ಡೆಲಿವರಿ ಬಾಯ್ ಆಗಿದ್ದ ವ್ಯಕ್ತಿ ಈಗ ಉದ್ಯಮಿ: 27 ವರ್ಷದ ಕೊಚ್ಚಿ ಮೂಲದ ಹುಡುಗನ ಉದ್ಯಮಯಾನ

ಟೀಮ್​ ವೈ.ಎಸ್​. ಕನ್ನಡ

ಡೆಲಿವರಿ ಬಾಯ್ ಆಗಿದ್ದ ವ್ಯಕ್ತಿ ಈಗ ಉದ್ಯಮಿ: 27 ವರ್ಷದ ಕೊಚ್ಚಿ ಮೂಲದ ಹುಡುಗನ ಉದ್ಯಮಯಾನ

Friday December 18, 2015,

5 min Read


ಇನ್ನೂ 30 ದಿನಗಳು ಬಾಕಿ ಇತ್ತು. ಆದರೆ ಯಾವುದೇ ನೋಂದಾವಣೆಗಳಾಗಿರಲಿಲ್ಲ. ಇದರಲ್ಲಿ ಸರಿಯಾಗಿ ತೊಡಗಿಕೊಳ್ಳಲಾಗದೇ ಸಹ ಸಂಸ್ಥಾಪಕ ಸಂಸ್ಥೆಯನ್ನು ಮುಚ್ಚಿಬಿಡುವ ಮನಸ್ಥಿತಿಗೆ ಬರತೊಡಗಿದ್ದರು. ಸರಿಯಾಗಿ ಬಾಡಿಗೆ ಪಾವತಿಸದ ಕಾರಣ ಸಂಸ್ಥೆಯ ಜಾಗವನ್ನು ತೆರವುಗೊಳಿಸಬೇಕಾಗಿತ್ತು. ಇದೆಲ್ಲಾ ಉದ್ಯಮದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಗಳು. ದಿನೂಪ್ ಕಲ್ಲೇರಿಲ್ ಅವರೂ ಕೂಡ ತಾವು ಸ್ವಂತವಾಗಿ ಉದ್ಯಮ ಮಾಡಬೇಕೆಂದು ಕನಸು ಕಂಡು ಮನೆ ಬಿಡುವ ಹೊತ್ತಿಗೆ ದೊಡ್ಡ ದೊಡ್ಡ ಕನಸುಗಳನ್ನು ಕಂಡವರು.

2013ರ ಆರಂಭದ ದಿನಗಳು ದಿನೂಪ್ ಕಲ್ಲೇರಿಲ್ ಪಾಲಿಗೆ ಸಂಕಷ್ಟದ ದಿನಗಳಾಗಿದ್ದವು. ಆಗ ಅವರು ತಮ್ಮ ಪೋಷಕರು ಹೇಳಿದ್ದೇ ಸರಿಯಾಗಿತ್ತು. ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದು ಒಂದು ಕೆಲಸವನ್ನು ಹುಡುಕಿಕೊಳ್ಳಬೇಕಿತ್ತು ಎಂದೆಲ್ಲಾ ಯೋಚಿಸುತ್ತಿದ್ದರು. ಅವರು ಆರಂಭಿಸಿದ ಆನ್‌ಲೈನ್ ಟೀ ಶರ್ಟ್ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದಕ್ಕಾಗಿ ಮಾಡಿದ 25,000 ರೂ. ಹೂಡಿಕೆ ನಷ್ಟವಾಗಿತ್ತು.

ದಿನೂಪ್ ಅವರ ತಂದೆ ಓರ್ವ ಪ್ಲಂಬರ್. ಅವರಿಗೆ ತಮ್ಮ ಕುಟುಂಬದಲ್ಲೇ ಕಾಲೇಜು ಪದವಿ ಪಡೆದು, ಒಳ್ಳೆಯ ಉದ್ಯೋಗ ಹುಡುಕಿಕೊಂಡು ವಿದೇಶದಲ್ಲಿ ಸೆಟ್ಲ್ ಆಗಬೇಕೆಂಬ ಕನಸಿತ್ತು. ಆದರೆ ದಿನೂಪ್ ಅವರ ಯೋಜನೆಗಳೇ ಬೇರೆಯಾಗಿದ್ದವು.

ದಿನೂಪ್ ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿಡಬಯಸಿದರು. ಆದರೆ ಇದು ಅನೇಕ ಸವಾಲುಗಳಿಂದ ಕೂಡಿದ್ದ ಒಂದು ಪ್ರಯಾಣವಾಗಿತ್ತು. ಆನ್‌ಲೈನ್ ಟಿ ಶರ್ಟ್ ಸಂಸ್ಥೆಯಂತೂ ಮುಚ್ಚಿಹೋಗಿತ್ತು. ಹೀಗಾಗಿ ದಿನೂಪ್ ಹೊಸ ಸ್ಟಾರ್ಟ್ ಅಪ್‌ನೊಂದಿಗೆ ಹಿಂತಿರುಗಿದ್ದರು. ಅದೇ ಮಂಕ್ ವ್ಯಾಸಾ. ಇದೊಂದು ಆನ್‌ಲೈನ್ ಜ್ಯೋತಿಷ್ಯ ಸಮಾಲೋಚನಾ ವೇದಿಕೆಯಾಗಿತ್ತು. ದಿನೂಪ್ ಹೇಳುವಂತೆ ಈ ವರ್ಷದ ಆರಂಭದಲ್ಲಿ ಶುರುವಾದ ಸಂಸ್ಥೆಯ ದಿನದ ವಹಿವಾಟು 75,000 ದಿಂದ 1,00,000 ರೂ.ಗಳು. ಆದರೆ ಇದಕ್ಕಿಂತ ಮೊದಲು ಅಂದರೆ 2013ರಲ್ಲಿ ಇವರು ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದರೆ ನೀವು ನಂಬಲೇಬೇಕು.

image


ವಿಫಲವಾದ ಮೊತ್ತ ಮೊದಲ ಉದ್ಯಮ

“ಸಚಿನ್ ತೆಂಡೂಲ್ಕರ್ ನನ್ನ ಪಾಲಿನ ಹೀರೋ. ಹೀಗಾಗಿ ನನ್ನ ಶಾಲೆಗೆ ರಜೆ ಇದ್ದಾಗಲೆಲ್ಲಾ ನಾನು ಕ್ರಿಕೆಟ್ ಆಡುತ್ತಲೋ ಇಲ್ಲವೇ ಹತ್ತಿರದ ಕೆರೆಗಳಲ್ಲಿ ಈಜಾಡುತ್ತಲೋ ಕಾಲ ಕಳೆಯುತ್ತಿದ್ದೆ. ನನಗೆ ನಾನೇನು ಮಾಡಬೇಕೆಂದು ತಿಳಿದಿರಲಿಲ್ಲ. ಆದರೆ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾಡುವಂತಹ ಕೆಲಸಗಳು ನನಗೆ ಹಿಡಿಸುತ್ತಿರಲಿಲ್ಲ” ಎಂದಿದ್ದಾರೆ 27 ವರ್ಷದ ದಿನೂಪ್. ಇದರ ಹೊರತಾಗಿಯೂ ದಿನೂಪ್ ತಮ್ಮ ಇತರ ಸ್ನೇಹಿತರಂತೆ ಎಂಜಿನಿಯರಿಂಗ್‌ ಕಾಲೇಜ್‌ಗೆ ದಾಖಲಾದರು. ಆದರೆ ಅದರಲ್ಲಿ ಅವರಿಗೆ ಅಂತಹ ಇಷ್ಟವೇನೂ ಹುಟ್ಟಲಿಲ್ಲ.

“ಕಾಲೇಜು ಸೇರಿದ ಎರಡನೇ ವರ್ಷದಲ್ಲಿ ನಾನು ಉದ್ಯಮಿಯಾಗಬೇಕೆಂದು ನಿರ್ಧರಿಸಿದೆ. ನನಗೆ ಹಲವು ಐಡಿಯಾಗಳು ಬರುತ್ತಿದ್ದವು. ನಾನು ಅದನ್ನು ನನ್ನ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗುಜರಿ ವಸ್ತುಗಳನ್ನು ಮಾರುವುದರಲ್ಲಿ, ಸಿಮ್ ಕಾರ್ಡ್‌ಗಳನ್ನು ಮಾರುವಲ್ಲಿ ಮತ್ತು ಏಜೆನ್ಸಿಗಳು ಪ್ರವಾಸಗಳನ್ನು ಏರ್ಪಡಿಸುವುದರಲ್ಲಿ ಪರಿಣಿತಿ ಸಾಧಿಸಲು ಯತ್ನಿಸುತ್ತಿದ್ದೆ. ಹೀಗೆ ಸಂಪಾದಿಸಿದ ಹಣದಿಂದ 2008ರಲ್ಲಿ ಕಂಪ್ಯೂಟರ್‌ವೊಂದನ್ನು ಕೊಂಡುಕೊಂಡೆ” ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ದಿನೂಪ್.

ಕಂಪ್ಯೂಟರ್ ಮತ್ತು ಅಂತರ್ಜಾಲ ಪ್ರಪಂಚಗಳು ದಿನೂಪ್‌ರನ್ನು ಪುಳಕಿತಗೊಳಿಸುತ್ತಿತ್ತು. ಉದ್ಯಮವನ್ನು ಪ್ರಾರಂಭಿಸಲು ಆ ವರ್ಷ ಅವರು ವಿಶ್ವವಿದ್ಯಾಲಯಕ್ಕೆ ಗುಡ್‌ಬೈ ಹೇಳಿದರು. ಆದರೆ ಇದೆಲ್ಲಾ ಉಲ್ಟಾಪಲ್ಟಾ ಆಗುವ ಸಂದರ್ಭ ಎದುರಾಗಿತ್ತು. ದಿನೂಪ್ ಅವರ ತಂದೆ ದಿನೂಪ್ ಅವರು ತಮ್ಮ ಮನಸ್ಸನ್ನು ಬದಲಾಯಿಸುವವರೆಗೂ ಅವರೊಂದಿಗೆ ಮಾತನಾಡಲು ನಿರಾಕರಿಸಿದರು. ಇಂತಹ ಪರಿಸ್ಥಿತಿಯಲ್ಲಿ ದಿನೂಪ್ ಚೆನ್ನೈಗೆ ಹೋಗಿ ನೆಲೆಸಲು ತೀರ್ಮಾನಿಸಿದರು.

ಎರಡು ತಿಂಗಳು ಚೆನ್ನೈನಲ್ಲಿದ್ದಾಗ ಅವರು ಸೇಲ್ಸ್ ಮನ್‌ ಆಗಿ ಕಾರ್ಯನಿರ್ವಹಿಸಿದರು. “ ಚೆನ್ನೈನಿಂದ ಟಿ-ಶರ್ಟ್‌ಗಳ ಆನ್‌ಲೈನ್ ಪೋರ್ಟಾಲ್ ಆರಂಭಿಸುವ ಸಲುವಾಗಿ ವಾಪಸ್ ಬಂದೆ. 2012ರಲ್ಲಿ ಆನ್‌ಲೈನ್‌ ಶಾಪಿಂಗ್ ವ್ಯವಸ್ಥೆ ಕೇರಳದಲ್ಲಿ ಅಷ್ಟೇನೂ ಪ್ರಖ್ಯಾತವಾಗಿರಲಿಲ್ಲ” ಎಂದಿದ್ದಾರೆ ದಿನೂಪ್.

ಆದರೆ ಎಲ್ಲವೂ ಅವರೆಣಿಸಿದಂತೆ ಆಗಲಿಲ್ಲ. ಖರ್ಚುಗಳನ್ನು ಸರಿದೂಗಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಹುತೇಕ ಎಲ್ಲರೂ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನೇ ಬಯಸುತ್ತಿದ್ದರು. ಹೀಗಾಗಿ ವಸ್ತುಗಳನ್ನು ಡೆಲಿವರಿ ಮಾಡಿದ ನಂತರವಷ್ಟೇ ಹಣ ನಮ್ಮ ಕೈಗೆ ಬರುತ್ತಿತ್ತು. ಆದರೆ ವಸ್ತುಗಳನ್ನು ಡೆಲಿವರಿ ಮಾಡಲು 1 ತಿಂಗಳು ಬೇಕಾಗುತ್ತಿತ್ತು. ಹೀಗಾಗಿ ದಿನೂಪ್ ಡೆಲಿವರಿ ಬಾಯ್ ಆಗಿ ಸಹ ಕಾರ್ಯನಿರ್ವಹಿಸಬೇಕಾಯಿತು. ತಮ್ಮ ಉದ್ಯಮಕ್ಕಷ್ಟೇ ಅಲ್ಲದೇ ಬೇರೆ ಸಂಸ್ಥೆಗಳಿಗೂ ಅವರು ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸಿದರು.

“ಕೊಚ್ಚಿಯಲ್ಲಿ 6 ತಿಂಗಳ ಕಾಲ ಉತ್ಪನ್ನಗಳನ್ನು ಡೆಲಿವರಿ ಮಾಡಿದೆ. ಕೊಚ್ಚಿಯ ಹಲವರಿಗೆ ನಾನು ಡೆಲಿವರಿ ಬಾಯ್ ಆಗಿ ಪರಿಚಿತನಾಗಿದ್ದೆ” ಎಂದು ನೆನಪಿಸಿಕೊಳ್ಳುತ್ತಾರೆ ದಿನೂಪ್.

ಸವಾಲುಗಳು ದಿನೂಪ್ ಅವರಿಗೆ ಹೊಸತೇನೂ ಆಗಿರಲಿಲ್ಲ. ಅವರು ಜನಿಸಿದ್ದು ಕೊಚ್ಚಿಯಿಂದ 25 ಕಿ.ಮೀ ದೂರದಲ್ಲಿದ್ದ ಪಟ್ಟಿಮಾಟ್ಟಮ್‌ನಲ್ಲಿ. ತುಂಬಾ ಬಡತನದಲ್ಲಿದ್ದ ಕುಟುಂಬದಲ್ಲಿ ಜನಸಿದವರು ದಿನೂಪ್. ಮೊದಲಿನಿಂದಲೂ ಮಲೆಯಾಳಂ ಭಾಷೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದ ದಿನೂಪ್ ಕಾಲೇಜ್‌ಗೆ ಸೇರಿದಾಗ ಇಂಗ್ಲೀಷ್ ಭಾಷೆ ಕಲಿಯಬೇಕಾದ ಅನಿವಾರ್ಯತೆಗೆ ಒಳಗಾದರು. ವಿದ್ಯಾಭ್ಯಾಸದ ಸಮಯದಲ್ಲೇ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಿಂದ ಬಂದ ಹಣದಲ್ಲಿ ಓದು ಮುಂದುವರೆಸಿದರು.

ದಿನೂಪ್ ತಮ್ಮ ಮೊದಲ ಆನ್‌ಲೈನ್ ಟಿ-ಶರ್ಟ್ ಉದ್ಯಮವನ್ನು ಕೊಚ್ಚಿಯ ಚಾರ್ಟೆಡ್ ಅಕೌಂಟೆಡ್ ಒಬ್ಬರಿಗೆ ಮಾರಿದರು. ಯಾವಾಗ ತಮ್ಮ ಮೊದಲನೆ ಉದ್ಯಮದಲ್ಲಿ ನಿರೀಕ್ಷಿಸಿದ ಯಶಸ್ಸು ಲಭಿಸಲಿಲ್ಲವೋ ಆಗ ದಿನೂಪ್ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದರು.

ಮಂಕ್ ವ್ಯಾಸಾ ಎಂಬ ಹೊಸ ಉದ್ಯಮದ ಆರಂಭ

2013ರ ಡಿಸೆಂಬರ್‌ನಲ್ಲಿ ದಿನೂಪ್ ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿದ್ದಾಗ ಅವರ ಸ್ನೇಹಿತನ ತಂದೆ ಜ್ಯೋತಿಷ್ಯರ ಬಳಿ ಹೊರಟಿದ್ದನ್ನು ಅವರು ಗಮನಿಸಿದ್ದರು. ಕೂಡಲೇ ಸ್ನೇಹಿತನ ತಂದೆಗೆ ನೀವ್ಯಾಕೆ ಆನ್‌ಲೈನ್ ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಬಾರದು ಎಂದು ಪ್ರಶ್ನಿಸಿದ್ದರು.

“ಕೂಡಲೇ ಸ್ನೇಹಿತನಿಂದ ಲ್ಯಾಪ್‌ಟಾಪ್ ಪಡೆದು ಅದರಲ್ಲಿ ಆನ್‌ಲೈನ್ ಮೂಲಕ ಯಾರಾದರೂ ಜ್ಯೋತಿಷಿಗಳು ಸಿಗುತ್ತಾರೆಯೇ ಎಂದು ಹುಡುಕಾಡಿದೆ. ಆದರೆ ಇಂತಹ ಯಾವುದೇ ವೆಬ್‌ಸೈಟ್‌ಗಳೂ ದೊರಕಲಿಲ್ಲ. ಬಹಳಷ್ಟು ಹುಡುಕಾಟದ ನಂತರ ಆಟೋಮ್ಯಾಟಿಕ್ ಹಾರೋಸ್ಕೋಪ್ ರಿಪೋರ್ಟ್ ಪಡೆಯಬಹುದೆಂದು ಕಂಡುಕೊಂಡೆ. ಇದರಲ್ಲಿ ಜನ್ಮದಿನಾಂಕ, ಸಮಯ ಮತ್ತು ಜನನ ಸ್ಥಳಗಳನ್ನು ನಮೂದಿಸಿ ಜ್ಯೋತಿಷ್ಯವನ್ನು ತಿಳಿಯಬಹುದಾಗಿತ್ತು. ಹೀಗಾಗಿ ನಾನು ಇದೇ ಉದ್ಯಮವನ್ನು ಆರಂಭಿಸಬೇಕೆಂದು ತೀರ್ಮಾನಿಸಿದೆ. ಏಕೆಂದರೆ ಬಹುಪಾಲು ಭಾರತೀಯರಿಗೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಜ್ಯೋತಿಷ್ಯ ಬಹಳ ಪ್ರಮುಖವಾದದ್ದು. ಆದರೆ ಈ ಇಂಟರ್‌ನೆಟ್ ಯುಗದಲ್ಲಿ ಆನ್‌ಲೈನ್‌ನಲ್ಲಿ ಇತರ ಸೇವೆಗಳನ್ನು ಪಡೆಯಲು ಸಾಧ್ಯವಾಗುವಂತೆ ಜ್ಯೋತಿಷ್ಯ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ ದಿನೂಪ್.

image


ಸಹ ಸಂಸ್ಥಾಪಕರ ಹುಡುಕಾಟ

ದಿನೂಪ್‌ಗೆ ತಮ್ಮ ಸಂಸ್ಥೆ ಆರಂಭಿಸಲು ಪ್ರಬಲವಾದ ತಾಂತ್ರಿಕ ತಂಡ ಬಹಳ ಅಗತ್ಯ ಎಂಬುದು ತಿಳಿದಿತ್ತು. 4 ತಿಂಗಳ ಕಾಲ ನಿರಂತರ ಹುಡುಕಾಟದ ನಂತರ ಒಂದು ಸಂಜೆ, ಕೊಚ್ಚಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಬಳಿಯ ಟೀ ಅಂಗಡಿಯಲ್ಲಿ ಕುಳಿತಿದ್ದಾಗ ಅವರು ತಮ್ಮ ಕಾಲೇಜು ಸ್ನೇಹಿತ ಶರತ್ ಕೆ.ಎಸ್ ಅವರನ್ನು ಭೇಟಿಯಾದರು. ಶರತ್ ಸಾಫ್ಟ್‌ ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ದಿನೂಪ್ ಅವರು ತಮ್ಮ ಯೋಜನೆಯನ್ನು ಶರತ್ ಅವರಿಗೆ ವಿವರಿಸಿದರು. ಇದರಿಂದ ಶರತ್‌ಗೆ ಬಹಳ ಸಂತೋಷವಾಗಿ ತಾವೂ ಯೋಜನೆಯಲ್ಲಿ ಪಾಲುದಾರರಾಗ ಬಯಸಿದರು. ಹಲವು ಬಾರಿ ಭೇಟಿಯಾಗಿ ಯೋಜನೆಯ ಕುರಿತು ಚರ್ಚಿಸಿದರು. ನಂತರ ಶರತ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ದಿನೂಪ್ ಅವರೊಂದಿಗೆ ಕೈಜೋಡಿಸಲು ನಿರ್ಧರಿಸಿದರು. ಹೀಗೆ ಶರತ್ ಅವರು ಮಂಕ್‌ ವ್ಯಾಸಾ ಉದ್ಯಮದ ಸಹ ಸಂಸ್ಥಾಪಕರಾದರು.

ಉದ್ಯಮದ ಮತ್ತೊಂದು ಹಂತ

2 ತಿಂಗಳಲ್ಲಿ ಇಬ್ಬರೂ ಸೇರಿ ಮಂಕ್ ವ್ಯಾಸಾದ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿದರು. ಆದರೆ ಇದರ ಮುಂದಿನ ಹಂತ ಬಹಳ ಕಷ್ಟಕರವಾಗಿತ್ತು. ಅದೆಂದರೆ ಜ್ಯೋತಿಷಿಗಳನ್ನು ವೆಬ್‌ಸೈಟ್‌ಗೆ ಸೇರ್ಪಡೆಗೊಳಿಸಿಕೊಳ್ಳುವುದು. ಏಕೆಂದರೆ ಜ್ಯೋತಿಷಿಗಳು ಅಂತರ್ಜಾಲ ವ್ಯವಸ್ಥೆಗೆ ಇನ್ನೂ ಹೊಂದಿಕೊಂಡಿರಲಿಲ್ಲ. ಹೀಗಾಗಿ ಆನ್‌ಲೈನ್ ವೇದಿಕೆಯನ್ನು ಉಪಯೋಗಿಸಿಕೊಳ್ಳುವಂತೆ ಜ್ಯೋತಿಷಿಗಳ ಮನವೊಲಿಸಲು ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಮತ್ತು ಜ್ಯೋತಿಷಿಗಳಿಗೆ ಈ ಕುರಿತಾಗಿ ತರಬೇತಿಯನ್ನೂ ಸಹ ನೀಡಿದರು.

ತಾಂತ್ರಿಕ ಸಮಸ್ಯೆಗಳು ಅವರು ಮತ್ತೆ ಡ್ರಾಯಿಂಗ್ ಬೋರ್ಡ್‌ನತ್ತ ಮುಖಮಾಡುವಂತೆ ಮಾಡಿತು. ಅವರು ವೀಡಿಯೋ ಸಮಾಲೋಚನಾ ವೇದಿಕೆಯನ್ನು ನಿರ್ಮಿಸಿ ಅದಕ್ಕೆ 10 ಮಂದಿ ಜ್ಯೋತಿಷಿಗಳನ್ನು ಸೇರಿಸಿ ಅದರಿಂದ ಒಳ್ಳೆಯ ಫಲಿತಾಂಶ ಪಡೆದರು. ಆದರೆ ಪಾವತಿ ವಿಧಾನ ಮತ್ತು ವೀಡಿಯೋ ಕನ್ಸಲ್ಟೇಶನ್ ಗಳು ಒಟ್ಟಾಗಿ ಕಾರ್ಯನಿರ್ವಹಿಸುವಾಗ ಸಮರ್ಪಕ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ.

ಹೀಗಾಗಿ ವೆಬ್‌ಸೈಟ್‌ನಲ್ಲಿ ಇಂತಹ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು. ತಮ್ಮ ಉತ್ಪನ್ನದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ ನಂತರ 2015ರ ಏಪ್ರಿಲ್‌ನಲ್ಲಿ ವೆಬ್‌ಸೈಟ್‌ ರೀಲಾಂಚ್‌ ಮಾಡಿದರು. ನಂತರ ದಿನೂಪ್ ಟಿಐಇ ಕೇರಳದ ಸದಸ್ಯರಾದರು ಮತ್ತು ಅಲ್ಲಿ ತರಬೇತಿಯನ್ನೂ ಪಡೆದರು. ಕೊಚ್ಚಿ ಮೂಲದ ಪ್ರಾರಂಭಿಕ ಹಂತದ ಉದ್ಯಮಗಳ ಹೂಡಿಕೆದಾರರಾದ ಸಂಜಯ್ ವಿಜಯ್ ಕುಮಾರ್ ಅವರಿಂದ ಹೂಡಿಕೆಯನ್ನೂ ಪಡೆದರು.

ಉದ್ಯಮದ ಮಾದರಿ

2015ರ ಏಪ್ರಿಲ್‌ನಲ್ಲಿ ಮಂಕ್‌ ವ್ಯಾಸಾ ವೆಬ್‌ಸೈಟ್‌ನಲ್ಲಿ 15 ಮಂದಿ ಜ್ಯೋತಿಷಿಗಳಿದ್ದರು. ತಿಂಗಳಿನಲ್ಲಿ 22 ಜ್ಯೋತಿಷ್ಯದ ಸಮಾಲೋಚನೆಗಳು ನಡೆಯುತ್ತಿದ್ದವು. ಇಂದು ವೆಬ್‌ಸೈಟ್‌ನಲ್ಲಿ 25 ಮಂದಿ ಜ್ಯೋತಿಷಿಗಳು ಲಭ್ಯರಿದ್ದು ದಿನಕ್ಕೆ 22 ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. 500 ಮಂದಿ ಆಫ್‌ಲೈನ್ ವಿಚಾರಣೆಗಳು ಮತ್ತು 200 ಆನ್‌ಲೈನ್ ವಿಚಾರಣೆಗಳು ನಡೆಯುತ್ತಿವೆ.

ಪ್ರತಿ ಜ್ಯೋತಿಷಿಯಿಂದಲೂ ಪ್ರತಿ ಜ್ಯೋತಿಷ್ಯ ಸೇವೆಗೂ ಶೇ.15ರಷ್ಟು ಕಮಿಷನ್ ಪಡೆಯುತ್ತಿದೆ. ಬಳಕೆದಾರರಿಗೆ ಆನ್‌ಲೈನ್ ವೀಡಿಯೋ ಚಾಟ್ ಅವಕಾಶ ಮತ್ತು ಆಫ್‌ಲೈನ್ ಫೋನ್ ಕಾಲ್ ಸೌಲಭ್ಯವನ್ನು ನೀಡಲಾಗುತ್ತದೆ. ಪ್ರತಿ ಸಮಾಲೋಚನೆಗೂ ಆನ್‌ಲೈನ್ ಮೂಲಕ ಸರಾಸರಿ 500 ರೂ.ಗಳನ್ನು ಚಾರ್ಜ್ ಮಾಡಲಾಗುತ್ತದೆ.

3 ವರ್ಷದಲ್ಲಿ ಸುಮಾರು 2000 ಜ್ಯೋತಿಷ್ಯರನ್ನು ಹೊಂದುವುದು ವೆಬ್‌ಸೈಟ್‌ನ ಗುರಿಯಾಗಿದೆ. ಅಲ್ಲದೇ ಸುಮಾರು 200 ಮಿಲಿಯನ್ ಡಾಲರ್ ವಹಿವಾಟು ಮಾಡುವುದು ಸಹ ವೆಬ್‌ಸೈಟ್‌ನ ಗುರಿಯಾಗಿದೆ. “ಅನೇಕ ಕಷ್ಟಕರ ಸಂದರ್ಭದಲ್ಲೂ ಉದ್ಯಮಶೀಲತೆ ನನಗೆ ನನ್ನದೇ ಆದ ಸ್ವಾತಂತ್ರ್ಯ ನೀಡಿದೆ. ಒತ್ತಡ ಮತ್ತು ಸಂಕಷ್ಟಗಳನ್ನೆದುರಿಸದೇ ಯಾವುದೇ ರೀತಿಯ ಕೆಲಸ ಮಾಡುವುದೂ ಸಾಧ್ಯವಿಲ್ಲ ಎಂಬುದನ್ನು ನಾನು ಕಲಿತಿದ್ದೇನೆ” ಎಂದಿದ್ದಾರೆ ದಿನೂಪ್.


ಲೇಖಕರು: ಸಿಂಧು ಕಶ್ಯಪ್​

ಅನುವಾದಕರು: ವಿಶ್ವಾಸ್​​​