ವಯಸ್ಸಾದವರ ಕೈ ಹಿಡಿಯುತ್ತದೆ "ಕಿಕ್​ಸ್ಟಾರ್ಟ್​"

ಟೀಮ್​ ವೈ.ಎಸ್​. ಕನ್ನಡ

1

ವಯಸ್ಸು ಹೆಚ್ಚಾದಂತೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಮನಸ್ಸಾಗುವುದಿಲ್ಲ. ಮನೆಯಿಂದ ಹೊರಗಡೆ ಬರಲು ದೇಹ ಕೇಳುವುದಿಲ್ಲ. ಹೀಗಾಗಿ ಸಮಯ ಕಳೆಯುವುದೇ ದೊಡ್ಡ ಕಷ್ಟವಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಒಂದೈದು ನಿಮಿಷ ಮನೆಯೊಳಗೆ ಕೂರುವುದು ಕಷ್ಟದ ಮಾತೇ ಸರಿ. ವಯಸ್ಸು ಎಷ್ಟು ಬೇಕಾದ್ರೂ ಆಗಿರಲಿ,  ಸಿಲಿಕಾನ್​ ಸಿಟಿಯ ಲೈಫ್​ಗೆ ಅಡ್ಜಸ್ಟ್​ ಆಗಬೇಕಾದರೆ ತಿರುಗಾಡಲೇಬೇಕಾಗುತ್ತದೆ. ಅಟ್​ಲೀಸ್ಟ್​ ವಾರಕ್ಕೊಮ್ಮೆಯಾದರೂ ಸಿಟಿಗೆ ಒಂದು ರೌಂಡ್​ ಹೊಡೆಯಲೇ ಬೇಕು.

ಆರೋಗ್ಯವಾಗಿದ್ದವರು, ಕೈಕಾಲು ಚೆನ್ನಾಗಿದ್ದವರು ಹೊರಗೆ ಆರಾಮಾಗಿ ಓಡಾಡಿಕೊಂಡಿರುತ್ತಾರೆ. ಆದರೆ ದೈಹಿಕವಾಗಿ ದುಬರ್ಲರಾದವರು ಹೇಗೆ ಹೊರಗೆ ಸುತ್ತಾಡುತ್ತಾರೆ. ಅವರಿಗೂ ನಮ್ಮ ತರಹ ಆಸೆ ಆಕಾಂಕ್ಷೆಗಳಿರುತ್ತವೆ. ಅಂತವರಿಗಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದು ಕ್ಯಾಬ್‌ ಸಂಸ್ಥೆ ಆರಂಭವಾಗಿದೆ. ಅದಕ್ಕೆ ಕಿಕ್​ಸ್ಟಾರ್ಟ್ ಕ್ಯಾಬ್ ಎಂದು ಹೆಸರಿಡಲಾಗಿದೆ. ಈ ಕಿಕ್​ಸ್ಟಾರ್ಟ್ ಕ್ಯಾಬ್ ಮೂಲಕ ಅಶಕ್ತರನ್ನು, ತೀರಾ ವಯಸ್ಸಾಗಿ ನಡೆಯಲಾಗದವರನ್ನು, ಆಪರೇಷನ್‌ ಆದವರನ್ನು ಎಲ್ಲರಂತೆ ಓಡಾಡಿಸುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ   ಮೊದಲ ಬಾರಿಗೆ ದೈಹಿಕ ದುರ್ಬಲರಿಗಾಗಿ ಇಂಥ ಕ್ಯಾಬ್​ಗಳು ರೋಡಿಗಿಳಿದಿವೆ. ಆಯಾಸವಿಲ್ಲದೆ ದೈಹಿಕ ದುರ್ಬಲರು ಇದರಲ್ಲಿ ಪ್ರಯಾಣಿಸಬಹುದು. ಒಂದೂ ಹೆಜ್ಜೆ ಇಡಲಾಗದವರು, ನಾಲ್ಕು ಗೋಡೆ ನಡುವೆ ನಮ್ಮ ಬದುಕು ಎಂದು ಈಗಾಗಲೇ ಡಿಸೈಡ್ ಮಾಡಿದವರು ಈ ಕ್ಯಾಬ್‌ ಏರಿದರೆ,  ಹೊರ ಜಗತ್ತನ್ನೊಮ್ಮೆ ನೋಡಿಬರಬಹುದು. ಸಮಯ ಕಳೆಯಲು ಮತ್ತು ಮನಸ್ಸಿನ ನೆಮ್ಮದಿ ಪಡೆಯಲು ಈ ರೈಡ್​ ಸಹಕಾರಿ ಆಗಬಲ್ಲದು. 

" ದೈಹಿಕ ವಿಕಲಚೇತನರು ಕೂ ನಮ್ಮಂತೆ ಎಲ್ಲವನ್ನು ನೋಡಬೇಕು ಎಂಬ ಆಸೆ ಹೊಂದಿರುತ್ತಾರೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕ್ಯಾಬ್‌ ಸೇವೆಯನ್ನು ಆರಂಭಿಸಿದ್ದೇನೆ. ಈ ಮೂಲಕ ದೈಹಿಕ ನ್ಯೂನ್ಯತೆ ಇರುವವರ ನೋವಿಗೆ ದನಿಯಾಗುವ ಸಣ್ಣ ಪ್ರಯತ್ನ ಮಾಡಿದ್ದೇನೆ."
- ವಿದ್ಯಾ, ಕಿಕ್​ಸ್ಟಾರ್ಟ್ ನಿರ್ದೇಶಕಿ

ಓಲಾ, ಉಬರ್​ನಂತೆ ಟ್ಯಾಕ್ಸಿ

ಈ ಕಿಕ್​ಸ್ಟಾರ್ಟ್ ಕ್ಯಾಬ್ ಓಲಾ, ಉಬರ್​ನಂತೆ ಕೆಲಸ ಮಾಡುತ್ತದೆ. ಆದರೆ ಈ ಟ್ಯಾಕ್ಸಿ  ಸೇವೆ ಎಲ್ಲರಿಗೂ ಸಿಗುವುದಿಲ್ಲ. ವಯಸ್ಸಾಗಿ ಹೆಜ್ಜೆ ಊರಲೂ ಕಷ್ಟಪಡುವವರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟು ನೋವು ತಿನ್ನುತ್ತಿರುವವರಿಗೆ, ತೀರಾದೈಹಿಕ ದುರ್ಬಲರಿಗೆ ಮಾತ್ರ ಈ ಕಿಕ್​ಸ್ಟಾರ್ಟ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತೆ.

ಕಿಕ್​ಸ್ಟಾರ್ಟ್ ಕ್ಯಾಬ್ ವಿಶೇಷತೆಗಳು

ವಿವಿಧ ಟ್ಯಾಕ್ಸಿಗೆಳಿಗೆ ಹೋಲಿಸಿದರೆ ಈ ಕಿಕ್​ಸ್ಟಾರ್ಟ್​ ಕ್ಯಾಬ್​ ಸೇವೆಗಳಲ್ಲಿ ಹಲವು ಸ್ಪೆಷಾಲಿಟಿಗಳಿವೆ. ಡ್ರೈವರ್ ಪಕ್ಕದ ಮತ್ತು ಹಿಂಬದಿಯ ಸೀಟುಗಳು ಇಲ್ಲಿ ಮಾಮೂಲಿಯಂತೆ ಇರುವುದಿಲ್ಲ. ಇವು ಅಡ್ಜಸ್ಟಬಲ್ ಸೀಟುಗಳು. ಈ ಸೀಟ್​ಗಳನ್ನು ವಯಸ್ಸಾದವರು ಮತ್ತು ಅಶಕ್ತರು ಅಥವಾ ಪ್ರಯಾಣಿಕರು ಹೇಗೆ ಬೇಕಾದರೂ ಫೋಲ್ಡ್ ಮಾಡಬಹುದು. ದೈಹಿಕ ನ್ಯೂನತೆ ಇರುವ ವ್ಯಕ್ತಿಗೆ ಕಾರೊಳಗೆ ಬಂದು ಕುಳಿತುಕೊಳ್ಳಲಾಗದಿದ್ದರೆ, ಕ್ಯಾಬ್ ನ ಸೀಟನ್ನೇ ಹೊರಗೆಳೆದು, ಅವರನ್ನು ಕೂರಿಸಿಕೊಂಡು, ಪುನಃ ಯಥಾಸ್ಥಿತಿಗೆ ಅಡ್ಜಸ್ಟ್ ಮಾಡಬಹುದು. ಹಂಪ್ ಬಂದಾಗ,ಡ್ರೈವರ್ ಬ್ರೇಕ್ ಒತ್ತಿದಾಗ ಒಳಗಿರುವ ಪ್ರಯಾಣಿಕರು ಹೆದರಿಕೊಳ್ಳುವುದಿಲ್ಲ. ಅಷ್ಟು ಕಂಫರ್ಟ್ ಫೀಲ್ ಕೊಡುತ್ತದೆ ಈ ಟ್ಯಾಕ್ಸಿ. ಕಿಕ್​ಸ್ಟಾರ್ಟ್​ಲ್ಲಿ ಕುಳಿತ ಮೇಲೆ, ಅದರಿಂದ ಕೆಳಗೆ ಇಳಿಯಲು ಮನಸ್ಸಾಗುವುದೇ ಇಲ್ಲ ಎಂದು ಇದರಲ್ಲಿ ಪ್ರಯಾಣ ಮಾಡಿರುವ ಸಾಕಷ್ಟು ಮಂದಿ ಹೇಳಿದ್ದಾರೆ. ಅಂದಹಾಗೆ, ವ್ಹೀಲ್​ಚೇರ್ ಅನ್ನು ಕ್ಯಾಬ್​ನಲ್ಲಿಯೇ ಕೊಂಡೊಯ್ಯುವ ವ್ಯವಸ್ಥೆಯೂ ಇಲ್ಲಿದೆ. ಈ ಕಿಕ್​ಸ್ಟಾರ್ಟ್ ಕ್ಯಾಬ್‌ ಸೇವೆಗೆ ಮಣಿಪಾಲ್ ಹಾಸ್ಪಿಟಲ್,  ಐಐಟಿ ಬಿ, ಡಿಇಒಸಿ ಸೇರಿದಂತೆ ಹಲವು ಹೆಸರಾಂತ ಕಂಪನಿಗಳು ಈ ಸೇವೆಗೆ ಸಾಥ್ ನೀಡಿವೆ.

ಇದನ್ನು ಓದಿ: ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..! 

ಬುಕ್ ಮಾಡುವುದು ಹೇಗೆ?

ಅಂದಹಾಗೇ, ಈ ಕಿಕ್​ಸ್ಟಾರ್ಟ್​ ಕ್ಯಾಬ್​ ಅನ್ನು ಬುಕ್​ ಮಾಡುವುದು ಹೇಗೆ ಅನ್ನುವುದು ಮುಂದಿರುವ ಪ್ರಶ್ನೆ. ಕಿಕ್​ಸ್ಟಾರ್ಟ್ ತನ್ನದೇ ಆದ ಒಂದು ವೆಬ್‌ಸೈಟ್‌ ಹೊಂದಿದ್ದು, ಅದಕ್ಕೆ ಲಾಗಿನ್‌ ಆಗಿ ಅಲ್ಲಿ ಬುಕ್‌ ಮಾಡಬಹುದು. ಅಷ್ಟೇ ಅಲ್ಲದೆ ಕಿಕ್​ಸ್ಟಾರ್ಟ್​ ಹೆಲ್ಪ್​ ಲೈನ್​ ನಂಬರ್​ ಕೂಡ ಇದೆ. ಈ ಮೂಲಕವೂ ಅವಶ್ಯಕತೆ ಇದ್ದವರು ಕ್ಯಾಬ್​ ಅನ್ನು ಬುಕ್​ ಮಾಡಿಕೊಳ್ಳಬಹುದು.

ಪ್ರಯಾಣ ದರ ಹೆಚ್ಚು

ಈ ಕ್ಯಾಬ್ ಬೇರೆ ಕಾರುಗಳಂತೆ ಅಲ್ಲ. ದೈಹಿಕ ನ್ಯೂನತೆ ಉಳ್ಳವರಿಗಾಗಿಯೇ ನಿರ್ಮಿಸಿರುವುದರಿಂದ ಸಾಕಷ್ಟು ಸೌಲಭ್ಯಗಳನ್ನು ಈ ಕ್ಯಾಬ್‌ನಲ್ಲಿ ಒದಗಿಸಲಾಗಿದೆ. ಆದ್ದರಿಂದ ಪ್ರಯಾಣ ದರ ಸ್ವಲ್ಪ ಹೆಚ್ಚು.  4 ಗಂಟೆಯ ಪ್ಯಾಕೇಜ್​ಗೆ 1500ರೂಪಾಯಿ ಆಗುತ್ತದೆ. 1 ತಾಸು ಹೆಚ್ಚು ಬೇಕೆಂದರೆ, ಪ್ರತ್ಯೇಕ 200 ರೂ. ನೀಡಬೇಕಾಗುತ್ತದೆ. 1 ಕಿಲೋಮೀಟರ್​ಗೆ 20 ರೂ.ದರ ಪಡೆಯುತ್ತಾರೆ.

ವ್ಯವಹಾರ ಮತ್ತು ಟಾರ್ಗೆಟ್​

ಸದ್ಯಕ್ಕೆ ಬೆಂಗಳೂರಿನಲ್ಲಿ ಕಿಕ್​ಸ್ಟಾರ್ಟ್​ ಕಾರ್ಯನಿರ್ವಹಿಸುತ್ತಿದೆ. ಈ ಕ್ಯಾಬ್​ ಸೇವೆಗೆ  ವಯಸ್ಸಾದವರು ಮಾತ್ರ ಗ್ರಾಹಕರು ಆಗಿರುವುದರಿಂದ, ಉದ್ಯಮ ಈಗಷ್ಟೇ ಚಾಲ್ತಿಗೆ ಬರುತ್ತಿದೆ. ಓಲಾ, ಉಬರ್​ ನಂತಹ ಕ್ಯಾಬ್​ ಸೇವೆಗಳ ಮಧ್ಯೆ ಕಿಕ್​ಸ್ಟಾರ್ಟ್​ ಕ್ಲಿಕ್​ ಆಗಬೇಕಾದರೆ ಹೆಚ್ಚು ಸಮಯವೂ ಬೇಕಾಗಿದೆ. ಆದ್ರೆ ಒಂದಂತೂ ಸತ್ಯ. ಸೇವೆ ಚೆನ್ನಾಗಿದ್ದರೆ, ಗ್ರಾಹಕ ಕೈ ಹಿಡಿದೇ ಹಿಡಿಯುತ್ತಾನೆ.

ಇದನ್ನು ಓದಿ:

1. ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"

2. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

3. ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್​- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್​​

  

 


Related Stories