ಸಮಾಧಿಗಳ ಮಧ್ಯೆಯೇ ಇದೆ ತಿಂಡಿ ತಿನ್ನುವ ಟೇಬಲ್​​ಗಳು

ವಿಶ್ವಾಸ್​ ಭಾರಾಧ್ವಾಜ್​​

0

ದೇಶದ ಮಹಾನಗರಗಳಲ್ಲಿ ಭೂಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ತನ್ನ ಕಬಂಧ ಬಾಹುಗಳನ್ನು ಚಾಚಿ ಕಂಡ ಕಂಡ ಭೂಮಿ ನುಂಗುತ್ತಿದೆ. ಭೂದಾಹಿಗಳು ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಒಂದು ಕಡೆಯಿಂದ ಭೂಮಿಯನ್ನು ಆಹುತಿಗೆ ತೆಗುಕೊಳ್ಳುತ್ತಿದ್ದಾರೆ. ಗೋಮಾಳ, ಕೆರೆ, ಕೊನೆಗೆ ಸ್ಮಶಾನ ಭೂಮಿಯನ್ನೂ ಕಬಳಿಸುವ ಸಂಚಿನಲ್ಲಿ ತೊಡಗಿದ್ದಾರೆ. ಆದ್ರೆ ಹಳೆಯ ಸ್ಮಶಾನ ಭೂಮಿಯಲ್ಲಿ ಹೊಟೇಲ್ ಕಟ್ಟಿಸಿದ್ದರೂ ಅಲ್ಲಿನ ಸಮಾಧಿಗಳಿಗೆ ಯಾವುದೇ ಭಂಗ ಬರದಂತೆ ಹೊಟೇಲ್ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬನ ಅಪರೂಪದ ಕಥೆ ಇಲ್ಲಿದೆ. ಅಂದ ಹಾಗೆ ಇಂತಹದ್ದೊಂದು ವಿಚಿತ್ರ ಹಾಗೂ ಆಶ್ಚರ್ಯಕರ ಹೊಟೇಲ್ ಇರೋದು ಅಹಮದಾಬಾದ್​​ನಲ್ಲಿ. ನ್ಯೂ ಲಕ್ಕಿ ರೆಸ್ಟೋರೆಂಟ್ ಅನ್ನೋದು ಇದರ ಹೆಸರು.

ದರ್ಗಾ ಅಥವಾ ಖಬ್ರಸ್ಥಾನ್ ಭಾವ ಹುಟ್ಟಿಸುವ ಹೋಟೆಲ್

ಹೊರಗಿನ ಬೋರ್ಡು ನೋಡಿದ್ರೆ ಅದು ಕೇವಲ ರೆಸ್ಟೋರೆಂಟ್ ಮಾತ್ರ ಎಂದು ಅನ್ನಿಸುತ್ತದೆ. ಆದರೆ ಒಳಗೆ ಕಾಲಿಟ್ರೆ ಯಾವುದೋ ದರ್ಗಾ ಅಥವಾ ಇಸ್ಲಾಂ ಧರ್ಮೀಯರ ರುದ್ರಭೂಮಿಯನ್ನೋ ನೋಡಿದ ಹಾಗಾಗುತ್ತದೆ. ಇದು ದರ್ಗಾ ಅಲ್ಲ, ಮಹಮದೀಯರ ಖಬ್ರಸ್ಥಾನದ ಸಮಾಧಿಗಳ ಸಮುಚ್ಛಯ ಕೂಡಾ ಅಲ್ಲ. ಸಮಾಧಿಗಳ ಸುತ್ತಲೇ ನಿರ್ಮಾಣಗೊಂಡಿರುವ ವಿಶೇಷ ಹೊಟೇಲ್ ಇದು. ಹೋಟೆಲ್ ಒಳಗೆ ಓರಣವಾಗಿ ಜೋಡಿಸಿರುವ ಟೇಬಲ್​​ಗಳ ಪಕ್ಕದಲ್ಲಿಯೇ ಇದೆ ಹಲವು ಸಾಲು ಸಾಲು ಸಮಾಧಿಗಳು. ಹಸಿರು ಹೊದಿಕೆ ಹೊದಿಸಿದ ಸಮಾಧಿಗಳನ್ನು ಕಬ್ಬಿಣದ ಬೇಲಿಗಳನ್ನು ಕಟ್ಟಿ ರಕ್ಷಿಸಲಾಗಿದೆ. ಇಲ್ಲಿ ಹೀಗೆ ಸಂರಕ್ಷಿಸಲ್ಪಟ್ಟಿರುವ ಸುಮಾರು ಒಂದು ಡಜ ಅಧಿಕ ಸಮಾಧಿಗಳಿವೆ.

16ನೇ ಶತಮಾನದ ಸೂಫಿ ಸಂತರ ಸಮಾಧಿಗಳು

ಬೇರೆ ಯಾರಾದರೂ ಆಗಿದ್ದರೇ ಅಲ್ಲಿರುವ ಸಮಾಧಿಗಳನ್ನು ಕೆಡವಿ ಅಥವಾ ಮುಚ್ಚಿಬಿಡ್ತಿದ್ರು. ಆದ್ರೆ ಲೋಕಾರೂಢಿಗೆ ತದ್ವಿರುದ್ಧವಾಗಿ ಸಮಾಧಿಗಳನ್ನು ಸಂರಕ್ಷಿಸಿರುವ ಹೊಟೇಲ್ ಮಾಲೀಕ ಕೇರಳ ಮೂಲದ ಕೃಷ್ಣನ್ ಕುಟ್ಟಿ, ಸಮಾಧಿಗಳ ಮಧ್ಯೆ ಹೊಟೆಲ್ ನಡೆಸುವ ಮೂಲಕ ಗ್ರಾಹಕರಿಗೆ ವಿಭಿನ್ನ ವಾತಾವರಣ ಒದಗಿಸಿದ್ದಾರೆ. ಇಲ್ಲಿ ಕಬ್ಬಿಣದ ಗ್ರಿಲ್​​ಗಳನ್ನು ಕಟ್ಟಿ ರಕ್ಷಿಸಲಾಗಿರುವ ಸಮಾಧಿಗಳಿಗೆ ಬಹು ದೀರ್ಘ ಇತಿಹಾಸವಿದೆ. ಇವು ಸುಮಾರು 16ನೆಯ ಶತಮಾನದಲ್ಲಿ ಬದುಕಿದ್ದರೆನ್ನಲಾದ ಸೂಫಿ ಸಂತರ ಅನುಯಾಯಿಗಳ ಸಮಾಧಿಗಳು ಅಂತ ಅಂದಾಜಿಸಲಾಗಿದೆ. ಶಾಂತಿ ಹಾಗೂ ಸಾಮರಸ್ಯದ ಮಹತ್ವವನ್ನು ಪದ ಕಟ್ಟಿ ಹಾಡುತ್ತಿದ್ದ ಸೂಫಿ ಸಂತರ ಆತ್ಮಗಳಿಗೆ ಗೌರವ ನೀಡುವ ಉದ್ದೇಶದಿಂದ ಇಲ್ಲಿನ ಎಲ್ಲಾ ಸಮಾಧಿಗಳನ್ನು ಜೋಪಾನ ಮಾಡಲಾಗಿದೆ ಅನ್ನುತ್ತಾರೆ ಮಾಲೀಕ ಕೃಷ್ಣನ್ ಕುಟ್ಟಿ.

ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸಿದ ನಂತರವೇ ದಿನಚರಿ ಆರಂಭ

ಪ್ರತಿದಿನ ಹೊಟೆಲ್​​ನ ಶೆಟರ್ ತೆರೆದ ಬಳಿಕ ಇಲ್ಲಿನ ಕೆಲಸಗಾರರು ಮಾಡುವ ಮೊದಲ ಕೆಲಸವೇ ಇಲ್ಲಿನ ಸಮಾಧಿಗಳನ್ನು ಸ್ವಚ್ಛಗೊಳಿಸುವುದು. ಪ್ರತಿಯೊಂದು ಸಮಾಧಿಗಳನ್ನೂ ಗುಡಿಸಿ, ತೊಳೆದು, ಹಸಿರು ಹೊದಿಕೆ ಹೊದಿಸಿ, ಹೊಸ ಹೂಗಳಿಂದ ಅಲಂಕರಿಸಲಾಗುತ್ತದೆ. ಆ ಬಳಿಕ ಕೆಲವು ಸಮಯ ಆ ಸಮಾಧಿಗಳ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿಯೇ ಆ ದಿನದ ಕೆಲಸ ಆರಂಭಿಸುತ್ತಾರೆ. ಇಲ್ಲಿಗೆ ಬರುವ ಯುವ ಜನರು, ವೃದ್ಧರು ಹಾಗೂ ಎಲ್ಲಾ ವರ್ಗಗಳ ಗ್ರಾಹಕರು ಈ ಸಮಾಧಿಗಳ ರಕ್ಷಣೆ ಮತ್ತು ಅಪೂರ್ವ ವಾತಾವರಣಕ್ಕೆ ಮೆಚ್ಚುಗೆ ಸೂಚಿಸಿ ಹೋಟೆಲ್​​ನ ಖಾದ್ಯಗಳನ್ನು ಆಸ್ವಾದಿಸುತ್ತಾರೆ.

ಇದರ ಬಗ್ಗೆ ಮಾತನಾಡಿರುವ ರೆಸ್ಟೋರೆಂಟ್ ಮಾಲೀಕ ಕೃಷ್ಣನ್ ಕುಟ್ಟಿ ಇಲ್ಲಿ ತಾವು ಸಂರಕ್ಷಿಸಿರುವ ಸಮಾಧಿಗಳಿಂದ ತಮಗೆ ಶುಭವಾಗಿದೆ. ಜೊತೆಗೆ ಇವು ಸರ್ವಕಾಲಕ್ಕೂ ಶಾಂತಿ ಹಾಗೂ ಸಾಮರಸ್ಯಗಳನ್ನು ಪ್ರಚಾರಪಡಿಸುತ್ತವೆ. ಹಾಗಾಗಿ ಇವನ್ನು ಮುಂದೆಯೂ ಸಂರಕ್ಷಿಸುವಂತೆ ತಮ್ಮ ಮಕ್ಕಳಿಗೆ ಹೇಳುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿನ ಸಮಾಧಿಗಳ ಬಗ್ಗೆ ಸ್ಥಳೀಯರು ಪೂಜ್ಯ ಭಾವನೆ ಹೊಂದಿದ್ದಾರೆ. ಹಾಗಾಗಿ ಇದರ ರಕ್ಷಣೆಯನ್ನು ತಾವು ಪವಿತ್ರ ಕಾರ್ಯ ಅಂತ ಭಾವಿಸಿರೋದಾಗಿ ಕೃಷ್ಣನ್ ಹೇಳಿದ್ದಾರೆ. ಸ್ಮಶಾನ ಅನ್ನೋದು ಮನುಷ್ಯ ಜೀವನದ ಅಂತಿಮ ತಾಣ. ಸಮಾಧಿಗಳ ಸುತ್ತವೇ ಹೊಟೆಲ್ ನಡೆಸುತ್ತಿರುವ ಕೃಷ್ಣನ್ ಕುಟ್ಟಿ, ಸೂಫಿ ಸಂತರ ಆತ್ಮಗಳಿಗೆ ಗೌರವ ನೀಡುವುದಷ್ಟೇ ಅಲ್ಲದೇ ಎರಡು ವಿಭಿನ್ನ ಆಚರಣೆಯ ಕೋಮುಗಳ ನಡುವೆ ಸಹಭಾಳ್ವೆಯ ಕೊಂಡಿಯಾಗಿದ್ದಾರೆ.

Related Stories