`ಇನ್‍ವೆಸ್ಟ್ ಕರ್ನಾಟಕ' ಹೊಣೆ ಹೊತ್ತಿರುವ ರತ್ನಪ್ರಭಾ... ಜನಮನಗೆದ್ದ ನಿಷ್ಠಾವಂತ ಐಎಎಸ್ ಅಧಿಕಾರಿ

ಟೀಮ್​ ವೈ.ಎಸ್​. ಕನ್ನಡ

0

ಜನರಿಗಾಗಿ ರತ್ನ ಪ್ರಭಾರ ನಿರಂತರ ಪ್ರಯಾಣ...

ಒಬ್ಬ ಉದ್ಯಮಿಯಾಗಿ ನಮ್ಮೆಲ್ಲ ಸಮಯವನ್ನು ನಾವು ನಮ್ಮ ಸಂಸ್ಥೆಗಾಗಿ ಮೀಸಲಾಗಿಡುತ್ತೇವೆ. ಇದು ಸರ್ವೇಸಾಮಾನ್ಯ. ಆದ್ರೆ ಸರ್ಕಾರಿ ಅಧಿಕಾರಿಗಳು 24 *7 ಕೆಲಸ ಮಾಡುವುದು ತೀರಾ ಅಪರೂಪ. ವಿಷಯಗಳನ್ನು ಆಸಕ್ತಿದಾಯಕವಾಗಿಡಲು ಸದಾಕಾಲ ಉದ್ಯಮಗಳ ಬದುಕು ಕೂಡ ನಾನ್-ಸ್ಟಾಪ್ ಮ್ಯಾರಥಾನ್‍ನಂತೆ ಓಡುತ್ತಲೇ ಇರುತ್ತೆ. ಇಲ್ಲೊಬ್ಬರು ಐಎಎಸ್ ಅಧಿಕಾರಿಯಿದ್ದಾರೆ. ಸ್ಟಾರ್ಟ್‍ಅಪ್‍ಗಳಂತೆ ಅವರು ಕೂಡ ನಿರಂತರ ಪರಿಶ್ರಮಿ, ಅಷ್ಟೇ ಅಲ್ಲ ತಮ್ಮ ಸುತ್ತಮುತ್ತ ಇರುವವರ ಸಬಲೀಕರಣಕ್ಕಾಗಿ ಉದ್ಯಮಿಗಳಂತೆ ಚಿಂತನ ಮಂಥನ ನಡೆಸುತ್ತಾರೆ. `ಇನ್‍ವೆಸ್ಟ್ ಕರ್ನಾಟಕ' ವೇದಿಕೆಯ ಯಶಸ್ಸಿಗಾಗಿ ಅವರು ಹಗಲಿರುಳು ದುಡಿಯುತ್ತಿದ್ದಾರೆ. ನಾವ್ ಹೇಳ್ತಾ ಇರೋದು ಎಲ್ಲರಿಗೂ ಪ್ರೇರಣೆಯಾಗಬಲ್ಲ, ನಿಷ್ಠಾವಂತ ಸರ್ಕಾರಿ ಅಧಿಕಾರಿ ರತ್ನ ಪ್ರಭಾ ಅವರ ಬಗ್ಗೆ. ಸದ್ಯ ರತ್ನ ಪ್ರಭಾ, ಕರ್ನಾಟಕ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಬದುಕಿನ ಗುರಿ, ಕಾರ್ಯವೈಖರಿ, ಅನುಭವ ಎಲ್ಲವನ್ನೂ ಅವರು `ಯುವರ್‍ಸ್ಟೋರಿ' ಜೊತೆ ಹಂಚಿಕೊಂಡಿದ್ದಾರೆ.

ಯುವರ್​ ಸ್ಟೋರಿ: ನಿಮ್ಮ ಪ್ರಯತ್ನಗಳಲ್ಲಿ ನಿಮ್ಮನ್ನು ಮುನ್ನಡೆಸುವ ಅಂಶ ಯಾವುದು?

ರತ್ನ ಪ್ರಭಾ: ವೃತ್ತಿ ಜೀವನದ ಆರಂಭದಿಂದ್ಲೂ ನಾನು ಬಹಳ ಉತ್ಸಾಹಿ. ಸರ್ಕಾರಕ್ಕೆ ಸಂಬಂಧಿಸಿದ್ದಾಗಿರಲಿ ಅಥವಾ ಜನರ ಸಮಸ್ಯೆಯಾಗಿರಲಿ ಎಲ್ಲಾ ವಿಷಯಗಳನ್ನು ವಿಭಿನ್ನವಾಗಿ ನಿರ್ವಹಿಸುತ್ತಿದ್ದೆ, ಅದು ನನ್ನ ಹುಟ್ಟು ಗುಣ ಅಂದ್ರೂ ತಪ್ಪಿಲ್ಲ. ಕೆಲಸದ ಬಗ್ಗೆ ನನಗೆ ಅಪಾರವಾದ ಪ್ರೀತಿಯಿದೆ. ನಾನು ಎಲ್ಲೆಲ್ಲಿ ಕೆಲಸ ಮಾಡಿದ್ದೇನೋ ಅಲ್ಲೆಲ್ಲಾ ಜನರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ. ಈಗಾಗ್ಲೇ 35 ವರ್ಷಗಳ ಕಾಲ ನಾನು ಸೇವೆ ಸಲ್ಲಿಸಿದ್ದೇನೆ. ಉತ್ಸಾಹವೇ ನನ್ನನ್ನು ಮುನ್ನಡೆಸುತ್ತಿದೆ. ಈ ಇಲಾಖೆಯಲ್ಲಿ ನಾನು ಅತ್ಯಂತ ಅನುಭವಿ ಅಧಿಕಾರಿ. 1996-97ರ ಸಮಯದಲ್ಲಿ ನಾನು ರಫ್ತು ಸಂಸ್ಕರಣಾ ವಯದಲ್ಲಿ ಡೆವಲಪ್‍ಮೆಂಟ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅದಕ್ಕೂ ಮುನ್ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಆ ಸಮಯದಲ್ಲೆಲ್ಲ ನಾನು ಹೆಚ್ಚು ಗಮನಕೊಟ್ಟಿದ್ದು ಗ್ರಾಮಗಳ ಅಭಿವೃದ್ಧಿಯ ಕಡೆಗೆ. ಮೊದಲ ಬಾರಿ ರಫ್ತು ಸಂಸ್ಕರಣಾ ವಲಯದ ಹೊಣೆ ಹೊತ್ತಿದ್ದು, ಇಲಾಖೆಯನ್ನು ಮುನ್ನಡೆಸುವ ಪ್ರಯತ್ನ ನನ್ನದು. ಈ ಇಲಾಖೆಯ ಜೊತೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಕೂಡ ಕೈಗಾರಿಕಾ ಹಿನ್ನೆಲೆಯುಳ್ಳವಳಾಗಿರೋದ್ರಿಂದ ಖಚಿತವಾಗಿ ಉದ್ಯಮಿಗಳಿಗೆ ಏನು ಬೇಕು? ಇಲಾಖೆಯ ಪ್ರಗತಿಗೆ ಏನು ಮಾಡಬೇಕು ಎಂಬುದರ ಅರಿವಿದೆ.

ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆಗಳು...

ಕೈಗಾರಿಕಾ ಪ್ರದೇಶ ಕಾನೂನಿನ ಪ್ರಕಾರ ಭೂಮಿ ಮಂಜೂರು ಮಾಡ್ತಿರೋದು ಉದ್ಯೋಗ ಸೃಷ್ಟಿಗಾಗಿ, ಆದ್ರೆ ಮೂಲ ಉದ್ದೇಶವನ್ನೇ ನಿರ್ಲಕ್ಷಿಸಲಾಗ್ತಿದೆ. ಹಾಗಾಗಿ ಜಮೀನು ಕಳೆದುಕೊಂಡ ಪ್ರತಿಯೊಬ್ಬರಿಗೂ ಒಂದು ಉದ್ಯೋಗ ಕೊಡಬೇಕು ಅನ್ನೋ ಹೊಸ ನಿಯಮವನ್ನು ಜಾರಿ ಮಾಡಿದ್ದೇವೆ. ಸ್ಥಳೀಯ ಯುವಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಲು ಕೈಗಾರಿಕೋದ್ಯಮಿಗಳ ಜೊತೆ ಕೂಡ ಮಾತುಕತೆ ನಡೆಸುತ್ತಿದ್ದೇವೆ. ಹಲವು ಕೈಗಾರಿಕಾ ವಲಯಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ಧಾರಿ ಕಾರ್ಯಕ್ರಮಗಳ ಅಡಿಯಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ವಿವಿಧ ಕೈಗಾರಿಕೆಗಳ ಸ್ಥಳೀಯ ಅಗತ್ಯಗಳ ಜೊತೆ ಬೆಸೆಯುವುದು ನಮ್ಮ ಪ್ರಯತ್ನ. ಈ ಮೂಲಕ ಕೈಗಾರಿಕೆಗಳು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಬಳಸಿಕೊಳ್ಳಬಹುದು.

ಬೆಂಗಳೂರನ್ನೂ ಮೀರಿ ಬಂಡವಾಳ ಆಕರ್ಷಣೆ...

ಬೆಂಗಳೂರಿನಿಂದ ಹೊರ ಹೋಗುವುದೇ ನಮ್ಮ ಕೈಗಾರಿಕಾ ನೀತಿಯ ಉದ್ದೇಶ. ಬೆಂಗಳೂರಿನ ಸುತ್ತ ಮುತ್ತ ಬರುವ ಯುನಿಟ್‍ಗಳಿಗೆ ನಾವು ಇನ್‍ಸೆಂಟಿವ್‍ಗಳನ್ನು ಕೊಟ್ಟಿಲ್ಲ. ಹಾಗಾಗಿ ಬೆಂಗಳೂರಿನಿಂದ ಬೇರೆಡೆಗೆ ಹೋದ್ರೆ ಇನ್‍ಸೆಂಟಿವ್‍ಗಳನ್ನು ಪಡೆಯಬಹುದು. ಬಾಂಬೆ-ಕರ್ನಾಟಕ, ಮೈಸೂರು, ಮಂಗಳೂರು ಮತ್ತು ಹೈದ್ರಾಬಾದ್-ಕರ್ನಾಟಕ ವಲಯದಲ್ಲಿ ಅತಿ ಹೆಚ್ಚು ಇನ್‍ಸೆಂಟಿವ್ ದೊರೆಯುತ್ತಿದೆ. ಹಾಗಂತ ನಾವೇನು ಬೆಂಗಳೂರನ್ನು ಕಡೆಗಣಿಸುತ್ತಿಲ್ಲ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಏರೋಸ್ಪೇಸ್ ಕೈಗಾರಿಕೆಗಳು ಇಲ್ಲಿ ತಲೆಯೆತ್ತುತ್ತಿವೆ.

ಬೆಂಗಳೂರಲ್ಲಿ ಮೂಲಸೌಕರ್ಯ ಅಡಚಣೆ ನಿವಾರಿಸುವ ಕಸರತ್ತು...

ಮೂಲಸೌಕರ್ಯಗಳ ಒದಗಿಸುವಿಕೆ ಅತ್ಯಂತ ಪ್ರಮುಖ ವಿಚಾರ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನಹರಿಸುತ್ತಿದೆ. ಇದಕ್ಕಾಗಿಯೇ ಬೆಂಗಳೂರಲ್ಲಿ ಸಚಿವರು ಕೂಡ ಇದ್ದಾರೆ.

ಕರ್ನಾಟಕದೆಡೆಗೆ ಹೂಡಿಕೆದಾರರ ಒಲವು...

ನಾನು ಅಧಿಕಾರಿ ವಹಿಸಿಕೊಂಡಾಗ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ 7-8ನೇ ಸ್ಥಾನದಲ್ಲಿತ್ತು. ಈಗ ಕರ್ನಾಟಕ 2ನೇ ಸ್ಥಾನಕ್ಕೇರಿದೆ. ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಅಷ್ಟೇ ಅಲ್ಲ ಮಹಿಳಾ ಉದ್ಯಮಿಗಳ ಶ್ರೇಯೋಭಿವೃದ್ಧಿಗಾಗಿ ಕೂಡ ನಾವು ಶ್ರಮಿಸುತ್ತಿದ್ದೇವೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ಒಳ್ಳೆ ಅವಕಾಶಗಳಿವೆ. ರಕ್ಷಣಾ ಇಲಾಖೆ ಮತ್ತು ಏರೋಸ್ಪೇಸ್‍ಗೆ ಸಂಬಂಧಿಸಿದ ಹೈಟೆಕ್ ಕೇಂದ್ರಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಸ್ಥಾನವನ್ನು ಕಾಯ್ದುಕೊಂಡು ಡಿಫೆನ್ಸ್ ಕಂಪನಿಗಳನ್ನು ಕರೆತರುವ ಪ್ರಯತ್ನದಲ್ಲಿದ್ದೇವೆ.

ಸ್ಟಾರ್ಟ್‍ಅಪ್‍ಗಳ ಕಡೆಗೆ ಗಮನವಿರಲಿ...

ಸ್ಟಾರ್ಟ್‍ಅಪ್‍ಗಳ ವಿಚಾರಕ್ಕೆ ಬಂದ್ರೆ ನಾವೇ ನಂಬರ್ 1. ಕೇವಲ ಐಟಿ ವಲಯದ ಸ್ಟಾರ್ಟ್‍ಅಪ್‍ಗಳು ಮಾತ್ರವಲ್ಲ, ಉತ್ಪಾದನಾ ಕ್ಷೇತ್ರದ ಸ್ಟಾರ್ಟ್‍ಅಪ್‍ಗಳಿಗೂ ಪ್ರೋತ್ಸಾಹ ನೀಡಬೇಕು ಅನ್ನೋದು ಸಚಿವರ ಉದ್ದೇಶ. ಅದರೆಡೆಗೆ ನಾವೀಗ ಗಮನಹರಿಸಬೇಕು.

ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ...

ಕೈಗಾರಿಕಾ ಪಾರ್ಕ್‍ಗಳಲ್ಲಿ ಶೇ.5ರಷ್ಟನ್ನು ಮಹಿಳೆಯರಿಗೆ ಮೀಸಲಾಗಿಡಲು ನಿಯಮವೊಂದನ್ನು ಜಾರಿಗೆ ತರಲಾಗಿದೆ. ಅಂಗವಿಕಲರಿಗೂ ಮೀಸಲಾತಿ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಯಾವುದೇ ಯೋಜನೆಗಳನ್ನು ಹಮ್ಮಿಕೊಂಡಿರಲಿಲ್ಲ. ಈಗ ನಾವು ಮಹಿಳೆಯರಿಗಾಗಿ ವಿಶೇಷ ಪಾರ್ಕ್‍ಗಳನ್ನು ಒದಗಿಸುತ್ತಿದ್ದೇವೆ.

ಯುವರ್​ ಸ್ಟೋರಿ:ನಿಮ್ಮ ವೈಯಕ್ತಿಕ ಬದುಕಿನ ಪಯಣದ ಬಗ್ಗೆ ಹೇಳಿ, ಅದು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆಯಾ?

ನನ್ನ ತಂದೆ ನಾಗರೀಕ ಸೇವೆಯಲ್ಲಿದ್ರು, ತಾಯಿ ವೈದ್ಯೆ. ನನ್ನ ಹಿರಿಯ ಸಹೋದರ ಪ್ಲಾಸ್ಟಿಕ್ ಸರ್ಜನ್. ಇನ್ನೊಬ್ಬ ಸಹೋದರ ಕೂಡ ನಾಗರೀಕ ಸೇವೆಯಲ್ಲಿದ್ದಾರೆ. ನಮ್ಮ ಪೋಷಕರು ಕೆಲಸದ ಕಡೆಗೆ ಎಷ್ಟು ಸಮರ್ಪಣಾ ಭಾವ ಹೊಂದಿದ್ದಾರೆಂಬುದನ್ನು ಬಾಲ್ಯದಿಂದ್ಲೂ ನೋಡುತ್ತಿದ್ವಿ. ಹಾಗಾಗಿ ನಾವು ಕೂಡ ಅವರಂತೆ ಆಗಿದ್ದೇವೆ. ಈಗ ಕೆಲಸ ಹೊರತುಪಡಿಸಿದ್ರೆ ನನ್ನ ಮನಸ್ಸಿನಲ್ಲಿ ಇನ್ನೇನೂ ಇಲ್ಲ. ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲೂ ನಾನು ಕರ್ತವ್ಯದ ಬಗ್ಗೆ ಯೋಚಿಸುತ್ತಿರುತ್ತೇನೆ. ಜನರಿಗೆ ಸಹಾಯ ಮಾಡುವುದು ನನಗೆ ಅತ್ಯಂತ ಸಂತೋಷ ಕೊಡುವ ವಿಚಾರ.

ಕಣ್ಣ ಮುಂದಿಲ್ಲದಿದ್ರೂ ಜನರ ಹೃದಯದಲ್ಲಿದ್ದೇನೆ...

ಜನರಿಗಾಗಿ ನಾನು ಮಾಡಿದ ಕೆಲಸದಿಂದ್ಲೇ ಅವರು ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. 32 ವರ್ಷಗಳ ಹಿಂದೆ ಮೊದಲ ಬಾರಿಗೆ ನಾನು ಬೀದರ್‍ನ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದೆ. ಇವತ್ತಿಗೂ ಬೀದರ್ ಜನತೆ ನನ್ನನ್ನು ಮರೆತಿಲ್ಲ. ಒಮ್ಮೆ ನಾನು ರುಟೀನ್ ಚೆಕ್‍ಅಪ್‍ಗಾಗಿ ಹೋಗಿದ್ದೆ, ಆಗ ರಕ್ತದ ಮಾದರಿ ತೆಗೆದುಕೊಳ್ಳಲು ಬಂದ ವ್ಯಕ್ತಿಯೊಬ್ರು ನನ್ನ ಹೆಸರು ಕೇಳಿದ್ರು. ರತ್ನಪ್ರಭಾ ಎಂದಾಕ್ಷಣ, ನೀವು ಬೀದರ್‍ನಲ್ಲಿ ಕೆಲಸ ಮಾಡಿದ್ದೀರಲ್ಲ, ನನ್ನ ತಾಯಿ ಸದಾ ನಿಮ್ಮನ್ನು ನೆನೆಸಿಕೊಳ್ತಾರೆ ಎಂದ್ರು. ಅವರ ತಾಯಿ ಒಬ್ಬ ಗೃಹಿಣಿ, ಆತ ಜನಿಸಿದಾಗ ನಾನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದೆ. ಈ ವಿಷಯ ತಿಳಿದು ಅವರು ಖುಷಿಪಟ್ರು.

ಒಮ್ಮೆ ನಾನು ವೃದ್ಧ ಶಿಕ್ಷಕರೊಬ್ಬರನ್ನು ಭೇಟಿಯಾಗಿದ್ದೆ. ನೀವು ಬೀದರ್‍ನಿಂದ ಬೇರೆಡೆಗೆ ವರ್ಗವಾಗಿದ್ದೀರಾ, ಆದ್ರೆ ನಮ್ಮ ಹೃದಯದಲ್ಲಿ ಶಾಶ್ವತವಾಗಿದ್ದೀರಾ ಎಂದ್ರು. ನಿಜಕ್ಕೂ ಅದೊಂದು ಖುಷಿಯ ಕ್ಷಣವಾಗಿತ್ತು.

ಉತ್ತಮ ಬದಲಾವಣೆಗಾಗಿ ಶ್ರಮಿಸುತ್ತಿರುವ ರತ್ನ ಪ್ರಭಾ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಬಲ್ಲರು. ಅವರ ಸಾಮಾಜಿಕ ಕಳಕಳಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಲೇಖಕರು: ಶ್ರದ್ಧಾ ಶರ್ಮಾ
ಅನುವಾದಕರು : ಭಾರತಿ ಭಟ್

Related Stories

Stories by YourStory Kannada