‘ಡಯಲ್ ಎ ಬ್ಯಾಂಕ್’ - ಬ್ಯಾಂಕ್ ವ್ಯವಹಾರ ಬಲು ಈಸಿ..

ಟೀಮ್​ ವೈ.ಎಸ್​. ಕನ್ನಡ

‘ಡಯಲ್ ಎ ಬ್ಯಾಂಕ್’ - ಬ್ಯಾಂಕ್ ವ್ಯವಹಾರ ಬಲು ಈಸಿ..

Tuesday November 24, 2015,

4 min Read

ಮ್ಯೂಚುವಲ್ ಫಂಡ್ ಬಗ್ಗೆ ನಿಮಗೆಷ್ಟು ಗೊತ್ತು?

image


ಮ್ಯೂಚುವಲ್ ಫಂಡ್ ಹೂಡಿಕೆ ಎಂದರೆ ಮಾರುಕಟ್ಟೆಯ ಷೇರುಗಳ ಮೇಲೆ ಅವಲಂಬಿತವಾದದ್ದು. ಇಲ್ಲಿ ಹೂಡಿಕೆ ಮಾಡುವ ಮೊದಲು ಎಲ್ಲವನ್ನೂ ಎಚ್ಚರಿಕೆಯಿಂದ ಪರಿಶೀಲಿಸಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಬಗ್ಗೆ ನಿಮಗಿಷ್ಟೇ ಗೊತ್ತಿದ್ರೆ ಅದು ನಿಮ್ಮ ತಪ್ಪಲ್ಲ. ಯಾಕಂದ್ರೆ ಆರ್ಥಿಕ ಮತ್ತು ಹಣಕಾಸಿನ ವ್ಯವಹಾರಗಳು ಮ್ಯೂಚುವಲ್ ಫಂಡ್ ಎಂದರೆ ಇಷ್ಟೇ ಎಂಬುದಾಗಿ ನಿರ್ದೇಶಿಸಿಬಿಟ್ಟಿವೆ. 

ಉದ್ಯಮಿಗಳು ಯಾವತ್ತೂ ಲಾಭ, ನಷ್ಟಗಳ ಲೆಕ್ಕಾಚಾರದಲ್ಲಿಯೇ ಇರುತ್ತಾರೆ. ಕಷ್ಟದ ಸಮಯದಲ್ಲಿ ಅನುಕೂಲವಾಗಲೆಂದು ಜೀವ ವಿಮೆ ಅಥವಾ ಆರೋಗ್ಯ ವಿಮೆಯಂತಹ ಭದ್ರತೆಯನ್ನು ಮಾಡಿಡುವುದು ತುಂಬಾ ವಿರಳ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಲಭ್ಯವಿರುವ ಎಲ್ಲಾ ಪಾಲಿಸಿ, ಯೋಜನೆಗಳನ್ನು ಪರಿಶೀಲಿಸಿ ಅಗತ್ಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಷ್ಟು ಸಮಯ ಉದ್ಯಮಿಗೆ ಇರುವುದಿಲ್ಲ. ಇನ್ನು ಈ ಪಾಲಿಸಿಗಳ ಕುರಿತು ವಿಚಾರಿಸಿದರೆ ಎಲ್ಲಾ ಬ್ಯಾಂಕುಗಳು ಕೂಡಾ ನಮ್ಮ ಬ್ಯಾಂಕ್ ಇತರ ಬ್ಯಾಂಕ್​ಗಳಿಗಿಂತ ಉತ್ತಮ ಸೇವೆಯನ್ನು ನಿಮಗೆ ಒದಗಿಸುತ್ತವೆ ಅಂತ ಹೊಗಳಿಕೊಳ್ತಾರೆ. ವಾಸ್ತವ ಏನಿದೆಯೋ ಅದನ್ನು ಮರೆಮಾಚಲು ಯತ್ನಿಸುತ್ತಾರೆ. ಹೀಗಿರುವಾಗ ಯಾವುದೇ ಬ್ಯಾಂಕ್ ನೀಡುವ ಮಾಹಿತಿಯನ್ನು ಯಥಾವತ್ತಾಗಿ ನಂಬುವುದು ಕಷ್ಟ.

ಅಷ್ಟೇ ಅಲ್ಲ ಉದ್ಯಮಿಗಳು ಕೂಡಾ ಹಣವನ್ನು ಮತ್ತೆಲ್ಲಿ ಹೂಡಿಕೆ ಮಾಡಿ ಹಣ ಪಡೆಯುವುದು ಎಂದು ಯೋಚಿಸುತ್ತಾರೆಯೇ ಹೊರತು ಈ ವಿಮೆ, ಯೋಜನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಉದ್ಯಮದ ಹೊರತಾಗಿ ಮತ್ತೆಲ್ಲಾದ್ರೂ ನಿಮ್ಮ ಹಣವನ್ನು ಹೂಡಿಕೆ ಮಾಡಿ ಎಂಬುದಾಗಿ ಉದ್ಯಮಿಯ ಮನವೊಲಿಸುವುದೂ ಕೂಡಾ ಕಷ್ಟದ ವಿಚಾರ. ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗದೆ ಉದ್ಯಮಿ ಗೊಂದಲಗೊಳಕ್ಕಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಉದ್ಯಮಿಗಳು ಸೇರಿದಂತೆ ಎಲ್ಲರ ಬ್ಯಾಂಕ್ ವ್ಯವಹಾರಗಳಿಗೆ ಸಮರ್ಪಕ ಮಾಹಿತಿ ನೀಡಲು ‘ಡಯಲ್ ಎ ಬ್ಯಾಂಕ್’ ಸಿದ್ಧಗೊಂಡಿದೆ. ಇದು ನಿಮಗೆ ಅಗತ್ಯವಿರುವ ಬ್ಯಾಂಕ್ ವ್ಯವಹಾರಗಳು, ವಿಮೆ ಮತ್ತು ಇತರ ಮಾಹಿತಿಯನ್ನು ಕ್ಷಣಾರ್ಧದಲ್ಲಿಯೇ ವ್ಯಕ್ತಿಯ ಮುಂದಿಡುತ್ತದೆ.

‘ಡಯಲ್ ಎ ಬ್ಯಾಂಕ್’ ಭಾರತದ ಪ್ರಪ್ರಥಮ ಹಣಕಾಸು ವ್ಯವಹಾರದ ಸಹಾಯವಾಣಿ. ಈ ಸಂಸ್ಥೆ ಸುಮಾರು 90 ಬ್ಯಾಂಕ್​ಗಳು, 40 ಮ್ಯೂಚುವಲ್ ಫಂಡ್ ಮತ್ತು 20 ಇನ್ಶೂರೆನ್ಸ್ ಕಂಪೆನಿಗಳೊಂದಿಗೆ ಕೈ ಜೋಡಿಸಿದೆ. ಇದು ಉದ್ಯಮಿಗೆ ಅಗತ್ಯವಾದ ಮ್ಯೂಚುವಲ್ ಫಂಡ್, ಲೋನ್, ಅಥವಾ ಇತರ ಯಾವುದೇ ರೀತಿಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಮಾಹಿತಿ ನೀಡುತ್ತದೆ.

ಸಹಾಯವಾಣಿ ಸಂಖ್ಯೆ- 60011600 ಕರೆ ಮಾಡಿದಲ್ಲಿ ಎಲ್ಲಾ ರೀತಿಯ ಯೋಜನೆಯ ಮಾಹಿತಿಗಳು ಲಭ್ಯವಾಗುತ್ತವೆ. ಸದ್ಯ ಈ ಹೆಲ್ಪ್​ಲೈನ್​ ನಂಬರ್ ಸುಮಾರು 18 ನಗರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಡಯಲ್ ಎ ಬ್ಯಾಂಕ್​ನ ಈ ನಂಬರ್​ಗೆ ಡಯಲ್ ಮಾಡಿದಲ್ಲಿ ಬ್ಯಾಂಕ್​ಗೆ ಸಂಬಂಧಿಸಿದ ಯಾವುದೇ ರೀತಿಯ ಸೇವೆಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಅಗತ್ಯವವಿರುವ ಬ್ಯಾಂಕ್ ಹೂಡಿಕೆ, ಸಾಲ ಸೌಲಭ್ಯ ಯೋಜನೆಯ ಬಗ್ಗೆ ವಿವರವಾದ ಮಾಹಿತಿಯನ್ನು ಈ ಸಂಸ್ಥೆ ನೀಡುತ್ತದೆ

ಗೌರವ್ ಖುರಾನಾಗೆ ಈಗಾಗ್ಲೇ ಹಲವು ಹೆಸರುವಾಸಿ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಿಟಿ ಬ್ಯಾಂಕ್ ಸೇರಿದಂತೆ ಹಲವು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಗೌರವ್ ಕಾರ್ಯ ನಿರ್ವಹಿಸಿದ್ದಾರೆ. 2011ರಲ್ಲಿ ಗೌರವ್ ಡಯಲ್ ಎ ಬ್ಯಾಂಕ್ ಸೇವೆಯನ್ನು ಆರಂಭಿಸಿದ್ರು. ಬ್ಯಾಂಕ್ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದಿದ್ದರೂ ಹಲವು ಮಧ್ಯವರ್ತಿಗಳು ಹೂಡಿಕೆ, ಸಾಲ, ಕೊಡಿಸುವುದರಲ್ಲಿ ತೊಡಗಿರುವುದನ್ನು ಗಮನಿಸಿದ ಗೌರವ್ ಈ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕೆನ್ನುವ ಉದ್ದೇಶದಿಂದ ‘ಡಯಲ್ ಎ ಬ್ಯಾಂಕ್’ ಆರಂಭಿಸಿದ್ರು.

ಭಾರತದಲ್ಲಿ ಜೆರಾಕ್ಸ್ ಕಂಪೆನಿಯ ಮೂಲಕ ಗೌರವ್ ತಮ್ಮ ವೃತ್ತಿ ಜೀವನ ಆರಂಭಿಸಿದ್ರು. ಬಳಿಕ ಚಂಡೀಗಢದಲ್ಲಿ ಆರಂಭವಾದ ಸಿಟಿ ಬ್ಯಾಂಕ್ ಶಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ರು. ಕಿರಿಯ ವಯಸ್ಸಿನಲ್ಲಿ ಹಿರಿಯ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಗೆ ಗೌರವ್ ಖುರಾನಾ ಅವ್ರದ್ದು. ತಮ್ಮ 30ನೇ ವಯಸ್ಸಿನಲ್ಲಿಯೇ ಗೌರವ್ ಸಿಟಿ ಬ್ಯಾಂಕ್​ನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ರು.

‘ಡಯಲ್ ಎ ಬ್ಯಾಂಕ್’ ಸ್ಥಾಪನೆಗೆ ಆರಂಭದಲ್ಲಿ ಎದುರಾದ ಸವಾಲುಗಳು

image


ಗೌರವ್ ಖುರಾನಾ ಬ್ಯಾಂಕ್ ಸೇವೆಯನ್ನು ಪರಿಚಯಿಸುವ ಡಯಲ್ ಎ ಬ್ಯಾಂಕ್ ಅನ್ನು ಕಾರ್ಯರೂಪಕ್ಕೆ ತರಲೇನೋ ನಿರ್ಧರಿಸಿದ್ರು. ಆದ್ರೆ ಈ ಉದ್ಯಮಕ್ಕೆ ಹಲವು ಅಡೆತಡೆಗಳು ಎದುರಾದವು. ಕೇವಲ ವಾಯ್ಸ್ ಬೇಸ್​ ಆಧಾರದಲ್ಲಿ ಎಲ್ಲಾ ಮಾಹಿತಿಯನ್ನ ಸವಿವರವಾಗಿ ಒದಗಿಸುವುದು ಕಷ್ಟವಾಗಿತ್ತು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ವಿವಿಧ ನಗರಗಳಲ್ಲಿ ‘ಡಯಲ್ ಎ ಬ್ಯಾಂಕ್’ನ ಘಟಕಗಳನ್ನು ಆರಂಭಿಸಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಅಲ್ಲದೆ ವಿವಿಧ ಬ್ಯಾಂಕ್​ಗಳ ಜೊತೆ ಪಾಲುದಾರಿಕೆ ಪಡೆಯುವುದು ಕೂಡಾ ಅಷ್ಟು ಸುಲಭವಾಗಿರಲಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸೋಕೆ ಗೌರವ್ ಕೂಡಾ ಸಿದ್ಧವಾಗಿದ್ರು. ಸೋಲುಗಳನ್ನೇ ಗೆಲುವಿನ ಮೆಟ್ಟಿಲನ್ನಾಗಿಸಲು ಅಣಿಯಾಗಿದ್ರು. ಮನಸ್ಸಿನಲ್ಲಿರುವ ಭೀತಿಯನ್ನು ಬಿಟ್ಟು ಸ್ವಂತ ಉದ್ಯಮವನ್ನು ಮಾಡಲು ಹೊರಟರೆ ಸೋಲು, ಗೆಲುವು ಎರಡಲ್ಲೂ ಖುಷಿ ಕಾದಿರುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಮನಸ್ಸಿನಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು. ಆಗ ಎಲ್ಲಾ ದಾರಿಗಳು ಸುಲಭವಾಗಿ ಗೋಚರಿಸುತ್ತವೆ ಅಂತಾರೆ ಗೌರವ್.

ಸ್ಪರ್ಧೆ...

‘ಡಯಲ್ ಎ ಬ್ಯಾಂಕ್’ ಯೋಜನೆಗೆ ಗೌರವ್ ಎಲ್ಲಾ ರೀತಿಯ ರೂಪುರೇಷೆ ಸಿದ್ಧಪಡಿಸಿದ್ರು. ಆದ್ರೆ ಇವರ ಈ ಸಂಸ್ಥೆ ಜನರನ್ನು ತಲುಪುವುದು ಅಷ್ಟು ಸುಲಭವಾಗಿರಲಿಲ್ಲ. ಇದೇ ರೀತಿಯ ಸೇವೆಯನ್ನು ಜನರಿಗೆ ನೀಡುವ ಬ್ಯಾಂಕ್ ಬಜಾರ್ ಡಾಟ್ ಕಾಮ್, ಪಾಲಿಸಿ ಬಜಾರ್ ಡಾಟ್ ಕಾಮ್, ಅಪ್ನಾ ಪೈಸಾ ಡಾಟ್ ಕಾಮ್, ಇನ್ಶೂರೆನ್ಸ್​ ಪಂಡಿತ್​ ಡಾಟ್ ಕಾಮ್ ಮೊದಲಾದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದ್ರೆ ಈ ಸಂಸ್ಥೆಗಳ್ಯಾವುವೂ ವಾಯ್ಸ್ ಬೇಸ್ಡ್​ ಅಂದ್ರೆ ಧ್ವನಿಯಾದಾರಿತ ಸೇವೆಯನ್ನು ನೀಡಿರಲಿಲ್ಲ. ಹೀಗಾಗಿ ‘ಡಯಲ್ ಎ ಬ್ಯಾಂಕ್’ಗೆ ಹೆಚ್ಚಿನ ಅವಕಾಶಗಳಿತ್ತು.

‘ಡಯಲ್ ಎ ಬ್ಯಾಂಕ್’ನಲ್ಲಿ ಜನರು ಸುಲಭವಾಗಿ ಕಾರ್ಯನಿರ್ವಾಹಕರನ್ನು ತಲುಪಲು ಇನ್ನಷ್ಟು ಸಹಕಾರಿಯಾಯ್ತು. ಧ್ವನಿಯಾದಾರಿತ ಸೇವೆ ಲಭ್ಯವಿರೋ ಕಾರಣ ಜನರು ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು, ಅನುಮಾನಗಳನ್ನು ಪರಿಹರಿಸಿಕೊಳ್ಳಲು ಸುಲಭವಾಯ್ತು. ಪೋರ್ಟಲ್ ಅಥವಾ ಚಾಟ್ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತಲೂ ಉತ್ತಮವಾದ ಸೇವೆಯನ್ನು ‘ಡಯಲ್ ಎ ಬ್ಯಾಂಕ್’ ನೀಡಿತು.

ಡಯಲ್ ಎ ಬ್ಯಾಂಕ್​ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದಕ್ಕೆ ಖುಷಿಯಾದ ಗೌರವ್, ‘ಸ್ಪರ್ಧಾತ್ಮಕ ಮನೋಭಾವ ಕೆಲಸದಲ್ಲಿ ನಿಮ್ಮ ಆಸಕ್ತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ. ಮತ್ತಷ್ಟು ಶ್ರಮ ವಹಿಸಿ ಶ್ರದ್ಧೆ, ಆಸಕ್ತಿಯಿಂದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ನಮಗೆ ಕಠಿಣವಾದ ಸ್ಪರ್ಧಿಗಳು ಇದ್ದ ಕಾರಣ ನಮ್ಮ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆವು. ಇದು ಡಯಲ್ ಎ ಬ್ಯಾಂಕ್ ಸೇವೆಯನ್ನು ಜನಪರವಾಗಿ ಮಾಡಲು ಸಹಕಾರಿಯಾಯ್ತು’ ಅಂತಾರೆ ಗೌರವ್.

ಕಳೆದ ಎರಡು ವರ್ಷದಿಂದ ‘ಡಯಲ್ ಎ ಬ್ಯಾಂಕ್ ಸಂಸ್ಥೆ’ ಹಲವಾರು ಗ್ರಾಹಕರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿದೆ. ಸುಮಾರು 180 ಸಾವಿರ ಗ್ರಾಹಕರು ‘ಡಯಲ್ ಎ ಬ್ಯಾಂಕ್’ನ ಸೇವೆ ಪಡೆಯುತ್ತಿದ್ದಾರೆ. ಪ್ರತಿದಿನಕ್ಕೆ ಸುಮಾರು 3200 ಜನರು ಮಾಹಿತಿ ಕೋರಿ ಕರೆ ಮಾಡುತ್ತಿದ್ದಾರೆ.

ಉದ್ಯಮದಲ್ಲಿ ಗೌರವ್​ಗೆ ನೆರವಾದ ಪಾಠಗಳು

- ಉದ್ಯಮದಲ್ಲಿ ಸಹನೆ ಅತ್ಯಂತ ಅಗತ್ಯ

- ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವುದು

- ಪ್ರತಿದಿನವೂ ಹಿಂದಿನ ದಿನಕ್ಕಿಂತಲೂ ಹೆಚ್ಚಿನ ಹುರುಪಿನೊಂದಿಗೆ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುವುದು

- ನೀವು ಯಾವುದನ್ನು ಕೊಡಬೇಕೆಂದು ಅಂದುಕೊಂಡಿದ್ದೀರೋ ಅದನ್ನು ಗ್ರಾಹರಿಗೆ ಕೊಡಬೇಡಿ. ಅವರು ಏನನ್ನು ನಿರೀಕ್ಷಿಸುತ್ತಾರೋ ಅದನ್ನು ನೀಡಿ.

ಡಯಲ್ ಎ ಬ್ಯಾಂಕ್ ಉದ್ಯಮದಲ್ಲಿ ಬೆಳೆಯಲು ಸಹಾಯಕವಾದ ವಿಚಾರಗಳನ್ನು ಗೌರವ್ ಹಂಚಿಕೊಂಡಿದ್ದಾರೆ. 

‘ಡಯಲ್ ಎ ಬ್ಯಾಂಕ್’ ಗ್ರಾಹಕರಿಗೆ ಬ್ಯಾಂಕರ್​ಗಳ ನಡುವಿನ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಡುತ್ತದೆ. ಗ್ರಾಹಕರಿಗೆ ಬ್ಲೂಚಿಪ್ ಹಾಗೂ ಡಿಸ್ಕವರಿ ಫಂಡ್ಸ್, ಜೀವವಿಮೆ, ಯೂಲಿಪ್ ಪ್ಲಾನ್​ ಆಫರ್ ಮೊದಲಾದವುಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯಿರುವುದಿಲ್ಲ. ಡಯಲ್ ಎ ಬ್ಯಾಂಕ್ ಸಂಸ್ಥೆ ಇವೆಲ್ಲದರ ಕುರಿತು ಮಾಹಿತಿ ನೀಡುತ್ತದೆ. ಸಂಸ್ಥೆ ಸದ್ಯದ ಮಾರುಕಟ್ಟೆ ಹಾಗೂ ಸೂಕ್ತ ಬ್ಯಾಂಕ್​ಗಳ ಆಯ್ಕೆಗೆ ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ‘ಡಯಲ್ ಎ ಬ್ಯಾಂಕ್’ ಬಳಕೆದಾರರ ಸ್ನೇಹಿಯಾಗಿ ಪರಿಣಮಿಸಿದೆ.

ಲೇಖಕರು : ಆದಿತ್ಯ ಭೂಷಣ್​ ದ್ವಿವೇದಿ

ಅನುವಾದಕರು : ವಿನುತಾ