ಚಿನ್ನದ ಗಣಿಯ ನೆಲೆ ಕೋಲಾರಕ್ಕೆ ಬೇಕಿದೆ ಚಿನ್ನದಂಥಾ ಹೂಡಿಕೆ..!

ಟೀಮ್​ ವೈ.ಎಸ್​. ಕನ್ನಡ

ಚಿನ್ನದ ಗಣಿಯ ನೆಲೆ ಕೋಲಾರಕ್ಕೆ ಬೇಕಿದೆ ಚಿನ್ನದಂಥಾ ಹೂಡಿಕೆ..!

Tuesday February 02, 2016,

2 min Read

ರಾಜ್ಯದ ಕೈಗಾರಿಕಾ ನಕ್ಷೆಯಲ್ಲಿ ಎದ್ದು ಕಾಣುವ ಜಿಲ್ಲೆ ಕೋಲಾರ. ಕೋಲಾರ ಚಿನ್ನದ ಗಣಿ ರಾಜ್ಯದಲ್ಲಿ ಚಿನ್ನಕ್ಕೆ ಹೆಸರುವಾಸಿ. ಕುಡಿಯುವ ನೀರಿನ ತೀರಾ ಕೊರತೆಯ ಮಧ್ಯೆಯೂ ಕೋಲಾರ ಸೀಮಿತ ಸಂಪನ್ಮೂಲಗಳ ಮಧ್ಯೆ ಕೈಗಾರಿಕಾ ಕ್ಷೇತ್ರದಲ್ಲಿ ಕೋಲಾರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ.

image


ಕೋಲಾರ – ವೈವಿಧ್ಯಮಯಗಳ ಆಗರ

ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿರುವ ಕೋಲಾರ, ರಾಜಧಾನಿ ಬೆಂಗಳೂರಿಗೆ ಅತ್ಯಂತ ಸಮೀಪವಿದೆ. ಇದರಿಂದಾಗಿ ಆಡಳಿತಾತ್ಮಕ ನಿರ್ಧಾರಗಳು ಬಹು ಬೇಗನೆ ಇಲ್ಲಿ ಜಾರಿಯಾಗುತ್ತಿವೆ. ಯಾಕೆಂದರೆ ವಿಶಾಲವಾದ ಭೂಮಿ ಬೇಡುತ್ತಿರುವ ಬೃಹತ್ ಕೈಗಾರಿಕೆಗಳು ನಿಧಾನವಾಗಿ ಕೋಲಾರ ಜಿಲ್ಲೆಯತ್ತ ಹೆಜ್ಜೆ ಇಡುತ್ತಿವೆ. ಇದು ನಿಜವಾಗಿಯೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕೋಲಾರಕ್ಕೆ ಮುಕ್ತ ಸ್ವಾಗತ

ಕೋಲಾರದ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿದೆ. ಇಲ್ಲಿ ತೋಟಗಾರಿಕಾ ಬೆಳೆಗಳಿಗೆ ಅತ್ಯಂತ ಸೂಕ್ತ ವಾತಾವರಣವಿದೆ. ಆಲೂಗಡ್ಡೆ, ಟೊಮೆಟೊ, ಈರುಳ್ಳಿ, ತೆಂಗು ಕೋಲಾರದ ಪ್ರಮುಖ ಬೆಳೆಗಳು.

ಬದಲಾಗುತ್ತಿದೆ ಕೈಗಾರಿಕಾ ಚಿತ್ರಣ

ರಾಜ್ಯ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಕೋಲಾರ ಜಿಲ್ಲೆಯಲ್ಲಿ ಕೈಗಾರಿಕಾ ಚಿತ್ರಣ ಬದಲಾಗುತ್ತಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಬದಲಾವಣೆ ಕಣ್ಣಿಗೆ ಕಟ್ಟುತ್ತಿದೆ. ಇದಕ್ಕೆ ಜಿಲ್ಲೆಯ ಜನತೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ದೀರ್ಘಕಾಲದ ಯೋಜನೆಗಳು ಕೋಲಾರ ಜಿಲ್ಲೆಯಲ್ಲಿ ಉದ್ಯೋಗಾವಕಾಶದ ಬಾಗಿಲನ್ನು ತೆರೆದಿವೆ.

ಕೋಲಾರ- ಐದು ತಾಲೂಕುಗಳನ್ನು ಹೊಂದಿದೆ. ಪ್ರತಿಯೊಂದು ತಾಲೂಕು ಕೈಗಾರಿಕಾ ಬೆಳವಣಿಗೆಗೆ , ಹೂಡಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಜಿಲ್ಲೆಯಲ್ಲಿ ಐದು ಕೈಗಾರಿಕಾ ಪ್ರದೇಶ ಮತ್ತು ಐದು ಇಂಡಸ್ಟ್ರಿಯಲ್ ಎಸ್ಟೇಟ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ನಿರೀಕ್ಷಿಸುತ್ತಿರುವ ಈ ಸಂದರ್ಭದಲ್ಲಿ ಕೋಲಾರ ಈ ಎಲ್ಲ ಮಾನದಂಡಗಳನ್ನು ತನ್ನೊಳಗಡೆ ಇರಿಸಿಕೊಂಡಿದೆ. ಇದು ಸಹಜವಾಗಿಯೇ ಹೂಡಿಕೆದಾರರಲ್ಲಿ ಆಸಕ್ತಿ, ಕುತೂಹಲವನ್ನು ಕೆರಳಿಸಿದೆ. ನೂತನ ಕೈಗಾರಿಕೆಗಳಿಗೆ ದಿನಪೂರ್ತಿ ವಿದ್ಯುತ್ ಪೂರೈಕೆ ಮತ್ತು ಉತ್ತಮ ಸಂಚಾರ ವ್ಯವಸ್ಥೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನೆರವಾಗಿದೆ.

ಕೋಲಾರಕ್ಕೆ ಹೂಡಿಕೆದಾರರ ಮೊದಲ ಆದ್ಯತೆ

ಒಂದು ಮಾತಿನಲ್ಲಿ ಹೇಳುವುದಾದರೆ ಕೋಲಾರ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ. ಇಲ್ಲಿ ಪರಿಣಿತ ಮಾನವ ಸಂಪನ್ಮೂಲ ದೊರೆಯುತ್ತಿದೆ. ಇದು ಸಹಜವಾಗಿಯೇ ಕೈಗಾರಿಕೆಯ ಬೇಡಿಕೆ ಈಡೇರಿಸುತ್ತಿದೆ. ರಾಜಧಾನಿ ಬೆಂಗಳೂರು ಹತ್ತಿರದಲ್ಲಿಯೇ ಇರುವುದರಿಂದ ಹೆಚ್ಚಿನ ಪರಿಣಿತಿ ಪಡೆದ ಮಾನವ ಸಂಪನ್ಮೂಲ ನಿರಾಯಾಸವಾಗಿ ದೊರೆಯುತ್ತಿದೆ. ಬೆಂಗಳೂರಿನಿಂದ ಉತ್ತಮ ಸಾರಿಗೆ ಸಂಪರ್ಕ ಕೋಲಾರಕ್ಕೆ ವರದಾನವಾಗಿ ಪರಿಣಮಿಸಿದೆ.

ಕೋಲಾರದ ಹೆಚ್ಚಿನ ಪ್ರದೇಶ ಮಳೆಯಾಧರಿತವಾಗಿದ್ದರೂ, ರಾಜ್ಯ ಸರ್ಕಾರ ನಿರಂತರ ನೀರು ಪೂರೈಕೆಗೆ ಕಾರ್ಯ ಯೋಜನೆ ಹಮ್ಮಿಕೊಂಡಿದೆ. ಇದರಿಂದಾಗಿ ಮೂಲ ಭೂತ ಸಮಸ್ಯೆ ನಿವಾರಣೆಯಾಗಲಿದ್ದು, ಇದು ಕೈಗಾರಿಕೆ ಮತ್ತು ಜನ ಸಾಮಾನ್ಯರ ಬೇಡಿಕೆ ಈಡೇರಿಸುವಲ್ಲಿ ಪರ್ಯಾಪ್ತವಾಗಲಿದೆ ಎಂದೇ ಅಂದಾಜಿಸಲಾಗಿದೆ.

ನಮ್ಮ ಆಶಯವೇನು..?

ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಕೂಡ ಕೋಲಾರ ಸೂಕ್ತ ಸ್ಥಳವಾಗಿದೆ. ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಕೋಲಾರ ಈ ಕ್ಷೇತ್ರದಲ್ಲಿ ಕೂಡ ಹೂಡಿಕೆಯನ್ನು ಎದುರು ನೋಡುತ್ತಿದೆ. ಕೋಲಾರ ಚಿನ್ನದ ನಾಡು. ಕಲೆಯ ಬೀಡು. ಕೋಲಾರದಲ್ಲಿ ಬಂಡವಾಳ ಹೂಡಿದರೆ ಚಿನ್ನದಂತೆ ಪ್ರತಿಫಲ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.