ಕಾಕಾ ಕನಸಿನ ಕೂಸು ಆಶೀರ್ವಾದ್ ನೆಲಸಮ

ರೂಪ ಹೆಗಡೆ

ಕಾಕಾ ಕನಸಿನ ಕೂಸು ಆಶೀರ್ವಾದ್ ನೆಲಸಮ

Sunday February 28, 2016,

2 min Read

ರೂಪ್ ತೇರಾ ಮಸ್ತಾನಾ, ಪ್ಯಾರ್ ಮೇರಾ ದೀವಾನಾ..ಈಗಲೂ ಸಂಗೀತ ಪ್ರಿಯರು ಗುನುಗುವ ಹಾಡಿದು. ಕಿಶೋರ್ ಕುಮಾರ್ ಕಂಠ ಸಿರಿಯಲ್ಲಿ ಬಂದ ಈ ಹಾಡಿಗೆ ಮತ್ತಷ್ಟು ಜೀವ ತುಂಬಿದವರು ರಾಜೇಶ್ ಖನ್ನಾ. ಬಾಲಿವುಡ್ ನ ಮೊದಲ ಸೂಪರ್ ಸ್ಟಾರ್. ಒಂದಾದ ಮೇಲೆ ಒಂದರಂತೆ ಬ್ಯಾಕ್ ಟು ಬ್ಯಾಕ್ 15 ಹಿಟ್ ಚಿತ್ರಗಳನ್ನು 1969-1971 ಸಮಯದಲ್ಲಿ ನೀಡಿದ ಅಪ್ರತಿಮ ನಟ.

ರಾಜೇಶ್ ಖನ್ನಾ ಈ ಹಿಟ್ ಚಿತ್ರಗಳ ಹಿಂದೆ ಲಕ್ಷಾಂತರ ಅಭಿಮಾನಿಗಳ ಜೊತೆ ನಿಂತಿದ್ದು ಪ್ರೀತಿಯ ಆಶೀರ್ವಾದ್ ಬಂಗಲೆ. ಹೌದು, 1970ರಲ್ಲಿ ರಾಜೇಶ್ ಖನ್ನಾ ಅದೃಷ್ಟ ಬದಲಾಯಿಸಿದ್ದು ಆಶೀರ್ವಾದ್ ಬಂಗಲೆ. ಬಾಲಿವುಡ್ ನ ಕಾಕಾ ಎಂದೇ ಪ್ರಸಿದ್ಧಿಯಾಗಿರುವ ಖನ್ನಾ, ಡಿಂಪಲ್ ಕಪಾಡಿಯಾ ಕೈ ಹಿಡಿಯುವ ಮುನ್ನವೇ ಈ ಸುಂದರ ಬಂಗಲೆಯನ್ನು ಖರೀದಿಸಿದ್ದರು. ಆಗ ಹಿಂದಿ ಸಿನಿಮಾನ ಸೂಪರ್ ಸ್ಟಾರ್ ಈ ಬಂಗಲೆಗೆ ಕೊಟ್ಟಿದ್ದು ಮೂರುವರೆ ಲಕ್ಷ ರೂಪಾಯಿ.

ಅದೃಷ್ಟ ಬದಲಿಸಿದ ಆಶೀರ್ವಾದ್..!

ಮುಂಬೈನ ಕಾರ್ಟರ್ ರೋಡ್ ನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದ್ದ ಈ ಆಶೀರ್ವಾದ ಬಂಗಲೆಯನ್ನು ಮೊದಲು ಖರೀದಿಸಿದ್ದು ನಟ ರಾಜೇಂದ್ರ ಕುಮಾರ್. ಆಗ 60 ಸಾವಿರ ರೂಪಾಯಿ ಕೊಟ್ಟು ಈ ಬಂಗಲೆ ಖರೀದಿಸಿದ್ದರಂತೆ. ಆದ್ರೆ ರಾಜೇಂದ್ರ ಕುಮಾರ್ ಕೈ ಹಿಡಿಯಲಿಲ್ಲ ಈ ಬಂಗಲೆ. ಮನೆ ಪ್ರವೇಶಿಸಿದ ನಂತರ ಅನೇಕ ಸೋಲುಗಳನ್ನು ಕಾಣಬೇಕಾಯ್ತು. ಚಿತ್ರಗಳು ಬಹಳ ದಿನ ಓಡಲಿಲ್ಲ. ಹಾಗಾಗಿ ಬಂಗಲೆ ಮಾರಾಟಕ್ಕೆ ಮುಂದಾದ್ರು ರಾಜೇಂದ್ರ ಕುಮಾರ್.

image


ಆಗ 3.5 ಲಕ್ಷ ಕೊಟ್ಟು ಈ ಐಷಾರಾಮಿ ಹಾಗೂ ವಿಶಾಲವಾದ ಬಂಗಲೆ ಖರೀದಿಸಿದ್ದು ದಿ ಓರಿಜಿನಲ್ ಕಿಂಗ್ ಆಫ್ ರೋಮ್ಯಾನ್ಸ್ ಬಿರುದಾಂಕಿತ ರಾಜೇಶ್ ಖನ್ನಾ. ಮೊದಲು ಈ ಬಂಗಲೆಯ ಹೆಸರು ಡಿಂಪಲ್ ಎಂದಿತ್ತು. ರಾಜೇಶ್ ಖನ್ನಾ ಅವರಿಗೆ ಹೆಸರನ್ನು ಬದಲಿಸುವ ಮನಸ್ಸಿರಲಿಲ್ಲ. ಆದ್ರೆ ಹೊಸದಾಗಿ ಖರೀದಿಸಿದ್ದ ಬಂಗಲೆಗೆ ರಾಜೇಂದ್ರ ಕುಮಾರ್ ಡಿಂಪಲ್ ಎಂದು ಹೆಸರಿಟ್ಟಿದ್ದರು. ಅನಿವಾರ್ಯವಾಗಿ ಕಾಕಾ ಬಂಗಲೆಗೆ ಆಶೀರ್ವಾದ್ ಎಂದು ಹೆಸರಿಟ್ಟರು. ಮುಂಬೈ ಕಾರ್ಟನ್ ರಸ್ತೆಯಲ್ಲಿ ಓಡಾಡುವರೆಲ್ಲ ಈ ಮನೆಯತ್ತ ಒಮ್ಮೆ ಕಣ್ಣು ಹಾಯಿಸದೆ ಇರುತ್ತಿರಲಿಲ್ಲ.

ನನಸಾಗಲಿಲ್ಲ ಮ್ಯೂಸಿಯಂ ಕನಸು

ರಾಜೇಶ್ ಖನ್ನಾ ಕನಸಿನ ಮನೆಯಾಗಿತ್ತು ಈ ಬಂಗಲೆ. ಇದನ್ನು ಮ್ಯೂಸಿಯಂ ಮಾಡುವ ಕನಸು ಕಂಡಿದ್ದರು ಕಾಕಾ. ಸಂದರ್ಶನವೊಂದರಲ್ಲಿ ಈ ಬಂಗಲೆಯನ್ನು ಮ್ಯೂಸಿಯಂ ಮಾಡುವ ಆಸೆ ವ್ಯಕ್ತಪಡಿಸಿದ್ದರಲ್ಲದೇ,ಮಕ್ಕಳು ನನ್ನ ಆಸ್ತಿಗೆ ಆಸೆ ಪಡುವುದಿಲ್ಲ ಎಂದಿದ್ದರು. ಆದ್ರೆ ಜುಲೈ 18,2012ರಲ್ಲಿ ಸೂಪರ್ ಸ್ಟಾರ್ ಇಹಲೋಕ ತ್ಯಜಿಸ್ತಿದ್ದಂತೆ ಅವರ ಕಸನು ಕೂಡ ಕನಸಾಗಿಯೇ ಉಳಿಯಿತು.

ಖನ್ನಾ ಸಾವಿನ ಬಳಿಕ ಅನಾಥವಾದ ಈ ಬಂಗಲೆ ಸಾಕಷ್ಟು ನೋವನುಭವಿಸಿದ್ದು ಸುಳ್ಳಲ್ಲ. ಕಾಕಾ ಪುತ್ರಿಯರಾದ ಟ್ವಿಂಕಲ್ ಮತ್ತು ರಿಂಕಿ ಪಾಲಾಗಬೇಕಿದ್ದ ಈ ಬಂಗಲೆ ವಿಚಾರ ಕೋರ್ಟ್ ಮೆಟ್ಟಿಲೇರ್ತು. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಅನಿತಾ ಅಂಬಾನಿ ಆಸ್ತಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಹಗ್ಗ ಜಗ್ಗಾಟದ ನಂತ್ರ ಅಂತಿಮವಾಗಿ ಬಂಗಲೆ ಟ್ವಿಂಕಲ್ ಹಾಗೂ ರಿಂಕಿ ಪಾಲಾಯ್ತು.

ಅಪ್ಪ ಬಾಳಿ ಬದುಕಿದ, ಸಾವಿರಾರು ಅಭಿಮಾನಿಗಳ ದೇವಸ್ಥಾನದಂತಿದ್ದ ಆಶೀರ್ವಾದವನ್ನು ಮ್ಯೂಸಿಯಂ ಮಾಡುವ ಮನಸ್ಸಿದ್ದರೂ ವಿವಾದಗಳಿಗೆ ಹೆದರಿದ ಟ್ವಿಂಕಲ್ ಹಾಗೂ ರಿಂಕಿ ಅನಿವಾರ್ಯವಾಗಿ ಮಾರಾಟಕ್ಕೆ ಮುಂದಾದರು. ಬಹಳ ಹಳೆಯ ಕಟ್ಟಡವಾದ ಕಾರಣ ಖನ್ನಾ ಕನಸಿನ ಬಂಗಲೆ ಕೇವಲ 90 ಕೋಟಿಗೆ ಮಾರಾಟವಾಯ್ತು. 2014ರಲ್ಲಿ ಆಲ್ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್ ಸಂಸ್ಥಾಪಕ ಮತ್ತು ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಇದನ್ನು ಖರೀದಿಸಿದ್ರು.

image


ಲಕ್ಷಾಂತ ಅಭಿಮಾನಿಗಳ ಪ್ರೀತಿಯ ಆಶೀರ್ವಾದ್, ರಾಜೇಶ್ ಖನ್ನಾ ಕೊನೆಯುಸಿರೆಳೆದ ಸ್ಥಳವೀಗ ಬರಿದಾಗ್ತಿದೆ. ಇನ್ನು ಆಶೀರ್ವಾದ್ ನೆನಪು ಮಾತ್ರ. ಆಶೀರ್ವಾದ ಬಂಗಲೆ 50 ವರ್ಷ ಹಳೆಯದಾಗಿರುವುದರಿಂದ ಅದನ್ನು ಕೆಡವಲು ಮುಂದಾಗಿದ್ದಾರೆ ಶಶಿ ಕಿರಣ್ ಶೆಟ್ಟಿ. ಈಗಾಗಲೇ ಐಷಾರಾಮಿ ಬಂಗಲೆ ಮೇಲೆ ಬುಲ್ಡೋಜರ್ ಹಾದುಹೋಗಿದೆ. ರಾಜೇಶ್ ಖನ್ನಾ ಕನಸು ಕೊಚ್ಚಿ ಹೋಗಿದೆ. ಬಂಗಲೆ ಖರೀದಿಸಿದ ಒಂದುವರೆ ವರ್ಷದ ನಂತ್ರ ಶಶಿ ಕಿರಣ್ ಶೆಟ್ಟಿ ಬಂಗಲೆ ಕೆಡವಲು ಮುಂದಾಗಿದ್ದಾರೆ.

ಆಶೀರ್ವಾದ್ ಇದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಹಳೆ ಬಂಗಲೆ ಕೆಡವಲಾಗುತ್ತಿದೆಯಂತೆ. 6,500 ಚದರ ಅಡಿ ಇರುವ ಈ ಬಂಗಲೆಯನ್ನು ಕೆಡವಿ 3-4 ಅಂತಸ್ತಿನ ಕಟ್ಟಡ ನಿರ್ಮಿಸಲು ಶೆಟ್ಟಿ ಮುಂದಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಶುರುವಾಗಲಿದೆ. ಹಳೆ ಆಶೀರ್ವಾದ್ ಬಂಗಲೆಯನ್ನು ಹೋಲುವಂತೆ ಹೊಸ ಕಟ್ಟಡ ಕಟ್ಟುವ ಆಲೋಚನೆ ಇದೆಯಂತೆ. ಇದಕ್ಕೆ ವರ್ದಾನ್ ಆಶೀರ್ವಾದ್ ಎಂದು ಹೆಸರಿಡ್ತಾರೆ ಎನ್ನಲಾಗ್ತಿದೆ.