ಬಳಸಿ ಯುಕ್ತಿ – ಉಪಯೋಗಿಸಿ ಸೌರಶಕ್ತಿ..!

ಟೀಮ್​​ ವೈ.ಎಸ್​​. ಕನ್ನಡ

0

ಕಾತ್ರಾ ರೈಲ್ವೇ ಸ್ಟೇಷನ್‍ನಲ್ಲಿ ಸ್ಥಾಪಿಸಿರುವ ಒಂದು ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರದಿಂದ ವಾರ್ಷಿಕ ಒಂದು ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಕಟ್ಟುವುದು ಉಳಿತಾಯ ಮಾಡಲಾಗುತ್ತಿದೆ. ಹಾಗೂ ರೈಲ್ವೇ ನಿಲ್ದಾಣದ ಆವರಣದಲ್ಲಿ ಆರೋಗ್ಯ ಮತ್ತು ಪರಿಸರಕ್ಕೆ ಮಾರಕವಾದ ಇಂಗಾಲದ ಡೈಆಕ್ಸೈಡ್‍ ಅನ್ನು ಕಡಿಮೆ ಮಾಡಲಾಗಿದೆ. ಸುಸ್ಥಿರ ಅಭಿವೃದ್ಧಿಗೋಸ್ಕರ ಹಾಗೂ ಹವಾಮಾನ ಬದಲಾವಣೆಯ ವೈಪರೀತ್ಯ ಪರಿಣಾಮಗಳನ್ನು ತಡೆಗಟ್ಟಲು, ಪರಿಸರಕ್ಕೆ ಮಾರಕವಾಗದ ಹಾಗೂ ಮರುಬಳಕೆ ಮಾಡಬಹುದಾದ ಯೋಜನೆಗಳಿಗೆ ಒತ್ತು ಕೊಡುವ ಉದ್ದೇಶದೊಂದಿಗೆ ಕಾತ್ರಾ ನಿಲ್ದಾಣದಲ್ಲಿ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರನ್ನು ಸ್ಥಾಪಿಸಲಾಗಿದೆ ಅಂತಾರೆ ಉತ್ತರ ಭಾರತ ವಿಭಾಗದ ಹಿರಿಯ ರೈಲ್ವೇ ಅಧಿಕಾರಿ.

ಇದೇ 2015ರ ಮಾರ್ಚ್‍ನಲ್ಲಿ ಈ ಸೌರ ವಿದ್ಯುತ್ ಯೋಜನೆ ಪ್ರಾರಂಭವಾಯ್ತು. ಸದ್ಯ ಈ ಸ್ಥಾವರದಲ್ಲಿ ಐದು ಸಾವಿರ ಯೂನಿಟ್‍ನಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅದರಲ್ಲಿ ಕೇವಲ 1700ರಿಂದ 1800 ಯೂನಿಟ್‍ಗಳು ಮಾತ್ರ ಶ್ರೀ ಮಾತಾ ವೈಷ್ಣೋ ದೇವಿ ಕಾತ್ರಾ ರೈಲ್ವೇ ನಿಲ್ದಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಉಳಿದ 3200ರಿಂದ 3300 ಯೂನಿಟ್ ವಿದ್ಯುತ್‍ಅನ್ನು ಜಮ್ಮು ಕಾಶ್ಮೀರ ಸರ್ಕಾರದ ಪವರ್ ಡೆವೆಲಪ್‍ಮೆಂಟ್ ಡಿಪಾರ್ಟ್‍ಮೆಂಟ್‍ಗೆ ಸರಬರಾಜು ಮಾಡಲಾಗುತ್ತಿದೆ. 2 ಮತ್ತು 3ನೇ ಪ್ಲ್ಯಾಟ್‍ಫಾರ್ಮ್‍ನಲ್ಲಿ 300 ಕಿಲೋವ್ಯಾಟ್ಸ್, 550 ಕಿಲೋವ್ಯಾಟ್ಸ್​​​ನ್ನು ಪ್ಲ್ಯಾಟ್‍ಫಾರ್ಮ್ 1ರಲ್ಲಿ, 100 ಕಿಲೋವ್ಯಾಟ್ಸ್​​​ನ್ನು ರೈಲ್ವೇ ನಿಲ್ದಾಣದ ಕಟ್ಟಡದ ಮೇಲೆ ಹಾಗೂ 50 ಕಿಲೋವ್ಯಾಟ್ಸ್​​ನ್ನು ಸುರಂಗಮಾರ್ಗದ ಮೇಲ್ಚಾವಣಿ ಮೇಲೆ- ಹೀಗೆ ರೈಲ್ವೇ ನಿಲ್ದಾಣದಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸುವ ಮೂಲಕ ಇಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್‍ಅನ್ನು ಉತ್ಪಾದಿಸಲಾಗುತ್ತಿದೆ.

ಇದರಿಂದ ಆಗುತ್ತಿರುವ ಬಹುಮುಖ್ಯ ಉಪಯೋಗ ಅಂದ್ರೆ ವಾರ್ಷಿಕವಾಗಿ ಪರಿಸರಕ್ಕೆ ಸೇರುತ್ತಿದ್ದ 10 ಸಾವಿರ ಟನ್‍ನಷ್ಟು ಇಂಗಾಲದ ಡೈಆಕ್ಸೈಡ್‍ಅನ್ನು ಕಡಿತಗೊಳಿಸಿರೋದು. ಹಾಗೂ ವರ್ಷಕ್ಕೆ 1 ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್‍ಅನ್ನು ಉಳಿತಾಯ ಮಾಡಲಾಗುತ್ತಿದೆ ಅಂತ ಮಾಹಿತಿ ನೀಡ್ತಾರೆ ಕಾತ್ರಾ ನಿಲ್ದಾಣದ ರೈಲ್ವೇ ಅಧಿಕಾರಿ. ಪರಿಸರಸ್ನೇಹಿ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತಿರುವ ರೈಲ್ವೇ ಇಲಾಖೆ, ಗುರ್‍ಗಾವ್ ಸ್ಟೇಷನ್‍ನಲ್ಲಿ 25 ಕಿಲೋವ್ಯಾಟ್ ಸಾಮಥ್ರ್ಯದ ಸೌರ ಶಕ್ತಿ ಪ್ಯಾನಲ್‍ಗಳನ್ನು ಅಳವಡಿಸಿದೆ. ಹಾಗೇ ಬಹದ್ದೂರ್‍ಗಢ, ಪಾಣಿಪತ್ ಸಮೀಪದ ದಿವಾನಾ ಹಾಗೂ ನವ ದೆಹಲಿಯ ಡಿಆರ್‍ಎಮ್ ಕಚೇರಿಯ ವಿಭಾಗೀಯ ನಿಯಂತ್ರಣ ಕಟ್ಟಡದ ಮೇಲೂ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಲಾಗಿದೆ.

‘ಸೌರ ವಿದ್ಯುತ್ ಬಳಕೆ ಇಂಧನದ ವಿಶ್ವಸನೀಯ ಮೂಲವಾಗಿದೆ. ಯೋಜಿತ ಗ್ರೀನ್ ಅಜೆಂಡಾ ಮೂಲಕ ಪರಿಸರ ಹಾನಿಯಾಗದ, ದುಬಾರಿಯಾಗದ ಹಾಗೂ ಹಲವು ವರ್ಷಗಳ ಕಾಲ ಬಾಳಿಕೆ ಬರುವ, ಮತ್ತು ಸುಸ್ಥಿರ ಅಭಿವೃದ್ಧಿಗೋಸ್ಕರ ಸೌರ ವಿದ್ಯುತ್ ಅನಿವಾರ್ಯವಾಗಿದೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಇನ್ನೂ ಹಲವು ರೈಲು ನಿಲ್ದಾಣಗಳಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಲಾಗುವುದು.’ ಎಂದು ಭವಿಷ್ಯದ ಯೋಜನೆಗಳ ಕುರಿತು ಹೇಳಿಕೊಳ್ಳುತ್ತಾರೆ ಒಬ್ಬರು ರೈಲ್ವೇ ಅಧಿಕಾರಿ. 2014ರ ಜುಲೈ 4ರಂದು ಕಾಶ್ಮೀರ ರೈಲ್ ಲಿಂಕ್ ಯೋಜನೆಯ ಉಧಂಪುರ – ಕಾತ್ರಾ ರೈಲ್ವೇ ಲೈನ್ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ಶ್ರೀ ಮಾತಾ ವೈಷ್ಣೋದೇವಿ ಕಾತ್ರಾ ರೈಲ್ವೇ ನಿಲ್ದಾಣದಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಲು ಸೂಚಿಸಿದ್ದರು. ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಹಸಿರು ಶಕ್ತಿ ಯೋಜನೆಯನ್ನು ಪ್ರಾರಂಭಿಸಲು ತಿಳಿಸಿದ್ದರು. ಅದರಂತೆ ಈಗ ಕಾತ್ರಾ ರೈಲ್ವೇ ನಿಲ್ದಾಣದಲ್ಲಿ ಯಶಸ್ವಿಯಾಗಿ ಸೌರ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುತ್ತಿದೆ.

ಹೀಗೆ ಸೌರ ಶಕ್ತಿಯನ್ನು ಉಪಯೋಗಿಸುವುದರಿಂದ ರೈಲುಗಳಲ್ಲಿ ವಿದ್ಯುತ್ ಮತ್ತು ಡೀಸಲ್ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ರೈಲ್ವೇ ನಿಲ್ದಾಣ ಮತ್ತು ಅದಕ್ಕೆ ಸೇರಿದ ಕಟ್ಟಡಗಳಲ್ಲೂ ಇದೇ ವಿದ್ಯುತ್‍ನ್ನು ಬಳಸಿಕೊಳ್ಳಬಹುದು.

ಅನುವಾದಕರು: ವಿಶಾಂತ್​​​​​​​

Related Stories