ್ಟವಾಗಲಿಲ್ಲ ಎನ್ನುತ್ತಾರೆ ಮರ್ಯಾ. ಇದು ಕೂಡ ಕಲಿಕೆಯ ಒಂದು ಭಾಗ ಅನ್ನೋದು ಪ್ರೀತಿ ಅವರ ಅಭಿಪ್ರಾಯ.

image


ಬಾಂದ್ರಾ ಸ್ಥಳ...

ತಾವು ಕೂಡಿಟ್ಟ ಹಣವನ್ನೆಲ್ಲ ಸಲೂನ್‍ನಲ್ಲಿ ಹೂಡಿಕೆ ಮಾಡಲು ಪ್ರೀತಿ ಹಾಗೂ ಮರ್ಯಾ ಸಜ್ಜಾಗಿದ್ರು. ಮುಂಬೈನಲ್ಲಿ ಸಲೂನ್‍ಗೆ ಸ್ಥಳ ಆಯ್ಕೆ ಅವರಿಗೆ ಸವಾಲಾಗಿತ್ತು. ವಾಣಿಜ್ಯ ಕೇಂದ್ರ ಹಾಗೂ ಮುಂಬೈನ ಹೃದಯಭಾಗ ಭಾಂದ್ರಾ ಒಳ್ಳೆಯ ಸ್ಥಳವೆಂದು ಇಬ್ಬರಿಗೂ ಅನಿಸಿತ್ತು. ಬಾಂದ್ರಾದಲ್ಲಿ ರೆಸ್ಟೋರೆಂಟ್‍ಗಳ ಸಂಖ್ಯೆ ಕೂಡ ಹೆಚ್ಚಾಗಿರೋದ್ರಿಂದ ಕುಟುಂಬ ಸಮೇತರಾಗಿ ಜನರು ಬರ್ತಾರೆ. ಹಾಗಾಗಿ ಮಕ್ಕಳ ಸಲೂನ್ ಅವರನ್ನು ಆಕರ್ಷಿಸಲಿದೆ ಅನ್ನೋದು ಇವರ ಲೆಕ್ಕಾಚಾರವಾಗಿತ್ತು. ಈ ಪರಿಕಲ್ಪನೆ ನಿಜಕ್ಕೂ ವರ್ಕೌಟ್ ಆಗಿದೆ. ಇನ್ನು ಐದು ವರ್ಷಗಳೊಳಗೆ ಮುಂಬೈನ ವಿವಿಧೆಡೆ ಸಲೂನ್ ಆರಂಭಿಸುವ ಯೋಚನೆ ಕೂಡ ಇವರಿಗೆ ಇದೆ.

`ಸ್ಟಾರ್‍ಫಿಶ್' ಹೆಸರು...

ಇನ್ನು ಸಲೂನ್‍ಗೆ ಹೆಸರೇನು ಇಡೋಣ ಎಂಬ ಪ್ರಶ್ನೆ ಮೂಡಿತ್ತು. ಮಕ್ಕಳನ್ನು ಸೆಳೆಯುವಂತಹ ಯಾವುದಾದರೂ ಪ್ರಾಣಿ ಹೆಸರಿಡೋಣ ಎಂದುಕೊಂಡಿದ್ದ ಪ್ರೀತಿ, ಕೊನೆಗೆ ಸ್ಟಾರ್‍ಫಿಶ್ ಎಂದು ನಾಮಕರಣ ಮಾಡಿದ್ರು. ಮಕ್ಕಳ ಸಲೂನ್‍ನಲ್ಲಿ ವಿಶಿಷ್ಟ ಅನುಭವ ಸಿಗ್ತಾ ಇದೆ ಅಂತಾ ಖುಷಿಯಿಂದ ಅವರು ಹೇಳಿಕೊಳ್ತಾರೆ. ಒಮ್ಮೆ ಕೂದಲು ಕತ್ತರಿಸಿಕೊಳ್ಳಲು ಒಪ್ಪದ ಮೊಮ್ಮಗುವಿನ ಮನವೊಲಿಸಲು ಅಜ್ಜಿಯೊಬ್ರು ಜೀವಂತ ಕೋಳಿಯನ್ನೇ ಸಲೂನ್‍ಗೆ ತಂದಿದ್ದ ಘಟನೆಯನ್ನು ಮರ್ಯಾ ಹಾಗೂ ಪ್ರೀತಿ ನೆನಪಿಸಿಕೊಳ್ತಾರೆ.

image


ಉದ್ಯಮ ಪಯಣ...

ಪ್ರೀತಿ ಹಾಗೂ ಮರ್ಯಾ ಇಬ್ಬರಿಗೂ ಈ ಉದ್ಯಮದ ಪಯಣ ತೃಪ್ತಿ ತಂದಿದೆ. ಚದುರಿ ಹೋಗಿರುವ ಈ ವಲಯವನ್ನು ಒಗ್ಗೂಡಿಸಲು ಪ್ರಯತ್ನಿಸಿದ ಸಮಾಧಾನ ಅವರಲ್ಲಿದೆ. ಕಳೆದ ಒಂದು ವರ್ಷದ ವಹಿವಾಟಿನಲ್ಲಿ ಸಲೂನ್‍ನ ಎಲ್ಲ ಖರ್ಚನ್ನೂ ಅವರು ಸರಿದೂಗಿಸಿದ್ದಾರೆ. ಐವರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ತಮ್ಮ ಜೀವನಶೈಲಿ ಕೂಡ ಸುಧಾರಿಸಿದೆ ಎನ್ನುತ್ತಾರೆ ಅವರು. ಸ್ಟಾರ್‍ಫಿಶ್ ಪಾರ್ಟಿಯನ್ನು ಆಯೋಜಿಸ್ತಾ ಇರೋದು ವಿಶೇಷ. ಹದಿಹರೆಯದವರು ಹಾಗೂ ಮಕ್ಕಳ ಮನರಂಜನೆಗಾಗಿಯೇ ಇರುವ ಪಾರ್ಟಿ ಇದು. ಇಲ್ಲಿ ನೇಲ್ ಆರ್ಟ್‍ನಂತಹ ಸೇವೆಯನ್ನು ಮಕ್ಕಳ ಖುಷಿಗಾಗಿ ನೀಡಲಾಗ್ತಿದೆ. ಆಡಂಬರದ ಪ್ರದರ್ಶನ ಇರುವುದಿಲ್ಲ. ಇದು ಮಕ್ಕಳು ಹಾಗೂ ಪೋಷಕರ ಗಮನಸೆಳೆಯುವ ಪ್ರಯತ್ನ ಅಷ್ಟೆ.