ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

ಟೀಮ್​ ವೈ.ಎಸ್​. ಕನ್ನಡ

28

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಕೆ ಬೆಳೆ ಸಖತ್ ಫೇಮಸ್. ಕಮರ್ಷಿಯಲ್ ಬೆಳೆಗಳ ಪೈಕಿ ದಶಕಗಳಿಂದಲೂ ಅಡಕೆಗೆ ಅಗ್ರಸ್ಥಾನ. ವಿದೇಶಗಳಿಗೆ ರಫ್ತಾಗುವ ಅಡಕೆ, ಭಾರತದಲ್ಲೂ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳ ಮಣ್ಣು ಅಡಕೆ ಬೆಳೆಗೆ ಸೂಕ್ತವಾದ ವಾತಾವರಣವನ್ನು ಒದಗಿಸಿಕೊಡುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಯುವ ಜೊತೆಗೆ ಅದರ ಕೊಯ್ಲು ಮಾಡುವುದೇ ದೊಡ್ಡ ಸವಾಲಾಗಿ ಬದಲಾಗಿದೆ. ಕೆಲಸಕ್ಕೆ ಜನ ಸಿಗುತ್ತಿಲ್ಲ. ಅಡಕೆ ಕೊಯ್ಲು ಮಾಡಲು ಮರ ಏರುವ ವ್ಯಕ್ತಿಗಳು ಕೆಲಸಕ್ಕೆ ಬರುತ್ತಿಲ್ಲ. ಅಷ್ಟೇ ಅಲ್ಲ ಅತಿಯಾದ ಬಿಸಿಲು ಮತ್ತು ಹಲವು ರೋಗಗಳನ್ನು ಅಡಕೆ ಬೆಳೆಗಾರರನ್ನು ಕಾಡುತ್ತಿದೆ. ಆದ್ರೆ ಇನ್ನುಮುಂದೆ ಅಡಕೆ ಕೊಯ್ಲು ಮಾಡಲು ಕಾರ್ಮಿಕರು ಇಲ್ಲ ಅನ್ನುವ ಬಗ್ಗೆ ಟೆನ್ಷನ್ ಬೇಡ. ಅಡಕೆ ಮರಹತ್ತಿ ಗೊನೆ ಕೊಯ್ಲು ಮಾಡಲು ಕೆಲಸಗಾರಿರಲ್ಲ ಅನ್ನುವ ಚಿಂತೆಯನ್ನು ದೂರ ಮಾಡುವ ಕಾಲ ಬಂದಿದೆ. ಅಡಕೆ ಗೊನೆ ಕೊಯ್ಲು ಮಾಡಲೆಂದೇ ಯಂತ್ರವೊಂದನ್ನು ಆವಿಷ್ಕಾರ ಮಾಡಲಾಗಿದೆ.

ಅಡಕೆ ಕೊಯ್ಲು ಮಾಡಲು ಆವಿಷ್ಕಾರವಾಗಿರುವ ಯಂತ್ರದ ಹೆಸರು ಬೀಟಲ್​ನಟ್​ ರ್ಯಾಪರ್ (Betelnut  Raper). ಈ ಯಂತ್ರವನ್ನು ಅಭಿವೃದ್ಧಿ ಮಾಡಿದ್ದು ಮಂಗಳೂರು ಮೂಲದ ಶೆರ್ವಿನ್ ಕೆ ಮೊಬಿನ್. ಸದ್ಯ ಶಿವಮೊಗ್ಗದ ಗಾಜನೂರು ಗ್ರಾಮದಲ್ಲಿ ಕುಟುಂಬದ ಜೊತೆಗಿರುವ ಶೆರ್ವಿನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರ. ಕಾಲೇಜು ಸಮಯದಲ್ಲೇ ನೀರಿನ ಮೂಲಕ ಚಲಿಸುವ ಕಾರ್ ಅನ್ನು ಆವಿಷ್ಕಾರ ಮಾಡಿದ್ದ ಶೆರ್ವಿನ್ ಖಾಸಗಿ ಕಂಪನಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದರು. ಆದ್ರೆ ಮನೆಯಲ್ಲಿದ್ದ 20 ಎಕರೆ ಅಡಿಕೆ ತೋಟದಲ್ಲಿ ಚೆನ್ನಾಗಿ ಬೆಳೆ ಬರುತ್ತಿದ್ದರೂ ಕೊಯ್ಲು ಮಾಡಲು ಕಾರ್ಮಿಕರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಹಂತದಲ್ಲಿ ಅಡಿಕೆ ಬೆಳೆ ಕೊಯ್ಲು ಮಾಡಲು ಏನಾದ್ರೂ ಬೇರೆ ವ್ಯವಸ್ಥೆ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದಾಗ ಹುಟ್ಟಿಕೊಂಡಿದ್ದೇ ಈ ಐಡಿಯಾ.

“ ನಮಗೆ 20 ಎಕರೆ ಅಡಿಕೆ ತೋಟವಿದೆ. ಆದ್ರೆ ಅಡಕೆ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿರಲಿಲ್ಲ. ಇದಕ್ಕೆ ಪರಿಹಾರ ಹುಡುಕಲು ನಾನು ಪ್ರಯತ್ನ ಪಟ್ಟೆ. ನನ್ನ ಶ್ರಮದ ಮೂಲಕ ಈ ಯಂತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಅಡಕೆ ಕೊಯ್ಲು ಈಗ ಸುಲಭವಾಗಿ ನಡೆಯುತ್ತಿದೆ. ”
- ಶೆರ್ವಿನ್, ಯಂತ್ರ ಕಂಡುಹಿಡಿದವರು

ಯಂತ್ರ ಹೇಗೆ ಕೆಲಸ ಮಾಡುತ್ತದೆ…?

ಅಡಕೆ ಕೊಯ್ಲಿಗೆ ಬಳಸುವ ಯಂತ್ರಕ್ಕೆ 52 ಸಿಸಿ ಅಥವಾ 2 ಬಿಎಚ್​ಪಿ ಎಂಜಿನ್ ಅಳವಡಿಸಲಾಗಿದೆ. ಈ ಯಂತ್ರಕ್ಕೆ ಎರಡು ಚಕ್ರಗಳಿದ್ದು ಅಡಕೆ ಮರವನ್ನು ಹತ್ತಲು ಇದು ಸಹಾಯ ಮಾಡುತ್ತದೆ. ಯಂತ್ರದ ಮುಂಭಾಗದಲ್ಲಿ ಬ್ಲೇಡ್ ಅಳವಡಿಸಲಾಗಿದ್ದು ಇದು ಗೊನೆ ಕತ್ತರಿಸಲು ಸಹಾಯ ಮಾಡುತ್ತದೆ. ಯಂತ್ರದ ಗಾಲಿಗಳನ್ನು ಮರಕ್ಕೆ ಅಪ್ಪಿಕೊಳ್ಳುವಂತೆ ಮಾಡಿ ಹಗ್ಗ ಎಳೆದರೆ ಸಾಕು, ಅದು ಮೇಲಕ್ಕೆ ಹತ್ತುತ್ತದೆ. ಅಲ್ಲಿ ಅಡಕೆ ಗೊನೆಗಳನ್ನು ತುಂಡರಿಸುತ್ತದೆ. ಹಗ್ಗದ ಮೂಲಕ ಆ ಗೊನೆಗಳನ್ನು ಬದಿಗೆ ಸರಿಸಬಹುದು. ಅಡಕೆ ಮರದಲ್ಲಿ ಎಲ್ಲಾ ಗೊನೆಗಳನ್ನು ಕತ್ತರಿಸಿದ ಮೇಲೆ ಹಗ್ಗವನ್ನು ಸಡಿಲಿಸಿ, ಯಂತ್ರವನ್ನು ಕೆಳಗಿಳಿಸಿಕೊಳ್ಳಬಹುದು. ಈ ಮೂಲಕ ಅಡಕೆ ಕಟಾವಿಗೆ ತಾಂತ್ರಿಕ ಸ್ಪರ್ಷವನ್ನು ನೀಡಲಾಗುತ್ತಿದೆ.

ಎಷ್ಟಾಗುತ್ತದೆ ಖರ್ಚು..?

ಬೀಟಲ್​ನಟ್ ರ್ಯಾಪರ್ ಯಂತ್ರ ಕೈಗೆಟಕುವ ದರದಲ್ಲಿ ಸಿದ್ಧವಾಗುತ್ತದೆ. ಒಂದು ಯಂತ್ರಕ್ಕೆ ಸುಮಾರು 62,000 ರೂಪಾಯಿ ಖರ್ಚು ಬೀಳುತ್ತದೆ. ಈ ಯಂತ್ರದ ಮೂಲಕ ಸಾಕಷ್ಟು ಉಪಯೋಗಗಳನ್ನು ಕೂಡ ಪಡೆದುಕೊಳ್ಳಬಹುದು. ಒಂದು ನಿಮಿಷಕ್ಕೆ ಒಂದು ಮರದ ಕೊಯ್ಲು ಮುಗಿಸುವ ಈ ಯಂತ್ರ ಗಂಟೆಗೆ 60 ಉದ್ದನೆಯ ಮರಗಳನ್ನು ಏರಬಲ್ಲದು. ಮರ ಚಿಕ್ಕದಾಗಿದ್ದರೆ ಗಂಟೆಗೆ ಮತ್ತಷ್ಟು ಹೆಚ್ಚು ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಚಾಲಿತ ಈ ಯಂತ್ರ ಒಂದು ಲೀಟರ್ ಪೆಟ್ರೋಲ್​ಗೆ 200 ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ.

ಕೆಲಸಕ್ಕೆ ಜನ ಇಲ್ಲದೇ ಇದ್ದಾಗ ಹುಟ್ಟಿಕೊಂಡ ಐಡಿಯಾ

ಇತ್ತೀಚಿನ ದಿನಗಳಲ್ಲಿ ಅಡಕೆ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕಿದ್ರೂ ಸರಿಯಾದ ಸಮಯಕ್ಕೆ ಅವರು ಕೆಲಸಕ್ಕೆ ಹಾಜಾರಾಗುವುದಿಲ್ಲ. ಅಷ್ಟೇ ಅಲ್ಲ ಕೆಲಸಗಾರರು ಬರುವ ವೇಳೆಯಲ್ಲಿ ನಮ್ಮ ಕೆಲಸವೂ ಹಾಳಾಗುತ್ತದೆ. ಕೆಲವೊಮ್ಮೆ ಹೇಳಿದ ದಿನ ಅವರು ಬರುವುದಿಲ್ಲ. ಇಂತಹ ಸಮಸ್ಯೆಗಳಿಗೆಲ್ಲಾ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿ ಅಡಕೆ ಕೊಯ್ಯುವ ಯಂತ್ರದ ಆವಿಷ್ಕಾರವಾಗಿದೆ. ಈ ಮೂಲಕ ಅಡಕೆ ಬೆಳೆಯುವ ಪ್ರದೇಶದ ಜನರ ಕಷ್ಟಗಳಿಗೆ ನೆರವಾಗಬಲ್ಲ ಯಂತ್ರವನ್ನು ಕಂಡುಹಿಡಿಯಲಾಗಿದೆ.

ಇದನ್ನು ಓದಿ: ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

ಅಪಾಯ ತಪ್ಪಿಸಲು ಸಹಕಾರಿ

ಅಡಕೆ ಮರ ಹತ್ತುವ ಯಂತ್ರ ಬಳಸುವುದರಿಂದ ಸಾಕಷ್ಟು ಅಪಾಯಗಳಿಂದ ಕಾರ್ಮಿಕರು ಬಚಾವ್ ಮಾಡಬಹುದು. ಅಡಕೆ ಮರಗಳು ಸಾಮಾನ್ಯವಾಗಿ ಎತ್ತರಕ್ಕೆ ಬೆಳೆದಿರುತ್ತವೆ. ಅದಕ್ಕೆ ಹತ್ತುವ ಕೂಲಿ ಕಾರ್ಮಿಕರು ಒಂಚೂರು ಆಯ ತಪ್ಪಿದ್ರೂ ನೆಲಕ್ಕೆ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಮರಗಳು ಕಾರ್ಮಿಕರು ಹತ್ತುವ ವೇಳೆಯಲ್ಲಿ ಮುರಿದು ಬಿದ್ದು ಅಪಾಯ ಎದುರಾಗುತ್ತದೆ. ಆದ್ರೆ ಅಡಕೆ ಕೊಯ್ಲು ಯಂತ್ರವನ್ನು ಬಳಸಿದರೆ ಅಪಾಯ ಎದುರಾಗುವುದನ್ನು ತಕ್ಕಮಟ್ಟಿಗೆ ಬಳಸಿಕೊಳ್ಳಬಹುದು.

ಉಳಿತಾಯ ಎಷ್ಟು..?

ಇಷ್ಟೆಲ್ಲಾ ಲಾಭವಿರುವ ಅಡಕೆ ಕೊಯ್ಲು ಯಂತ್ರ ಆಪರೇಷನ್ ವೆಚ್ಚ ಹೆಚ್ಚಾಗುತ್ತದೆ ಅನ್ನುವ ಲೆಕ್ಕಾಚಾರ ನಿಮ್ಮದಾಗಿರುತ್ತದೆ. ಆದ್ರೆ ಖರ್ಚು ಕಡಿಮೆ ಅನ್ನುವುದನ್ನು ಇಲ್ಲಿ ಗಮನಿಸಲೇ ಬೇಕು. ಸಾಮಾನ್ಯವಾಗಿ ಒಂದು ಮರ ಹತ್ತಿದ ಕಾರ್ಮಿಕ ಸುಮಾರು 5 ರೂಪಾಯಿ ಕೂಲಿ ಕೇಳುತ್ತಾರೆ. ಆದ್ರೆ ಅಡಕೆ ಯಂತ್ರ ಬಳಸಿದ್ರೆ ಕೇವಲ 40 ಪೈಸೆಯಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಸಮಯ ಮತ್ತು ಹಣದ ಉಳಿತಾಯ ಜೊತೆಜೊತೆಗೆ ಆಗುತ್ತದೆ.

ವೀಡಿಯೋ ನೋಡಿ… 

ಅಡಕೆ ಯಂತ್ರ ಬಳಸಿ ಕಟಾವೂ ಮಾಡಬಹುದಾದ ಡೆಮೋ ವೀಡಿಯೋ

ಸಖತ್ ಡಿಮ್ಯಾಂಡ್

ಶೆರ್ವಿನ್ ಆವಿಷ್ಕಾರ ಮಾಡಿರುವ ಯಂತ್ರಕ್ಕೆ ಸಖತ್ ಡಿಮ್ಯಾಂಡ್ ಬರುತ್ತಿದೆ. ಅಡಕೆ ಬೆಳೆಗಾರರು ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳುತ್ತಿದ್ದಾರೆ. ಅಡಕೆ ಕೊಯ್ಲು ಮಾಡುವ ಯಂತ್ರದ ಪೇಟೆಂಟ್​ಗೆ ಅಪ್ಲೈ ಮಾಡಿರುವ ಶೆರ್ವಿನ್ ಮುಂದಿನ ದಿನಗಳಲ್ಲಿ ಯಂತ್ರವನ್ನು ತಯಾರು ಮಾಡಿ ಕಡಿಮೆ ದರದಲ್ಲಿ ರೈತರಿಗೆ ಮಾರಾಟ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಕೈಗಾರಿಕಾ ಘಟಕ ಸ್ಥಾಪಿಸುವ ಲೆಕ್ಕಾಚಾರವೂ ಇವರಿಗಿದೆ. ಒಟ್ಟಿನಲ್ಲಿ ಅಡಕೆ ಬೆಳಗಾರರು ಶೆರ್ವಿನ್ ಸಾಧನೆಯಿಂದ ಸಾಕಷ್ಟು ಖುಷಿಗೊಳ್ಳುವುದು ಗ್ಯಾರೆಂಟಿ.

ಇದನ್ನು ಓದಿ:

1. ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್​ 

2. ಪ್ರವಾಸಿಗರನ್ನು ಸೆಳೆಯಲು ವರ್ಚುವಲ್​ ರಿಯಾಲಿಟಿ- ರಾಮನಗರದಲ್ಲಿ "ಶೋಲೆ"ಮರು ಸೃಷ್ಟಿ..!

3. ನಾಳಿನ ಬಗ್ಗೆ ಕನಸು- ಸೋಲಿನ ಬಗ್ಗೆ ಅವಲೋಕನ- ಸ್ಟಾರ್ಟ್​ಅಪ್​ ಯಶಸ್ಸಿನ ಮಂತ್ರ

Related Stories