ಕ್ಯಾನ್ಸರ್ ರೋಗವನ್ನೇ ಮೆಟ್ಟಿನಿಂತ ಕಲಾವಿದೆ..!

ಕೃತಿಕಾ

ಕ್ಯಾನ್ಸರ್ ರೋಗವನ್ನೇ ಮೆಟ್ಟಿನಿಂತ ಕಲಾವಿದೆ..!

Sunday January 10, 2016,

2 min Read

ಒಂದು ಸಣ್ಣ ಕಾಯಿಲೆ ಬಂದ್ರೆ ಸಾಕು ಮೂರ್ನಾಲ್ಕು ದಿನ ಕಾಯಿಲೆ ನೆಪ ಹೇಳಿ ರಜೆ ಹಾಕೋರೆ ಹೆಚ್ಚು. ಆದರೆ ಇಲ್ಲೊಬ್ಬ ಮಹಿಳೆ ಕ್ಯಾನ್ಸರ್ ಕಾಯಿಲೆಗೆ ತುತ್ತಾದರೂ ನೃತ್ಯದ ಮೂಲಕವೇ ಎದೆಗುಂದದೇ ಕ್ಯಾನ್ಸರ್ ಅನ್ನೇ ಸೋಲಿಸಿ ಬದುಕನ್ನು ಗೆದ್ದಿದ್ದಾರೆ.

ಆಕೆಯ ಹೆಸರು ಆನಂದ ಶಂಕರ ಜಯಂತ್. ತಮಿಳುನಾಡಿನಲ್ಲಿ ಈಕೆಗೆ ದೊಡ್ಡ ಹೆಸರು. ಕೂಚುಪ್ಪುಡಿ, ಭರತನಾಟ್ಯದಲ್ಲಿ ಪ್ರಾವೀಣ್ಯತೆ ಗಳಿಸಿದ ಅದ್ಭುತ ಪ್ರತಿಭೆ ಈಕೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದ ಈ ಕಲಾವಿದೆ ಸಾಹಸಿ, ನೃತ್ಯವನ್ನೇ ಬದುಕಾಗಿಸಿಕೊಂಡ ಛಲಗಾತಿ.

image


ಅಗಲವಾದ ಸುಂದರ ಕಣ್ಣುಗಳಿವೆ ಎಂಬ ಕಾರಣದಿಂದಾಗಿಯೇ ಆನಂದ ಶಂಕರ್ ಅವರನ್ನು ಮನೆಯವರು ನೃತ್ಯ ತರಗತಿಗೆ ಸೇರಿಸಿದ್ದರಂತೆ. ಹಾಗೆ ನಾಲ್ಕರ ಹರೆಯದಲ್ಲಿ ಕಾಲಿಗೆ ಕಟ್ಟಿದ ಗೆಜ್ಜೆ ಅವರ ಜೀವನದ ಅಂಗವೇ ಆಗಿ ಬಿಟ್ಟಿತು. ಕ್ಯಾನ್ಸರ್ ಇದೆ ಎಂದು ಗೊತ್ತಾದ ಕ್ಷಣವನ್ನೂ ನೃತ್ಯದೊಂದಿಗೆ ಸಂಬಂಧವಿರಿಸುವಂತೆ ಗ್ರಹಿಸುವುದೇ ಈಕೆಗೆ ಇಷ್ಟ. ನೃತ್ಯದ ನವರಸಗಳಲ್ಲೊಂದಾದ ಭಯಾನಕ ..ಆ ಸ್ಥಿತಿಯನ್ನು ನಿಜವಾಗಿ ಅನುಭವಿಸಿದ್ದು ಕ್ಯಾನ್ಸರ್ ಇದೆ ಎಂಬುದು ಗೊತ್ತಾದಾಗ. ಎಲ್ಲರೂ ಕುಸಿದು ಹೋಗುವ ಆ ಕ್ಷಣದಲ್ಲಿಯೂ ನಾನು ಸೋಲಬಾರದು ಎಂದು ಆನಂದ ಜಯಂತ್ ನಿರ್ಧರಿಸಿದ್ದರು. ಆಕೆ ನನಗೆ ಬಂದಿರುವ ರೋಗವನ್ನೇ ಸೋಲಿಸಬೇಕೆಂಬ ಒಣ ತೊಟ್ಟಿದ್ದರು. ಅಂದುಕೊಂಡಂತೆಯೇ ಗಟ್ಟಿ ಮನಸ್ಸಿನಿಂದ ನೃತ್ಯ ಮಾಡುವುದರಲ್ಲೇ ಕಾಲ ಕಳೆದು ತನಗೆ ಕ್ಯಾನ್ಸರ್ ಇದೆ ಮತ್ತು ಅದೊಂದು ದೊಡ್ಡ ಕಾಯಿಲೆ ಅನ್ನೋದನ್ನೇ ಮರೆತು ಅಭ್ಯಾಸ ಮುಂದುವರೆಸಿದರು.

image


ನೃತ್ಯಕಲೆಯಲ್ಲಿ ಮಾತ್ರವಲ್ಲ ಕಲಿಕೆಯಲ್ಲೂ ಆನಂದ ಜಾಣೆಯಾಗಿದ್ದರು. ಕಾಮರ್ಸ್, ಆರ್ಟ್ಸ್ ಮತ್ತು ಹಿಸ್ಟರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಈಕೆ ಯುನಿವರ್ಸಿಟಿ ಟಾಪರ್ ಆಗಿದ್ದರು.

ಕ್ಯಾನ್ಸರ್ ಎಂಬುದು ನನ್ನ ಬದುಕಿನ ಒಂದು ಪುಟ ಅಷ್ಟೇ. ಅದನ್ನು ಪುಸ್ತಕವನ್ನಾಗಿಸಲು ನಾನು ಇಷ್ಟಪಡುವುದಿಲ್ಲ. ಕ್ಯಾನ್ಸರ್ ನ್ನು ಹಿಮ್ಮೆಟ್ಟಿ ಬದುಕಲೇ ಬೇಕು ಎಂದು ಪಣತೊಟ್ಟೆ. 2009ರಲ್ಲಿ ಕ್ಯಾನ್ಸರ್ ಸರ್ಜರಿಗೊಳಪಡಬೇಕಾದ ದಿನದ ಹಿಂದಿನ ದಿನ ನೃತ್ಯ ಕಾರ್ಯಕ್ರಮ ನೀಡುವುದಕ್ಕಿತ್ತು. ಮತ್ತೇನೂ ಯೋಚಿಸಲಿಲ್ಲ. ಕಾರ್ಯಕ್ರಮವನ್ನು ಮುಗಿಸಿಕೊಟ್ಟ ನಂತರವೇ ಸರ್ಜರಿಗಾಗಿ ಆಸ್ಪತ್ರೆಗೆ ಹೋದೆ ಅಂತ ಕ್ಯಾನ್ಸರ್ ಗೆಲ್ಲಲು ಅವರು ಸಿದ್ದರಾಗಿದ್ದು ಹೇಗೆ ಅನ್ನೋದನ್ನ ವಿವರಿಸುತ್ತಾರೆ ಆನಂದ ಶಂಕರ ಜಯಂತ್.

image


ಕ್ಯಾನ್ಸರ್ ಅನ್ನೋ ಕಾಯಿಲೆಯನ್ನು ಮೆಟ್ಟಿನಿಂತ ಕತೆಯನ್ನ ಆನಂದ್ ಶಂಕರ ಜಯಂತ್ ಹೇಳೋದು ಹೀಗೆ. ಭಯ, ಸಂಕಟ, ಸಿಟ್ಟು, ನಿರಾಶೆಗೊಳಪಡುವಾಗಲೆಲ್ಲಾ ಪಾಸಿಟಿವ್ ಆಗಿ ಯೋಚನೆ ಮಾಡತೊಡಗಿದೆ. ಕ್ಯಾನ್ಸರ್ ಎಂಬ ಪೀಡೆಯನ್ನು ಹೊಡೆದೋಡಿಸಲೇ ಬೇಕು ಎಂಬ ದೃಢ ನಿಶ್ಚಯ ತೆಗೆದುಕೊಂಡಿದ್ದೆ. ಕ್ಯಾನ್ಸರ್ ಇದೆ ಎಂಬ ಯೋಚನೆ ಬಂದಾಗಲೆಲ್ಲಾ ಗೆಜ್ಜೆ ಕಟ್ಟಿ ಕುಣಿದೆ. ಸರ್ಜರಿ, ಕೀಮೋಥೆರಪಿ ನಡುವೆಯೂ ನೃತ್ಯವಾಡಿದೆ. ಹಾಗೆ ನನ್ನ ಕಾಲುಗಳಿಂದಲೇ ಕ್ಯಾನ್ಸರ್ ನ್ನು ಒದ್ದು ಓಡಿಸಿದೆ.

ಇದೀಗ ಎಲ್ಲರಿಗೂ ಪ್ರೇರಣೆಯಾಗಿರುವ ಆನಂದ ಅವರಿಗೆ ಕ್ಯಾನ್ಸರ್ ನಿಂದ ಪಾರಾದವಳು ಎಂದು ಹೇಳುವುದಕ್ಕಿಂತ ಕ್ಯಾನ್ಸರನ್ನೇ ಸೋಲಿಸಿದವಳು ಎಂದು ಹೇಳುವುದು ಇಷ್ಟ. ಅವರ ಆ ಕಲಾ ಪ್ರೀತಿಗೆ, ಛಲಕ್ಕೆ, ಧೈರ್ಯಕ್ಕೆ ಹ್ಯಾಟ್ಸ್ ಆಫ್. ಇವರ ಸಾಧನೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಜೀವನವೇ ಮುಗಿದುಹೋಯ್ತು ಅಂದುಕೊಂಡವರಿಗೆ ಸ್ಫೂರ್ತಿಯಾಗದೇ ಇರದು...