ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಜೋಗಪ್ಪ ಸಮುದಾಯದ ಹಕ್ಕುಗಳಿಗಾಗಿ ಹೋರಾಟ: ಸಾಮಾಜಿಕ ಬದಲಾವಣೆಗೆ ಸಾಲಿಡಾರಿಟಿ ಫೌಂಡೇಷನ್ ಸಂಕಲ್ಪ

ಟೀಮ್​ ವೈ.ಎಸ್.ಕನ್ನಡ 

0

ಲೈಂಗಿಕ ಕಾರ್ಯಕರ್ತೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ದೊಡ್ಡ ಧ್ವನಿ ಹೊಮ್ಮಿಸುತ್ತಿರುವ ಅಪರೂಪದ ಸಂಸ್ಥೆ ಸಾಲಿಡಾರಿಟಿ ಫೌಂಡೇಷನ್. ಸಂಸ್ಥಾಪಕರು, ಸಂಸ್ಥೆಯ ಅನುದಾನವನ್ನು ಕೇವಲ ಲೈಂಗಿಕ ಅಲ್ಪಸಂಖ್ಯಾತ ಹಾಗೂ ವೈಶ್ಯಾವಾಟಿಕೆಗೆ ತಳ್ಳಲ್ಪಟ್ಟ ಶೋಷಿತರ ಕಲ್ಯಾಣಕ್ಕಾಗಿ ಮಾತ್ರ ಉಪಯೋಗಿಸುವ ಸಂಕಲ್ಪ ಮಾಡಿದ್ದಾರೆ. ಈ ವರ್ಗಗಳ ಕೂಗನ್ನು ಅರಣ್ಯರೋಧನವಾಗಿಸಲು ಬಿಡದೇ ಇವರನ್ನು ಮುಖ್ಯವಾಹಿನಿಗೆ ಕರೆತರಬೇಕು. ಈ ಶೋಷಿತ ಸಮುದಾಯದ ಪರವಾಗಿ ಧ್ವನಿಯೆತ್ತಬೇಕು ಅನ್ನುವುದು ಸಾಲಿಡಾರಿಟಿ ಫಂಡೇಷನ್​ನ ಏಕೋದ್ದೇಶಿತ ಗುರಿ. ಸಮಾಜದ ಅತ್ಯಂತ ಹೀನ ಸಮುದಾಯವೆಂದು ಗುರುತಿಸಿಕೊಂಡು ನಿರ್ಲಕ್ಷ್ಯಕ್ಕೊಳಗಾಗಿರುವ ಈ ಲೈಂಗಿಕ ಶೋಷಿತೆಯರಿಗೆ ಏನಾದರೂ ಸಹಾಯ ಮಾಡಬೇಕು ಅನ್ನುವ ವ್ಯಕ್ತಿಗಳ ಪರವಾಗಿ ಸಾಲಿಡಾರಿಟಿ ಫೌಂಡೇಷನ್ ನಿಂತಿದೆ. ಯಾವುದೇ ದಾನಿಗಳಾದರೂ ಇಲ್ಲಿಗೆ ಸಲ್ಲಿಸುವ ಹಣ ಲೈಂಗಿಕ ಶೋಷಿತೆಯರ ಕಲ್ಯಾಣ ಕಾರ್ಯಕ್ಕೆ ಮಾತ್ರ ವಿನಿಯೋಗವಾಗುತ್ತದೆ. ಈ ಬಗ್ಗೆ ದೇಶಾದ್ಯಂತ ಹತ್ತು ಹಲವು ಅಭಿಯಾನಗಳು, ಕಾರ್ಯಕ್ರಮಗಳನ್ನು ನಿರ್ವಹಿಸಲಾಗಿದೆ. ಹೀಗಂತ ಅತ್ಯಂತ ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಸಾಲಿಡಾರಿಟಿ ಫೌಂಡೇಷನ್​ನ ಅಪರ್ಣ ಕೊಳ್ಳಿ..

ಪ್ರಾಥಮಿಕ ಹಂತದಲ್ಲಿ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಸಾಲಿಡಾರಿಟಿಯ ಮುಖ್ಯ ಉದ್ದೇಶ ದೇಶಾದ್ಯಂತ ಸಾಧ್ಯವಾದಷ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ಧ್ವನಿಯಾಗಬೇಕು ಅನ್ನುವುದು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಈವರೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ನಡೆಸಿದೆ. ಸಂಪನ್ಮೂಲ, ಆಲೋಚನೆ ಹಾಗೂ ಹೊಸ ಜ್ಞಾನಾಧಾರಿತ ಆಯಾಮ ಸೃಷ್ಟಿಯ ಬಗ್ಗೆ ಸಂಸ್ಥೆ ನಂಬಿಕೆ ಇಟ್ಟಿದೆ. ಈ ಮೂರು ಸಂಗತಿಗಳ ನಡುವಿನ ಸೇತುವೆಯನ್ನೇ ತನ್ನ ಕಾರ್ಯಾಚರಣೆಯ ಸಾಧನವನ್ನಾಗಿಸಿ ನಡೆದು ಬಂದಿದೆ. 2013ರ ಮಾರ್ಚ್​ನಲ್ಲಿ ನೊಂದಣಿಯಾದ ಈ ಟ್ರಸ್ಟ್ ತನ್ನೆಲ್ಲಾ ಅಂಗಗಳನ್ನು ಸಾಮಾಜಿಕ ಬದಲಾವಣೆಗೆ ಮೀಸಲಿಟ್ಟಿದೆ.

ಈಗಲೂ ಸಕ್ರಿಯರಾಗಿ ಲೈಂಗಿಕ ಕಾರ್ಯಕರ್ತೆಯರ ವೃತ್ತಿ ಮಾಡ್ತಿರುವ, ಲೈಂಗಿಕವಾಗಿ ಶೋಷಣೆಗೊಳಗಾಗಿರುವ, ಸಮಾಜದಿಂದ ಭಹಿಷ್ಕೃತರಾಗಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ನೆರವು ನೀಡುವುದು, ಬೆಂಬಲವಾಗಿ ನಿಲ್ಲುವುದು ಈ ಮೂಲಕ ಸಾಮಾಜಿಕ ಅಸಮತೋಲನ, ಲಿಂಗ ತಾರತಮ್ಯಗಳನ್ನು ಹೊಡೆದೋಡಿಸುವುದು, ಕಾಲಕಾಲಕ್ಕೆ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ತನ್ಮೂಲಕ ಮಾದರಿ ಸಮಾಜದ ನಿರ್ಮಾಣ ಸಾಲಿಡಾರಿಟಿ ಫೌಂಡೇಷನ್ ಕಂಡಿರುವ ದಿವ್ಯ ಕನಸು. ವೇಶ್ಯಾವಾಟಿಕೆ ನಡೆಸಿ ಬದುಕವ ಅಬಲೆಯರಿಗೂ ಬದುಕುವ ಸ್ವಾತಂತ್ರ್ಯವಿದೆ. ಗೌರವಾನ್ವಿತವಾಗಿ ಜೀವಿಸುವ ಹಕ್ಕಿದೆ. ಅದನ್ನು ಅವರಿಗೆ ದೊರಕಿಸಿಕೊಡಬೇಕು ಅನ್ನುವುದು ಸಾಲಿಡಾರಿಟಿಯ ಧ್ಯೇಯ. ಸಾಮಾಜಿಕ ನ್ಯಾಯ ಅನ್ನುವ ಪರಿಕಲ್ಪನೆಯಲ್ಲಿ ಎಲ್ಲ ಶೋಷಿತ ವರ್ಗಗಳಿಗೂ ಸಮಾನ ಅವಕಾಶವಿದೆ ಅನ್ನುವುದು ಇದರ ಸಮರ್ಥನೆ.

ಇದನ್ನೂ ಓದಿ...

ಛಾವಣಿ ಮೇಲೆ ಹಾರಿತು ಹತ್ತಿ ತುಣುಕು

ಸಾಮಾಜಿಕ ಮೌಲ್ಯಗಳ ಪ್ರತಿಪಾಧನೆಯೇ ಮುಖ್ಯ ಗಮ್ಯವಾಗಿರುವ ಎಸ್ಎಫ್ (ಸಾಲಿಡಾರಿಟಿ ಫೌಂಡೇಷನ್) ಹಿಂದುಳಿದ ಪ್ರದೇಶಗಳ ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು, ನಿರ್ಲಕ್ಷ್ಯಕ್ಕೊಳಗಾಗಿರುವ ಮಂಗಳಮುಖಿಯರು, ದೇವಾಲಯಗಳಲ್ಲಿ ಶಾಸ್ತ್ರ ಹೇಳುವ ಜೋಗಪ್ಪಂದಿರುವ ಮುಂತಾದ ಅಪರೂಪದ ವರ್ಗಗಳ ಪರವಾಗಿ ಹೋರಾಡುವ ಕೆಲಸವನ್ನು ಸಾಲಿಡಾರಿಟಿ ಫೌಂಡೇಷನ್ ನಡೆಸುತ್ತಿದೆ.

ಈಗ ಸಾಲಿಡಾರಿಟಿ ಚಂದ್ರಗುತ್ತಿ ರೇಣುಕಾ ದೇವಾಲಯ ಹಾಗೂ ಸವದತ್ತಿಯ ಯಲ್ಲಮ್ಮನ ಹೆಸರಲ್ಲಿ ಶಾಸ್ತ್ರ ಹೇಳುವ ಜೋಗಪ್ಪ ಸಮುದಾಯದ ಹಕ್ಕುಗಳ ಕುರಿತಾಗಿಯೂ ಹೋರಾಡುತ್ತಿದೆ. ಬೆಳಗಾವಿ, ಚಿಕ್ಕೋಡಿ, ಖಾನಾಪುರ ಮುಂತಾದ ಭಾಗಗಳ ಜೋಗಪ್ಪ ಸಮುದಾಯದವರ ಸಮಾನತೆಯ ಕೂಗಿಗೆ ಧ್ವನಿಯಾಗುವ ಭರವಸೆಯನ್ನು ಸಂಸ್ಥೆ ನೀಡಿದೆ. ಜೋಗಪ್ಪ ಸಮುದಾಯದಲ್ಲಿ ಅಡಗಿರುವ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟ ಜನಪದ ಶೈಲಿಯ ಗೀತೆಗಳಿಗೆ ಮಾರ್ಕೆಂಟಿಗ್ ಮಾಡಿಕೊಡುವ ಮೂಲಕ ಜಾಗತಿಕವಾಗಿ ಜೋಗಪ್ಪ ಜನಪದವನ್ನು ವೈಭವೀಕರಿಸಬೇಕು ಅನ್ನುವುದು ಸಾಲಿಡಾರಿಟಿ ಸಂಚಾಲಕರ ಕನಸಾಗಿದೆ. ಈ ಕುರಿತು ಅಲ್ಲಲ್ಲಿ ಕೆಲವು ಕಡೆ ಜುಗಲ್ಬಂಧಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಮುಂಬೈನ ಟಾಟಾ ಇನ್ಸ್​ಟಿಟ್ಯೂಟ್​ ಆಫ್ ಸೋಶಿಯಲ್ ಸೈನ್ಸ್​ನ ಮಹಿಳಾ ಅಧ್ಯಯನ ಕೇಂದ್ರದ ಪ್ರೊಫೆಸರ್ ಹಾಗೂ ಚೇರ್​ ಪರ್ಸನ್ ಮೀನಾ ಗೋಪಾಲ್, ದೆಹಲಿ ಯುನಿವರ್ಸಿಟಿಯ ಸಲೀಂ ಕಿದ್ವಾಯ್, ನವದೆಹಲಿ ನ್ಯಾಷನಲ್ ಸ್ಕೂಲ್ ಆಫ್ ಸೈನ್ಸ್​ನ ಅತಿಥಿ ಉಪನ್ಯಾಸಕರಾದ ಬಾಬು ಮ್ಯಾಥ್ಯೂ, ಈಕ್ವೇಷನ್ ಎಂಡ್ ಲರ್ನಿಂಗ್ ನೆಟ್ವರ್ಕ್​ನ ನಿರ್ದೇಶಕರಾದ ರೋಸ್ಮೆರಿ ವಿಶ್ವನಾಥ್, ಅನೇಕ ಸಂಸ್ಥೆಯ ಸಂಸ್ಥಾಪಕಿ ಶುಭಾ, ಮಾನವ ಹಕ್ಕುಗಳ ಕಾರ್ಯಕರ್ತೆ ಚಾಕೋ, ಸಂಗಮ ಸಂಸ್ಥೆಯ ಸಂಸ್ಥಾಪಕ ಮನೋಹರ್ ಎಲವರ್ತಿ, ಜನವಿಕಾಸ್ನ ಗಗನ್ ಸೇಥಿ, ಸಮಾಜಿಕ ಕಾರ್ಯ ಸಂಶೋಧಕ, ಅಧ್ಯಯನಕಾರ ಎಂ.ಜೆ ಜೋಸೆಫ್ ಮುಂತಾದ ಬೇರೆ ಬೇರೆ ಸಂಘ ಸಂಸ್ಥೆಗಳ ನೇತೃತ್ವ ಹೊತ್ತಿರುವ ಸಮಾಜಮುಖಿ ಚಿಂತಕರ ದೊಡ್ಡ ಪಡೆಯೇ ಸಾಲಿಡಾರಿಟಿ ಫೌಂಡೇಷನ್​ನ ಜೊತೆಗಿದೆ.

ಇನ್ನು ಸಾಲಿಡಾರಿಟಿಯ ಸಲಹಾ ಸಮಿತಿಯ ಲಿಂಗ ಸಮಾನತೆ ವಿಭಾಗದ ಉಪನ್ಯಾಕಿ ಸ್ವಾತಿ ಶಾ, ಅಮೇರಿಕನ್ ಟ್ರೇಡ್ ಯೂನಿಯನ್​ನ ಅಶ್ವಿನಿ ಸುಕತ್ಕರ್, ಪದ್ಮಭೂಷಣ ಪುರಸ್ಕೃತೆ ದೇವಿಕಾ ಜೈನ್, ವರ್ಕರ್ಸ್ ಮ್ಯಾನೇಜ್ಮೆಂಟ್​ನ ಮೋಹನ್ ಮಣಿ ಮುಂತಾದ ಪ್ರತಿಷ್ಠಿತರ ದೊಡ್ಡ ಬಳಗ ಸಾಲಿಡಾರಿಟಿಯ ಸಲಹಾ ಸಮಿತಿಯ ಜೊತೆಗಿದೆ. ಪಾರ್ಕ್ ಹೋಟೆಲ್​ನ ಟ್ರೈನಿಂಗ್ ಕನ್ಸಲ್ಟೆಂಟ್ ಅರುಣೇಶ್ ಮಯೂರ್ ಹಾಗೂ ಸಂಶೋಧಕ ಮತ್ತು ಫ್ರೀಲ್ಯಾನ್ಸ್ ಪತ್ರಕರ್ತೆ ವೀಣಾ ಎನ್ ಸಹ ಸಾಲಿಡಾರಿಟಿ ಫೌಂಡೇಶನ್ನ ಸಮಾಜಮುಖಿ ಹಾಗೂ ಕ್ರಿಯಾಶೀಲ ಕಾರ್ಯಗಳಿಗೆ ಸದಾ ನೆರವು ನೀಡುತ್ತಲೇ ಇದ್ದಾರೆ.

ವಿಭಿನ್ನ ಕ್ರಿಯಾತ್ಮಕ ದೃಷ್ಟಿಕೋನ ಹಾಗೂ ಸಾನಮಾಜಿಕ ಬದಲಾವಣೆಯ ಉದಾತ್ತ ಚಿಂತನೆಯ ಮೂಲಕ ಸಾಮಾಜಿಕ ಸಮಾನತೆ ಸಾಧಿಸುತ್ತಿರುವ ಹಾಗೂ ಪ್ರತಿಯೊಬ್ಬ ಮಾನವನಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂದು ಸಾಧಿಸುತ್ತಿರುವ ಸಾಲಿಡಾರಿಟಿ ಫೌಂಡೇಷನ್​ನ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಅಂತ ಯುವರ್ ಸ್ಟೋರಿ ಹಾರೈಸುತ್ತದೆ.

ಲೇಖಕರು: ವಿಶ್ವಾಸ್ ಭಾರದ್ವಾಜ್

ಇದನ್ನೂ ಓದಿ...

ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

ಮೊಬೈಲ್​ನಲ್ಲೇ ಪಿಯುಸಿ ಪ್ರಶ್ನೆ ಪತ್ರಿಕೆ..!

Related Stories

Stories by YourStory Kannada