ಉದ್ಯಮಿಗಳಾದ್ರು ಬೆಂಗಳೂರಿನ ಕಾಲೇಜ್ ಹುಡುಗರು...

ವಿಶಾಂತ್​​

1

ಬೆಂಗಳೂರಿನ ಹುಡುಗರು ತುಂಬಾ ಫಾಸ್ಟ್ ಇದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗ ಸಾಮಾನ್ಯವಾಗಿ ಗರ್ಲ್‍ಫ್ರೆಂಡ್/ ಬಾಯ್‍ಫ್ರೆಂಡ್, ಡೇಟಿಂಗ್, ಔಟಿಂಗ್, ಕಾಫಿ ಡೇ, ಟ್ರಿಪ್, ಸಿನಿಮಾ, ಶಾಪಿಂಗ್ ಅಂತ ಓಡಾಡಿಕೊಂಡಿರ್ತಾರೆ. ಆದ್ರೆ ಇಲ್ಲಿ ಕೆಲ ಹುಡುಗರು ಕಾಲೇಜಿನಲ್ಲಿ ಓದಿಕೊಂಡೇ ಉದ್ಯಮಿಯಾಗಿದ್ದಾರೆ. ‘ತೇರಿ ಗ್ಯಾಜೆಟ್ ಕಿ’ ಎಂಬ ಈ-ಸ್ಟೋರ್ ಮೂಲಕ ಮೊಬೈಲ್ ಬಳಕೆದಾರರಿಗೆ, ಅದರ ಉಪಕರಣಗಳು ಹಾಗೂ ಬಿಡಿಭಾಗಗಳನ್ನು ಆನ್‍ಲೈನ್ ಮೂಲಕ ಒದಗಿಸುತ್ತಿದ್ದಾರೆ.

ಹೇಗೆ ಪ್ರಾರಂಭವಾಯ್ತು ‘ತೇರಿ ಗ್ಯಾಜೆಟ್ ಕಿ’?

ಪ್ರದ್ಯುಮ್ನ ಚೌಧರಿ ‘ತೇರಿ ಗ್ಯಾಜೆಟ್ ಕಿ’ ಹಿಂದಿರುವ ಸ್ಥಾಪಕ. ಕಾಲೇಜು ದಿನಗಳಿಂದಲೇ ಏನಾದರೂ ಸ್ವಂತ ಮಾಡಬೇಕು ಅನ್ನೋ ತುಡಿತ ಪ್ರದ್ಯುಮ್ನ ಅವರನ್ನು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಯೋಚಿಸುತ್ತಲೇಯಿದ್ದರು. ಹೀಗೇ ಒಮ್ಮೆ ಆನ್‍ಲೈನ್‍ನಲ್ಲಿ ಮೊಬೈಲ್ ಸ್ಕಿನ್ ಅಥವಾ ಮೊಬೈಲ್‍ಗೆ ಹಾಕುವ ತೆಳುಮೈ ಕವರ್‍ಅನ್ನು ಹುಡುಕುತ್ತಿದ್ದರು. ಆಗ ಅಷ್ಟಾಗಿ ಮೊಬೈಲ್ ಸ್ಕಿನ್‍ಗಳು ಇಂಟರ್‍ನೆಟ್‍ನಲ್ಲಿ ದೊರೆಯದೇ ಇರುವುದು ಗೊತ್ತಾಯ್ತು. ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಆಗಿನ್ನೂ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಪ್ರದ್ಯುಮ್ನ ತಕ್ಷಣ ಮೊಬೈಲ್ ಸ್ಕಿನ್‍ಗಳನ್ನೇ ಮಾರುವ ಆನ್‍ಲೈನ್ ಸ್ಟೋರ್‍ಅನ್ನು ಪ್ರಾರಂಭಿಸಲು ಐಡಿಯಾ ಮಾಡಿದ್ರು. ಕೊನೆಯ ವರ್ಷದ ಪದವಿ ಓದುತ್ತಿದ್ದ ಗೆಳೆಯ ಆನನ್ ಬಂಕಾ ಜೊತೆ ಸೇರಿ ತುಂಬಾ ಆಲೋಚನೆ ಮಾಡಿ ಮೊಬೈಲ್ ಸ್ಕಿನ್‍ಗಳ ಜೊತೆ ಪೆನ್‍ಡ್ರೈವ್‍ಗಳ ಆನ್‍ಲೈನ್ ಸ್ಟೋರ್ ಪ್ರಾರಂಭಿಸಿದ್ರು ಪ್ರದ್ಯುಮ್ನ.

ಮೊಬೈಲ್ ಸ್ಕಿನ್‍ಗಳ ಬಗ್ಗೆ ಜನರಲ್ಲಿ ಅಷ್ಟಾಗಿ ಮಾಹಿತಿ ಇಲ್ಲ. ಹೀಗಾಗಿಯೇ ಮೊಬೈಲ್‍ಅನ್ನು ರಕ್ಷಿಸುವ, ಕೆಳಗೆ ಬಿದ್ದಾಗ ಒಡೆಯದಿರಲಿ ಅಂತ ಮೊಬೈಲ್ ಕವರ್ ಅಥವಾ ಮೊಬೈಲ್ ಕೇಸ್‍ಅನ್ನೇ ಸ್ಕಿನ್ ಅಂದುಕೊಂಡಿರ್ತಾರೆ. ಹೀಗಾಗಿಯೇ ಮೊಬೈಲ್ ಸ್ಕಿನ್‍ಗೆ ಅಷ್ಟಾಗಿ ಮಾರುಕಟ್ಟೆಯಿಲ್ಲ. ಕೆಲವು ಆನ್‍ಲೈನ್ ಸ್ಟೋರ್‍ಗಳಲ್ಲಿದ್ದರೂ ಅದಕ್ಕೆ ಅಷ್ಟಾಗಿ ಪ್ರಾಮುಖ್ಯತೆ ನೀಡಲಾಗುವುದಿಲ್ಲ. ಹೀಗಾಗಿಯೇ ಮೊಬೈಲ್ ಸ್ಕಿನ್‍ಗಳಿಗಾಗಿಯೇ ಸೀಮಿತವಾದ ತೇರಿ ಗ್ಯಾಜೆಟ್ ಕಿ ಎಂಬ ಆನ್‍ಲೈನ್ ಸ್ಟೋರ್‍ಅನ್ನು ಶುರು ಮಾಡಿದ್ರು ಪ್ರದ್ಯುಮ್ನ ಮತ್ತು ಬಾಂಕಾ.

ತೇರಿ ಗ್ಯಾಜೆಟ್ ಕಿ ಪ್ರಾರಂಭವಾದ ಕೆಲವೇ ವಾರಗಳಲ್ಲಿ ಪ್ರತಿದಿನ 150ರಿಂದ 200 ಆರ್ಡರ್‍ಗಳು ಬರಲಾರಂಭಿಸಿದವು. ಹೀಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಹಲವು ಬಾರಿ ಪ್ರದ್ಯುಮ್ನ ಮತ್ತು ಬಾಂಕಾ ಮಧ್ಯರಾತ್ರಿ 2 ಗಂಟೆಯವರೆಗೂ ಎದ್ದು ಕೆಲಸ ಮಾಡುತ್ತಿದ್ದರು. ಹಾಗೇ ಕೆಲವೊಮ್ಮೆಯಂತೂ ಕಾಲೇಜ್‍ಗೇ ಹೋಗಲಾಗುತ್ತಿರಲಿಲ್ಲ. ‘ಪ್ರಾರಂಭದ ಹಂತದಲ್ಲಿಯೇ ಮಾರ್ಕೆಟ್‍ಅನ್ನು ವಶಪಡಿಸಿಕೊಳ್ಳುವ ಉದ್ದೇಶ ನಮ್ಮದಾಗಿತ್ತು. ಹೀಗಾಗಿಯೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಪೂರೈಸುವ ಜವಾಬ್ದಾರಿ ನಮ್ಮ ಮೇಲಿತ್ತು. ಹೀಗಾಗಿಯೇ ಮೊದಮೊದಲು ಹಗಲು- ಇರುಳೆನ್ನದೆ ಶ್ರಮಪಟ್ಟೆವು. ನನ್ನ ಗೆಳೆಯ ಬಾಂಕಾ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಓದುತ್ತಿದ್ದು, ನಾನು ಕಂಪ್ಯೂಟರ್ ಅಪ್ಲಿಕೇಶನ್ಸ್ ಓದುತ್ತಿದ್ದೇನೆ. ಹೀಗಾಗಿ ನಾವು ಓದುತ್ತಿರುವ ವಿಷಯಗಳನ್ನೂ ನಮ್ಮ ಕೆಲಸದಲ್ಲಿ ಅಳವಡಿಸುತ್ತಾ ಕೆಲ ಬದಲಾವಣೆಗಳನ್ನು ಮಾಡಿದ ಕಾರಣ ನಮಗೆ ಯಶಸ್ಸು ಸಾಧ್ಯವಾಯ್ತು’ ಅಂತಾರೆ ಪ್ರದ್ಯುಮ್ನ.

ಪ್ಯಾಕೇಜಿಂಗ್‍ನಿಂದ ಹಿಡಿದು ಪ್ರಿಂಟಿಂಗ್‍ವರೆಗೂ, ಗ್ರಾಹಕರ ಬೇಡಿಕೆ ಅಥವಾ ದೂರುಗಳನ್ನು ಆಲಿಸುವವರೆಗೂ ನಮ್ಮ ಉದ್ಯಮದ ಪ್ರತಿಯೊಂದು ವಿಭಾಗದಲ್ಲೂ ಈ ಇಬ್ಬರೂ ಉದಯೋನ್ಮುಖ ಉದ್ಯಮಿಗಳು ಕೆಲಸ ಮಾಡಿದ್ದಾರೆ. ಪ್ರದ್ಯುಮ್ನ ಬನ್ನೇರುಘಟ್ಟದ ರಸ್ತೆಯ ಅವರ ಮನೆಯಲ್ಲಿಯೇ ‘ತೇರಿ ಗ್ಯಾಜೆಟ್ ಕಿ’ ಕಚೇರಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಕೆಲವೊಮ್ಮೆ ಪ್ರದ್ಯುಮ್ನರ ಸಹೋದರಿಯೂ ಇವರ ಕೆಲಸದೊಂದಿಗೆ ಕೈಜೋಡಿಸುತ್ತಾರೆ.

ಪ್ರತಿದಿನ ಸಂಜೆ 4 ಗಂಟೆಗೆ ಕಾಲೇಜ್ ಮುಗಿಯುತ್ತಲೇ ಮನೆ ಸೇರುವ ಪ್ರದ್ಯುಮ್ನ ಮತ್ತು ಬಾಂಕಾ ಇಬ್ಬರೂ ಕೆಲಸ ಪ್ರಾರಂಭಿಸುತ್ತಾರೆ. ಎಲ್ಲಾ ವಿಭಾಗಗಳನ್ನೂ ಇಬ್ಬರೇ ನೋಡಿಕೊಳ್ಳಬೇಕಾದ ಕಾರಣ ಕೆಲವೊಮ್ಮೆ ತುಂಬಾ ತಲೆಬಿಸಿಯಾಗೋದುಂಟು. ಆದ್ರೆ ಬೆಳೆಯಬೇಕು, ಏನಾದ್ರೂ ಸಾಧಿಸಬೇಕು ಅಂತ ಮುಂದಾದಾಗ, ಇದೆಲ್ಲಾ ಸಾಮಾನ್ಯ ಅಂತ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡು, ಒಬ್ಬರಿಗೊಬ್ಬರು ಸ್ಫೂರ್ತಿ ತುಂಬುತ್ತಾ, ಪ್ರೇರೇಪಿಸುತ್ತಾ ಕೆಲಸ ಮುಂದುವರಿಸುತ್ತಾರೆ.

ಪ್ರದ್ಯುಮ್ನ ಪ್ರಕಾರ ಅವರ ಕೆಲಸ ಅವರಿಗೆ ತುಂಬಾ ಖುಷಿ ನೀಡುತ್ತಂತೆ. ಆದ್ರೆ ದೊಡ್ಡ ಸಮಸ್ಯೆ ಉತ್ಪನ್ನಗಳ ಡೆಲಿವರಿ. ಯಾಕಂದ್ರೆ ಈಗಿನ್ನೂ ಮೊಳಕೆ ಚಿಗುರೊಡೆಯುವ ಹಂತದಲ್ಲಿರುವ ಇವರ ಕಂಪನಿಯಲ್ಲಿ ಮೊಬೈಲ್ ಸ್ಕಿನ್ ಮತ್ತು ಪೆನ್‍ಡ್ರೈವ್‍ಗಳನ್ನು ಗ್ರಾಹಕರಿಗೆ ತಲುಪಿಸಲೆಂದೇ ಡೆಲವರಿ ಹುಡುಗರ ತಂಡವಿಲ್ಲ. ಹೀಗಾಗಿಯೇ ಇವರು ಬೇರೆ ಬೇರೆ ಲಾಜಿಸ್ಟಿಕ್ಸ್ ಕಂಪನಿಗಳ ಮೇಲೆ ಅವಲಂಬಿಸಬೇಕಿದೆ. ‘ಗ್ರಾಹಕರು ಆನ್‍ಲೈನ್‍ನಲ್ಲಿ ಒಂದು ಉತ್ಪನ್ನವನ್ನು ಬುಕ್ ಮಾಡಿದ ಎರಡೇ ದಿನಗಳಲ್ಲಿ ನಾವದನ್ನು ಡೆಲಿವರಿ ಮಾಡ್ತೀವಿ ಅಂತ ಭರವಸೆ ನೀಡಿರುತ್ತೇವೆ. ಆದ್ರೆ ಅವರು ಬುಕ್ ಮಾಡಿದ ವಸ್ತುವನ್ನು ನಾವು ಕೆಲವೇ ತಾಸುಗಳಲ್ಲಿ ಸಿದ್ಧಪಡಿಸಿದ್ದರೂ, ಅದನ್ನು ತಲುಪಿಸೋದೇ ದೊಡ್ಡ ಸಮಸ್ಯೆ. ಬೇರೆ ಲಾಜಿಸ್ಟಿಕ್ಸ್‍ನವರನ್ನು ನಂಬಿಕೊಂಡರೆ, ಅದೇ ಕೆಟ್ಟ ಕನಸ್ಸಿನಂತೆ ಕಾಡುತ್ತೆ. ಯಾಕಂದ್ರೆ ನಾವು ಹೇಳಿದ ಸಮಯಕ್ಕೆ ಅವರು ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸುವುದಿಲ್ಲ. ಇದರಿಂದಾಗಿ ಕೆಲವೊಮ್ಮೆ ನಾವು ಗ್ರಾಹಕರ ಸಿಟ್ಟಿಗೆ ತುತ್ತಾಗಬೇಕಾಗುತ್ತೆ’ ಅಂತ ಕಷ್ಟ- ನಷ್ಟಗಳ ಕುರಿತು ಹೇಳಿಕೊಳ್ತಾರೆ ಪ್ರದ್ಯುಮ್ನ ಚೌಧರಿ.

Related Stories