ಎಲ್ಲರಿಗೂ ಗೊತ್ತು ನಮ್ಮ ಕನ್ನಡ ಭಾಷೆ

ಪ್ರೀತಮ್​ ಕೆಮ್ಮಾಯಿ

0

ಕನ್ನಡ ಭಾಷೆಯದ್ದು ಅವಿಚ್ಛಿನ ಪರಂಪರೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದ್ಭುತವಾದ ಭವ್ಯ ಪರಂಪರೆಯಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇದೆ.

ಮೂಲ ಕನ್ನಡ ಶುರುವಾಗಿತ್ತು ಕ್ರಿ.ಪೂ 1500ರಲ್ಲಿ ಎನ್ನುತ್ತಿವೆ ಸಂಶೋಧನೆಗಳು. ಆದರೆ, ಕನ್ನಡ ಲಿಪಿಯ ಆವಿಷ್ಕಾರವಾದದ್ದು ಸಾಮ್ರಾಟ ಅಶೋಕನ ಕಾಲದಲ್ಲಿ ಅಂದರೆ, ಕ್ರಿ.ಪೂ. 4 ಅಥವಾ 3 ನೇ ಶತಮಾನದಲ್ಲಿ. 5 ನೇ ಶತಮಾನದಲ್ಲಿ ಕದಂಬರು ಬನವಾಸಿಯಲ್ಲಿ ಆಳ್ವಿಕೆ ಆರಂಭಿಸುವುದರೊಂದಿಗೆ ಕನ್ನಡ ರಾಜಭಾಷೆಯಾಗಿ, ಅಭಿವೃದ್ಧಿಯಾಗಲಾರಂಭಿಸಿತು.

5ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ಲಿಪಿ ಬಳಕೆ ಇತ್ತು ಎಂಬುದಕ್ಕೆ ಹಲವು ಸಾಕ್ಷಿಗಳು ದೊರೆತಿವೆ. ಬನವಾಸಿಯಿಂದ ಕನ್ನಡ ನಾಡನ್ನು ಆಳಿದ ಕದಂಬರ ಕಾಲದಲ್ಲಿ ಲಿಪಿ ಬಳಕೆಯಲ್ಲಿತ್ತು. 5ನೇ ಶತಮಾನದಲ್ಲಿ ಟಂಕಿಸಲಾದ ತಾಮ್ರದ ನಾಣ್ಯದಲ್ಲಿ ಕನ್ನಡ ಲಿಪಿಯನ್ನು ಬಳಸಲಾಗಿದೆ.

ಕ್ರಿಸ್ತಪೂರ್ವ 230ರಲ್ಲಿ ಅಶೋಕ ಸಾಮ್ರಾಟ ಬ್ರಹ್ಮಗಿರಿಯಲ್ಲಿ ಸ್ಥಾಪಿಸಿದ ಶಾಸನವೊಂದರಲ್ಲಿ ಕನ್ನಡದ ಪದಗಳನ್ನು ಬಳಸಲಾಗಿದೆ. ಅಂದರೆ, ಆಗಿನ ಕಾಲದಿಂದಲೂ ಕನ್ನಡದ ಪದ ಬಳಕೆ ಇತ್ತು ಎಂದು ತಿಳಿದುಕೊಳ್ಳಬಹುದು. ಸಾಮ್ರಾಟ ಅಶೋಕನ ಕಾಲದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಮೇಲೆ ಬೌದ್ಧಧರ್ಮದ ಪ್ರಭಾವವನ್ನು ಕಾಣಬಹುದು.

ಆದರೆ, ಸಂಪೂರ್ಣವಾಗಿ ಕನ್ನಡವನ್ನು ಬಳಸಲಾಗಿರುವ ಮೊದಲ ಶಾಸನ ದೊರೆತಿರುವುದು ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ. ಕ್ರಿಸ್ತಶಕ 450ರಲ್ಲಿ ಇದನ್ನು ರಚಿಸಲಾಗಿತ್ತು. ಇದನ್ನೇ ಈಗಲೂ ಕನ್ನಡದ ಮೊದಲ ಶಾಸನ ಎಂದು ಕರೆಯಲಾಗುತ್ತಿದೆ. ಇದು 1936ರಲ್ಲಿ ಪತ್ತೆಯಾಗಿತ್ತು.

ಹಲ್ಮಿಡಿ ಶಾಸನದ 16 ಸಾಲುಗಳಲ್ಲಿ ಪೂರ್ಣಪ್ರಮಾಣದಲ್ಲಿ ಕನ್ನಡ ಬಳಸಲಾಗಿತ್ತು ಎಂದರೆ, ಇದಕ್ಕೂ ಮುನ್ನವೇ ಕನ್ನಡ ಪ್ರಮುಖ ಭಾಷೆಯಾಗಿ ಚಾಲ್ತಿಯಲ್ಲಿತ್ತು ಎಂದು ಊಹಿಸಬಹುದು. ಕನ್ನಡದ ಮೊದಲ ಲಭ್ಯ ಕೃತಿಯು ಕ್ರಿಸ್ತಶಕ 850ರಲ್ಲಿ ರಚಿಸಲ್ಪಟ್ಟಿತು. ಕವಿರಾಜಮಾರ್ಗವೇ ಆ ಕೃತಿ. ಚಿತ್ರದುರ್ಗದಲ್ಲಿ ಸಿಕ್ಕಿದ 5ನೇ ಶತಮಾನಕ್ಕೆ ಸೇರಿದ ತಮಟೆಕಲ್ಲು ಶಾಸನ, ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಕ್ರಿಸ್ತಶಕ 500ಕ್ಕೆ ಸೇರಿದ ಶಾಸನಗಳು ಕನ್ನಡ ಬಳಕೆಯಲ್ಲಿದ್ದುದಕ್ಕೆ ಸಾಕ್ಷಿ.

ಪೂರ್ವಹಳೆಗನ್ನಡ

ಪೂರ್ವದ ಹಳೆಗನ್ನಡ ಮತ್ತು ಈಗಿನ ಕನ್ನಡಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಪೂರ್ವದ ಹಳೆಗನ್ನಡ ಲಿಪಿಯು ಬಹುತೇಕ ತಮಿಳು ಮತ್ತು ಮಲಯಾಳಂ ಲಿಪಿಗಳನ್ನು ಹೋಲುತ್ತದೆ. ಆದರೆ, ಕನ್ನಡ ಭಾಷೆಯ ಅಕ್ಷರಗಳು ಕಾಲಾನುಭಾಗದಲ್ಲಿ ಹೆಚ್ಚು ಸ್ಫುಟಗೊಂಡು ಪರಿಪೂರ್ಣವಾಗಿ ಮೂಡಿಬಂದಿದೆ. ಕನ್ನಡ ಭಾಷೆಯಲ್ಲಿ ಸಂಸ್ಕೃತದ ಪ್ರಭಾವವೂ ಕಡಿಮೆ ಇದೆ. ಸಂಸ್ಕೃತ ಪದಗಳನ್ನು ಬಳಸಿಕೊಂಡರೂ ಅವನ್ನು ಕನ್ನಡಕ್ಕೆ ತಕ್ಕಂತೆ, ಕನ್ನಡದ ಭಾವಕ್ಕೆ ತಕ್ಕಂತೆ ಉಚ್ಛಾರ ಬದಲಾವಣೆ ಮಾಡಿಕೊಳ್ಳಲಾಗಿದೆ. ಕನ್ನಡ ಭಾಷೆಯ ಬಹುತೇಕ ಪದಗಳು ದ್ರಾವಿಡ ಮೂಲದ್ದಾಗಿವೆ.

9ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಧಿಪತ್ಯದಲ್ಲಿ ಕನ್ನಡ ಭಾಷೆ ಮತ್ತಷ್ಟು ಸ್ಫುಟವಾಯಿತು. 9-10ನೇ ಶತಮಾನದಲ್ಲಿ ಹಳೆಗನ್ನಡ ಭಾಷೆ ಬಳಕೆಯಲ್ಲಿತ್ತು. ಕ್ರಿಸ್ತಶಕ 600ರಿಂದ 1830ರ ಅವಧಿಯಲ್ಲಿ ರಚಿಸಲ್ಪಟ್ಟ ಸುಮಾರು 800ಕ್ಕೂ ಹೆಚ್ಚು ಶಾಸನಗಳು ಶ್ರವಣಬೆಳಗೊಳದಲ್ಲಿ ಸಿಕ್ಕಿವೆ. ಇವುಗಳ ಪೈಕಿ ಬಹುತೇಕ ಶಾಸನಗಳನ್ನು ಚಂದ್ರಗಿರಿ ಮತ್ತು ಇಂದ್ರಗಿರಿಯಲ್ಲಿ ಕಾಣಬಹುದಾಗಿದೆ. ಚಂದ್ರಗಿರಿಯಲ್ಲಿನ ಶಾಸನಗಳು 10ನೇ ಶತಮಾನಕ್ಕಿಂತ ಹಿಂದಿನದ್ದಾಗಿವೆ. ಈ ಶಾಸನಗಳಲ್ಲಿ ಕನ್ನಡ, ಸಂಸ್ಕೃತ, ತಮಿಳು, ಮರಾಠಿ, ಮಾರ್ವಾಡಿ ಮತ್ತು ಮಹಾಜನಿ ಭಾಷೆಗಳನ್ನು ಬಳಸಲಾಗಿದೆ. ಆದರೆ, ಶ್ರವಣಬೆಳಗೊಳದ ಶಾಸನಗಳಲ್ಲಿ ಪೂರ್ವದ ಹಳೆಗನ್ನಡ ಮತ್ತು ಹಳೆಗನ್ನಡ ಪದಬಳಕೆಗಳ ಮಿಶ್ರಣವನ್ನು ಕಾಣಬಹುದಾಗಿದೆ. ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರು ಒಡೆಯರ್​​ಗಳ ಪ್ರವರ್ಧಮಾನಕ್ಕೆ ಬಂದ ಬಗೆಯನ್ನೂ ಈ ಶಾಸನಗಳು ವಿವರಿಸುತ್ತವೆ.

ಶ್ರವಣಬೆಳಗೊಳದ ಗೋಮಟೇಶ್ವರ ಮೂರ್ತಿಯ ತಳಭಾಗದಲ್ಲಿ ಹಳೆಗನ್ನಡ ಭಾಷೆ ಬಳಕೆಯಾಗಿರುವ ಶಾಸನವಿದೆ. ಇದು ಕ್ರಿಸ್ತಶಕ 981ರಲ್ಲಿ ರಚಿಸಲ್ಪಟ್ಟಿದೆ. ಕನ್ನಡದ ಆದಿ ಕವಿ ಪಂಪ ಇದೇ ಕಾಲಘಟ್ಟದಲ್ಲಿ ಜೀವಿಸಿದ್ದರು. ಇವರ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯ ಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿ ಮೆರೆದರು. ಇದೇ ಕಾಲದ ಮತ್ತೊಬ್ಬ ಪ್ರಮುಖ ಕವಿಯೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ. ಅಜಿತ ತೀರ್ಥಂಕರ ಪುರಾಣ ಮತ್ತು ಸಾಹಸಭೀಮ ವಿಜಯವನ್ನು ರಚಿಸುವ ಮೂಲಕ ರನ್ನ ಕೂಡಾ ತ್ರಿಮೂರ್ತಿಗಳ ಸಾಲಿಗೆ ಸೇರಿಕೊಂಡರು.

ಇದಕ್ಕೂ ಮುನ್ನವೇ ಅಂದರೆ 8ನೇ ಶತಮಾನದಲ್ಲಿ ತಾಮ್ರದ ಹಲಗೆಯಲ್ಲಿ ಶಾಸನ ಕೆತ್ತಿಸುವ ಪರಿಪಾಠವೂ ಆರಂಭಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಮಣ್ಣುವಿನಲ್ಲಿ ಆಳುತ್ತಿದ್ದ ಆಳುಪ ದೊರೆ ಎರಡನೇ ಆಳುವರಸ ಹಳೆಗನ್ನಡದಲ್ಲಿ ತಾಮ್ರಫಲಕದಲ್ಲಿ ಶಾಸನ ರೂಪಿಸಿದ್ದ. 9ನೇ ಶತಮಾನದಲ್ಲಿ ತಾಳೆಗರಿ ಗ್ರಂಥವನ್ನೂ ಹಳೆಗನ್ನಡದಲ್ಲಿ ರಚಿಸಲಾಗಿತ್ತು. ಮೂಡಬಿದ್ರೆಯ ಜೈನಭಂಡಾರದಲ್ಲಿ 1478 ಪುಟಗಳ ಧವಳ ತಾಳೆಗರಿ ಗ್ರಂಥವನ್ನು ಈಗಲೂ ಸಂರಕ್ಷಿಸಿಡಲಾಗಿದೆ. ಲಭ್ಯ ಮಾಹಿತಿಗಳ ಪ್ರಕಾರ ಕನ್ನಡ ಭಾಷೆಯ ಲಿಪಿಗೆ ಸುಮಾರು 1600 ವರ್ಷಗಳ ಇತಿಹಾಸವಿದೆ. ಈ ಸುದೀರ್ಘ ಹಾದಿಯಲ್ಲಿ ಕನ್ನಡ ಭಾಷೆಯು ಧಾರ್ಮಿಕ ಮತ್ತು ಸಾಮಾಜಿಕ ಪ್ರಭಾವಕ್ಕೆ ಒಳಗಾಗಿದೆ.

9ರಿಂದ 14ನೇ ಶತಮಾನದವರೆಗಿನ ಸಾಹಿತ್ಯವನ್ನು ಹಳೆಗನ್ನಡ ಸಾಹಿತ್ಯವೆಂದು ವಿಂಗಡಿಸಲಾಗಿದೆ. ಈ 5 ಶತಮಾನಗಳ ಅವಧಿಯಲ್ಲಿ ಕನ್ನಡವು ಸ್ವಂತ ಸಾಹಿತ್ಯವುಳ್ಳ ಭಾಷೆಯಾಗಿ ಅಭಿವೃದ್ಧಿ ಹೊಂದಿತ್ತು. ಜೈನ ಮತ್ತು ಶೈವ ಕವಿಗಳು ಈ ಅವಧಿಯಲ್ಲಿ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದರು. ಈ ಅವಧಿಯಲ್ಲೇ ಜೈನ ಪುರಾಣ ಮತ್ತು ವೀರಶೈವ ವಚನಸಾಹಿತ್ಯ ಬೆಳೆದು ಬಂದಿತ್ತು. 10ನೇ ಶತಮಾನದಲ್ಲಿ ಪಂಪ, ಪೊನ್ನ, ರನ್ನನಂತಹ ಮಹಾಕವಿಗಳು ಕನ್ನಡ ಸಾಹಿತ್ಯದ ವೈಭವವನ್ನು ಬಾನೆತ್ತರಕ್ಕೆ ಕೊಂಡೊಯ್ದರು. ಇದೇ ಅವಧಿಯಲ್ಲಿ ವಡ್ಡಾರಾಧನೆಯಂತಹ ಗದ್ಯವೂ ರಚಿಸಲ್ಪಟ್ಟಿತು. ಆ ಕಾಲಕ್ಕೇ ಕನ್ನಡ ಭಾಷೆ ಎಷ್ಟು ಸಮೃದ್ಧವಾಗಿತ್ತೆಂದರೆ, ನಿಘಂಟುಗಳೂ ರಚಿಸಲ್ಪಟ್ಟಿದ್ದವು. ಎರಡನೇ ನಾಗವರ್ಮನ ಕರ್ನಾಟಕ-ಭಾಷಾಭೂಷಣ(1145), ಕೇಶೀರಾಜನ ಶಬ್ಧಮಣಿದರ್ಪಣ(1260)ಗಳು ಇದೇ ಅವಧಿಯಲ್ಲಿ ರಚನೆಯಾದವು. ಕದಂಬರು, ಪಶ್ಚಿಮದ ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಹೈದರಾಲಿ, ಟಿಪ್ಪುಸುಲ್ತಾನ್, ಮೈಸೂರು ಒಡೆಯರ್ ಅವರು ಕನ್ನಡ ಭಾಷೆಯ ಬೆಳವಣಿಗೆಗೆ ರಾಜಾಶ್ರಯವನ್ನೂ ನೀಡಿದ್ದರು.

12-13ನೇ ಶತಮಾನದಲ್ಲಿ ಹರಿಹರ, ರಾಘವಾಂಕರು ಹಲವು ಕೃತಿಗಳನ್ನು ರಚಿಸಿದ್ದರು. ಅಕ್ಕಮಹಾದೇವಿಯವರಿಂದ ಭಕ್ತಿ ಸಾಹಿತ್ಯವೂ ಮೂಡಿಬಂತು. ವಿಜಯನಗರ ಅರಸರ ಕಾಲದಲ್ಲಿ ಕನ್ನಡ ಕೃತಿಗಳ ಮೇಲೆ ಹಿಂದೂ ಸಂಸ್ಕೃತಿಯ ಗಾಢ ಪ್ರಭಾವ ಉಂಟಾಗಿತ್ತು. ಭೀಮಕವಿ, ಪದ್ಮನಖ, ಮಲ್ಲಣರಾಯ, ಚಾಮರಸ ಮೊದಲಾದ ಕವಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಷಟ್ಪದಿ, ರಗಳೆ ಪ್ರಕಾರಗಳ ಮೂಲಕ ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಕಾವ್ಯಗಳನ್ನು ಕನ್ನಡೀಕರಿಸಲಾಯಿತು. ದಾಸ ಸಾಹಿತ್ಯವೂ ಜನಪ್ರಿಯವಾಯಿತು.

ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಘಟ್ಟದ ಪ್ರಮುಖ ಲೇಖಕರಾದ ಹರಿಹರ ಮತ್ತು ರಾಘವಾಂಕರು ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದರು. ರಗಳೆ ಸಾಹಿತ್ಯವನ್ನು ಹರಿಹರ ಪ್ರಚುರಪಡಿಸಿದರೆ, ರಾಘವಾಂಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದರು. ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಮಾತನಾಡುವಾಗ ಕುಮಾರವ್ಯಾಸನನ್ನು ಮರೆಯಲು ಸಾಧ್ಯವೇ ಇಲ್ಲ. ಭಾಮಿನಿ ಷಟ್ಪದಿಯಲ್ಲಿರುವ ಕರ್ನಾಟ ಭಾರತ ಕಥಾಮಂಜರಿ ಓದದವರು ಸಿಗುವುದು ಕಡಿಮೆಯೇ. ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾದ ಈತ ರೂಪಕ ಸಾಮ್ರಾಜ್ಯದ ಚಕ್ರವರ್ತಿಯೆಂಬ ಬಿರುದಿಗೂ ಪಾತ್ರನಾಗಿದ್ದಾನೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ಕೊಟ್ಟಿರುವುದು ದಾಸ ಸಾಹಿತ್ಯ ಅಥವಾ ಭಕ್ತಿ ಸಾಹಿತ್ಯ. 15ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿಪಂಥದ ಹರಿದಾಸರುಗಳು ಪದಗಳನ್ನು ರಚಿಸಿದರು. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ. ಅಷ್ಟೇ ಅಲ್ಲ, ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರ ನಾಮಗಳೆಂದೂ ಕರೆಯುತ್ತಾರೆ. ಪುರಂದರ ದಾಸ, ಕನಕದಾಸರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲ್ಪಡುತ್ತಾರೆ.

18ನೇ ಶತಮಾನದಲ್ಲಿ ಜನಪದ ಕಾವ್ಯವೂ ಕನ್ನಡಕ್ಕೆ ಅದ್ಧೂರಿತನ ತಂದುಕೊಟ್ಟಿತು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ 19ನೇ ಶತಮಾನದ ಕೊನೆಗೆ ಹಾಗೂ 20ನೇ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಇದು ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೂ ಕಾರಣವಾಯಿತು. ಬಿಎಂಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಈ ಕಾಲದ ಸಾಹಿತ್ಯ ಪ್ರಕಾರಗಳೂ ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಕುವೆಂಪು ಅವರು ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿ ಪ್ರೇಮ, ಮಾನವ ಉನ್ನತಿಯಲ್ಲಿನ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಮಿಶ್ರಣವನ್ನು ಕಾಣುವ ಅವರ ಮನಸ್ಸು ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರನ್ನಾಗಿಸಿತು. ಶ್ರೀ ರಾಮಾಯಣ ದರ್ಶನಂ ಅವರ ಮೇರು ಕೃತಿ.

1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಲ್ಪಟ್ಟಿತು. ಕನ್ನಡ ಕುಲಕೋಟಿಯ ಮಾತೃ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್, ಅಲ್ಲಿಂದ ಇಲ್ಲಿಯವರೆಗೆ ಪ್ರತಿವರ್ಷ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದೆ. ಸಾಹಿತಿಗಳಿಗಷ್ಟೇ ಸೀಮಿತವಾಗಿದ್ದ ಈ ಸಮ್ಮೇಳನಗಳು, ಈಗ ಜನಸಾಮಾನ್ಯರ ಸಂಪೂರ್ಣ ಪಾಲ್ಗೊಳ್ಳುವಿಕೆಯಿಂದಾಗಿ ಜನಜಾತ್ರೆಯಾಗಿ ಮಾರ್ಪಟ್ಟಿವೆ.

ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು. ಅದೇ ನವ್ಯ ಸಾಹಿತ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು.

ಹೀಗೆ ರಾಜಾಶ್ರಯದೊಂದಿಗೆ ಸಮೃದ್ಧವಾಗಿ ಬೆಳೆದ ಕನ್ನಡ ಹಲವು ದಾಳಿ, ಪಿತೂರಿಗಳನ್ನು ಎದುರಿಸಿಯೂ ಶಕ್ತಿಶಾಲಿಯಾಗಿ ನಿಂತಿದೆ. ಇಂದಿಗೂ ಕನ್ನಡ ಮಾತನಾಡುವ ಜನರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಅತ್ಯಂತ ಪರಿಪಕ್ವವಾಗಿರುವ ಕನ್ನಡ ಭಾಷೆಯನ್ನು ಜಗತ್ತಿನಾದ್ಯಂತ ಸುಮಾರು 6.6 ಕೋಟಿಗೂ ಹೆಚ್ಚು ಜನ ಬಳಸುತ್ತಿದ್ದಾರೆ. ಈ ಪೈಕಿ 5.5 ಕೋಟಿ ಜನರು ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ನಮ್ಮ ಚೆಲುವಾದ ಕನ್ನಡ ಭಾಷೆ ಅತಿ ಹೆಚ್ಚು ಬಳಸಲ್ಪಡುತ್ತಿರುವ ಜಗತ್ತಿನ 27ನೇ ಭಾಷೆಯಾಗಿದೆ.

Related Stories

Stories by PREETHAM KEMMAYI