‘ಫುಡ್‍ಪಂಡಾ’ ಆಹಾರ ತಿನ್ನಿ... ಖುಷಿ ಖುಷಿಯಾಗಿ ರೈಲಿನಲ್ಲಿ ಟ್ರಾವೆಲ್​ ಮಾಡಿ...!

ಟೀಮ್​​ ವೈ.ಎಸ್​. ಕನ್ನಡ

‘ಫುಡ್‍ಪಂಡಾ’ ಆಹಾರ ತಿನ್ನಿ... ಖುಷಿ ಖುಷಿಯಾಗಿ ರೈಲಿನಲ್ಲಿ ಟ್ರಾವೆಲ್​ ಮಾಡಿ...!

Tuesday December 15, 2015,

2 min Read

ಆನ್‍ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿ ಫುಡ್‍ಪಂಡಾದ ಅಡುಗೆಗಳು ಇನ್ನು ಮುಂದೆ ಭಾರತೀಯ ರೈಲ್ವೆ ಪ್ರಯಾಣಿಕರಿಗೂ ದೊರೆಯಲಿವೆ. ಇದೀಗ ಫುಡ್‍ಪಾಂಡವು ನವದೆಹಲಿಯ ನಿಲ್ದಾಣದಲ್ಲಿ ಆರಂಭಿಕ ಹಂತದ ವಹಿವಾಟು ಪ್ರಾರಂಭಿಸುವ ಮೂಲಕ ಭಾರತೀಯ ರೈಲ್ವೆ ಜೊತೆ ಪ್ರಾಯೋಗಿಕ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ವಚ್ಛ, ಶುದ್ಧ ಹಾಗೂ ಸ್ವಾದಿಷ್ಟವಾದ ಆಹಾರಗಳು ದೊರೆಯುತ್ತದೆ. ಭಾರತೀಯ ರೈಲ್ವೆಯ ಅಂಗ ಸಂಸ್ಥೆಯಾದ IRCTCಯು ಪ್ರಯಾಣಿಕರಿಗಾಗಿ ಊಟೋಪಚಾರ, ಪ್ರವಾಸೋದ್ಯಮ ಹಾಗೂ ಆನ್‍ಲೈನ್‍ನಲ್ಲಿ ಟಿಕೆಟ್ ಮಾರಾಟದ ವ್ಯವಸ್ಥೆಯನ್ನು ಮಾಡುತ್ತಿದೆ. ಭಾರತದ 200ಕ್ಕೂ ಅಧಿಕ ನಗರಗಳ 12,000ಕ್ಕೂ ಹೆಚ್ಚು ರೆಸ್ಟೋರೆಂಟ್‍ಗಳೊಂದಿಗೆ ಆ್ಯಪ್ ಹಾಗೂ ವೆಬ್‍ಸೈಟ್ ಮೂಲಕ ವ್ಯವಹಾರ ನಡೆಸುತ್ತಿರುವ ‘Tastykhana.com’, ‘Justeat.com’ನಂತಹ ಬ್ರಾಂಡ್‍ಗಳ ಜೊತೆ ಫುಡ್​​ಪಂಡಾ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರ ವಿಸ್ತರಣೆಗೂ ಮುಂದಾಗಿದೆ.

image


ಆಹಾರ ಆರ್ಡರ್​ ಮಾಡೋದು ಹೇಗೆ..?

ಫುಡ್‍ಪಂಡಾದ ವಿಶಿಷ್ಟ ವ್ಯವಸ್ಥೆಯಲ್ಲಿ ಪ್ರಯಾಣಿಕರು ಆನ್‍ಲೈನ್ ಮೂಲಕ ವಿವಿಧ ಹೊಟೇಲ್‍ಗಳಿಂದ ತಮ್ಮಿಷ್ಟದ ಆಹಾರಗಳನ್ನು ಆರ್ಡರ್ ಮಾಡಬಹುದಾಗಿದೆ. ಗ್ರಾಹಕರು ಕೇಳಿದ ಆಹಾರವನ್ನು ಸುರಕ್ಷಿತವಾಗಿ ತಲುಪಿಸಲು ಫುಡ್‍ಪಂಡಾವು ವ್ಯವಸ್ಥಿತವಾದ ಕೊರಿಯರ್ ಸೇವೆಯನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಪ್ರಾಯೋಗಿಕ ಹಂತವು ನವದೆಹಲಿಯಲ್ಲಿ ಯಶಸ್ವಿಯಾದಲ್ಲಿ ದೇಶದ ಉಳಿದ ಮೆಟ್ರೋ ನಗರಗಳಾದ ಮುಂಬೈ, ಬೆಂಗಳೂರು, ಪುಣೆ ಮತ್ತು ಚೆನ್ನೈಗಳಿಗೂ ವಿಸ್ತರಿಸಲಿದೆ.

ಪ್ರಯಾಣ ಪ್ರಾರಂಭಿಸುವ 2 ಗಂಟೆಗೂ ಮೊದಲು ಪ್ರಯಾಣಿಕರು ತಮಗೆ ಬೇಕಾದ ಆಹಾರವನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಬೇಕಾಗುತ್ತದೆ. ರೈಲು ನಿಲ್ದಾಣಕ್ಕೆ ಬಂದು ತಲುಪುವ ವೇಳೆಗೆಲ್ಲ ಪ್ರಯಾಣಿಕರು ಕೇಳಿದ ಆಹಾರವನ್ನು ಫುಡ್‍ಪಂಡಾವು ಒದಗಿಸುತ್ತದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ಆರ್ಡರ್ ಮಾಡುವ ಸಂದರ್ಭದಲ್ಲಿ ಅಥವಾ ಊಟ ದೊರೆತ ನಂತರವೂ ಹಣ ನೀಡಬಹುದಾಗಿದೆ ಎಂದು IRCTCಯ ಆಹಾರ ಸರಬರಾಜು ವಿಭಾಗದ ನಿರ್ದೇಶಕರಾದ ರಾಬಿನ್ ಕಳಿಟಾ ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವ ಜನತೆಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶ ಹೊಂದಿದ್ದೇವೆ. ಅದರಲ್ಲೂ ಪ್ರಯಾಣದ ವೇಳೆಯಲ್ಲಿ ಆಹಾರವು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ IRCTCಯು ಗ್ರಾಹಕರಿಗೆ ಉತ್ತಮ ದರ್ಜೆಯ ಆಹಾರ ನೀಡುವ ದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ಪ್ರಯಾಣಿಕರಿಗೆ ಬೇಕೆನಿಸಿದ ಆಹಾರಗಳನ್ನು ನೀಡಲು ಈ ಒಪ್ಪಂದಕ್ಕೆ ಮುಂದಾಗಿದ್ದೇವೆ. ಇದು ಯಶಸ್ವಿಯಾದಲ್ಲಿ ದೇಶದ ಉಳಿದ ನಗರಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.

IRCTC ಜೊತೆ ಒಪ್ಪಂದ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿ ಫುಡ್‍ಪಾಂಡಾವು ಬೆಂಜಮಿನ್ ಬೌರ್ ಹಾಗೂ ರಾಲ್ಫ್ ವೆಂಝೆಲ್‍ರಿಂದ 2012ರಲ್ಲಿ ಸ್ಥಾಪನೆಯಾಗಿತ್ತು. ವಿವಿಧ ದೇಶಗಳಲ್ಲಿ ಕಂಪನಿಯು ಭಾರೀ ಹೂಡಿಕೆ ಮಾಡಿದ್ದು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಫುಡ್‍ಪಾಂಡಾ ಭಾರತದ ಸಿಇಒ ಸೌರಭ್ ಕೊಚ್ಚಾರ್ ಹೇಳಿದ್ದಾರೆ. ಅಲ್ಲದೆ IRCTC ಜೊತೆಗಿನ ಒಪ್ಪಂದದ ಬಗ್ಗೆಯೂ ಅವರು ಹಲವು ಮಾಹಿತಿ ನೀಡಿದ್ದಾರೆ. ರೈಲ್ವೆಯೊಂದಿಗಿನ ಈ ಒಪ್ಪಂದದಿಂದಾಗಿ ನಾವು ವೈವಿಧ್ಯಮಯವಾದ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಈಗಿನಂತೆ ಕೆಲವೇ ಆಹಾರ ನೀಡುವ ವ್ಯವಸ್ಥೆಯನ್ನು ಬದಲಾಯಿಸುವ ಉದ್ದೇಶವೂ ನಮಗಿದೆ. ಜೊತೆಯಲ್ಲಿ ಪ್ರಯಾಣದ ವೇಳೆಯಲ್ಲೂ ಆನ್‍ಲೈನ್ ಮೂಲಕ ಆಹಾರ ಸರಬರಾಜು ಮಾಡುವ ವಿಧಾನದಿಂದ ಭಾರತೀಯರಿಗೆ ಹಿತವೆನಿಸುವ ಅಡುಗೆಯನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಆಹಾರ ಸರಬರಾಜು ಮಾಡುವ ಕುರಿತಂತೆ ಹೆಲೋ ಕ್ಯಾರ್ರಿ ಎಂಬ ನೂತನ ಸಂಸ್ಥೆಯ ಜೊತೆ IRCTC ಒಪ್ಪಂದ ಮಾಡಿಕೊಂಡಿತ್ತು. ರೈಲಿನಲ್ಲಿ ಪ್ರಯಾಣಿಸುವ ವೇಳೆಯಲ್ಲೇ ಆಹಾರ ಒದಗಿಸುವ ವ್ಯವಸ್ಥೆಯನ್ನು ಸಿಕಂದರಾಬಾದ್‍ನಲ್ಲಿ ಮೊದಲಿಗೆ ಅದು ಆರಂಭಿಸಿತ್ತು. ನಂತರ ದೆಹಲಿ, ಬೆಂಗಳೂರು, ವಿಶಾಖಪಟ್ಟಣ ಹಾಗೂ ಪುಣೆಗಳಿಗೂ ವಿಸ್ತರಿಸುವ ಯೋಚನೆಯಲ್ಲಿತ್ತು.

IRCTCಯು ಈಗಾಗಲೇ ತನ್ನ ವಿವಿಧ ಸೇವೆಗಳನ್ನು ಹೊರಗುತ್ತಿಗೆ ನೀಡಿದೆ. ಪೆಟಿಎಂ, ಅಮೇಜಾನ್, ಬುಕ್‍ಮೈ ಟ್ರೈನ್, ಮೊದಲಾದ ಸಂಸ್ಥೆಗಳೊಂದಿಗೂ ಒಪ್ಪಂದ ಮಾಡಿಕೊಂಡಿದೆ.

IRCTC ವೆಬ್‍ಸೈಟ್ ನಿರ್ವಹಣಾ ಲೋಪದಿಂದಾಗಿ ತೊಂದರೆ ಅನುಭವಿಸುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದ ಅಂಶವಾಗಿದೆ. ಆದರೆ ಹೀಗೆ ತನ್ನ ವಿವಿಧ ಕೆಲಗಳನ್ನು ಹೊರಗುತ್ತಿಗೆ ನೀಡುವುದರಿಂದ ಅದು ತಾಂತ್ರಿಕ ಸಮಸ್ಯೆಯಿಂದ ಹೊರಬಂದು ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಲು ಸಜ್ಜಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪ್ರಯಾಣಿಕರಿಗೆ ಒಳ್ಳೆಯ ಸೇವೆ ಸಿಕ್ಕರೆ ಸಾಕು..!

ಲೇಖಕರು: ಹರ್ಷಿತ್​ ಮಲ್ಯ

ಅನುವಾದಕರು: ಎಸ್​​.ಡಿ