ಬಂಡವಾಳ ಹೂಡಿಕೆ ಸಮಾವೇಶಕ್ಕೆ ಬಿಗ್​ ಓಪನಿಂಗ್​​

ಟೀಮ್​ ವೈ.ಎಸ್​. ಕನ್ನಡ

ಬಂಡವಾಳ ಹೂಡಿಕೆ ಸಮಾವೇಶಕ್ಕೆ ಬಿಗ್​ ಓಪನಿಂಗ್​​

Wednesday February 03, 2016,

5 min Read

ರಾಜ್ಯದ ನೂತನ ಕೈಗಾರಿಕಾ ನೀತಿ ಅನ್ವಯ ಐದು ವರ್ಷಗಳ ಅವಧಿಯಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಿ 15 ಲಕ್ಷ ಉದ್ಯೋಗ ಸೃಷ್ಟಿಸಬೇಕೆಂಬ ಹೆಗ್ಗುರಿ ಇಟ್ಕೊಂಡು ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ 2016 ಸಮಾವೇಶ ಆಯೋಜಿಸಿದೆ. ಹಾಲಿ ಸಮಾವೇಶದಿಂದ ಹೂಡಿಕೆ ಪ್ರಮಾಣ ಹಿಂದಿನ ಸಮಾವೇಶಗಳಿಗಿಂತ ದ್ವಿಗುಣಗೊಳ್ಳಲಿದೆ ಎಂಬ ವಿಶ್ವಾಸದಲ್ಲಿ ಸರ್ಕಾರಕ್ಕಿದೆ. ಈ ಸಮಾವೇಶಕ್ಕೆ ಅಂತಾನೇ ರಾಜ್ಯ ಸರ್ಕಾರ ವಿಶೇಷ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿತ್ತು. ಅದರಂತೆ ಸಧ್ಯ 3700 ಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅಮೆರಿಕಾ ಸೇರಿದಂತೆ ಹಲವಾರು ಪ್ರಮುಖ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಿವೆ. ಎಲ್ಲ ರಾಷ್ಟ್ರಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕ ಭರ್ಜರಿ ಅಭಿವೃದ್ಧಿಯತ್ತ ಸಾಗುವ ಭರವಸೆಗಳು ಗರಿಗೆದರಿವೆ..

image


ಸದ್ಯ ರಾಜ್ಯ ಸರ್ಕಾರದ ಹೊಸ ಕೈಗಾರಿಕೆ ನೀತಿ ಹೆಚ್ಚು ಪ್ರಗತಿ ಪರವಾಗಿದ್ದು, ಬೆಂಗಳೂರು ಮಾತ್ರವಲ್ಲದೆ 2 ಮತ್ತು 3ನೇ ದರ್ಜೆಯ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉದ್ದಿಮೆಗಳಾಗಬೇಕು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ನೀತಿ ರೂಪಿಸಲಾಗಿದೆ ಅನ್ನೋದು ಸರ್ಕಾರದ ಮಾತು..

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ವೆಸ್ಟ್ ಕರ್ನಾಟಕ - 2016 ಸಮಾವೇಶಕ್ಕೆ ಚಾಲನೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಫೆಬ್ರವರಿ 5 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಹಲವಾರು ದೊಡ್ಡ ದೊಡ್ಡ ಉದ್ಯಮಿಗಳ ಹೆಸರು ಉಪನ್ಯಾಸ ನೀಡಲಿರುವ ಅತಿಥಿಗಳ ಪಟ್ಟಿಯಲ್ಲಿ ದೆ. ಬಯೋಕಾನ್ ನ ಕಿರಣ್ ಮಂಜುಂದಾರ್ ಶಾ, ಮೆಟಾಹೆಲಿಕ್ಸ್ ನ ಕೆಕೆ ನಾರಾಯಣನ್, ಎಚ್ ಸಿಜಿ ಹೆಲ್ತ್ ಕೇರ್ ನ ಸಿಇಒ ಬಿಎಸ್ ಅಜಯ್ ಕುಮಾರ್, ಬಯೋ ಫ್ಯೂಯಲ್ ವರ್ಕಿಂಗ್ ಗ್ರೂಪ್ ನ ಪ್ರೊ. ವೈ ಬಿ ರಾಮಕೃಷ್ಣ, ಟಯೋಟಾ ಕಿರ್ಲೋಸ್ಕರ್ ನ ಶೇಖರ್ ವಿಶ್ವನಾಥನ್ ಅವರ ಹೆಸರಿದೆ. ಇನ್ನು ಪ್ರದರ್ಶಕರ ಪಟ್ಟಿಯಲ್ಲಿ ಪ್ರದರ್ಶಕರ ಪಟ್ಟಿಯಲ್ಲಿ ಇ ಮುದ್ರಾ ಲಿಮಿಟೆಡ್, ಜಿಂದಾಲ್ ಸ್ಟೀಲ್ಸ್, ಜಿಎಸ್​ಕೆ , ಜೆಕೆ ಟೈಯರ್ಸ್ ಸೇರಿದಂತೆ ಕರ್ನಾಟಕದ ಇಂಧನ ಸಂಪನ್ಮೂಲ ಸಂಸ್ಥೆಗಳಿವೆ..

ವಿಭಿನ್ನವಾಗಿ ಉದ್ಘಾಟನೆಗೊಂಡ ಇನ್ವೆಸ್ಟ್​ ಕರ್ನಾಟಕ - 2016

image


ಹೂಡಿಕೆ ಸಮಾವೇಶಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಭಿನ್ನವಾಗಿ ಚಾಲನೆ ನೀಡಲಾಯ್ತು. ರೋಬೋ ಮೂಲಕ ಇನ್ವೆಸ್ಟ್​ ಕರ್ನಾಟಕದ ಟೀಸರ್​ ಅನ್ನು ಗಣ್ಯರಿಗೆ ಮತ್ತು ಸಭೆಗೆ ಅದ್ಧೂರಿಯಾಗಿ ಪ್ರದರ್ಶಿಸಲಾಯ್ತು. ರೋಬೋ ಮತ್ತು ಉಪಗ್ರಹ​ ಉಡಾವಣೆಯ ತಂತ್ರಜ್ಞಾನ ಎಲ್ಲರಿಗೂ ಅಚ್ಚರಿ ಹುಟ್ಟಿಸಿತು.

''ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶವಿದೆ. ಕೇಂದ್ರ ಸರ್ಕಾರ ಕೂಡ ಇದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವಿರುವುದರಿಂದ ಹೆಚ್ಚು ಬಂಡವಾಳ ಹೂಡಿಕೆಯನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು ''ಎಂದು ರಾಜ್ಯ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಆಶಯ ವ್ಯಕ್ತಪಡಿಸಿದರು.

image


ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ, ''ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಭಾರತದಲ್ಲಿ ಸ್ಪರ್ಧಾತ್ಮಕ ಒಕ್ಕೂಟ ಇರುವುದರಿಂದ ಬಂಡವಾಳ ಹೂಡಿಕೆಯ ಆಕರ್ಷಣೆ ತುಂಬಾ ಮಹತ್ವದ್ದಾಗಿದೆ. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದರ ಜೊತೆಗೆ ಉದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರನ್ನು ಸೆಳೆಯುವುದು ಅತಿ ಮುಖ್ಯವಾಗಿದೆ. ಕರ್ನಾಟಕ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಯಾವುದೇ ಪ್ರಯತ್ನ ಮಾಡಿದರೂ ಅದಕ್ಕೆ ಎಲ್ಲರ ಬೆಂಬಲ ಇದ್ದೇ ಇರುತ್ತೆ ಎಂದು ಭರವಸೆ ನೀಡಿದರು.''

ಐಟಿಬಿಟಿ, ವಿಮಾನಯಾನ, ಪ್ರವಾಸೋದ್ಯಮ ಸೇರಿದಂತೆ ವಿವಿಧ 16 ವಲಯಗಳಿಗೆ ಬಂಡವಾಳ ಆಕರ್ಷಣೆ ಮಾಡುವುದು ಸಮಾವೇಶದ ಪ್ರಮುಖ ಉದ್ದೇಶ. ಈ ಸಂದರ್ಭದಲ್ಲಿ ವಿವಿಧ ವಿಚಾರಗಳ ಕುರಿತು 26 ಚರ್ಚಾಗೋಷ್ಠಿ ಹಾಗೂ ಸಂವಾದಗಳು ನಡೆಯಲಿವೆ. ಬ್ರಿಟನ್, ಜಪಾನ್, ಫ್ರಾನ್ಸ್, ಸ್ವೀ‌ಡನ್, ಇಟಲಿ ಮತ್ತು ಕೊರಿಯಾ ಸೇರಿದಂತೆ 7 ಪ್ರಮುಖ ರಾಷ್ಟ್ರಗಳ ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿಕೆ ಕುರಿತು ಚರ್ಚೆ ಸಮಾವೇಶದಲ್ಲಿ ನಡೆಯಲಿದೆ

ದೇಶ, ವಿದೇಶದ ವಿವಿಧ ಕ್ಷೇತ್ರಗಳ ಪ್ರಮುಖ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ, ವ್ಯಾಪಾರ, ವಹಿವಾಟು ನಡೆಸಲು ಉತ್ಸುಕವಾಗಿವೆ. ಉತ್ಪಾದನಾ ವಲಯ, ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯ, ಕೈಮಗ್ಗ, ಇಂಧನ ಮತ್ತು ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ, ಔಷಧ ಮತ್ತು ಫಾರ್ಮಾಸುಟಿಕಲ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಅರೆವಾಹಕಗಳ ಉತ್ಪಾದನೆ, ಮೂಲ ಸೌಕರ್ಯ, ಖಾಸಗಿ ಕೈಗಾರಿಕಾ ಪಾರ್ಕ್‌ ನಿರ್ಮಾಣ ಮತ್ತು ಸ್ಮಾರ್ಟ್‌ ಉಪನಗರಗಳ ನಿರ್ಮಾಣ ಕ್ಷೇತ್ರಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ .

image


ಪ್ರತಿ ಜಿಲ್ಲೆಗೂ ಕೈಗಾರಿಕಾ ಪಾರ್ಕ್‌ ಮಾಡಲು ತೀರ್ಮಾನಿಸಲಾಗಿದೆ. ಉದ್ಯಮಗಳನ್ನು ಕೇವಲ ಬೆಂಗಳೂರು ಮಾತ್ರವಲ್ಲದೇ ಜಿಲ್ಲಾ ಪ್ರದೇಶಗಳಲ್ಲೂ ಆರಂಭಿಸಲು ಒತ್ತು ನೀಡಲಾಗಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯಮಗಳು ಆರಂಭಗೊಳ್ಳುತ್ತಿವೆ. ಯಾದಗಿರಿ, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳು, ಉದ್ಯಮಗಳ ಆರಂಭಕ್ಕೆ ಆದ್ಯತೆ ನೀಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 3,300 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ನಿರ್ಮಿಸಲಾಗುವುದು. ತುಮಕೂರು ಜಿಲ್ಲೆಯ ನರಸೀಪುರದಲ್ಲಿ 12,500 ಎಕರೆ ಪ್ರದೇಶದಲ್ಲಿ ಎನ್‌ಐಎಂಝೆಡ್‌ ನಿರ್ಮಾಣ ಮಾಡಲಾಗುವುದು. ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಸಮಾವೇಶದ ಜಾಗೃತಿ ಮೂಡಿಸಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಬಂಡವಾಳ ಹೂಡಿಕೆದಾರರು ರಾಜ್ಯದಲ್ಲಿ ಉದ್ದಿಮೆಗಳನ್ನು ಆರಂಭಿಸುವಾಗ ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕೆಂಭ ಷರತ್ತನ್ನು ಹೂಡಿಕೆದಾರರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಕೈಗಾರಿಕೆಗಳಿಗೆ ಜಮೀನು ನೀಡುವವರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂಬ ಮತ್ತೊಂದು ಷರತ್ತನ್ನೂ ವಿಧಿಸಲಾಗುತ್ತದೆ..

2011ರ ಜೂನ್‌ ತಿಂಗಳಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 7,600 ಪ್ರತಿನಿಧಿಗಳು ಭಾಗವಹಿಸಿದ್ದು, 389 ಒಡಂಬಡಿಕೆಗೆ ಸಹಿ ಮಾಡಲಾಗಿತ್ತು. 3.92 ಲಕ್ಷ ಕೋಟಿ ಹೂಡಿಕೆ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ಸಧ್ಯದವರೆಗೆ 46,919 ಕೋಟಿ ರೂ. ಹೂಡಿಕೆಯಾಗಿದೆ. 7.35 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದ್ದು, 94,110 ಉದ್ಯೋಗ ಸೃಷ್ಟಿಯಾಗಿವೆ. 85 ಯೋಜನೆಗಳು ಅನುಷ್ಠಾನಗೊಂಡಿದ್ದು, 179 ಯೋಜನೆಗಳು ವಿವಿಧ ಹಂತದಲ್ಲಿವೆ..

2012ರ ಜೂನ್‌ ತಿಂಗಳಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 10 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. 751 ಒಡಂಬಡಿಕೆಗೆ ಸಹಿ ಹಾಕಲಾಗಿದೆ. 6.77 ಲಕ್ಷ ಕೋಟಿ ಹೂಡಿಕೆ ನಿರೀಕ್ಷಿಸಲಾಗಿತ್ತು. ಸುಮಾರು 8,850 ಕೋಟಿ ರೂ. ಹೂಡಿಕೆಯಾಗಿದೆ. 14 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶ ಇದ್ದಿದ್ದು, 18 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. 45 ಯೋಜನೆಗಳು ಅನುಷ್ಠಾನಗೊಂಡಿದ್ದು, 260 ಯೋಜನೆಗಳು ವಿವಿಧ ಹಂತದಲ್ಲಿವೆ ಸುಮಾರು 30,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಇನ್ನೂ 20,000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಗುರುತಿಸಲಾಗಿದೆ. ಒಟ್ಟಾರೆ ಕಳೆದ ಎರಡೂವರೆ ವರ್ಷದಲ್ಲಿ 1.3 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ..

ಈಗ ನಡೆಯುತ್ತಿರುವ 2016ರ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ರಾಜ್ಯದ ನೂತನ ಕೈಗಾರಿಕಾ ನೀತಿ ಅನ್ವಯ ಐದು ವರ್ಷಗಳ ಅವಧಿಯಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಅಲ್ಲದೇ 15 ಲಕ್ಷ ಉದ್ಯೋಗ ಸೃಷ್ಟಿಸಬೇಕೆಂಬ ಹೆಗ್ಗುರಿ ಇದೆ. ಸರ್ಕಾರದ ಪ್ರಕಾರ ಕೈಗಾರಿಕೆಗಳ ಸ್ಥಾಪನೆಗೆ ಜಮೀನಿನ ಕೊರತೆ ಇಲ್ಲ. 13 ಸಾವಿರ ಎಕರೆ ಸರ್ಕಾರಿ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಎಡಿಬಿಗೆ ವಹಿಸಲು ಸರ್ಕಾರ ಸಿದ್ಧವಿದೆ. ಅಲ್ಲದೇ ರಾಜ್ಯ ಸರ್ಕಾರ 26 ಸಾವಿರದ 268 ಎಕರೆ ಲ್ಯಾಂಡ್ ಬ್ಯಾಂಕ್ ಇದೆ ಎಂದು ಸರ್ಕಾರ ಘೋಷಿಸಿಕೊಂಡಿದೆ..

ಸಾರ್ವಜನಿಕ ಸೌಲಭ್ಯ ರಂಗದಲ್ಲಿ ಹೂಡಿಕೆಗೆ ಒತ್ತು ನೀಡಲಿರುವ 145 ಕ್ಷೇತ್ರಗಳನ್ನು ಈ ಬಾರಿಯ ಇನ್ವೆಸ್ಟ್ ಕರ್ನಾಟಕ ಗುರುತಿಸಿದೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. 10,875 ಕೋಟಿ ಮೊತ್ತದ ಲೈಟ್ ರೈಲ್ ಟ್ರಾನ್ಸಿಟ್ ವ್ಯವಸ್ಥೆಯಿಂದ ಹಿಡಿದು ನಾಲ್ಕು ಕೋಟಿ ವೆಚ್ಚದ ಕಲಾಗ್ರಾಮ, 2.3 ಕೋಟಿ ವೆಚ್ಚದ ಪೂರ್ವ-ಪಶ್ಚಿಮ ಕಾರಿಡಾರ್ ನಿರ್ಮಾಣದವರೆಗೆ ಸಣ್ಣ ಮತ್ತು ಅತಿ ದೊಡ್ಡ ಹೂಡಿಕೆದಾರರಿಗೆ ಇನ್ವೆಸ್ಟ್ ಕರ್ನಾಟಕ ಬಾಗಿಲು ತೆರೆದಿದೆ

ಬೆಂಗಳೂರಿನ ಅನಿಲ ಸರಬರಾಜು (ಸಿಜಿಡಿ) ವ್ಯವಸ್ಥೆ ಮೂಲಕ ಮನೆ ಮನೆಗೆ ಪೈಪ್‌ಲೈನ್ ಮುಖೇನ ಗ್ಯಾಸ್ ಪೂರೈಸುವ ಉದ್ದೇಶ ಹೊಂದಲಾಗಿದೆ. ವಾಹನಗಳಿಗೂ ಸಿಎನ್‌ಜಿ ಪೂರೈಸುವ ನಿಟ್ಟಿನಲ್ಲಿ ಬೆಂಗಳೂರು ವಲಯದಲ್ಲಿ ಪರಿಸರ ಸ್ನೇಹಿ ಇಂಧನ ವಿತರಣೆ ಜಾಲ ರೂಪಿಸಲು 1200 ಕೋಟಿ ರೂ ಹೂಡಿಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ..

ರಾಜಧಾನಿ ಬೆಂಗಳೂರಿನ ಜನತೆಗೆ ಭರಪೂರ ಮನರಂಜನೆ ಒದಗಿಸುವ ಜತೆಗೆ ನಗರವನ್ನು ಪ್ರವಾಸಿಗರ ಆಕರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲೂ ಖಾಸಗಿ ಹೂಡಿಕೆಯನ್ನು ಎದುರುನೋಡಲಾಗುತ್ತಿದೆ. ನಗರವನ್ನು ಡಿಜಿಟಲ್ ಮೀಡಿಯಾ ಸಿಟಿಯನ್ನಾಗಿ ರೂಪಿಸುವ ಪ್ರಸ್ತಾವನೆಯಿದೆ. ಮನರಂಜನೆಯ ಕೇಂದ್ರಗಳಾದ ಥೀಮ್ ಪಾರ್ಕ್, ಡಿಸ್ನೀ ಲ್ಯಾಂಡ್, ಸ್ನೋ ಪಾರ್ಕ್, ಕಲಾ ಗ್ರಾಮದ ಜತೆಗೆ ಲಂಡನ್‌ನ ಥೇಮ್ಸ್ ನದಿ ದಡದಲ್ಲಿರುವ ಮಿಲೇನಿಯಮ್ ವೀಲ್ ಮಾದರಿಯಲ್ಲಿ ‘ಬೆಂಗಳೂರು ಐ’, ನಯನಮನೋಹರವಾದ ಹಲಸೂರು ಕೆರೆಯಲ್ಲಿ ರಾತ್ರಿ ವೇಳೆ ದೋಣಿ ವಿಹಾರದೊಂದಿಗೆ ರಾತ್ರಿಯೂಟದ ಸವಿ ಸವಿಯುವ ಯೋಜನೆಗಳಿಗೆ ಖಾಸಗಿಯವರ ಹೂಡಿಕೆಗೆ ಸಮಾವೇಶ ಸಾಕ್ಷಿಯಾಗಲಿದೆ.