ಆ್ಯಸಿಡ್ ದಾಳಿಗೊಳಗಾದ ಅಮ್ಮನನ್ನು ಮೊದಲ ಬಾರಿ ನೋಡಿ ನಗು ಬೀರಿದ ಕಂದಮ್ಮ

ಟೀಮ್​​ ವೈ.ಎಸ್​​. ಕನ್ನಡ

0

ಹೆಣ್ಣುಮಕ್ಕಳಿಗೆ ತಮ್ಮ ದೈಹಿಕ ಸೌಂದರ್ಯದ ಮೇಲೆ ತುಂಬಾ ಕಾಳಜಿಯಿರುತ್ತೆ. ಅದರಲ್ಲೂ ತಮ್ಮ ಟೀನೇಜ್‍ನಲ್ಲಂತೂ ಹುಡುಗಿಯರು ಕೊಂಚ ಹೆಚ್ಚಾಗಿಯೇ ತಮ್ಮ ಅಂದದ ಬಗ್ಗೆ ನಿಗಾ ವಹಿಸ್ತಾರೆ. ಈಗ್ಗೆ 10 ವರ್ಷಗಳ ಹಿಂದೆ 16 ವರ್ಷದ ಲಕ್ಷ್ಮೀ ಕೂಡ ಹಾಗೇ ಇದ್ದರು. ಆದ್ರೆ ಅವರ ಸೌಂದರ್ಯವೇ ಅವರಿಗೆ ಮುಳುವಾಗಿತ್ತು. ಅವರಿಗಿಂತ ದುಪ್ಪಟ್ಟು ವಯಸ್ಸಾಗಿದ್ದ ಅರ್ಥಾತ್ 32 ವರ್ಷಗಳ ವ್ಯಕ್ತಿಯೊಬ್ಬ ಲಕ್ಷ್ಮೀ ಹಿಂದೆ ಬಿದ್ದಿದ್ದ. ಅವನ ಪ್ರೇಮ ನಿವೇದನೆಯನ್ನು ಧಿಕ್ಕರಿಸಿದ, ಲಕ್ಷ್ಮೀ ಮುಖಕ್ಕೆ ಆ ರಾಕ್ಷಸ ಆಸಿಡ್ ದಾಳಿ ಮಾಡಿದ್ದ. 2005ರಲ್ಲಿ ನಡೆದ ಈ ಘಟನೆ ಲಕ್ಷ್ಮೀಯ ಜೀವನವನ್ನೇ ಕಿತ್ತುಕೊಂಡಿತ್ತು. ಈ ಘಟನೆ ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಹಲವು ಆಪರೇಷನ್ ಮತ್ತು ಸರ್ಜರಿಗಳ ಬಳಿಕ ಲಕ್ಷ್ಮೀ ಬದುಕುಳಿದರು. ಆದ್ರೆ ಮುಖ ನೋಡಿಕೊಂಡರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಷ್ಟು ಶಾಕ್ ಆಗಿತ್ತು. ಕಾರಣ ಅವರ ಮುಖಚರ್ಯೆಯೇ ಬದಲಾಗಿತ್ತು. ಆದ್ರೆ ಲಕ್ಷ್ಮೀ ಹಿಂಜರಿಯಲಿಲ್ಲ. ಜೀವನಕ್ಕೆ ಹೆದರಿ ಮನೆಯೊಳಗೆ ಕೂರಲಿಲ್ಲ. ತನ್ನಂತೆಯೇ ಆಸಿಡ್ ದಾಳಿಗೆ ತುತ್ತಾದ ಹೆಣ್ಣುಮಕ್ಕಳ ಸಹಾಯಕ್ಕೆ ನಿಂತರು. ಧೈರ್ಯ ತುಂಬಿದ್ರು. ಹಲವರಿಗೆ ಮಾದರಿಯಾದ್ರು.

ಇದೇ ಸಮಯದಲ್ಲಿ ಲಕ್ಷ್ಮೀಗೆ ಅಲೋಕ್ ದೀಕ್ಷಿತ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಪರಿಚಯವಾದರು. ಪರಿಚಯ ಗೆಳೆತನವಾಗಿ, ಅದು ಪ್ರೀತಿಗೆ ತಿರುಗಿತು. ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿದ ಈ ಜೋಡಿ ಮದುವೆಯಾಗಲಿಲ್ಲ. ಬದಲಿಗೆ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಜೊತೆಗೆ ವಾಸಿಸತೊಡಗಿದರು. ಈಗ ಲಕ್ಷ್ಮೀ ಮುದ್ದಾದ ಕಂದಮ್ಮನ ತಾಯಿಯಾಗಿದ್ದಾರೆ. ಏಳು ತಿಂಗಳ ಹಿಂದೆ ಪಿಹುಗೆ ಜನ್ಮ ನೀಡಿದ್ದಾರೆ. ಪತ್ರಿಕಾ ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಲೋಕ್ ದೀಕ್ಷಿತ್, ‘ಗರ್ಭಿಣಿಯಾಗಿರುವಾಗ ಲಕ್ಷ್ಮೀ ತುಂಬಾ ಭಯಭೀತರಾಗಿದ್ದರು. ಹುಟ್ಟಿದ ಮಗು ನನ್ನನ್ನು ನೋಡಿ ಎಲ್ಲಿ ಹೆದರಿಕೊಳ್ಳುತ್ತದೋ ಅಂತ ಆತಂಕದಲ್ಲಿದ್ದರು. ಆದ್ರೆ ಅದೃಷ್ಟ ಚೆನ್ನಾಗಿದೆ. ಪಿಹು ತನ್ನ ತಾಯಿಯನ್ನು ನೋಡಿದಾಗಲೆಲ್ಲಾ ನಗುತ್ತಾಳೆ’ ಎಂದು ಹೇಳಿದ್ದಾರೆ.

ಈ ಹಿಂದೆ ಲಕ್ಷ್ಮೀ ಆಸಿಡ್ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಸುಮಾರು 27 ಸಾವಿರಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿದ್ದರು. ಆಸಿಡ್ ದಾಳಿಗೊಳಗಾದ ಇತರರೊಂದಿಗೆ ಸೇರಿ ಉಪವಾ ಸತ್ಯಾಗ್ರಹವನ್ನೂ ಮಾಡಿದ್ದರು. ಆಸಿಡ್ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಆಸಿಡ್ ಮಾರಾಟ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಆದೇಶಿಸಿತ್ತು. ಹಾಗೇ ಆಸಿಡ್ ದಾಳಿ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿತ್ತು. ಆಸಿಡ್ ದಾಳಿಯ ಬಳಿಕ, ತಾವು ಎದುರಿಸಿದ ಸಮಸ್ಯೆಗಳು ಮತ್ತು ತಮ್ಮ ಜೀವನದ ಕುರಿತು ಒಂದು ಹಾಡನ್ನೂ ಬರೆದಿದ್ದಾರೆ ಲಕ್ಷ್ಮೀ.

ಕಳೆದ ವರ್ಷ ಲಕ್ಷ್ಮೀ ಅಮೆರಿಕಾದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಅವರಿಂದ 2014ರ ಇಂಟರ್‍ನ್ಯಾಷನಲ್ ವುಮೆನ್ ಆಫ್ ಕರೇಜ್ ಪ್ರಶಸ್ತಿ ಸ್ವೀಕರಿಸಿದ್ದರು. ಹಾಗೇ ಎನ್‍ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ ಕೂಡ ಲಕ್ಷ್ಮೀ ಮುಡಿಗೇರಿದೆ.

ಸದ್ಯ ಲಖ್ನೌದಲ್ಲಿರುವ ಲಕ್ಷ್ಮೀ ಮುಂದಿನ ತಿಂಗಳು ಶಿರೋಸ್ ಕೆಫೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಪಿಹು ಬಹುತೇಕ ಆಸಿಡ್ ದಾಳಿಗೊಳಗಾದವರೇ ಇರುವ, ಆಸಿಡ್ ದಾಳಿ ತಡೆ ಹೋರಾಟಗಾರರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾಳೆ. ಹೀಗೆ ತನ್ನ ಮಗಳು ಎಲ್ಲಿ ಹೆದರಿಕೊಳ್ತಾಳೋ ಅಂತ ಭಯಗೊಂಡಿದ್ದ ಲಕ್ಷ್ಮೀ ಈಗ ನಿರಾಳರಾಗಿದ್ದಾರೆ.