ಇಳಿ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಹೋದರಿಯರು

ಟೀಮ್​ ವೈ.ಎಸ್​. ಕನ್ನಡ

ಇಳಿ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಹೋದರಿಯರು

Friday August 12, 2016,

3 min Read

ಇದು ವಾರಣಾಸಿಯ ಇಬ್ಬರು ಸಹೋದರಿಯರ ಕಥೆ. ಇವರಿಬ್ಬರ ಸಾಧನೆಗೆ ವಯಸ್ಸು ಅಡ್ಡಿಯಾಗಲಿಲ್ಲ. ಸ್ಥೈರ್ಯ ಮತ್ತು ಧೈರ್ಯದ ಮುಂದೆ ಹೆಚ್ಚುತ್ತಿರುವ ವಯಸ್ಸು ಕೂಡ ಮಂಡಿಯೂರಿ ಕುಳಿತಿದೆ. ಜೀವನದ ಪ್ರತಿ ಕ್ಷಣವನ್ನು ಹೇಗೆ ಕಳೆಯಬೇಕೆಂಬುದಕ್ಕೆ ಇಬ್ಬರು ಸಹೋದರಿಯರು ಉತ್ತಮ ನಿದರ್ಶನ. ಸಾಮಾನ್ಯವಾಗಿ 50 ದಾಟುತ್ತಿದ್ದಂತೆ ಮನುಷ್ಯ ಉತ್ಸಾಹ ಕಳೆದುಕೊಳ್ಳುತ್ತಾ ಬರ್ತಾನೆ. 60ರ ಗಡಿ ದಾಟುತ್ತಿದ್ದಂತೆ ಎಲ್ಲ ಮುಗಿಯಿತು,ಇನ್ನೇನಿದ್ರೂ ಮೊಮ್ಮಕ್ಕಳ ಜೊತೆ ಆಡ್ತಾ,ದೇವರ ಧ್ಯಾನದಲ್ಲಿ ಕಾಲಕಳೆಯಬೇಕು ಎನ್ನುತ್ತಿರುತ್ತಾರೆ. ಎಲ್ಲ ಮುಗೀತು ಎನ್ನುವವರಿಗೆ ಇಳಿವಯಸ್ಸಿನ ಅರುಣಾ ಹಾಗೂ ಆಶಾ ಬೆಳಕಾಗಿ ನಿಲ್ಲುತ್ತಾರೆ. ಇವರ ಸಾಧನೆ ಕಥೆ ಕೇಳುವ ಮುನ್ನ ಅರುಣಾ ಹಾಗೂ ಆಶಾ ವಯಸ್ಸನ್ನು ಹೇಳುವುದು ಅತಿ ಮುಖ್ಯ. ಆಶಾ ವಯಸ್ಸು 68 ಹಾಗೂ ಅರುಣಾ ವಯಸ್ಸು 65. ಹಿರಿ ಜೀವಕ್ಕೆ ಬೇರೆಯವರ ಆಶ್ರಯ ಬೇಕು.ಆದ್ರೆ ಕೊನೆ ದಿನಗಳಲ್ಲೂ ಹೊಸ ಆಶಾಭಾವದೊಂದಿಗೆ ಶಿಖರವೇರುವ ಹಾದಿಯಲ್ಲಿ ನಡೆದಿದ್ದಾರೆ ಈ ಇಬ್ಬರು ಸಹೋದರಿಯರು.

image


ಹಿರಿ ಜೀವಗಳು ಹೋಂ ಸ್ಟೇ ಆರಂಭಿಸುವ ಮೂಲಕ ಈ ಇಬ್ಬರು ಸಹೋದರಿಯರು ವ್ಯಾಪಾರ ಆರಂಭಿಸುವ ಹೊಸ ಪೀಳಿಗೆಗೆ ದಾರಿ ದೀಪವಾಗಿದ್ದಾರೆ. ವ್ಯಾಪಾರ ಕೆಲವು ದಿನಗಳಲ್ಲಿ ಎತ್ತರಕ್ಕೆ ಮುಟ್ಟಿದೆ. ಇವರ ಹೋಂ ಸ್ಟೇ,ಸಹೋದರಿಯರಿಗೆ ಜೀವನಾಧಾರವಾಗುವ ಜೊತೆಗೆ ಅತಿಥಿಗಳಿಗೆ ಸಾಕಷ್ಟು ಸಂತೋಷ ನೀಡುವ ರೆಸಾರ್ಟ್ ಆಗಿದೆ. ಇವರು Granny's Inn ಹೆಸರಿನಲ್ಲಿ ಹೋಂ ಸ್ಟೇ ನಡೆಸುತ್ತಿದ್ದಾರೆ. ವಾಸ್ತವವಾಗಿ ದಾದಿ-ನಾನಿ ಮನೆ ಎಂದು ಇದರ ಅರ್ಥ. ಆದರೆ ಹೆಸರಿಗಿಂತ ಸಾಕಷ್ಟು ಭಿನ್ನವಾಗಿದೆ ಈ ಹೋಂ ಸ್ಟೇ. ಯುವರ್ ಸ್ಟೋರಿ ಜೊತೆ ಮಾತನಾಡಿದ ಆಶಾ ಹೀಗೆ ಹೇಳ್ತಾರೆ.

"ನಮ್ಮ ವಯಸ್ಸು ನಮಗೆ ಮಹತ್ವವಲ್ಲ.ಏಕಾಂಗಿತನ ಮತ್ತು ಏರುತ್ತಿರುವ ವಯಸ್ಸಿನ ಹತಾಶೆ ನಮ್ಮನ್ನು ಆವರಿಸಲು ನಾವು ಬಿಡಲಿಲ್ಲ. ನಮ್ಮಿಬ್ಬರಿಗೆ ಸಾಕಷ್ಟು ಆತ್ಮವಿಶ್ವಾಸವಿದೆ. ನಾವು ಆರಂಭಿಸಿರುವ ವ್ಯಾಪಾರವನ್ನು ಒಂದು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೇವೆ.’’

ಪ್ರತಿದಿನ ವಾರಣಾಸಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಅನೇಕರು ಹೊಟೇನಲ್ಲಿ ರೂಂ ಮಾಡಿ, ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ತಾರೆ. ಕೆಲವರು ವಿಶ್ರಾಂತಿಗಾಗಿ ಅತಿಥಿಗೃಹಕ್ಕೆ ಆಗಮಿಸ್ತಾರೆ. ಆದ್ರೆ ಈ ಸ್ಥಳಗಳಲ್ಲಿ ಶಾಂತಿ ಸಿಗುವುದಿಲ್ಲ. ಶಾಂತಿಯನ್ನು ಹುಡುಕುತ್ತ ವಾರಣಾಸಿಗೆ ಬರುವ ಪ್ರವಾಸಿಗರನ್ನು ಗುರುತಿಸಿದ್ರು ಈ ಇಬ್ಬರು ಸಹೋದರಿಯರು. ಇದನ್ನು ಪ್ಲಸ್ ಪಾಯಿಂಟ್ ಮಾಡಿಕೊಂಡ ಸಹೋದರಿಯರು ಹೋಂ ಸ್ಟೇ ಆರಂಭಿಸಿ,ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾದ್ರು. Granny's Inn ಹೆಸರಿನ ಹೋಂ ಸ್ಟೇ ಹೆಸರಿನಲ್ಲಿ ಅತಿಥಿಗಳಿಗಾಗಿ ಮನೆ ಬಾಗಿಲು ತೆರೆದ್ರು. ವೆಬ್ ಸೈಟ್ ಕೂಡ ಸಿದ್ಧಪಡಿಸಿದ್ದಾರೆ. ಇದರ ಮೂಲಕ ಬುಕ್ಕಿಂಗ್ ನಡೆಯುತ್ತದೆ. ಇಲ್ಲಿಗೆ ಹೋದ್ರೆ ನಮ್ಮ ಮನೆಗೆ ಹೋದ ಅನುಭವವಾಗುತ್ತದೆ. ಆಹಾರ-ನೀರು ಎಲ್ಲವನ್ನೂ ಇಲ್ಲಿ ಅಚ್ಚುಕಟ್ಟಾಗಿ ನೀಡಲಾಗುತ್ತದೆ. ಇಲ್ಲಿ ಬರುವವರು ಭಾರತೀಯ ಇರಲಿ,ವಿದೇಶಿ. ಎಲ್ಲರಿಗೂ ಅವರವರ ಮನೆಯ ವಾತಾವರಣ ಇಲ್ಲಿ ಸಿಗುವುದರಲ್ಲಿ ಎರಡು ಮಾತಿಲ್ಲ.ಮನೆಯ ಒಳಾಂಗಣ ಮತ್ತು ಇತರ ಸೌಲಭ್ಯಗಳು ಬಹಳ ಸರಳವಾಗಿದ್ದು,ಇದು ಪ್ರವಾಸಿಗರನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತಿದೆ.

image


ಬಿಹಾರದ ಮುಂಗೇರ್ ಜಿಲ್ಲೆಯ ನಿವಾಸಿಗಳಾದ ಆಶಾ ಮತ್ತು ಅರುಣಾ ಸೋದರ ಸಂಬಂಧಿ. ಅರುಣಾ ಏಕೈಕ ಪುತ್ರಿ ರಾಮಪುರದಲ್ಲಿ ವಾಸವಾಗಿದ್ದಾರೆ. ಪತಿಯ ಮರಣದ ನಂತರ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು ಅರುಣಾ. ಅವರಿಗೆ ಒಬ್ಬ ಮಗ ಹಾಗೂ ಮಗಳು. ಇಬ್ಬರೂ ಬೇರೆ ಊರಿನಲ್ಲಿ ತಮ್ಮ ಸಂಸಾರದ ಜೊತೆ ವಾಸವಾಗಿದ್ದಾರೆ. ಹಾಗೆ ಆಶಾಗೆ ಕೂಡ ಒಬ್ಬ ಮಗಳಿದ್ದು, ಗುರ್ಗಾಂವ್​ನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಾರೆ. ತಮ್ಮ ಜೀವನದ ಕೊನೆ ದಿನಗಳನ್ನು ಬನಾರಸ್ ನಲ್ಲಿ ಕಳೆಯುತ್ತಿದ್ದ ಸಹೋದರಿಯರಿಗೆ ಪ್ರವಾಸಿಗರ ಮೂಲ ಸಮಸ್ಯೆ ಅರ್ಥವಾಯ್ತು. ಆಗಲೇ ಹೋಂ ಸ್ಟೇ ಯೋಚನೆ ಹೊಳೆದಿದ್ದು. ಇವರಿಗೆ ಆಶಾ ಮಗಳು ಶಿಲ್ಪಿ ಹಾಗೂ ಅಳಿಯ ಮನೀಶ್ ಸಿನ್ಹಾ ನೆರವಾಗಿದ್ದಾರೆ. ಯುವರ್ ಸ್ಟೋರಿಗೆ ಆಶಾ ಹೀಗೆ ಹೇಳ್ತಾರೆ.

" Granny's Inn ಗೆ ಬರುವ ಅತಿಥಿಗಳನ್ನು ಮನೆಯ ಸದಸ್ಯರಂತೆ ನೋಡಲಾಗುತ್ತದೆ.ಪ್ರತಿಯೊಬ್ಬ ಸದಸ್ಯರಿಗೂ ಮನೆಯ ವಾತಾವರಣ ಸಿಗುತ್ತದೆ. ಮನೆಯವರ ಜೊತೆಯೇ ಇರುವ ಅನುಭವ ಅವರಿಗಾಗುವುದರಿಂದ ಸಮಯ ಕಳೆದಿದ್ದೇ ತಿಳಿಯುವುದಿಲ್ಲ"

ಆರು ಕೊಠಡಿಯಿರುವ ಈ ಹೋಮ್ ಸ್ಟೇಗೆ ಬೇಡಿಕೆ ಸಾಕಷ್ಟಿದೆ. ಸೆಪ್ಟೆಂಬರ್ ವರೆಗಿನ ರೂಂ ಬುಕ್ಕಿಂಗ್ ಮಾರ್ಚ್ ನಲ್ಲಿಯೇ ಆಗಿದೆ. ಇವುಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಜಾಸ್ತಿ ಇದೆ. ಒಂದು ಹಾಸಿಗೆಯ ಕೊಠಡಿಯಿಂದ ಐದು ಹಾಸಿಗೆಯುಳ್ಳ ರೂಂ ಇಲ್ಲಿದೆ. ಎರಡು ಸಾವಿರ, ಮೂರು ಸಾವಿರ ರೂಪಾಯಿ ಬಾಡಿಗೆ ಇದೆ. ಬೆಳಗಿನ ಉಪಹಾರವನ್ನು ಉಚಿತವಾಗಿ ನೀಡಲಾಗುತ್ತದೆ. ಹೋಂ ಸ್ಟೇನಲ್ಲಿ ಪ್ರತಿಯೊಂದು ಸೌಲಭ್ಯಗಳ ಬಗ್ಗೆಯೂ ವಿಶೇಷ ಕಾಳಜಿವಹಿಸಲಾಗುತ್ತದೆ.

image


ಪ್ರಸ್ತುತ ಐದು ನೌಕರರು ಈ ಹೋಂ ಸ್ಟೇನಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರಣಾಸಿ ಹೊರತುಪಡಿಸಿ ಪ್ರವಾಸಿಗರ ಸಂಖ್ಯೆ ಜಾಸ್ತಿ ಇರುವ ಬೇರೆ ನಗರಗಳಲ್ಲೂ ಆಶಾ ಹಾಗೂ ಅರುಣಾ ಹೋಂ ಸ್ಟೇ ಆರಂಭಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ಸಾಧನೆ ಹಾಗೂ ಗುರಿ ತಲುಪಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಈ ಸಹೋದರಿಯರು ತೋರಿಸಿದ್ದಾರೆ. 

ಇದನ್ನು ಓದಿ:

1. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

2. ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ

3. ಸಿಲಿಕಾನ್​ ಸಿಟಿಯಲ್ಲಿ ಇದೇ"ಕಥೆ ಅಲ್ಲ ಜೀವನ"..!