24 ಪುಸ್ತಕಗಳ ಲೇಖಕ ದೆಹಲಿ ಬೀದಿಯಲ್ಲಿ ಟೀ ಮಾರುವ ಲಕ್ಷ್ಮಣ್ ರಾವ್

ಟೀಮ್​ ವೈ.ಎಸ್​. ಕನ್ನಡ

0

ನಾವು ಮಾಡುವ ಕೆಲಸವೇ ನಮ್ಮ ಪರಿಚಯವಾಗಬೇಕೆಂದೇನೂ ಇಲ್ಲ. ಹೊಟ್ಟೆಗಾಗಿ ಒಂದು ಕೆಲಸ,ಹೆಸರಿಗಾಗಿ ಇನ್ನೊಂದು ಕೆಲಸ ಮಾಡಿದ್ರೆ ತಪ್ಪೇನೂ ಇಲ್ಲ. ಇದಕ್ಕೆ ಲಕ್ಷ್ಮಣ್ ರಾವ್ ಉತ್ತಮ ಉದಾಹರಣೆ. ಹೊಟ್ಟೆ ತುಂಬಿಸಿಕೊಳ್ಳಲು ಟೀ ಮಾಡಿ ಮಾರಾಟ ಮಾಡುವ ಅವರು ಕೆಲ ಜನರಿಗೆ ಲೇಖಕರಾಗಿ ಪರಿಚಿತರು. ಲಕ್ಷ್ಮಣ್ 24 ಪುಸ್ತಕಗಳನ್ನು ಬರೆದಿದ್ದಾರೆ. ಅದ್ರಲ್ಲಿ 12 ಪುಸ್ತಕ ಈಗಾಗಲೇ ಪ್ರಕಟಗೊಂಡಿದೆ. 6 ಪುಸ್ತಕ ಪುನರ್ ಮುದ್ರಣವಾಗ್ತಿದೆ. ಅವರು ಬರೆದ ರಾಮದಾಸ್ ಪುಸ್ತಕಕ್ಕೆ ದೆಹಲಿ ಸರ್ಕಾರದಿಂದ ಇಂದ್ರಪ್ರಸ್ಥ ಸಾಹಿತ್ಯ ಭಾರತಿ ಪುರಸ್ಕಾರ ಸಿಕ್ಕಿದೆ. ಈಗಲೂ ಸಮಯ ಸಿಕ್ಕಾಗ 62 ವರ್ಷದ ಲಕ್ಷ್ಮಣ್ ರಾವ್ ಪೆನ್ನು ಹಿಡಿದು ಬರೆಯಲು ಶುರುಮಾಡ್ತಾರೆ. 1979ರಲ್ಲಿ ಮೊದಲ ಬಾರಿ ಲಕ್ಷ್ಮಣ್ ರಾವ್ ತಮ್ಮ ಪುಸ್ತಕ ಪ್ರಕಾಶನ ಮಾಡಿದ್ರು. ಅವರನ್ನು ಜನರು ಲೇಖಕಜಿ ಎಂದೇ ಕರೆಯುತ್ತಾರೆ. ಇದನ್ನು ಕೇಳಿದ್ರೆ ಖುಷಿಯಾಗ್ತಾರೆ ಲಕ್ಷ್ಮಣ್.

ಇಷ್ಟೇ ಅಲ್ಲ ಅವರಿಗೆ ಇನ್ನೊಂದು ಗುರುತು ಕೂಡ ಇದೆ. ಅದೇ ಚಾಯ್ ವಾಲಾ. ಪಾದಚಾರಿ ರಸ್ತೆಯಲ್ಲಿ ಬಿಸಿ ಬಿಸಿ ಟೀ ಮಾಡಿ ಮಾರಾಟವಾಡುವವರು ಎಂದು ಅನೇಕರು ಅವರನ್ನು ಗುರುತಿಸುತ್ತಾರೆ. ಬರವಣಿಗೆ ಲಕ್ಷ್ಮಣ್ ಗೆ ಒಂದು ಫ್ಯಾಶನ್. ಆದ್ರೆ ಅದನ್ನು ನಂಬಿದ್ರೆ ಹೊಟ್ಟೆ ತುಂಬಲಾರದು. ಲೇಖನ ನಂಬಿಕೊಂಡು ಮನೆಯವರನ್ನು ಉಪವಾಸ ಕೆಡವಲು ಮನಸ್ಸಿಲ್ಲದ ಲಕ್ಷ್ಮಣ್ ಕೇವಲ ಒಂದು ರೂಪಾಯಿಗೆ ಟೀ ಮಾರಾಟ ಮಾಡುತ್ತಿದ್ದಾರೆ. ಸತತ 25 ವರ್ಷಗಳಿಂದ ಟೀ ಮಾರಾಟ ಮಾಡ್ತಿದ್ದಾರೆ ಲಕ್ಷ್ಮಣ್.

ಇದನ್ನು ಓದಿ: ನಿಮ್ಮ ಮನೆಗೆ ಫಿಟ್ನೆಸ್ ಟ್ರೈನರ್ ಬರ್ತಾರೆ..!

ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಿದರೂ ಅವರ ಮನಸ್ಸಿನಲ್ಲಿದ್ದ ಲೇಖಕ ಮಾತ್ರ ಸತ್ತಿರಲಿಲ್ಲ. ವಾಸ್ತವವಾಗಿ ದೇಶದ ಕಲಾಕಾರನ ದುಸ್ಥಿತಿಗೆ ಲಕ್ಷ್ಮಣ್ ಕನ್ನಡಿ ಎಂದ್ರೆ ತಪ್ಪಾಗಲಾರದು. ಆದ್ರೆ ಲಕ್ಷ್ಮಣ್ ರಾವ್ ಗೆ ಯಾರ ಬಗ್ಗೆಯೂ ಬೇಸರವಿಲ್ಲ.ಉತ್ತಮ ಬರಹಗಾರ ಎಂಬ ರೂಪದಲ್ಲಿ ಜನರು ತಾನು ಬರೆದ ಪುಸ್ತಕಗಳನ್ನು ಓದಿದ್ರೆ ಖುಷಿಯಾಗ್ತಾರೆ ಲಕ್ಷ್ಮಣ್ ರಾವ್. ಓದುಗರಿಗೆ ತಮ್ಮ ಪುಸ್ತಕವನ್ನು ತಲುಪಿಸುವ ನಿಟ್ಟಿನಲ್ಲಿ ದೆಹಲಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸೈಕಲ್ ಮೂಲಕ ಸಂಚರಿಸಿ,ಗ್ರಂಥಾಲಯ,ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡ್ತಾರೆ. ಆದ್ರೆ ಅವರ ಪುಸ್ತಕವನ್ನು ಓದುವ ಅನೇಕರು,ಅವರೇ ಲೇಖಕರು ಎಂಬುವುದನ್ನು ನಂಬುವುದಿಲ್ಲ.

``ನಾನು ಪುಸ್ತಕ ಬರೆದಿದ್ದೇನೆಂದ್ರೆ ಯಾರೂ ನಂಬುವುದಿಲ್ಲ. ನನ್ನ ಹಾಳಾದ ಸೈಕಲ್,ಗಲೀಜಾಗಿರುವ ಬಟ್ಟೆ,ಬೆವರಿನ ವಾಸನೆ ಎಲ್ಲವನ್ನೂ ಗಮನಿಸಿದವರು ಪುಸ್ತಕ ಮಾರುವವನು ಎಂದುಕೊಳ್ಳುತ್ತಾರೆ.ನಾನು ಕೂಡ ಈ ಪುಸ್ತಕದ ಲೇಖಕ ನಾನು ಎಂದು ಹೇಳುವುದಿಲ್ಲ. ಅವರು ಕೇಳುವುದಿಲ್ಲ. ಒಮ್ಮೆ ಹೇಳುವ ಪ್ರಸಂಗ ಬಂದ್ರೆ ಕೇಳಿದವರು ದಂಗಾಗ್ತಾರೆ. ಕುರ್ಚಿ ಹಾಗೂ ಟೀ ಕೇಳಿ ಗೌರವದಿಂದ ಕಾಣ್ತಾರೆ’’ 
 - ಲಕ್ಷ್ಮಣ್ ರಾವ್.

ಲಕ್ಷ್ಮಣ್ ರಾವ್ ಗೆ ಪುಸ್ತಕ ಪ್ರಕಟಿಸಲು ಪ್ರಕಾಶಕರ ಅವಶ್ಯಕತೆ ಇದೆ. ಒಬ್ಬ ಪ್ರಕಾಶಕ ಲಕ್ಷ್ಮಣ್ ರಾವ್ ಬರೆದಿರುವುದನ್ನು ಓದದೇ ಹೊರಗೆ ಎಸೆದುಬಿಟ್ಟರಂತೆ. ಇದರಿಂದ ನೋವನುಭವಿಸಿದ ಲಕ್ಷ್ಮಣ್ ರಾವ್ ತಮ್ಮ ಪುಸ್ತಕವನ್ನು ತಾವೆ ಮುದ್ರಿಸುವ ನಿರ್ಧಾರಕ್ಕೆ ಬಂದರು. ತಮ್ಮ ಒಂದು ಕೃತಿಯ 1000 ಪ್ರತಿಗೆ ಪ್ರಕಾಶಕರಿಗೆ 25 ಸಾವಿರ ಕೊಡಬೇಕು. ಒಂದು ಕೃತಿಯಲ್ಲಿ ಸಂಗ್ರಹಿಸಿದ ಅಷ್ಟು ಹಣವನ್ನು ಇನ್ನೊಂದು ಕೃತಿ ಮುದ್ರಣಕ್ಕಾಗಿ ಪ್ರಕಾಶಕರಿಗೆ ನೀಡ್ತಾರಂತೆ ಲಕ್ಷ್ಮಣ್. ಪ್ರಕಾಶನ ವಿಚಾರದಲ್ಲಿ ಲಕ್ಷ್ಮಣ್ ತುಂಬಾ ಗಂಭೀರವಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ 13 ಕೃತಿಗಳನ್ನು ಮುದ್ರಿಸುವ ಆಶಯ ಹೊಂದಿದ್ದಾರೆ. ಐಎಸ್ಬಿಎನ್ ಸಂಖ್ಯೆ ಪಡೆಯುವ ಜೊತೆಗೆ ಭಾರತೀಯ ಸಾಹಿತ್ಯ ಕಲಾ ಪ್ರಕಾಶನದಲ್ಲಿ ನೋಂದಣಿ ಸಹ ಪಡೆದಿದ್ದಾರೆ.

ಪದವಿ ಪಡೆಯಲು ಲಕ್ಷ್ಮಣ್ ಮುಂದಾಗಿದ್ದಾರೆ. ಹಾಗಾಗಿ ಹಗಲು ಕೆಲಸ ಮಾಡಿ,ರಾತ್ರಿ ದಾರಿ ದೀಪದ ನೆರವಿನಿಂದ ಪದವಿ ಪುಸ್ತಕವನ್ನು ಅಧ್ಯಯನ ಮಾಡ್ತಿದ್ದಾರೆ.42ನೇ ವಯಸ್ಸಿನಲ್ಲಿ ಪದವಿ ಪಡೆಯಲಿರುವ ಅವರ ಮೇಲೆ ಜನರು ಮಾತ್ರ ವಿಶ್ವಾಸವಿಡುತ್ತಿಲ್ಲ. ಪಾದಚಾರಿ ರಸ್ತೆಯಲ್ಲಿ ಟೀ ಮಾರುವ ವ್ಯಕ್ತಿಯೊಬ್ಬ ಪುಸ್ತಕ ಬರೆಯುತ್ತಾನೆ ಹಾಗೂ ಪದವಿ ಓದುತಿದ್ದಾನೆಂಬುದನ್ನು ನಂಬಲು ಜನರು ಸಿದ್ಧರಿಲ್ಲ. ನೀವು ಲೇಖಕರಾಗಿದ್ದರೆ ಫುಟ್ಪಾತ್ ನಲ್ಲಿ ಏನು ಮಾಡ್ತಿದ್ದೀರಾ ಎಂದು ಪ್ರಶ್ನೆ ಕೇಳ್ತಾರಂತೆ. ದುರಂತ ಅಂದ್ರೆ ಹಿಂದಿ ಭಾಷೆಯಲ್ಲಿ 20 ಪುಸ್ತಕ ಬರೆದ ಲಕ್ಷ್ಮಣ್ ರಾವ್,ಹಿಂದಿ ಭವನದ ಮುಂದೆಯೇ ಟೀ ಮಾರಾಟ ಮಾಡ್ತಿದ್ದಾರೆ.

ಪಾದಾಚಾರಿ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಲಕ್ಷ್ಮಣ್ ರಾವ್ ಮಳೆ ಬಂದ್ರೆ ತೊಂದರೆ ಅನುಭವಿಸುತ್ತಾರೆ. ತಮ್ಮ ಸೈಕಲ್ ಹಾಗೂ ಅದರ ಮೇಲಿರುವ ಪುಸ್ತಕವನ್ನು ರಕ್ಷಿಸಿಕೊಳ್ಳಲು ಕಷ್ಟಪಡುತ್ತಾರೆ. ಇಬ್ಬರು ಮಕ್ಕಳಲ್ಲಿ ಒಬ್ಬ ಮಗನಿಗೆ ಅಂಗಡಿ ಜವಾಬ್ದಾರಿ ವಹಿಸಿ, ಪುಸ್ತಕ ಮಾರಾಟ ಮಾಡಲು ಹೋಗ್ತಾರೆ. ಮತ್ತೆ ಬಂದು ಟೀ ಅಂಗಡಿ ನೋಡಿಕೊಳ್ತಾರೆ. ಬಸ್ ಅಥವಾ ಆಟೋ ಮೂಲಕ ಹೋಗುವ ಶಕ್ತಿ ಅವರಿಗಿಲ್ಲ. ಹಾಗಾಗಿ ಹಳೆ ಸೈಕಲ್ ಅವರಿಗೆ ಆಸರೆ. ಈಗಾಗಲೇ 800 ಶಾಲೆಗಳನ್ನು ಅವರು ಸುತ್ತಿದ್ದಾರೆ. ಅದ್ರಲ್ಲಿ 400 ಶಾಲೆಗಳು ಲಕ್ಷ್ಮಣ್ ಬರೆದಿರುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದಲ್ಲಿಟ್ಟಿವೆ. ಲಕ್ಷ್ಮಣ್ ಜೊತೆ ಮಾತನಾಡಲು ಕೆಲವರು ಮನಸ್ಸು ಮಾಡುವುದಿಲ್ಲ. ಆಗ ಲಕ್ಷ್ಮಣ್ ಬೇಸರ ಮಾಡಿಕೊಳ್ಳುವುದಿಲ್ಲ. ಒಂದು ತಿಂಗಳು ಬಿಟ್ಟು ಮತ್ತೆ ಅಲ್ಲಿಗೆ ವಾಪಸ್ ಹೋಗ್ತಾರಂತೆ.

ಲಕ್ಷ್ಮಣ್ ಬಾಡಿಗೆ ಮನೆಯಲ್ಲಿ ಪತ್ನಿ ರೇಖಾ, ಇಬ್ಬರು ಮಕ್ಕಳಾದ ಹಿತೇಶ್ ಮತ್ತು ಪರೇಶ್ ಜೊತೆ ವಾಸಿಸುತ್ತಾರೆ. ಅವರ ಯೋಚನೆಗಳು ಅಕ್ಷರದಲ್ಲಿ ಮೂಡಿಬರುವುದೂ ಆ ಪುಟ್ಟ ಮನೆಯಲ್ಲಿಯೆ.ಆರಂಭದಲ್ಲಿ ಪತ್ನಿಗೆ ಪುಸ್ತಕ ಬರೆಯುವುದು ಇಷ್ಟವಿರಲಿಲ್ಲವಂತೆ.ದಿನ ಕಳೆದಂತೆ ಪತ್ನಿ ಪ್ರೋತ್ಸಾಹವೂ ಸಿಗ್ತಾ ಇದೆಯಂತೆ.ಮಹಾರಾಷ್ಟ್ರದ ಅಮರಾವತಿಯಲ್ಲಿ ಲಕ್ಷ್ಮಣ್ ಅವರ ಮೂವರು ಸಹೋದರರು ನೆಲೆಸಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಒಬ್ಬರು ಕಾಲೇಜ್ ಉಪನ್ಯಾಸಕರು, ಇನ್ನೊಬ್ಬರು ಅಕೌಂಟೆಂಟ್ ಹಾಗೂ ಇನ್ನೊಬ್ಬರು ಕೃಷಿ ಮಾಡ್ತಿದ್ದಾರಂತೆ.

ಲಕ್ಷ್ಮಣ್ 40 ರೂಪಾಯಿ ತೆಗೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಬಂದಿದ್ದರಂತೆ. ಊರೂರು ಸುತ್ತಬೇಕು,ಪುಸ್ತಕಗಳನ್ನು ಓದಬೇಕು,ಲೇಖನ ಬರೆಯಬೇಕೆಂಬುದು ಅವರ ಮಹದಾಸೆಯಾಗಿತ್ತಂತೆ. ಭೋಪಾಲ್ ಗೆ ಬಂದ ಅವರು ಪಾತ್ರೆ ತೊಳೆಯುವುದು ಸೇರಿದಂತೆ ಎಲ್ಲ ಕೆಲಸವನ್ನೂ ಮಾಡುತ್ತಿದ್ದರಂತೆ. ಅಲ್ಲಿ ಎರಡು ಹೊತ್ತು ಊಟ ಸಿಗುತ್ತಿತ್ತಂತೆ.ಅಲ್ಲಿ ಓದಲು ಅವಕಾಶ ಕೂಡ ಸಿಗ್ತಂತೆ. ಅಲ್ಲಿಯೇ ಮೆಟ್ರಿಕ್ ಪೂರ್ಣಗೊಳಿಸಿದರಂತೆ. 1975ರಲ್ಲಿ ದೆಹಲಿಗೆ ಬಂದ ಅವರು ಕೂಲಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಓದುವ ಹುಚ್ಚು ಹಚ್ಚಿಕೊಂಡಿರುವ ಲಕ್ಷ್ಮಣ್ ಭಾರತೀಯ ಲೇಖಕರೊಂದೆ ಅಲ್ಲ, ಶೇಕ್ಸ್​​ಪಿಯರ್,ಬರ್ನಾರ್ಡ್ ಶಾ ಬರೆದಿರುವ ಪುಸ್ತಕವನ್ನೂ ಓದಿದ್ದಾರೆ.

ಲೇಖಕರು : ನಿಶಾಂತ್ ಗೋಯಲ್

ಅನುವಾದಕರು: ರೂಪ ಹೆಗಡೆ

ಇದನ್ನು ಓದಿ

1. ಮೈಸೂರಿನಲ್ಲಿ135 ಅಡಿ ಎತ್ತರದ ಕ್ಲಾಕ್ ಟವರ್..!

2. ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!

3. ಅನುಭವವಿಲ್ಲದಿದ್ರೂ ಅದ್ಭುತ ಹೆಚ್ ಆರ್.. ! : ಇದು ನಿತ್ಯಾ ಡೇವಿಡ್ ಅವರ ವೃತ್ತಿ ಬದುಕಿನ ಯಶೋಗಾಥೆ

Related Stories