ಪುಟಾಣಿಗಳಿಗೂ ಬಂದಿವೆ ವೆರೈಟಿ ವೆರೈಟಿ ಹೆಲ್ಮೆಟ್....

ನಿನಾದ

0

ಸರ್ಕಾರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಬರುತ್ತಿದ್ದಂತೆ ಹೆಚ್ಚು ತಲೆಕೆಡಿಸಿಕೊಂಡದ್ದು ಪೋಷಕರೇ. ದೊಡ್ಡವರಿಗೇನೋ ಹೆಲ್ಮೆಟ್ ಹಾಕಬಹುದು. ಆದ್ರೆ ನಮ್ಮ ಮುಂದಿನ ಕಂದಮ್ಮಗಳಿಗೆ ಎಲ್ಲಿಂದಪ್ಪಾ ಹೆಲ್ಮೆಟ್ ತರೋದು ಅಂತಾ ಚಿಂತೆಗೀಡಾಗಿದ್ರು. ಆದ್ರೀಗ ಪೋಷಕರ ಈ ತಲೆನೋವಿಗೂ ಪರಿಹಾರ ಸಿಕ್ಕಿದೆ. ಮಾರುಕಟ್ಟೆಗೆ ವಿವಿಧ ವಿನ್ಯಾಸ ಮಕ್ಕಳ ಹೆಲ್ಮೆಟ್ ಗಳು ಲಗ್ಗೆ ಇಟ್ಟಿವೆ.

ಇಷ್ಟು ದಿನ ಟಿವಿಯಲ್ಲೋ ಇಲ್ಲೋ ಆಟಿಕೆಗಳಲ್ಲೋ ಮಿಂಚುತ್ತಿದ್ದ ಛೋಟಾ ಭೀಮ್, ಡೋರೆಮೋನ್, ಮಿಕ್ಕಿ ಮೌಸ್, ಸ್ಪೈಡರ್ ಮ್ಯಾನ್ ಈಗ ಹೆಲ್ಮೆಟ್ ಗಳಲ್ಲೂ ಮಿಂಚುತ್ತಿದ್ದಾರೆ. ಮಕ್ಕಳ ಇಷ್ಟದ ಕಾರ್ಟೂನ್ ಗಳಾದ ಇವುಗಳೆಲ್ಲಾ ಈ ಹೆಲ್ಮೆಟ್ ನಲ್ಲೂ ಪ್ರತ್ಯಕ್ಷವಾಗಿ ಮಕ್ಕಳಿಗೆ ನೀವು ಹೆಲ್ಮೆಟ್ ಧರಿಸಿ ಅಂತಿವೆ. ಹಾಗಾಗಿ ಮಕ್ಕಳು ಕೂಡ ನಮಗೆ ಕಾರ್ಟೂನ್ ಇರುವ ಹೆಲ್ಮೆಟೇ ಬೇಕು ಅಂತಿದ್ದಾರೆ. ಇನ್ನು ಮಕ್ಕಳಿಗೆ ಹೆಲ್ಮೆಟ್ ಧರಿಸೋದು ಕಿರಿಕಿರಿ ಅನ್ನಿಸೋದು ಸಾಮಾನ್ಯ. ಹಾಗಾಗಿ ಮಕ್ಕಳನ್ನು ಆಕರ್ಷಿಸಲೆಂದೇ ಅವರಿಗೆ ಇಷ್ಟವಾಗುವ ವಿನ್ಯಾಸದ ಹೆಲ್ಮೆಟ್ ಗಳೇ ಮಾರುಕಟ್ಟೆಗೆ ಬಂದಿವೆ ಅಂತಾರೆ ಬೆಂಗಳೂರಿನ ಜೆಸಿ ರೋಡ್ ನಲ್ಲಿರುವ ಚೇತನ್ ಹೆಲ್ಮೆಟ್ ಹೋಲ್ಡರ್ಸ್ ಮಾಲೀಕ ರಮೇಶ್.

ಛೋಟಾ ಭೀಮ್, ಸ್ಪೈಡರ್ ಮ್ಯಾನ್ , ಮಿಕ್ಕಿ ಮೌಸ್, ಹೀಗೆ ವಿವಿಧ ಮಾದರಿಯ ಹೆಲ್ಮೆಟ್ ಗಳೇನೋ ಮಾರುಕಟ್ಟೆಗೆ ಬಂದಿವೆ. ಆದ್ರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಲ್ಮೆಟ್ ಗಳು 5 ರಿಂದ 10 ವರ್ಷದ ಮಕ್ಕಳು ಧರಿಸಬಹುದಾದ ಹೆಲ್ಮೆಟ್ ಗಳು. ಇನ್ನು ಹೆಲ್ಮೆಟ್ ಧರಿಸೋವಾಗ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಗಳನ್ನೇ ಧರಿಸಬೇಕು ಅಂತಾ ನಿಯಮ ಇದೆ. ಆದ್ರೆ ಮಕ್ಕಳಿಗೆ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಗಳು ಇನ್ನೂ ಬಂದಿಲ್ಲ. ಹಾಗಾಗಿ ಎಲ್ಲಿ ಫೈನ್ ಬೀಳುತ್ತೋ ಅನ್ನೋ ಭಯಕ್ಕೆ ಸದ್ಯ ಲಭ್ಯವಿರುವ ಐಎಸ್ಐ ಮಾರ್ಕ್ ರಹಿತ ಹೆಲ್ಮೆಟ್ ಗಳನ್ನೇ ಖರೀದಿ ಮಾಡುತ್ತಿದ್ದೇವೆ ಅಂತಾರೆ ಪೋಷಕಿ ಗೀತಾ.

ಅಂದ್ಹಾಗೆ ದೇಶದಲ್ಲಿ ಮಕ್ಕಳ ಹೆಲ್ಮೆಟ್ ಗೆ ಬೇಡಿಕೆ ತೀರಾ ಕಡಿಮೆ. ಹಾಗಾಗಿ ದೊಡ್ಡವರ ಹೆಲ್ಮೆಟ್ ಗಳಿಗೆ ಹೋಲಿಸಿದ್ರೆ ಮಕ್ಕಳ ಹೆಲ್ಮೆಟ್ ಗಳಲ್ಲಿ ಹೆಚ್ಚಿನ ವಿನ್ಯಾಸದ ಹೆಲ್ಮೆಟ್ ಗಳು ಇನ್ನು ಮಾರುಕಟ್ಟೆ ಬಂದಿಲ್ಲ. ಅಲ್ಲದೇ ಈಗಷ್ಟೇ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಅನ್ನೋ ನಿಯಮ ಜಾರಿಯಾಗಿರೋದರಿಂದ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಮಾರುಕಟ್ಟೆಗೆ ಬರೋದಕ್ಕೆ ಕನಿಷ್ಟ ಅಂದ್ರೂ ನಾಲ್ಕೈದು ತಿಂಗಳುಗಳು ಬೇಕು. ಹಾಗಾಗಿ ಅಲ್ಲಿಯವರೆಗೂ ಐಎಸ್ ಐ ರಹಿತ ಹೆಲ್ಮೆಟ್ ಗಳನ್ನೇ ಬಳಸಬೇಕಷ್ಟೇ. ಇನ್ನು ದೊಡ್ಡವರ ಹೆಲ್ಮೆಟ್ ದರಗಳಿಗೆ ಹೋಲಿಸಿದ್ರೆ ಮಕ್ಕಳ ಹೆಲ್ಮೆಟ್ ದರ ಕಡಿಮೆಯಿದೆ. 450 ರೂಪಾಯಿಗಳಿಗೆ ಹೆಲ್ಮೆಟ್ ದೊರೆಯುತ್ತಿದೆ. ಆದ್ರೆ ಮಕ್ಕಳಿಗಾಗಿ ಹೆಲ್ಮೆಟ್ ಕಡ್ಡಾಯ ವಿಚಾರದಲ್ಲಿ ಸ್ವಲ್ಪ ಕಾಲವಕಾಶ ಕೊಟ್ರೆ ಚೆನ್ನಾಗಿರುತ್ತೆ ಅನ್ನೋದು ಪೋಷಕರ ಅಭಿಪ್ರಾಯ.

Related Stories