1, 2, 3 ಗೋ... ಇಕ್ಸಿಗೋ...ಸಿಇಒ ಅಲೋಕ್ ಬಾಜ್‍ಪೈ ಜೊತೆ ಮಾತು

ಟೀಮ್​​ ವೈ.ಎಸ್​​. ಕನ್ನಡ

1, 2, 3 ಗೋ... ಇಕ್ಸಿಗೋ...ಸಿಇಒ ಅಲೋಕ್ ಬಾಜ್‍ಪೈ ಜೊತೆ ಮಾತು

Thursday December 10, 2015,

4 min Read

ಇಕ್ಸಿಗೋ.ಕಾಮ್. ಪ್ರವಾಸಗಳನ್ನು ಪ್ಲ್ಯಾನ್ ಮಾಡಲು ಪ್ರವಾಸಪ್ರಿಯರಿಗೆ ಸಹಕರಿಸುವ ಪ್ರಮುಖ ಸರ್ಚ್ ಇಂಜಿನ್. ಇಕ್ಸಿಗೋ ಪ್ರಾರಂಭವಾಗಿದ್ದು 2006ರಲ್ಲಿ. ಗುರ್‍ಗಾವ್ ಮೂಲದ ಇಕ್ಸಿಗೋಗೆ, ಸೈಫ್ ಪಾಲುದಾರರು ಹಾಗೂ ಮೇಕ್‍ಮೈಟ್ರಿಪ್ ಕಂಪನಿಗಳು ಸುಮಾರು 18.5 ಮಿಲಿಯನ್ ಡಾಲರ್‍ನಷ್ಟು ಹಣ ಹೂಡಿಕೆ ಮಾಡಿವೆ. ವಿಸ್ತಾರವಾದ ಪ್ರವಾಸ ವಲಯದಲ್ಲಿ ಇಕ್ಸಿಗೋ ಪ್ರವಾಸಪ್ರಿಯರಿಗೆ ಅವರ ಟ್ರಿಪ್ ಯೋಜನೆಯಲ್ಲಿ, ಅಂತಹ ಪ್ರವಾಸೀತಾಣಗಳ ಭೇಟಿ, ಅಲ್ಲಿ ತಮ್ಮ ಕೈಗೆಟುಕುವಂತಹ ದರದ ಹೋಟೆಲ್ ರೂಮ್ ಆಯ್ಕೆ, ವಿಮಾನ, ರೈಲು, ಬಸ್, ಕ್ಯಾಬ್ ಬುಕ್ ಮಾಡಲು ಸೇರಿದಂತೆ ಹಲವು ರೀತಿ ಸಹಾಯ ಮಾಡುತ್ತದೆ.

ಮೊಬೈಲ್ ಅಪ್ಲಿಕೇಶನ್ ಮತ್ತು ಮಾಹಿತಿ ವಿನಿಮಯದಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿರುವ ಇಕ್ಸಿಗೋ ಕಂಪನಿ, ತನ್ನ ಟ್ರಿಪ್ ಪ್ಲ್ಯಾನರ್ ಉತ್ಪನ್ನದಲ್ಲಿ ಪ್ರಮುಖ ಪುನರುಜ್ಜೀವನ ನಡೆಸಲು ಸಿದ್ಧತೆ ನಡೆಸಿದೆ. ಈಗಾಗಲೇ ಇಕ್ಸಿಗೋನ 5 ಅಪ್ಲಿಕೇಶನ್‍ಗಳಿಗೆ ಮಾಸಿಕವಾಗಿ 9 ಲಕ್ಷ ಸಕ್ರಿಯ ಬಳಕೆದಾರರಿದ್ದಾರೆ. ಅಲ್ಲದೇ ಮೊಬೈಲ್ ಬಳಕೆದಾರರು ಮತ್ತು ಇಂಟರ್‍ನೆಟ್ ಮೂಲಕ ಸೇವೆ ಪಡೆದಿರುವವರೆಲ್ಲರನ್ನೂ ಸೇರಿಸಿದ್ರೆ ಬಳಕೆದಾರರ ಸಂಖ್ಯೆ 25 ಲಕ್ಷ ದಾಟುತ್ತೆ.

ಇತ್ತೀಚೆಗಷ್ಟೇ ಇಕ್ಸಿಗೋ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಯುವರ್‍ಸ್ಟೋರಿ, ಇಕ್ಸಿಗೋ ಸಿಇಒ ಮತ್ತು ಸಹಸಂಸ್ಥಾಪಕರಾದ ಅಲೋಕ್ ಬಾಜ್‍ಪೈ ಅವರೊಂದಿಗೆ ಮಾತುಕತೆಗಿಳಿಯಿತು. ಈ ಸಂದರ್ಭದಲ್ಲಿ ಅವರು ಪ್ರವಾಸೀ ವಲಯದಲ್ಲಿರುವ ಅವಕಾಶಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಿದರು.

image


ಯುವರ್‍ಸ್ಟೋರಿ: 1.75 ಲಕ್ಷ ವಿಮರ್ಶೆಗಳು ಮತ್ತು 23 ಸಾವಿರ ಸ್ಥಳಗಳ ರೇಟಿಂಗ್ ಬಳಿಕ, ಈ ಉತ್ಪನ್ನದ ಗುಣಮಟ್ಟ ಹಾಗೂ ನಿಮಗಾಗಿರುವ ಅನುಭವದ ಕುರಿತು ತಿಳಿಸಿ?

ಅಲೋಕ್ ಬಾಜ್‍ಪೈ: ಕಳೆದ ಕೆಲ ವರ್ಷಗಳಿಂದೀಚೆಗೆ ಆನ್‍ಲೈನ್ ವಿಮರ್ಶೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಟ್ರಿಪ್ ಪ್ಲ್ಯಾನ್ ಮಾಡಲು ಹಾಗೂ ಹೋಟೆಲ್‍ಗಳನ್ನು ಆಯ್ಕೆ ಮಾಡಿಕೊಳ್ಳಲು ಸಾರ್ವಜನಿಕರು ಇಕ್ಸಿಗೋ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ರೇಟಿಂಗ್ಸ್ ಮತ್ತು ವಿಮರ್ಶೆಗಳ ಮೊರೆ ಹೋಗುತ್ತಾರೆ. ಪ್ರವಾಸಿಗರು ಇತರೆ ಪ್ರವಾಸಪ್ರಿಯರಿಗೆ ಸುಲಭವಾಗಲೆಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿಯೇ ಇದರಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಅದರ ಗುಣಮಟ್ಟಗಳೆರಡೂ ಈಗ ಸಾಕಷ್ಟು ಬದಲಾವಣೆಗೊಂಡಿರುವ ಕಾರಣ ನಮ್ಮ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿದ್ದು, ಪ್ರಗತಿ ಹೊಂದುತ್ತಿದೆ. ವಿಮರ್ಶೆ ಮಾತ್ರವಲ್ಲ ಪ್ರವಾಸಿಗರು ತಾವು ಭೇಟಿ ನೀಡಿದ್ದ ಸ್ಥಳಗಳ ಫೋಟೋಗಳನ್ನು ನಮ್ಮ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತಿರುವುದಲ್ಲದೇ ಹೊಸ ಪ್ರವಾಸೀ ತಾಣಗಳನ್ನೂ ಪರಿಚಯಿಸುತ್ತಿದ್ದಾರೆ.

ಯುವರ್‍ಸ್ಟೋರಿ: ಇಕ್ಸಿಗೋನ ಆದಾಯ ಮಾದರಿಯ ವಿಕಾಸದ ಕುರಿತು ಹೆಚ್ಚು ಬೆಳಕು ಚೆಲ್ಲುತ್ತೀರಾ?

ನಾವು ಬಹುತೇಕ ಎಲ್ಲಾ ಪ್ರಮುಖ ಪ್ರವಾಸೀ ವೆಬ್‍ಸೈಟ್‍ಗಳು ಹಾಗೂ ಆನ್‍ಲೈನ್ ಟ್ರಾವೆಲ್ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತೇವೆ. ವಿಮಾನಯಾನ, ಹೋಟೆಲ್ ಬ್ರ್ಯಾಂಡ್‍ಗಳು, ಹೋಟೆಲ್ ಸಮುದಾಯದವರು, ಆನ್‍ಲೈನ್‍ನಲ್ಲಿಯೇ ಬಸ್ ಟಿಕೆಟ್ ಬುಕ್ ಮಾಡುವುದು... ಹೀಗೆ ದೇಶಾದ್ಯಂತ ಸಂಪರ್ಕ ಹೊಂದಿದ್ದೇವೆ. ಈ ವಲಯದ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನ ನಮ್ಮ ಸಮುದಾಯಕ್ಕೆ ಸೇರಿಸಿಕೊಂಡು, ಅತ್ಯುತ್ತಮ ಸಂಪರ್ಕ ಹೊಂದಿರುವ ಕಾರಣ ಬೇರೆಲ್ಲಾ ಆನ್‍ಲೈನ್ ಜಾಲತಾಣಗಳಿಗಿಂತ ನಮ್ಮ ಬಳಿ ಪ್ರವಾಸಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯಿದೆ. ಇಂತಹ ಟ್ರಾವೆಲ್ ಸೈಟ್‍ಗಳಿಗೆ ಗ್ರಾಹಕರನ್ನು ಒದಗಿಸುವ ಮೂಲಕ ಹಾಗೂ ವಿವಿಧ ಕಂಪನಿಗಳಿಂದ ಜಾಹೀರಾತು ವ್ಯವಸ್ಥೆ ಮಾಡಿಕೊಡುವ ಮೂಲಕ ನಾವೂ ಆದಾಯ ಗಳಿಸುತ್ತೇವೆ. ನಮ್ಮ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಜಾಹೀರಾತುಗಳಿಗೆ ಸ್ಥಳವಿಲ್ಲ. ಆದ್ರೆ ಆನ್‍ಲೈನ್ ಪೇಜ್‍ನಲ್ಲಿ ಜಾಹೀರಾತಿಗಾಗಿ ಸ್ವಲ್ಪ ಜಾಗ ನೀಡಿದ್ದರೂ, ಇಂಟರ್‍ನೆಟ್ ಲೋಡ್ ಆಗಲು ನಿಧಾನವಾಗುವ ಕಾರಣ ಜನರಿಗೆ ಕೆಟ್ಟ ಅನುಭವ ನೀಡುವ ಸಾಧ್ಯತೆಯಿರುತ್ತದೆ. ಹೀಗಾಗಿಯೇ ವೆಬ್‍ಸೈಟ್‍ನಲ್ಲಿ ತುಂಬಾ ಕಡಿಮೆ ಜಾಗ ಜಾಹೀರಾತಿಗೆ ನೀಡಿದ್ದೇವೆ.

ಕಳೆದ ಕೆಲ ವರ್ಷಗಳಿಂದೀಚೆಗೆ ಜಾಹೀರಾತುದಾರರು ಹೆಚ್ಚಾದ ಕಾರಣ ಮತ್ತು ಬಳಕೆದಾರರೂ ಹೆಚ್ಚಾಗಿ ನಮ್ಮ ವೆಬ್‍ಸೈಟ್ ಭೇಟಿ ಮಾಡುತ್ತಿರುವ ಕಾರಣ ಜಾಹೀರಾತುಗಳ ಮೂಲಕ ಬರುತ್ತಿರುವ ಆದಾಯವೂ ಹೆಚ್ಚಾಗಿದೆ.

ಯುವರ್‍ಸ್ಟೋರಿ: ಬರೊಬ್ಬರಿ 25 ಲಕ್ಷ ಡೌನ್‍ಲೋಡ್ ಆಗಿರುವ 5 ಮೊಬೈಲ್ ಅಪ್ಲಿಕೇಶನ್‍ನ ನಿರ್ಮಿಸುವ ಮೂಲಕ ನಿಮಗೆ ಪ್ರಮುಖ ಏನೆಲ್ಲಾ ಕಲಿಯಲು ಸಾಧ್ಯವಾಗಿದೆ?

ಅಲೋಕ್‍ಬಾಜ್‍ಪೈ: ಬೇಕಾದ ಅಥವಾ ಬೇಡವಾದ ಮಾಹಿತಿಗಳಿಂದ ತುಂಬಿದ ಅಪ್ಲಿಕೇಶನ್‍ಗಳಿಗಿಂತ ನಿರ್ದಿಷ್ಟ ಪ್ರಯಾಣ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಶನ್‍ಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಅಲ್ಲದೇ ಇದು ಅಪ್ಲಿಕೇಶನ್ ಡೆವೆಲಪರ್‍ಗಳಲ್ಲಿ ಚುರುಕುತನ ಮೂಡಿಸುತ್ತದೆ ಹಾಗೂ ಹೆಚ್ಚಾಗಿ ಗಮನ ಹರಿಸುವಂತೆ ಮಾಡುತ್ತದೆ. ಹೀಗಾಗಿಯೇ ನಮ್ಮ ಸಾರಿಗೆ ಸೌಲಭ್ಯ ಒದಗಿಸುವ ಮೊಬೈಲ್ ಅಪ್ಲಿಕೇಶನ್‍ಗಳಾದ ಇಕ್ಸಿಗೋ ಟ್ರೇನ್ಸ್ ಮತ್ತು ಬಸ್‍ಗಳು ಹಾಗೂ ಪಿಎನ್‍ಆರ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಹೆಚ್ಚು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಬಳಕೆದಾರರೇ ನಮ್ಮ ಅಪ್ಲಿಕೇಶನ್ ಬಗ್ಗೆ ಒಳ್ಳೆಯ ವಿಮರ್ಶೆ ನೀಡುತ್ತಿರುವ ಕಾರಣ, ಈ ಮಾತುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈ ಮೂಲಕ ಪ್ರತಿ ತಿಂಗಳು 9 ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಬಳಕೆದಾರರು ನಮ್ಮ ಮೊಬೈಲ್ ಅಪ್ಲಿಕೇಶನ್‍ಗಳ ಸಹಾಯ ಪಡೆಯುತ್ತಿದ್ದಾರೆ.

ಯುವರ್‍ಸ್ಟೋರಿ: ಯಾವ ಆಧಾರದ ಮೇಲೆ ಅಪ್ಲಿಕೇಶನ್‍ಗಳ ಯಶಸ್ಸನ್ನು ತಿಳಿದುಕೊಳ್ಳುತ್ತೀರಿ?

ಅಲೋಕ್ ಬಾಜ್‍ಪೈ: ನಮ್ಮ ಮೊಬೈಲ್ ಅಪ್ಲಿಕೇಶನ್‍ನ ಅನ್‍ಇನ್‍ಸ್ಟಾಲ್ ರೇಟ್, ಪ್ರತಿದಿನ ಎಷ್ಟು ಬಾರಿ ಬಳಕೆಯಾಗುತ್ತೆ, ಬಳಕೆದಾರರು ಪ್ರತಿದಿನ ಎಷ್ಟು ಸಮಯ ಬಳಸಿತ್ತಾರೆ, ಮಾಸಿಕವಾಗಿ ಎಷ್ಟು ಬಾರಿ ಬಳಕೆಯಾಗುತ್ತೆ... ಹೀಗೆ ಹಲವು ಮಾನದಂಡಗಳನ್ನು ನೋಡಿಕೊಂಡು ನಾವು ನಮ್ಮ ಅಪ್ಲಿಕೇಶನ್‍ನ ಯಶಸ್ಸನ್ನು ಗುರುತಿಸುತ್ತೇವೆ. ಆ ಮೂಲಕ ನಾವು ಏನೆಲ್ಲಾ ಬದಲಾವಣೆಗಳನ್ನು ಮಾಡಬಹುದು ಅನ್ನೋದೂ ನಮಗೆ ಗೊತ್ತಾಗುತ್ತೆ.

ಯುವರ್‍ಸ್ಟೋರಿ: ಶೇಕಡಾ ಎಷ್ಟು ಮೊಬೈಲ್ ಬಳಕೆದಾರರಿದ್ದಾರೆ?

ಅಲೋಕ್ ಬಾಜ್‍ಪೈ: ಒಟ್ಟು ಬಳಕೆದಾರರ ಶೇಕಡಾ 50 ಪ್ರತಿಶತಃ ಮೊಬೈಲ್ ಬಳಕೆದಾರರಿದ್ದಾರೆ.

ಯುವರ್‍ಸ್ಟೋರಿ: ಇನ್ನೊಂದು ವರ್ಷದಲ್ಲಿ ಇಕ್ಸಿಗೋ ಎಲ್ಲಿರಬೇಕು ಅಂತ ಬಯಸ್ತೀರಾ?

ಅಲೋಕ್ ಬಾಜ್‍ಪೈ: ಇನ್ನೊಂದು ವರ್ಷದಲ್ಲಿ ನಾವು ಭಾರತದ ನಂಬರ್ 1 ಮೊಬೈಲ್ ಟ್ರಾವೆಲ್ ಕಂಪನಿ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಬ್ಲೂ ಓಶಿಯನ್ ವಿಭಾಗದ ಭಾರತೀಯ ಗ್ರಾಹಕರ ಪ್ರವಾಸ ಯೋಜನೆ ಮತ್ತು ಸಂಶೋಧನೆಗಳಲ್ಲೂ ನಾವು ಮೊದಲ ಸ್ಥಾನಕ್ಕೇರುವ ನಿರೀಕ್ಷೆಯೂ ಇದೆ.

ನಾವು ಮೊಬೈಲ್ ಅಪ್ಲಿಕೇಶನ್‍ಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ದೊಡ್ಡ ಮಟ್ಟದಲ್ಲಿ ಜನರು ನಮ್ಮ ಅಪ್ಲಿಕೇಶನ್‍ಅನ್ನು ಬಳಸುವಂತೆ ಮಾಡಲು, ಜನರಲ್ಲಿ ನಮ್ಮ ಬ್ರ್ಯಾಂಡ್ ಕುರಿತು ಅರಿವು ಮೂಡಿಸಲು ಶ್ರಮಿಸುತ್ತಿದ್ದೇವೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ನಮ್ಮ ಮೊಬೈಲ್ ಅಪ್ಲಿಕೇಶನ್‍ಗಳು ಎರಡು ಪಟ್ಟು ಹೆಚ್ಚು ಪ್ರಗತಿ ಹೊಂದುತ್ತಿವೆ. ಮುಂದಿನ ದಿನಗಳಲ್ಲಿ ಈ ಯಶಸ್ಸು ಹೀಗೇ ಮುಂದುವರಿಯುವುದರಲ್ಲಿ ಸಂದೇಹವೇ ಇಲ್ಲ. ಬಳಕೆದಾರರ ದಟ್ಟಣೆ ಮತ್ತು ಡೌನ್‍ಲೋಡ್‍ಗಳನ್ನು ಲೆಕ್ಕ ಹಾಕಿದ್ರೆ (ಭಾರತದಲ್ಲಿ ಪ್ರತಿ 100 ಟ್ರಾವೆಲ್ ಕುರಿತ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ 5 ಇಕ್ಸಿಗೋ ಅಪ್ಲಿಕೇಶನ್‍ಗಳಿವೆ) ಟ್ರಾವೆಲ್ ವಿಭಾಗದ ಅತ್ಯುತ್ತಮ ಅಪ್ಲಿಕೇಶನ್ ಡೆವೆಲಪರ್‍ಗಳಲ್ಲಿ ನಾವೂ ಒಬ್ಬರು ಅನ್ನೋದಕ್ಕೆ ಹೆಮ್ಮೆ ಎನಿಸುತ್ತದೆ. ಇನ್ನು ಆನ್‍ಲೈನ್‍ನಲ್ಲೂ ಪ್ರತಿ ತಿಂಗಳು 20 ಲಕ್ಷ ಬಳಕೆದಾರರು ನಮ್ಮ ವೆಬ್‍ಸೈಟ್‍ಗೆ ಭೇಟಿ ನೀಡ್ತಾರೆ. ಇನ್ನೊಂದು ವರ್ಷದಲ್ಲಿ ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಶೇಕಡಾ 70 ಪ್ರತಿಶತಃಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಹಾಗೇ ಪ್ರವಾಸ ವಲಯದ ಮಾರುಕಟ್ಟೆಯ ಸ್ಪಷ್ಟ ನಾಯಕನಾಗಿ ಹೊರಹೊಮ್ಮಲು, ಮುಂದಿನ ಒಂದು ವರ್ಷದಲ್ಲಿ ಪ್ರತಿ ತಿಂಗಳು 50 ಲಕ್ಷ ಸಕ್ರಿಯ ಬಳಕೆದಾರರನ್ನು ಗಳಿಸುವ ಗುರಿ ನಮ್ಮದು.

ಲೇಖಕರು: ಜುಬಿನ್​​ ಮೆಹ್ತಾ

ಅನುವಾದಕರು: ವಿಶಾಂತ್​​​​​