`ಬ್ಲೂಬಿರ್ಚ್'ಗೆ 2 ಮಿಲಿಯನ್ ಡಾಲರ್ ಹಣಕಾಸಿನ ನೆರವು- ಭಾರತದ ನವೀಕರಿಸಿದ ಮಾರುಕಟ್ಟೆಯಲ್ಲಿ ಸಂಚಲನ

ಟೀಮ್​ ವೈ.ಎಸ್​. ಕನ್ನಡ

0

ಬೆಂಗಳೂರು ಮೂಲದ ರಿವರ್ಸ್ ಲಾಜಿಸ್ಟಿಕ್ಸ್ ಸೇವೆ ಒದಗಿಸುವ ಸಂಸ್ಥೆ `ಬ್ಲೂಬಿರ್ಚ್' 2 ಮಿಲಿಯನ್ ಡಾಲರ್ ಏಂಜೆಲ್ ಫಂಡ್ ಅನ್ನು ಸಂಗ್ರಹಿಸಿದೆ. ಚಿಕಾಗೋ ಕ್ಯಾಪಿಟಲ್ ವೆಂಚರ್ಸ್ ಹಾಗೂ ಸಂಜಯ್ ಮೆಹ್ತಾ ಸೇರಿದಂತೆ ಹಲವರು ಬ್ಲೂಬಿರ್ಚ್‍ಗೆ ಹಣಕಾಸಿನ ನೆರವು ನೀಡಿದ್ದಾರೆ. `ಬ್ಲೂಬಿರ್ಚ್' ಒಂದು ಸ್ವತಂತ್ರ ಸಂಸ್ಥೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ರಿವರ್ಸ್ ಲಾಜಿಸ್ಟಿಕ್ಸ್ ಸಮಸ್ಯೆಗಳಿಗೆಲ್ಲ ಪರಿಹಾರ ಒದಗಿಸುತ್ತಿದೆ. ರಿಟೇಲರ್‍ಗಳು, ಮೂಲ ಸಾಧನಗಳ ತಯಾರಕರು ಹಾಗೂ ಉದ್ಯಮಗಳಿಗೆ ಕಂಪನಿಗಳಲ್ಲಿ ಬಳಕೆಯಾಗದ, ಮಾರಾಟವಾಗದ ಸ್ವತ್ತುಗಳಿಂದ ಗರಿಷ್ಠ ಮೊತ್ತವನ್ನು ಪಡೆಯಲು ಬ್ಲೂಬಿರ್ಚ್ ನೆರವಾಗುತ್ತಿದೆ.

ಸಪನ್ ಜೈನ್, ಜೆಬಿ ಚೆರಿಯನ್, ಅಮಿತ್ ಗೋಯೆಲ್ ಹಾಗೂ ಜಯತೀರ್ಥ.ಪಿ.ಕಟ್ಟಿ ಜೊತೆಯಾಗಿ ಬ್ಲೂಬಿರ್ಚ್ ಅನ್ನು ಆರಂಭಿಸಿದ್ದಾರೆ. ಐಟಿ ಸ್ವತ್ತುಗಳ ನಿರ್ವಹಣೆ, ರಿಮಾರ್ಕೆಟಿಂಗ್‍ಗೆ ಪರಿಹಾರ ಒದಗಿಸುವುದು ಇವರ ಉದ್ದೇಶ. ನವೀಕರಿಸಿದ ಮತ್ತು ಹೆಚ್ಚುವರಿ ಗ್ರಾಹಕ ಆದಾಯದ ವಿಷಯದಲ್ಲೂ ಇವರು ವ್ಯವಹರಿಸುತ್ತಾರೆ. 2014ರ ಏಪ್ರಿಲ್‍ನಲ್ಲಿ `ಬ್ಲೂಬಿರ್ಚ್' ಸಂಸ್ಥೆ ಆರಂಭವಾಗಿದೆ. ದಿನೇ ದಿನೇ ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿದೆ. ವ್ಯವಹಾರ ಹಾಗೂ ಬಳಕೆದಾರರ ಮೂಲಗಳನ್ನು ನೋಡಿದ್ರೆ ಸಂಸ್ಥೆಯ ಬೆಳವಣಿಗೆ ತೃಪ್ತಿಕರವಾಗಿದೆ.

ತಮ್ಮ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನಕ್ಕೆ ಪ್ರಮುಖ ಸ್ಥಾನ ಎನ್ನುತ್ತಾರೆ `ಬ್ಲೂಬಿರ್ಚ್'ನ ಸಿಇಓ ಸಪನ್ ಜೈನ್. ಗ್ರಾಹಕರ ತಂತ್ರಜ್ಞಾನ ಆಸ್ತಿಯ ನಿರ್ವಹಣೆಗೆ ಸಲಹೆ ಸೂಚನೆಗಳನ್ನು ಅವರು ನೀಡುತ್ತಾರೆ. ತಂತ್ರಜ್ಞಾನದ ವೇದಿಕೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇದೀಗ ಸಂಗ್ರಹಿಸಿರುವ ನಿಧಿಯನ್ನು ಬಳಸಿಕೊಳ್ಳುವುದಾಗಿ ಸಪನ್ ಜೈನ್ ತಿಳಿಸಿದ್ದಾರೆ. ಅಷ್ಟೇ ಇಲ್ಲ ಇನ್ನೂ 6 ನಗರಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ.

ಎಂಟರ್‍ಪ್ರೈಸ್‍ಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ವೈಯಕ್ತಿಕ ಗ್ರಾಹಕರಿಗೆ ಬ್ಲೂಬಿರ್ಚ್ ತನ್ನ ಸೇವೆಯನ್ನು ನೀಡುತ್ತಿದೆ. ಸುಮಾರು 500 ಕಂಪನಿಗಳು ಬ್ಲೂಬಿರ್ಚ್‍ಗೆ ಗ್ರಾಹಕರಾಗಿವೆ. ಅಷ್ಟೇ ಅಲ್ಲ ಸುಮಾರು 20 ದೇಶಗಳಲ್ಲಿ ಬ್ಲೂಬಿರ್ಚ್ ವ್ಯವಹಾರ ನಡೆಸುತ್ತಿದ್ದು, ಅದರ ಜಾಗತಿಕ ನೆಟ್‍ವರ್ಕ್ 2000ಕ್ಕೂ ಹೆಚ್ಚು ಮರುಮಾರಾಟಗಾರರನ್ನು ಒಳಗೊಂಡಿದೆ. ತಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವತ್ತ ಇನ್ನಷ್ಟು ಗಮನಹರಿಸುವುದಾಗಿ ಸಪನ್ ಜೈನ್ ತಿಳಿಸಿದ್ದಾರೆ. ತಾಂತ್ರಿಕ ಉತ್ಪನ್ನಗಳ ಸಾಮರ್ಥ್ಯ ವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ, ಸ್ವಚ್ಛ ಡಿಜಿಟಲ್ ಇಂಡಿಯಾವನ್ನು ನಿರ್ಮಾಣ ಮಾಡಲು ಬ್ಲೂಬಿರ್ಚ್ ಕೊಡುಗೆ ನೀಡುತ್ತಿದೆ, ಜೊತೆಗೆ ಗುಣಮಟ್ಟದ ಉತ್ಪನ್ನಗಳು ಕಂಪನಿಗಳಿಗೆ ಹಾಗೂ ಗ್ರಾಹಕರಿಗೆ ಕೈಗೆಟುಕುವಂತೆ ಮಾಡಲು ಶ್ರಮಿಸುತ್ತಿದೆ ಎನ್ನುತ್ತಾರೆ ಸಪನ್ ಜೈನ್.

ಎಇ ಹಾಗೂ ಏಂಜೆಲ್ ಹೂಡಿಕೆದಾರ ಸಂಜಯ್ ಅವರ ಪ್ರಕಾರ, ಮಾರುಕಟ್ಟೆಯ ಗಾತ್ರ `ಬ್ಲೂಬಿರ್ಚ್'ನ ಹೂಡಿಕೆಯನ್ನು ಆಕರ್ಷಕ ಸ್ಥಾನದಲ್ಲಿಟ್ಟಿದೆ. ಅನೇಕ ವಿಭಾಗಗಳಲ್ಲಿ ಅವಕಾಶಗಳ ಬೆಳವಣಿಗೆಯನ್ನು ನಾವು ನೋಡಿದ್ದೇವೆ ಅನ್ನೋದು ಸಂಜಯ್ ಅವರ ಅಭಿಪ್ರಾಯ.

ವಲಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳು..

ರಿವರ್ಸ್ ಲಾಜಿಸ್ಟಿಕ್‍ನ ಮಾರುಕಟ್ಟೆ ಗಾತ್ರ ಅಂದಾಜು 20 ಬಿಲಿಯನ್ ಡಾಲರ್‍ನಷ್ಟಿದೆ. ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಆದಾಯದ ಅಸಮರ್ಪಕ ನಿರ್ವಹಣೆ, ಅತಿಯಾದ ವೆಚ್ಚ ಹಂಚಿಕೆ, ಚಿಲ್ಲರೆ ವ್ಯಾಪಾರಿಗಳು ಮತ್ತು ಉತ್ಪಾದಕರ ನಡುವಣ ತಿಕ್ಕಾಟ ಸೇರಿದಂತೆ ಹಲವು ಕಾರಣಗಳು ರಿವರ್ಸ್ ಲಾಜಿಸ್ಟಿಕ್ಸ್ ಮಾರುಕಟ್ಟೆಯ ಅಭಿವೃದ್ಧಿಗೆ ಅಡ್ಡಿಯಾಗಿವೆ. ಐಟಿ ಆಸ್ತಿ ಇತ್ಯರ್ಥ ಮಾರುಕಟ್ಟೆ .........ನ ಶೇ.10ರಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. 2020ರ ವೇಳೆಗೆ ಕೇವಲ ಭಾರತದಲ್ಲಿ ಮಾರ್ಕೆಟ್‍ನ ಮೌಲ್ಯ 50 ಬಿಲಿಯನ್ ಡಾಲರ್‍ನಷ್ಟಾಗಲಿದೆ. ಮರು ಆಯೋಜನೆಗಾಗಿ ಜಾಗತಿಕ ಮಟ್ಟದಲ್ಲಿ ಬ್ಲೂಬಿರ್ಚ್ 3000 ಪಾಲುದಾರಿಕೆ ನೆಟ್‍ವರ್ಕ್‍ಗಳನ್ನು ಹೊಂದಿದೆ. ಈಗಾಗ್ಲೇ 100 ಕೋಟಿ ರನ್ ರೇಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತ ಹಾಗೂ ಉಳಿದ ರಾಷ್ಟ್ರಗಳಲ್ಲಿ, ತನ್ನ ಸೇವೆ ವಿಸ್ತರಣೆಗಾಗಿ, ತಂಡದ ಬಲ ಮತ್ತು ಸಾಮಥ್ರ್ಯ ಹೆಚ್ಚಿಸಲು ಈಗ ಸಂಗ್ರಹವಾಗಿರುವ ಹಣವನ್ನು ಬ್ಲೂಬಿರ್ಚ್ ಬಳಸಿಕೊಳ್ಳಲಿದೆ. ಶೀಘ್ರದಲ್ಲೇ ಬ್ಲೂಬಿರ್ಚ್ ತನ್ನ ಗ್ರಾಹಕ ಸೇವೆಯನ್ನು ಆರಂಭಿಸಲಿದ್ದು, ಮುಂದಿನ ವರ್ಷಾರಂಭದ ವೇಳೆಗೆ 60 ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ಹೊಂದಿದೆ.

`ಯುವರ್‍ಸ್ಟೋರಿ' ಮಾಹಿತಿ...

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇ-ಕಾಮರ್ಸ್ ವಲಯ ಶರವೇಗದಲ್ಲಿ ಪ್ರಗತಿ ಕಾಣುತ್ತಿದೆ. ಇದರ ಜೊತೆಗೆ ಫಾರ್ವರ್ಡ್ ಹಾಗೂ ರಿವರ್ಸ್ ಲಾಜಿಸ್ಟಿಕ್ಸ್‍ನ ಅಗತ್ಯ ಕೂಡ ಹೆಚ್ಚಾಗಿದೆ. ನವೀಕರಿಸಿದ ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಗುರ್‍ಗಾಂವ್ ಮೂಲದ `ರಿಬೂಟ್', ಹಾಳಾದ ಸ್ಮಾರ್ಟ್‍ಫೋನ್‍ಗಳನ್ನು ಸಂಗ್ರಹಿಸಿ ಅವನ್ನೆಲ್ಲ ದುರಸ್ತಿ ಮಾಡಿ ಬಳಕೆದಾರರಿಗೆ ಮರಳಿಸುತ್ತಿರುವ ಇ-ಕಾಮರ್ಸ್ ವೇದಿಕೆ `ಜಸ್ಟ್ ಲೈಕ್ ನ್ಯೂ ಡಾಟ್ ಇನ್' ನಂತಹ ಸಂಸ್ಥೆಗಳು ಭಾರತದ ನವೀಕರಿಸಿದ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಗಳಿಸಿವೆ. ಅವು ನವೀಕರಿಸಿದ ವಿದ್ಯುತ್ ಉಪಕರಣಗಳನ್ನು ಕೂಡ ಮಾರಾಟ ಮಾಡುತ್ತಿವೆ. ಚಿಕಾಗೋ ಕ್ಯಾಪಿಟಲ್ ವೆಂಚರ್ಸ್ ಹಾಗೂ ಸಂಜಯ್ ಮೆಹ್ತಾರಿಂದ ಹಣಕಾಸಿನ ನೆರವು ಪಡೆದಿರುವ ಬ್ಲೂಬಿರ್ಚ್ ಕೂಡ ಭಾರತದ ನವೀಕರಿಸಿದ ಮಾರುಕಟ್ಟೆಯುಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲಿದೆ. ವಿದೇಶಗಳಲ್ಲಿ ಕೂಡ ತನ್ನ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲಿದೆ.

ಲೇಖಕರು: ಹರ್ಷಿತ್ ಮಲ್ಯ
ಅನುವಾದಕರು: ಭಾರತಿ ಭಟ್

Related Stories

Stories by YourStory Kannada