ಹೀಗೊಂದು ಗಿಟಾರ್ ಪ್ರೇಮಿಯ ‘ಗಿಟಾರ್ ಹಾಲ್’ ಕಥೆ

ಟೀಮ್​​ ವೈ.ಎಸ್​​.

ಹೀಗೊಂದು ಗಿಟಾರ್ ಪ್ರೇಮಿಯ ‘ಗಿಟಾರ್ ಹಾಲ್’ ಕಥೆ

Monday November 02, 2015,

3 min Read

ಮುಂಬೈನಂತಹ ಮಹಾನಗರಿಯಲ್ಲಿ ಹುಟ್ಟಿ, ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಇವರ ಸಾಧನೆ ನಿಜಕ್ಕೂ ರೋಮಾಂಚನ. ಬಹುಶಃ ಇವರು ಅಪ್ಪ-ಅಮ್ಮನ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಿದ್ದರೆ. ಇಂದಿನ ಯುವ ಜನಾಂಗಕ್ಕೆ ಒಬ್ಬ ಒಳ್ಳೆಯ ಗಿಟಾರಿಸ್ಟ್ ಆಗಲಿ, ಗಿಟಾರ್ ಅಕಾಡೆಮಿ ಸಿಗುವುದಾಗಲಿ ನಿಜಕ್ಕೂ ಕಷ್ಟವಾಗುತ್ತಿತ್ತು. ಏನಿದು ಒಂದು ಕಡೆ ಸಾಧನೆ ಎಂದು ಹೇಳಿದರೆ, ಇನ್ನೊಂದು ಕಡೆ ಗಿಟಾರ್​​, ಅಕಾಡೆಮಿ ಅನ್ನುತ್ತಿದ್ದಾರಲ್ಲಾ ಎಂದು ಕನ್‍ಫ್ಯೂಸ್ ಆಗಬೇಡಿ. ಈಗ ಹೇಳಲು ಹೊರಟಿರುವುದು ಪೋಷಕರ ವಿರೋಧವಿದ್ದರೂ, ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ಸಾಧಿಸಿ, ಅತಿ ಚಿಕ್ಕ ವಯಸ್ಸಿಗೆ ಅಂದರೆ 19ನೇ ವಯಸ್ಸಿಗೆ ‘ಗಿಟಾರ್ ಹಾಲ್’ ಎಂಬ ವೃತ್ತಿಪರ ಸಂಗೀತ ತರಬೇತಿ ಅಕಾಡೆಮಿ ಸಂಸ್ಥೆಯನ್ನು ತೆರೆದ ಕಿರಣ್ ರಾಯ್ ಎಂಬ ಛಲದಂಕಮಲ್ಲನ ಸಾಧನೆಯ ಬಗ್ಗೆ.

ಹೌದು, ಇವರ ಸಾಧನೆ ಒಂದು ರೀತಿಯಲ್ಲಿ ಸಿನಿಮಾ ಕಥೆಯಂತೆ ಇದ್ದರೂ, ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವವರಿಗೆ ಸ್ಫೂರ್ತಿಯಾಗುತ್ತದೆ. ಕಿರಣ್ ರಾಯ್ ಅಂದು ಹುಟ್ಟುಹಾಕಿದ ‘ಗಿಟಾರ್ ಹಾಲ್’ ಇಂದು ದೇಶಾದ್ಯಂತ ಸಂಚಲನವುಂಟು ಮಾಡುತ್ತಿದೆ. ಕಾರಣ ಈ ಸಂಸ್ಥೆಯಲ್ಲಿ ನಿಮಗೆ ವೃತ್ತಿಪರ ಗಿಟಾರ್ ಶಿಕ್ಷಕರು ಅತ್ಯದ್ಭುತವಾಗಿ ಗಿಟಾರ್ ನುಡಿಸುವುದನ್ನು ಹೇಳಿಕೊಡುವುದರ ಜೊತೆಗೆ ಇತರೆ ಸಂಗೀತ ವಾದ್ಯಗಳನ್ನು ನುಡಿಸುವುದನ್ನೂ ಕಲಿಸುತ್ತಾರೆ. ಇದರಲ್ಲೇನು ವಿಶೇಷ ಎನ್ನಬೇಡಿ. ಇಲ್ಲಿ ಹೇಳಿಕೊಡುವ ಮಾದರಿಯಿಂದ ಹಿಡಿದು ಎಲ್ಲವೂ ಸ್ವಲ್ಪ ಸ್ಪೆಷಲ್ಲೆ!

image


ಟ್ಯುಶನ್ ಟು ಅಕಾಡೆಮಿ

ಕಿರಣ್ ರಾಯ್ ಅವರು ಓದಿದ್ದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್. ಲಂಡನ್‍ನ ಟ್ರಿನಿಟಿ ಕಾಲೇಜಿನಲ್ಲಿ ಎಂಟೂ ಗ್ರೇಡ್‍ಗಳನ್ನು ಪೂರೈಸಿರುವ ಅವರು ಉತ್ತಮ ಗಿಟಾರಿಸ್ಟ್ ಆದದ್ದು ಹೇಗೆ ಎಂಬ ಕೂತುಹಲ ಎಲ್ಲರಿಗೂ ಇದ್ದೇ ಇರುತ್ತದೆ. ಕಿರಣ್ ಅವರಿಗೆ ಆಗ 13 ವರ್ಷ. ಮೊದಲ ಬಾರಿಗೆ ಅವರ ತಾಯಿ ಒಂದು ಆರ್ಡಿನರಿ ಗಿಟಾರ್ ಅನ್ನು ತಂದುಕೊಟ್ಟರು. ನಂತರ ಶುರುವಾಯ್ತು ನೋಡಿ ಗಿಟಾರ್ ಜರ್ನಿ. ಈ ಹೊತ್ತಿಗಾಗಲೇ ಜುದಾಸ್ ಪ್ರೀಸ್ಟ್, ಒಜ್ಜೀ ಆಸ್ಬಾರ್ನ್, ವ್ಯಾನ್ ಹ್ಯಾಲೆನ್, ಬ್ಲ್ಯಾಕ್ ಸಬ್ಬತ್, ಮೆಗಾಡೆಟ್, ಪಂತೇರಾ, ಸೆಪ್ಯೂಲ್‍ಟ್ಯೂರಾ, ಜೋ ಸಾಟ್ರಿಯಾನಿ ಮತ್ತು ಐರನ್ ಮೇಡನ್ ಕಿರಣ್ ಅವರ ಮೇಲೆ ಅಗಾಧ ಪ್ರಭಾವ ಬೀರಿದ್ದರು. ಆ ಸಮಯಕ್ಕೆ ಬಂದ ಮೆಗಾಡೆಟ್ ‘ರಸ್ಟ್ ಇನ್ ಪೀಸ್’ ಆಲ್ಬಮ್ ಕಿರಣ್ ಲೈಫ್ ಅನ್ನೇ ಬದಲಾಯಿಸಿತು.

ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಕಿರಣ್ ಅವರಿಗೆ ಗಿಟಾರ್ ಕಲಿಯುವ ಆಸಕ್ತಿ ಎಷ್ಟಿತ್ತೆಂದರೆ ತಮ್ಮ ಹೆಚ್ಚಿನ ಸಮಯವನ್ನು ಓದಿಗೆ ಬದಲು ಗಿಟಾರ್ ನುಡಿಸುವುದಕ್ಕೇ ಮೀಸಲಿಟ್ಟಿದ್ದರು. ಹೆಚ್ಚು ಕಡಿಮೆ ದಿನದಲ್ಲಿ 16 ಗಂಟೆಗಳ ಕಾಲವೂ ಅವರು ಗಿಟಾರ್ ನುಡಿಸುತ್ತಾ ಕುಳಿತದ್ದು ಇದೆಯಂತೆ. ಕಿರಣ್ ತಂದೆ ಮಿಲೇನಿಯರ್. ಅವರ ದೊಡ್ಡ ಮಗನಾದ ಕಿರಣ್ ಎಲ್ಲಾ ಮಕ್ಕಳಂತೆ ತಮ್ಮ ಮಗನೂ ಎಂಜಿನಿಯರಿಂಗ್ ಆಗಬೇಕೆಂಬ ಆಸೆಯಿಟ್ಟುಕೊಂಡಿದ್ದರು. ಆದರೆ ಯಾವಾಗ ಕಿರಣ್ ಗಿಟಾರ್ ಅನ್ನೇ ತಮ್ಮ ಸರ್ವಸ್ವವಾಗಿಸಿಕೊಂಡರೋ ಬೇಸರವಾಗಿ ಮಗನಿಂದ ಸ್ವಲ್ಪ ದೂರ ಉಳಿದರಂತೆ. ಇದನ್ನೆಲ್ಲಾ ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳದ ಕಿರಣ್ ತಮ್ಮ ಗಿಟಾರ್ ಕಲಿಕೆಯ ಕಡೆಗೆ ಹೆಚ್ಚು ಆಸಕ್ತಿ ನೆಟ್ಟರು. ಮೊದಲೆಲ್ಲಾ ಮನೆಯಲ್ಲಿಯೇ ಗಿಟಾರ್ ಟ್ಯೂಶನ್ ಹೇಳಿಕೊಡುತ್ತಿದ್ದ ಅವರು ತಿಂಗಳಿಗೆ 200 ರೂಪಾಯಿ ಸಂಪಾದಿಸುತ್ತಿದ್ದರಂತೆ. ಇದೇ ಸಂದರ್ಭದಲ್ಲಿ ಪೊವೈನ ಐಐಟಿಯಲ್ಲಿ ನಡೆದ 44 ಬ್ಯಾಂಡ್‍ಗಳ ನಡುವಿನ ಸ್ಪರ್ಧೆಯೊಂದರಲ್ಲಿ ಕಿರಣ್ ಅವರಿಗೆ ‘ಬೆಸ್ಟ್ ಲೀಡ್ ಗಿಟಾರಿಸ್ಟ್ ಅವಾರ್ಡ್’ ಕೂಡ ಕೊಡಲಾಯಿತು. ಆಗ ಇವರ ಬಳಿ ಗಿಟಾರ್ ಟ್ಯೂಶನ್‍ಗೆಂದು ಬರುತ್ತಿದ್ದವರ ಸಂಖ್ಯೆಯೂ ಕ್ರಮವಾಗಿ ಹೆಚ್ಚುತ್ತಾ ಹೋಯಿತು. ಇದನ್ನೆಲ್ಲಾ ಗಮನಿಸಿದ ಕಿರಣ್ ಅವರು ಒಂದು ನಿರ್ಧಾರಕ್ಕೆ ಬಂದರು. ಲೋನ್ ಪಡೆದು 1998ರಲ್ಲಿ ಮುಂಬೈನ ಚೆಂಬೂರಿನಲ್ಲಿ ‘ಗಿಟಾರ್ ಹಾಲ್’ ಎಂಬ ವೃತ್ತಿಪರ ಗಿಟಾರ್ ತರಬೇತಿ ಅಕಾಡೆಮಿ ಸ್ಥಾಪಿಸಿದರು.

ಪರಿಶ್ರಮದ ಫಲ

ಅಂದು ಸ್ಥಾಪನೆಯಾದ ‘ಗಿಟಾರ್ ಹಾಲ್’ ಇಂದು 20 ಶಾಖೆಗಳನ್ನು ಹೊಂದಿದ್ದು, ಮುಂಬೈ, ನವಿ ಮುಂಬೈ, ಥಾಣೆ, ಮಹಾರಾಷ್ಟ್ರ, ಪುಣೆ, ಪೋರ್ಟ್ ಬ್ಲೇರ್ ಮತ್ತು ಭೂತಾನ್‍ನಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿದೆ. ಪ್ರಸ್ತುತ 6,500 ವಿದ್ಯಾರ್ಥಿಗಳು ಇಲ್ಲಿ ಗಿಟಾರ್ ಕಲಿಯುತ್ತಿದ್ದು, 75 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅಕಾಡೆಮಿಯ ವತಿಯಿಂದ ಗುಣಮಟ್ಟದ ಅಕೌಸ್ಟಿಕ್ ಗಿಟಾರ್‍ಗಳನ್ನು ಮಾರಾಟ ಮಾಡಲಾಗುತ್ತದೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲ ವಯೋಮಿತಿಯವರು ಇಲ್ಲಿ ಗಿಟಾರ್ ಕಲಿಯಬಹುದಾಗಿದ್ದು, ಗಿಟಾರ್ ಕಲಿಯಲು ರಾಜಸ್ಥಾನ, ಬಿಹಾರ್, ಗುಜರಾತ್ ಹಾಗೂ ದೇಶದ ಮೂಲೆ ಮೂಲೆಗಳಿಂದಲೂ ಜನ ಹುಡುಕಿಕೊಂಡು ಬರುವುದು ‘ಗಿಟಾರ್ ಹಾಲ್’ನ ಸಾಮರ್ಥ್ಯವನ್ನು ತಿಳಿಸುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ದೆಹಲಿ, ಪುಣೆ ಮತ್ತು ಕೋಲ್ಕತ್ತಾದಲ್ಲಿಯೂ ಅಕಾಡೆಮಿ ಸ್ಥಾಪಿಸುವ ಪ್ಲಾನ್ ಕೂಡ ಮಾಡಲಾಗುತ್ತಿದೆಯಂತೆ.

image


ಏನೆಲ್ಲಾ ಕಲಿಯಬಹುದು?

ಅನೇಕ ವಿಶೇಷತೆಗಳನ್ನು ಹೊಂದಿರುವ ‘ಗಿಟಾರ್ ಹಾಲ್’ನಲ್ಲಿ Fundamental, Practical and Conceptual ಎಂದು ಮೂರು ಲೆವೆಲ್‍ನಲ್ಲಿ ಸಂಗೀತ ಹೇಳಿಕೊಡಲಾಗುತ್ತದೆಯಂತೆ. ಹೇಳಿಕೊಡುವ ಟೆಕ್ನಿಕ್ ಸಹ ಬಹಳ ಸುಲಭವಾಗಿರುತ್ತದೆ. “ನಾವು ಜೀವನದಲ್ಲಿ ಏನಾದರೂ ಕಲಿಯುವಾಗ ದಾರಿಯಲ್ಲಿ ಶಾರ್ಟ್ ಕಟ್ ಹುಡುಕಿ ಸ್ಥಳವನ್ನು ತಲುಪುವಂತೆ ಹೋಗಬಾರದು. ಆಗ ನಮಗೆ ಇತರೆ ದಾರಿಗಳು ಗೊತ್ತಾಗುವುದಿಲ್ಲ. ಬಹಳ ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಶ್ರದ್ಧೆಯಿಂದ ಕಲಿಯಬೇಕು. ಸಮರ್ಪಣೆ, ಶಿಸ್ತು ಇಂಥಹ ಗುಣಗಳನ್ನು ಮೈಗೂಡಿಸಿಕೊಂಡರೆ ಎಂಥವರೂ ಗ್ರೇಟ್ ಗಿಟಾರಿಸ್ಟ್ ಆಗಬಹುದು. ಇಂತಹ ಪಾಠಗಳನ್ನು ನಾವು ಗಿಟಾರ್ ಅಕಾಡೆಮಿಯಲ್ಲಿ ಹೇಳುತ್ತಲೇ ಇರುತ್ತೇವೆ.” ಎನ್ನುತ್ತಾರೆ ಕಿರಣ್.

ಅಕಾಡೆಮಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಆಗಾಗ ಗಿಟಾರ್ ವರ್ಕ್ ಶಾಪ್‍ಗಳನ್ನು ಸಹ ಕಂಡಕ್ಟ್ ಮಾಡುತ್ತಿದ್ದು, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಗಿಟಾರಿಸ್ಟ್​​​ಗಳನ್ನು ಕರೆತರಲಾಗುತ್ತದೆ. ಒಟ್ಟಿನಲ್ಲಿ ತಮ್ಮ ಅಕಾಡೆಮಿಯಲ್ಲಿ ಕಲಿತವರಿಗೆ ಮುಂದೆ ಒಳ್ಳೆಯ ಸಿನಿಮಾ, ಟಿವಿ ಇತ್ಯಾದಿಗಳಲ್ಲಿ ಅವಕಾಶ ಸಿಗುವುದರ ಜೊತೆಗೆ ಸ್ವಂತ ಬ್ಯಾಂಡ್ ಕಟ್ಟುವ ಶಕ್ಯ ಬೆಳೆಯುತ್ತದೆ ಎಂಬುದು ಕಿರಣ್ ಅನಿಸಿಕೆ. ಇದಕ್ಕವರು ಅನೇಕ ನಿದರ್ಶನಗಳನ್ನೂ ಸಹ ಕೊಡುತ್ತಾರೆ. ಕೋರ್ಸ್‍ಗಳ ಹೆಚ್ಚಿನ ಮಾಹಿತಿಗಾಗಿ ನೀವು ಕಿರಣ್ ರಾಯ್ ಅವರ ವೆಬ್‍ಸೈಟ್ ನೋಡಬಹುದು.

ಬಹಳಷ್ಟು ಜನ ಪೋಷಕರು ತಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್, ದೊಡ್ಡ ಮಟ್ಟದ ಆಫೀಸರ್ ಆಗಬೇಕೆಂದು ಬಯಸುತ್ತಾರೆ ಹೊರತು, ಮಕ್ಕಳಿಗೆ ಸಂಗೀತ-ನೃತ್ಯ ಕಲಿಸುವಿಕೆಯ ಕಡೆಗೆ ಅಷ್ಟಾಗಿ ಗಮನ ಕೊಡುವುದಿಲ್ಲ. ಆದರೆ ಸಾಕಷ್ಟು ಜನರಿಗೆ ಕಿರಣ್ ರಾಯ್ ಅವರಂತೆ ಸಂಗೀತ ಕ್ಷೇತ್ರದ ಕಡೆಗೆ, ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವ ಕಡೆಗೆ ಆಸಕ್ತಿ ಇರುತ್ತದೆ. ಅದಕ್ಕೆ ಮಕ್ಕಳಾದವರೂ ಪೋಷಕರ ಮನಸ್ಸನ್ನು ಬದಲಾಯಿಸಿ ತಾವು ಇಷ್ಟಪಟ್ಟ ಕ್ಷೇತ್ರದಲ್ಲಿ ಮುಂದುವರಿದರೆ ಏನಾದರೂ ಸಾಧಿಸಬಹುದು. ಹಾಗೆಯೇ ಪೋಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಇಷ್ಟ ಬಂದ ಕ್ಷೇತ್ರದಲ್ಲಿ ಮುಂದುವರಿಯಲು ಬಿಟ್ಟರೆ ಮುಂದೆ ಅವರು ಕೂಡ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಕೆಲ ತಜ್ಞರ ಅಭಿಪ್ರಾಯ.