ಇಂಡಿಯಾ ಎನ್ಐಸಿ –ಅಹ್ಮದಾಬಾದ್​​ನಲ್ಲೊಂದು ಐಟಿ ಸೇವಾ ಕಂಪನಿ

ಟೀಮ್​​ ವೈ.ಎಸ್​​.

ಇಂಡಿಯಾ ಎನ್ಐಸಿ –ಅಹ್ಮದಾಬಾದ್​​ನಲ್ಲೊಂದು ಐಟಿ ಸೇವಾ ಕಂಪನಿ

Thursday October 22, 2015,

2 min Read

ಅದು 80, 90ರ ದಶಕ. ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮುಂಚೂಣಿಗೆ ಬಂದ ಸ್ವರ್ಣ ಯುಗ. ತಂತ್ರಜ್ಞಾನ ಅಧರಿತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮೊದಲ ಸಾಲಿಗೆ ಬಂದು ನಿಂತಿದ್ದವು. ಆ ಬಳಿಕ ಉತ್ಪನ್ನಗಳ ಖರೀದಿಯೇ ಆದ್ಯತೆಯಾಗಿ ಬದಲಾಯಿತು. ಕಳೆದ 5-7 ವರ್ಷಗಳಿಂದ ಈ ಕ್ಷೇತ್ರದಲ್ಲಿ ಭಾರೀ ವಹಿವಾಟು ನಡೆಯುತ್ತಿದೆ. ದೇಶದ ಹಲವು ಕಂಪನಿಗಳು ಜಾಗತಿಕ ಕಂಪನಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆಗೆ ಸೇವಾಕ್ಷೇತ್ರದ ಕಂಪನಿಗಳೂ ಕ್ಷೇತ್ರದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿವೆ. ಈ ಪೈಕಿ ಇಂಡಿಯಾ ಎನ್ಐಸಿ ಕೂಡಾ ಒಂದು. ಇದರ ವಿಶೇಷತೆ ಏನೆಂದರೆ, ಇದು 1997ರಲ್ಲೇ ಅಹ್ಮದಾಬಾದ್​​ನಲ್ಲಿ ಸ್ಥಾಪನೆಯಾಗಿತ್ತು. ಎಲ್ಲರೂ, ಬೆಂಗಳೂರು, ಹೈದ್ರಾಬಾದ್, ಪುಣೆಯತ್ತ ಮುಖ ಮಾಡಿರುವಾಗ ಅಹ್ಮದಾಬಾದ್​​ನಲ್ಲೇ ಸಂಸ್ಥೆಗೆ ನೆಲೆ ಒದಗಿಸಿರುವುದು ಇವರ ಸಾಮರ್ಥ್ಯಕ್ಕೆ ಸಾಕ್ಷಿ.

90ರ ದಶಕದ ಮಧ್ಯ ಭಾಗದಲ್ಲಿ, ಕಾಲೇಜು ಶಿಕ್ಷಣ ಮುಗಿಸಿ ಹೊರಬಂದ ಸಂದೀಪ್ ಮುಂದ್ರಾ ನೇರವಾಗಿ ಐಟಿ ಕ್ಷೇತ್ರವೆಂಬ ದೊಡ್ಡ ಕೊಳಕ್ಕೆ ಧುಮುಕಿದರು. ಈಜುವುದನ್ನು ಕಲಿತರು. ವೆಬ್ ಹೋಸ್ಟಿಂಗ್ ಮತ್ತು ರಿಜಿಸ್ಟ್ರೇಷನ್ ಡೊಮೈನ್ ಕಂಪನಿಯಾಗಿ ಇಂಡಿಯಾ ಎನ್ಐಸಿಯನ್ನು ಸ್ಥಾಪಿಸಿದರು. ಈ ಉದ್ಯಮದಲ್ಲಿ ಆಗಲೇ ಹಲವು ಸಂಸ್ಥೆಗಳಿದ್ದರೂ, ಸಂದೀಪ್​​ರ ಬದ್ಧತೆ ಆರಂಭದಲ್ಲೇ ವ್ಯವಹಾರ ತಂದುಕೊಟ್ಟಿತು. “ನಾವು ಗ್ರಾಹಕರ ಜೊತೆ ವ್ಯವಹರಿಸುತ್ತಾ ಮೊದಲ ಪಾಠಗಳನ್ನು ಕಲಿತೆವು. ಅತ್ಯುತ್ತಮವಾದ ಫಲಿತಾಂಶ ನೀಡುವ ನಮ್ಮ ಬದ್ಧತೆಯಿಂದಾಗಿಯೇ, ನಮ್ಮ ಗ್ರಾಹಕರು ಇತರರಿಗೂ ನಮ್ಮನ್ನು ಪರಿಚಯಿಸಿದರು,” ಎನ್ನುತ್ತಾರೆ ಸಂದೀಪ್.

image


ಈಗ ಸಂಸ್ಥೆಯು ಬೆಳೆಯುತ್ತಿದೆ, ಹಾಗೆಯೇ ಅದರ ಅಂಗಸಂಸ್ಥೆಗಳೂ ಹೆಚ್ಚಾಗ ತೊಡಗಿವೆ. ಇಂಡಿಯಾ ಎನ್ಐಸಿಯು ವೆಬ್ ಡೆವಲಪ್​​ಮೆಂಟ್ ಉದ್ಯಮವನ್ನು ಆರಂಭಿಸಿದ ಬಳಿಕ, ವಹಿವಾಟು ದ್ವಿಗುಣಗೊಂಡಿದೆ. “ವೆಬ್ ಡೆವಲಪ್​​ಮೆಂಟ್ ಸೇವೆ ನೀಡುವ ಹಲವು ಕಂಪನಿಗಳಲ್ಲಿ ನಮ್ಮದೂ ಒಂದು. ಆದರೆ, ಅಹ್ಮದಾಬಾದ್​​ನಿಂದಲೇ ಸೇವೆ ನೀಡುವ ಕಂಪನಿಗಳ ಪೈಕಿ ನಾವೇ ಲೀಡರ್ಸ್,” ಎನ್ನುತ್ತಾರೆ ಸಂದೀಪ್.

2006ರ ವೇಳೆಗೆ ಇಂಡಿಯಾ ಎನ್ಐಸಿಯು ಕ್ಷೇತ್ರದಲ್ಲಿ ದೊಡ್ಡ ಹೆಸರುಮಾಡಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ಮೊಬೈಲ್ ಕ್ರಾಂತಿ ಕೂಡಾ ಆರಂಭಗೊಂಡಿತ್ತು. 2007ರಲ್ಲಿ ಆ್ಯಪಲ್ ಐಫೋನ್ ಲಾಂಚ್ ಮಾಡಿತು. ಇದೇ ಅಲೆ ಹಿಡಿದು ಇಂಡಿಯಾ ಎನ್ಐಸಿ ಕೂಡಾ ತೇಲಿತು. “ಐಫೋನ್ ಆ್ಯಪ್ ಅಭಿವೃದ್ಧಿಯಲ್ಲಿ ಇಂಡಿಯಾ ಎನ್ಐಸಿ ಮುಂಚೂಣಿ ಸಂಸ್ಥೆಯಾಗಿದೆ. ವೆಬ್ ಡೆವಲಪ್​​ಮೆಂಟ್​​ ಜೊತೆಗೆ, ನಾವು ಮೊಬೈಲ್ ಅಭಿವೃದ್ಧಿಯಲ್ಲೂ ಗಮನ ಹರಿಸಿದ್ದೇವೆ. ಇಂದು, ವೆಬ್ ಮತ್ತು ಮೊಬೈಲ್ ನಮ್ಮ ಎರಡು ಪ್ರಮುಖ ಶಕ್ತಿಗಳಾಗಿವೆ,” ಎನ್ನುತ್ತಾರೆ ಸಂದೀಪ್. ಮೊಬೈಲ್ ವಿಭಾಗವನ್ನು ಜಿಗರ್ ಪಾಂಚಾಲ್ ಅವರು ನೋಡಿಕೊಳ್ಳುತ್ತಿದ್ದಾರೆ. “ಬಹುತೇಕ ಪ್ರತಿಸ್ಪರ್ಧಿಗಳು, ಐಫೋನ್ ಕ್ರೇಝ್ ಎಷ್ಟು ದಿನ ಉಳಿಯುತ್ತೋ ಅಂತ ಲೆಕ್ಕಾಚಾರ ಹಾಕುತ್ತಿದ್ದರು. ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಸ್ಟಮ್ ಅಪ್ಲಿಕೇಶನ್​​ಗಳನ್ನು ಅಭಿವೃದ್ಧಿಪಡಿಸಲಾರಂಭಿಸಿದೆವು. ಆ್ಯಂಡ್ರಾಯ್ಡ್ ವಿಚಾರದಲ್ಲೂ ಹೀಗೆಯೇ ಆಯಿತು.” ಎನ್ನುತ್ತಾರೆ ಜಿಗರ್.

ಅಹ್ಮದಾಬಾದ್​​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಡಿಯಾಎನ್ಐಸಿ, ಅಮೆರಿಕಾ ಮತ್ತು ಯೂರೋಪ್​​ಗಳಲ್ಲಿ ಶಾಖೆ ಹೊಂದಿದೆ. ಒಟ್ಟು 4000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಪೈಕಿ 40ಶೇಕಡಾ ವ್ಯವಹಾರ ಪುನರಪಿ ಗ್ರಾಹಕರಿಂದಲೇ ಬರುತ್ತಿದೆ. ಕಂಪನಿಯು ವೈವಿಧ್ಯಮಯ ಸೇವೆಗಳನ್ನು ನೀಡುತ್ತಿದ್ದು, 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. “ಉದ್ಯೋಗಿಗಳ ಸಂಖ್ಯೆ ಮತ್ತು ಪ್ರಾಜೆಕ್ಟ್​​ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ನಾವು ಜೊತೆಯಾಗಿ ಕೆಲಸ ಮಾಡುವ ಹಾದಿ ಹುಡುಕಿಕೊಳ್ಳಬೇಕಾಯಿತು. ಇದರಿಂದಾಗಿ ನಮ್ಮ ಕಂಪನಿಯ ಸಾಂಸ್ಥಿಕ ಸ್ವರೂಪದಲ್ಲಿ ಹೆಚ್ಚು ಬದಲಾವಣೆ ಮಾಡಬೇಕಾಯಿತು.” ಎನ್ನುತ್ತಾರೆ ಸಂದೀಪ್.

image


ಇಂಡಿಯಾ ಎನ್ಐಸಿಯು ತನ್ನದೇ ಆದ ಐಫೋನ್ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ತಮ್ಮ ಹೊಸ ಯೋಜನೆಗಳು, ಸೇವೆಗಳ ಬಗ್ಗೆ ವಿಸ್ತೃತವಾದ ಅಪ್​ಡೇಟ್​​ಗಳನ್ನು ಕೊಡುತ್ತಿದೆ. ಅಷ್ಟೇ ಅಲ್ಲ, ಇಂಡಿಯಾ ಎನ್ಐಸಿಯು ಅಹ್ಮದಾಬಾದ್​​ನ್ನು ಐಟಿ ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅಹ್ಮದಾಬಾದ್​ನಲ್ಲಿ ಹಲವು ಉದ್ಯಮಿಗಳು ನವ್ಯೋದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ. ಇದು ನಮಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಇಬ್ಬರು ಯುವಕರು ಸ್ಪೇಸ್ ಒ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಡಿಯಾ ಎನ್ಐಸಿಗೆ ತನ್ನದೇ ಆದ ಪಾತ್ರ ನಿರ್ವಹಿಸುವ ಅನಿವಾರ್ಯತೆ ಇದೆ. ಭಾರತದ ಉದ್ಯಮಕ್ಕೆ ಸೇವೆ ಸಲ್ಲಿಸುವ ಮತ್ತು ತಂತ್ರಜ್ಞಾನದ ಮೂಲಕ ಸ್ಥಳೀಯ ಉದ್ಯಮವನ್ನು ಬೆಳೆಸುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ ಸಂದೀಪ್.