ಕಷ್ಟಕ್ಕೆ ಅಂಜಲಿಲ್ಲ- ಅಮಾನದ ಬಗ್ಗೆ ಚಿಂತೆ ಮಾಡಲಿಲ್ಲ- ಇದು ಶನ್ನೋ ಬೇಗಂರ ಸ್ಫೂರ್ತಿಯ ಕಥೆ

ಟೀಮ್​ ವೈ.ಎಸ್​. ಕನ್ನಡ

1

ಬದುಕು ಅಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ನಮಗೆ ಇಷ್ಟವಿಲ್ಲದೇ ಇರುವ ನೋವುಗಳು ಎದುರಾಗುತ್ತವೆ. ಇನ್ನು ಕೆಲವೊಮ್ಮೆ ಖುಷಿಯಿಂದ ತೇಲಾಡುತ್ತೇವೆ. ಆದ್ರೆ ಅನಿವಾರ್ಯತೆ ಅನ್ನೋದು ಪ್ರತಿದಿನವೂ ಎದುರಾಗುವ ಸವಾಲು. ಆದ್ರೆ ಅನಿವಾರ್ಯತೆ ಕೆಲವೊಮ್ಮೆ ನಿಮ್ಮನ್ನು ಮಾದರಿಯನ್ನಾಗಿಸುತ್ತದೆ ಅನ್ನುವುದು ಸುಳ್ಳಲ್ಲ. ಅದಕ್ಕೊಂದು ಉದಾಹರಣೆ ದೆಹಲಿಯ ಶನ್ನೋ ಬೇಗಂ. ಈಗ ಈಕೆ ಉಬರ್ ಕ್ಯಾಬ್ ಚಾಲಕಿ. ಅಂದಹಾಗೇ ಈಕೆ ಉಬರ್ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ಹೆಣ್ಣುಮಗಳು ಅನ್ನುವ ಹೆಮ್ಮೆ ಈಕೆಗಿದೆ.

ಅಂದಹಾಗೇ, ಶನ್ನೋ ಬೇಗಂ ಶಾಲೆಯ ಮೆಟ್ಟಿಲು ಹತ್ತಿರದವರಲ್ಲ. ಕಟ್ಟಿಕೊಂಡ ಗಂಡ ದುರಾದೃಷ್ಟವಶಾತ್ ಸ್ವರ್ಗ ಸೇರಿಕೊಂಡ್ರು. ಬದುಕು ಸಾಗಿಸುವ ಅನಿವಾರ್ಯತೆ ಎದುರಾಯಿತು. ಹಲವು ಕಷ್ಟಗಳನ್ನು ಎದುರಿಸಿದ್ರು. ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟದ ಮಾತು. ಅದರ ನಡುವೆ ಮೂರು ಮಕ್ಕಳು ಬೇರೆ. ಎಲ್ಲಾ ಕಡೆ ಹಲವು ಕೆಲಸಗಳನ್ನು ಮಾಡಿದ್ರೂ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟದ ಮಾತಾಗಿತ್ತು. ಕೊನೆಗೆ ಡ್ರೈವರ್ ಆಗಿ ಉಬರ್ ಸೇರಿಕೊಂಡ್ರು. ಶನ್ನೋ ಬೇಗಂರ ಈ ನಿರ್ಧಾರವನ್ನು ಹಲವರು ಪ್ರಶ್ನಿಸಿದ್ರು. ಪುರುಷರದ್ದೇ ಮೇಲುಗೈ ಇರುವ ಈ ಕೆಲಸದಲ್ಲಿ ಬೇಗಂ ಗೆಲ್ತಾರಾ ಅನ್ನುವ ಪ್ರಶ್ನೆ ಹಾಕಿದ್ದವರೇ ಹೆಚ್ಚು. ಆದ್ರೆ ಶನ್ನೋ ಬೇಗಂ ಇಂತಹ ತರಲೆ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮಕ್ಕಳನ್ನು ಸಾಕುವ, ದೊಡ್ಡ ಜವಾಬ್ದಾರಿಯನ್ನು ಯೋಚಿಸಿ, ಉಬರ್ ನಲ್ಲಿ ಡ್ರೈವರ್ ಆಗಿ ಸೇರಿಕೊಂಡ್ರು. ಕೆಲಸದ ಅನಿವಾರ್ಯತೆಯೇ ಶನ್ನೋ ಬೇಗಂರನ್ನು ಎಲ್ಲರಿಗೂ ಮಾದರಿಯನ್ನಾಗಿ ಮಾಡಿಬಿಟ್ಟಿದೆ.

ಇದನ್ನು ಓದಿ: ಮುಳ್ಳಿನ ಗಿಡದಲ್ಲಿ ಗುಲಾಬಿ ಅರಳಿತು..! 

ಶನ್ನೋ ಬೇಗಂ ತನ್ನ ಗಂಡನನ್ನು ಕಳೆದುಕೊಂಡ ಮೇಲೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿದ್ರು. ಆದ್ರೆ ಅಲ್ಲಿ ಬರುತ್ತಿದ್ದ ಸಂಬಳದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಮಕ್ಕಳ ವಿದ್ಯಾಭ್ಯಾಸದ ಮಾತು ದೂರವೇ ಆಗಿತ್ತು. ಕೆಲ ಸಮಯದ ಬಳಿಕ ಶನ್ನೋ ಬೇಗಂ ಆ ಕೆಲಸ ಬಿಟ್ಟು, ನರ್ಸ್ ಕೆಲಸಕ್ಕೆ ಸೇರಿಕೊಂಡರು. ಅಲ್ಲೂ ದೊಡ್ಡ ಸಂಪಾದನೆ ಆಗಲಿಲ್ಲ. ತಿಂಗಳಿಗೆ ಬರುತ್ತಿದ್ದ 6000 ರೂಪಾಯಿ ಆದಾಯದಲ್ಲಿ ಏನು ಕೂಡ ಬದಲಾವಣೆ ಮಾಡಲು ಸಾಧ್ಯವಿರಲಿಲ್ಲ.

ಇಂತಹ ಕಷ್ಟದ ಸಮಯದಲ್ಲಿ ಶನ್ನೋ ಬೇಗಂ ಆಝಾದ್ ಫೌಂಡೇಷನ್ ಅನ್ನುವ ಎನ್​ಜಿಒ ಒಂದರ ಬಗ್ಗೆ ತಿಳಿದುಕೊಂಡರು. ಆಝಾದ್ ಫೌಂಡೇಷನ್ ಬಡ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿತ್ತು. ಶನ್ನೋ ಅಲ್ಲಿ ಸೇರಿಕೊಂಡು 6 ತಿಂಗಳ ಡ್ರೈವಿಂಗ್ ಅಭ್ಯಾಸಕ್ಕೆ ಮುಂದಾದ್ರು. ಆದ್ರೆ ಡ್ರೈವಿಂಗ್ ಕಲಿಯಲು 10ನೇ ತರಗತಿ ಪಾಸ್ ಮಾಡಬೇಕಿತ್ತು. ಆದ್ರೆ ಶನ್ನೋಗೆ ಮತ್ತೆ ಹಿನ್ನಡೆ ಆಯಿತು. ಆದ್ರೆ ಛಲ ಬಿಡಲಿಲ್ಲ. 40ನೇ ವರ್ಷದಲ್ಲಿ 10ನೇ ತರಗತಿ ಪಾಸ್ ಮಾಡಿದ್ರು. ರಾತ್ರಿಯಿಡೀ ಕಷ್ಟಪಟ್ಟು ಶನ್ನೋ ಡ್ರೈವಿಂಗ್ ಕಲಿಯಲು ಅಗತ್ಯವಿದ್ದ 10ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡಿದ್ದರು. ಅಷ್ಟೇ ಅಲ್ಲ ಕೇವಲ ಎರಡು ವರ್ಷಗಳಲ್ಲಿ ಶನ್ನೋ ಬೇಗಂ 10ನೇ ತರಗತಿ ಮತ್ತು ಡ್ರೈವಿಂಗ್ ಪರೀಕ್ಷೆಯನ್ನು ಪಾಸ್ ಮಾಡಿದ್ದರು.

“ ಕಲಿಕಾ ಸಮಯದಲ್ಲಿ ಫೌಂಡೇಷನ್​ ಮೂಲಕ ನಾನು ಸಾಕಷ್ಟು ಕಲಿತೆ. ಮ್ಯಾಪ್ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡು, ಹೆಣ್ಣುಮಕ್ಕಳಿಗೆ ಅಗತ್ಯವಿರುವ ರಕ್ಷಣಾ ಕಲೆಯನ್ನು ಕೂಡ ಕಲಿತುಕೊಂಡೆ. ”
- ಶನ್ನೋ ಬೇಗಂ, ಉಬರ್ ಡ್ರೈವರ್

ಈ ನಡುವೆ ಶನ್ನೋ ಉಬರ್ ಸೇರುವ ಮುನ್ನ ಖಾಸಗಿ ಚಾನೆಲ್ ಆಜ್​ತಕ್ ಮತ್ತು ಇಂಡಿಗೋ ಏರ್​ಲೈನ್ಸ್​ನಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದ್ದರು. ಆದ್ರೆ ಉಬರ್​ನಲ್ಲಿ ಡ್ರೈವರ್ ಆಗಿ ಸೇರಿಕೊಂಡ ಬಳಿಕ ಶನ್ನೋ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಆರಾಮವಾಗಿ ಜೀವನ ನಡೆಸುತ್ತಿದ್ದಾರೆ.

“ ನನ್ನ ಮಗಳು IGNOUನಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ. ಮಗ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಹಿಂದೆ ತಿಂಗಳಿಗೆ 6000 ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಈಗ ವಾರಕ್ಕೆ 12000 ರೂಪಾಯಿ ಸಂಪಾದನೆ ಇದೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗ್ತಿದೆ. ನನ್ನಂತೆ ಮಕ್ಕಳು ಕಷ್ಟಪಡಬಾರದು”
- ಶನ್ನೋ ಬೇಗಂ, ಉಬರ್ ಡ್ರೈವರ್

ಶನ್ನೋ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಶ್ರದ್ಧೆ ಮತ್ತು ಪರಿಶ್ರಮ ಶನ್ನೊ ಯಶಸ್ಸಿನ ಗುಟ್ಟು ಅನ್ನುವುದರಲ್ಲಿ ಎರಡು ಮಾತಿಲ್ಲ. ಪುರಷರೇ ಮಾಡಬೇಕು ಅನ್ನುವ ಡ್ರೈವಿಂಗ್ ಕೆಲಸವನ್ನು ಒಬ್ಬ ಹೆಣ್ಣಾಗಿ ಆಯ್ಕೆ ಮಾಡಿಕೊಂಡು ಎಲ್ಲರಿಗೂ ಮಾದರಿ ಆಗಿದ್ದಾರೆ.  

ಇದನ್ನು ಓದಿ:

1. ವಿಶೇಷ ಚೇತನರ ವಿಶೇಷ ಮದುವೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ 104 ಜೋಡಿಗಳು

2. ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ!

3. ಡಿಜಿಟಲ್​ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್​ಕ್ಯಾಶ್​..!

Related Stories

Stories by YourStory Kannada