"ಹೇ" ಟ್ಯಾಕ್ಸಿ...!

ವಿಸ್ಮಯ

0

ರಸ್ತೆಯಲ್ಲಿ ನಿಂತು ಟ್ಯಾಕ್ಸಿ ಅಂತ ಕೂಗಿದ್ರೆ, ಕಾರು ಬಂದು ನಿಮ್ಮ ಮುಂದೆ ನಿಲ್ಲುತ್ತೆ. ಆದ್ರೆ ಜನವರಿ ತಿಂಗಳಿಂದ ನೀವು ಟ್ಯಾಕ್ಸಿ ಅಂತ ಕೂಗು ಹಾಕಿದ್ರೆ ಸಾಕು, ಬೈಕ್‍ಗಳೂ ನಿಮ್ಮೆದುರು ಸಾಲುಗಟ್ಟಿ ನಿಲ್ಲಲಿವೆ. ಹೌದು, ಬೆಂಗಳೂರಿಗೆ ಈಗ ಬೈಕ್ ಟ್ಯಾಕ್ಸಿಗಳೂ ಪದಾರ್ಪಣೆ ಮಾಡಿವೆ. ಗುಂಡಿ ಒತ್ತಿದ ತಕ್ಷಣ ಬಂದು ನಿಲ್ಲುವ ಓಲಾ, ಉಬರ್ ಬಾಡಿಗೆ ಕಾರುಗಳಂತೆಯೇ ನಗರದಲ್ಲಿ ಈಗ ಬಾಡಿಗೆಗೆ ಬೈಕ್‍ಗಳು ಕೂಡ ಮನೆ ಬಾಗಿಲಿಗೆ ಬರುತ್ತಿವೆ. ಅಗ್ಗದ ಬಾಡಿಗೆ ಕಾರುಗಳ ಮಾದರಿಯಲ್ಲೇ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳು ರಾಜಧಾನಿಗೆ ಬಂದಿವೆ. ನೂತನ ವ್ಯವಸ್ಥೆಯಲ್ಲಿ ಆ್ಯಪ್ ಮತ್ತು ಸ್ಮಾರ್ಟ್‍ಫೋನ್ ಇರುವ ಗ್ರಾಹಕರು ಕಾರುಗಳನ್ನು ಬುಕ್ ಮಾಡುವಂತೆಯೇ ಬೈಕ್‍ಗಳನ್ನು ಕೂಡ ಬುಕ್ ಮಾಡಬಹುದು.

ಈಗಾಗಲೇ ಸಿಲಿಕಾನ್ ಸಿಟಿಗೆ ರ್ಯಾಪಿಡೋ(Rapido) ಟ್ಯಾಕ್ಸಿ ಎಂಬ ಬೈಕ್ ಟ್ಯಾಕ್ಸಿಗಳು ಪ್ರಯಾಣಿಕರ ಮನೆ ಬಾಗಿಲಿಗೆ ಬಂದಿವೆ. ಕಡಿಮೆ ದರದಲ್ಲಿ ಬೇಕಾದಲ್ಲಿ ಕರೆದೊಯ್ಯಲಿವೆ. ಮುಂಬೈನಲ್ಲಿ ಕಳೆದ ಜೂನ್‍ನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಗೊಂಡ ಬೆನ್ನಲೇ, ಈಗ ಹೇ ಟ್ಯಾಕ್ಸಿ ಇದೀಗ ಬೆಂಗಳೂರು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೇ ಟ್ಯಾಕ್ಸಿ ಮತ್ತು ರ್ಯಾಪಿಡೋ (Rapido) ತಂತ್ರಜ್ಞಾನ ಆಧಾರಿತ ಪ್ರತ್ಯೇಕ ಬೈಕ್ ಟ್ಯಾಕ್ಸಿ ಸೇವೆಗಳಾಗಿವೆ. ಬೈಕ್ ಟ್ಯಾಕ್ಸಿಗಳನ್ನೂ ಆಯಾ ಮೊಬೈಲ್ ಆಪ್ಲಿಕೇಷನ್ ಅಥವಾ ಆಪ್‍ಗಳ ಮೂಲಕ ಬುಕ್ ಮಾಡಬಹುದು. ಸೇವೆ ಒದಗಿಸಿದ ನಂತರ ಬೈಕ್ ರೈಡರ್ ನಿಮ್ಮನ್ನು ಡ್ರಾಪ್ ಮಾಡಿ ನಿಗದಿತ ಪ್ರಯಾಣ ದರ ಪಡೆದುಕೊಳ್ಳುತ್ತಾನೆ.

ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಲ್ಲಿ ಸರಿಯಾದ ಸಮಯಕ್ಕೆ ಗುರಿ ತಲುಪೋದು ಕಷ್ಟ ಬಿಡಿ. ತರಾತುರಿಯಲ್ಲಿ ಕಾರು, ಬಸ್‍ಗಳಲ್ಲಿ ಪ್ರಯಾಣ ಸಾಧ್ಯಾನೇ ಇಲ್ಲಾ ಅನ್ನಬೇಕು. ಈ ಸಮಸ್ಯೆಗೆ ಪರಿಹಾರ ಎಂಬಂತೆ ಈಗ ಬೈಕ್ ಟ್ಯಾಕ್ಸಿಗಳು ಬೆಂಗಳೂರಿನ ರಸ್ತೆಗೆ ಇಳಿದಿವೆ. ಇದ್ರಿಂದಾಗಿ ಆರಾಮಾಗಿ ಬೈಕ್ ಟ್ಯಾಕ್ಸಿ ಬಳಕೆ ಮಾಡಬಹುದು ಅಂತಾರೆ ಪ್ರಯಾಣಿಕ ನವೀನ್.

ಹೇ ಟ್ಯಾಕ್ಸಿ ಒಂದು ಮೊಬೈಲ್ ಆಪ್ಲಿಕೇಶನ್. ಅದನ್ನು ಡೌನ್‍ಲೋಡ್ ಮಾಡಿಕೊಂಡು ಸವಾರಿ ಬುಕ್ ಮಾಡಬಹುದು. ಮೊದಲ 2 ಕಿಲೋ ಮೀಟರ್‍ಗೆ 20 ರೂಪಾಯಿಯಷ್ಟೇ. ನಂತ್ರ ಪ್ರತಿ ಕಿಲೋ ಮೀಟರ್‍ಗೆ 7 ರೂಪಾಯಿ ದರ ವಿಧಿಸಲಾಗುತ್ತೆ. ಮೊದಲ ಎರಡು ಬಾರಿ 5 ಕಿಲೋಮೀಟರ್‍ವರೆಗೆ ಉಚಿತ ಪ್ರಯಾಣ ಮಾಡಬಹುದು. ಈಗಾಗಲೆ ಈ ವ್ಯವಸ್ಥೆ ಮುಂಬೈ ಮತ್ತು ಹೈದರಾಬಾದ್‍ನಲ್ಲಿ ಚಾಲ್ತಿಯಲ್ಲಿದೆ. ಹೇ ಟ್ಯಾಕ್ಸಿಯಲ್ಲಿ ಕೇವಲ ಪಿಕ್ ಅಪ್ ಡ್ರಾಪ್ ಮಾತ್ರವಲ್ಲದೇ, ಪಾರ್ಸೆಲ್ ಡೆಲಿವರಿಯನ್ನೂ ಮಾಡಲಾಗುತ್ತೆ. ಈಗಾಗಲೇ 27 ಬೈಕ್ ಸವಾರರು ಹೇ ಟ್ಯಾಕ್ಸಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಒಂದು ತಿಂಗಳ ಪ್ರಾಯೋಗಿಕ ಅಧ್ಯಯನಕ್ಕೆ ಹೇ ಟ್ಯಾಕ್ಸಿ, ಬಿಬಿಎಂಪಿ ಮತ್ತು ಸಂಚಾರಿ ಪೊಲೀಸರ ಅನುಮತಿ ಕೋರಿದೆ. ಸದ್ಯ ಸುರಕ್ಷತೆ ದೃಷ್ಟಿಯಿಂದ ಬೈಕ್ ಟ್ಯಾಕ್ಸಿ ವ್ಯವಸ್ಥೆಯು ಕೇವಲ ಪುರುಷರಿಗಾಗಿ ಮಾತ್ರ ಮಾಡಲಾಗಿದೆ. ಮುಂದಿನ 2 ತಿಂಗಳಲ್ಲಿ ಮಹಿಳಾ ಬೈಕ್ ರೈಡರ್‍ಗಳನ್ನೂ ನೋಂದಣಿ ಮಾಡಿಕೊಳ್ಳುವ ಯೋಜನೆ ಇದೆ. ಆನಂತರ ಮಹಿಳಾ ಪ್ರಯಾಣಿಕರಿಗೂ ಬೈಕ್ ಟ್ಯಾಕ್ಸಿ ಸೌಲಭ್ಯ ಕಲ್ಪಿಸಲಾಗುವುದು. ಇನ್ನು ಸದ್ಯದ ಮಟ್ಟಿಗೆ ಬೆಳಗ್ಗೆ 8:30 ಮಧ್ಯಾಹ್ನ 12.30ರವೆಗೂ ಮತ್ತು ಸಂಜೆ 4 ರಿಂದ ರಾತ್ರಿ 10ರ ವೆಗೂ ಹೇ ಟ್ಯಾಕ್ಸಿ ಸೇವೆ ಲಭ್ಯ. ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದ್ರೆ ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡರೆ ರೀಚ್ ಆಗೋದು ಕಷ್ಟ ಅನ್ನೋವರಿಗೆ ಈ ಬೈಕ್ ಟ್ಯಾಕ್ಸಿಗಳು ನಿಜಕ್ಕೂ ಯೂಸ್‍ಫುಲ್.

Related Stories