ಹೊಸತನ ಬಯಸುವ ಉತ್ತರ ಕನ್ನಡಕ್ಕೆ ಬೇಕಿದೆ ಬಂಡವಾಳದ ಆಸರೆ

ಟೀಮ್ ವೈ.ಎಸ್.ಕನ್ನಡ

0

ರಾಜ್ಯದ ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ಸುಂದರವಾದ ಕಡಲ ತೀರ ಮತ್ತು ದಟ್ಟವಾದ ಅರಣ್ಯ ಭೂಮಿ ಉತ್ತರ ಕನ್ನಡ ಜಿಲ್ಲೆಯ ಹೆಗ್ಗಳಿಕೆ. ಜಿಲ್ಲೆಯ ಜನರು ಸಾಹಸ ಮನೋಭಾವ ಹೊಂದಿದ್ದಾರೆ. ಹೊಸತನವನ್ನು ಸದಾ ಸ್ವಾಗತಿಸುವ ಇಲ್ಲಿನ ಜನರು, ಆಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ - ಒಂದು ಪಕ್ಷಿ ನೋಟ

ಪ್ರಕೃತಿ ಸೌಂದರ್ಯದ ವಿಷಯಕ್ಕೆ ಬಂದರೆ ಉತ್ತರ ಕನ್ನಡ ಜಿಲ್ಲೆಯನ್ನು ಮೀರಿಸುವ ಜಿಲ್ಲೆ ಕರ್ನಾಟಕದಲ್ಲಿ ಇನ್ನೊಂದಿಲ್ಲ. ಅದು ಅದ್ಭುತಗಳ , ವಿಸ್ಮಯಗಳ ಆಗರ. ಸಾಗರ ಸಂಬಂಧಿ ಪ್ರವಾಸೋದ್ಯಮ ವಿಷಯಕ್ಕೆ ಬಂದರೆ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ. ಸಾಗರ ಸಂಪತ್ತು ಹಾಗೂ ವಿಸ್ತಾರವಾಗಿ ಅದು ಹರಡಿಕೊಂಡಿರುವ ರೀತಿ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತದೆ.

ಪ್ರವಾಸೋದ್ಯಮಕ್ಕೆ ಮೊದಲ ಮಣೆ

ನೆರೆಯ ರಾಜ್ಯ ಗೋವಾ ಪ್ರವಾಸೋದ್ಯಮದಲ್ಲಿ ವಿಶ್ವಕ್ಕೇ ಮಾದರಿಯಾಗುವ ಸಾಧನೆ ಮಾಡಿದೆ. ಅಲ್ಲಿನ ಪ್ರಮುಖ ಆದಾಯ ಕೂಡ ಪ್ರವಾಸೋದ್ಯಮವಾಗಿದೆ. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ, ಪರಿಸರ ಪೂರಕ ಪ್ರವಾಸೋದ್ಯಮ ದೇಶ ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಇದೇ ಪರಿಸರ ಮತ್ತು ಸುಂದರ ಬೀಚ್ ಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದೆ. ಕಾರವಾರ, ಗೋರ್ಕರ್ಣ ಹೀಗೆ ಸುಂದರ, ಮನಮೋಹಕ್ ಬೀಚ್ ಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಅವಕಾಶ ಇದೆ. ಸುಂದರ ಬೀಚ್ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯರನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸೇರ್ಪಡೆಗೊಳಿಸುವ ಸುವರ್ಣಾವಕಾಶಕ್ಕೆ ವೇದಿಕೆ ಒದಗಿಸುತ್ತಿದೆ.

ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಅದು ಇನ್ನಿತರ ಪೂರಕ ವಲಯದಲ್ಲಿ ಉದ್ಯೋಗ ಅವಕಾಶಕ್ಕೆ ದಾರಿ ಮಾಡಿಕೊಡುತ್ತಿದೆ. ವಸತಿ, ಸಾರಿಗೆ ಮತ್ತು ಹೋಟೆಲ್ ಉದ್ಯಮ ಕ್ಷಿಪ್ರಗತಿಯ ಬೆಳವಣಿಗೆ ದಾಖಲಿಸುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಉತ್ತರ ಕನ್ನಡ ಜಿಲ್ಲೆ ಅತ್ಯುತ್ತಮ ತಾಣವಾಗಿದೆ.

ಪಶ್ಚಿಮ ಘಟ್ಟದ ದಟ್ಟ ಕಾಡುಗಳು - ಯಾಣ ಬೆಟ್ಟ

ಕೇವಲ ಸಾಗರ ಮಾತ್ರವಲ್ಲ.. ಉತ್ತರ ಕನ್ನಡ ಜಿಲ್ಲೆ ದಟ್ಟ ಹರಿದ್ವರ್ಣ ಕಾಡುಗಳಿಗೆ ಕೂಡ ಹೆಸರುವಾಸಿಯಾಗಿದೆ. ದಾಂಡೇಲಿ ಸೇರಿದಂತೆ ಉತ್ತರ ಕನ್ನಡದ ಅರಣ್ಯಗಳು ಕಾಡು ಉತ್ಪನ್ನಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅರಣ್ಯ ಉತ್ಪನ್ನಗಳನ್ನು ವಿದೇಶಗಳಿಗೆ ಕೂಡ ರಫ್ತು ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಅತ್ಯಗತ್ಯವಾಗಿದ್ದು, ಬೆಳವಣಿಗೆಯ ದಾರಿ ಉಜ್ವಲವಾಗಿದೆ. ಬಂಡವಾಳ ಹೂಡಿಕೆಗೆ ಇಲ್ಲಿದೆ ಅತ್ಯುತ್ತಮ ಅವಕಾಶ .

ಖನಿಜ ಸಂಪತ್ತಿನ ಸಿರಿ

ಸಿಮೆಂಟ್ ಉತ್ಪಾದನೆಗೆ ಅತ್ಯಗತ್ಯವಾಗಿರುವ ಲೈಮ್ ಸ್ಟೋನ್ ಸಂಗ್ರಹ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ ಇನ್ನಿತರ ಹಲವು ಖನಿಜಗಳು ಇಲ್ಲಿ ಹೇರಳವಾಗಿ ದೊರೆಯುತ್ತಿವೆ. ರಾಜ್ಯದ ಜನರಿಗೆ ಬೆಳಕು ನೀಡುವ ಜಿಲ್ಲೆಯೆಂದೇ ಉತ್ತರ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ. ಶರಾವತಿ ಜಲ ವಿದ್ಯುತ್ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಮಾನವ ಸಂಪನ್ಮೂಲ ಮತ್ತು ಬದಲಾವಣೆಯ ಪರ್ವ

ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕಾಲೇಜುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. ಎಂ ಬಿ ಎ ಪದವಿ ಕಾಲೇಜುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟಿವೆ. ಗುಣಮಟ್ಟದ ಶಿಕ್ಷಣಕ್ಕೆ ಈ ಶಿಕ್ಷಣ ಸಂಸ್ಥೆಗಳು ಹೆಸರುವಾಸಿಯಾಗಿವೆ. ಇದೀಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಇಲ್ಲಿನ ಯುವ ಸಮುದಾಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅರ್ಪಣಾ ಮನೋಭಾವದಿಂದ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಕೈಗಾ ಅಣು ಸ್ಥಾವರ – ಸೀ ಬರ್ಡ್ ನೌಕಾ ನೆಲೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ. ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯ ಪ್ಲಸ್ ಪಾಯಿಂಟ್. ಅತ್ಯುತ್ತಮ ರಸ್ತೆ ಸಂಪರ್ಕದ ಜೊತೆ ಜೊತೆಗೆ ಕಾರವಾರ ಬಂದರು ಈ ಜಿಲ್ಲೆಯ ಆಸ್ತಿ. ದೇಶದ ಪ್ರಮುಖ ಬಂದರುಗಳಲ್ಲಿ ಇದು ಕೂಡ ಒಂದಾಗಿದೆ. ವರ್ಷದ ಎಲ್ಲ ಅವಧಿಯಲ್ಲಿಯೂ ಇಲ್ಲಿ ಚಟುವಟಿಕೆ ನಡೆಯುತ್ತಿದೆ. ಇದಲ್ಲದೆ ದೇಶದ ಅಣು ಸ್ಥಾವರಗಳಲ್ಲಿ ಅತ್ಯಾಧುನಿಕ ಅಣು ಸ್ಥಾವರವಾಗಿರುವ ಕೈಗಾ ಅಣು ಸ್ಥಾವರ ನೆಲೆ ಕಂಡಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಇದು ರಾಜ್ಯದ ಇಂಧನ ಕೊರತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸೀ ಬರ್ಡ್ ನೌಕಾ ನೆಲೆ, ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಕಾರವಾರ ಈ ಮೂಲಕ ಜಾಗತಿಕ ಭೂ ಪಟದಲ್ಲಿ ಗುರುತಿಸಿಕೊಂಡಿದೆ.

ಜೈವಿಕ ಕೃಷಿಗೆ ಸೂಕ್ತ ಜಿಲ್ಲೆ

ಇತ್ತೀಚಿನ ದಿನಗಳಲ್ಲಿ ಜೈವಿಕ ಕೃಷಿಯತ್ತ ಮನುಷ್ಯ ಆಕರ್ಷಿತನಾಗುತ್ತಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೈವಿಕ ಕೃಷಿಗೆ ಅತ್ಯುತ್ತಮ ವಾತಾವರಣವಿದೆ. ಇಲ್ಲಿನ ಮಣ್ಣು ಫಲವತ್ತತೆಯನ್ನು ಹೊಂದಿದೆ. ವಾಣಿಜ್ಯ ಬೆಳೆಗಳು ಮುಂಚೂಣಿಯಲ್ಲಿದ್ದರೂ ಭತ್ತ, ಕಬ್ಬು ಕೂಡ ಉತ್ತರ ಕನ್ನಡ ಜಿಲ್ಲೆಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.

ಕೊನೆಯ ಮಾತು..

ಬಂಡವಾಳ ಹೂಡಿಕೆಗೆ ಅತ್ಯಗತ್ಯವಾಗಿರುವ ಎಲ್ಲ ಮಾನದಂಡಗಳನ್ನು, ಸೌಲಭ್ಯಗಳನ್ನು ಉತ್ತರ ಕನ್ನಡ ಜಿಲ್ಲೆ ಹೊಂದಿದ್ದು, ರಾಜ್ಯ ಮತ್ತು ವಿದೇಶಗಳ ಹೂಡಿಕೆದಾರರ ದೃಷ್ಟಿ ಉತ್ತರ ಕನ್ನಡ ಜಿಲ್ಲೆಯತ್ತ ಹರಿದಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ ಉತ್ತರ ಕನ್ನಡ, ಕೈಗಾರಿಕೆಗಳನ್ನು ಕೈ ಬೀಸಿ ಕರೆಯುತ್ತಿದೆ. ಕೈಗಾರಿಕಾ ಪಾರ್ಕ್ ಮತ್ತು ಕೈ ಗಾರಿಕಾ ಎಸ್ಟೇಟ್ ಗಳನ್ನು ಅಭಿವೃದ್ಧಿಪಡಿಸಿರುವ ಉತ್ತರ ಕನ್ನಡ ಜಿಲ್ಲೆ ಉದ್ಯಮಿಗಳನ್ನು ಸ್ವಾಗತಿಸುತ್ತಿದೆ.