ಇ-ಕಾಮರ್ಸ್‍ನತ್ತ ಉದ್ಯಮಿಗಳ ಒಲವು- ಗ್ರಾಹಕ ಸೇವೆಯಲ್ಲಿ ಮುಂದಿದೆ ಫಸ್ಟ್​​​ಸೋರ್ಸ್ ಸೊಲ್ಯೂಶನ್ಸ್

ಟೀಮ್​ ವೈ.ಎಸ್​​.

0

ಈಗೇನಿದ್ರೂ ಇ-ಕಾಮರ್ಸ್ ಭರಾಟೆ. ಎಲ್ಲಾ ಕಡೆ ಆನ್‍ಲೈನ್ ಶಾಪಿಂಗ್ ಅಬ್ಬರ ಜೋರಾಗಿದೆ. ಸಹಜವಾಗಿಯೇ ಉದ್ಯಮಿಗಳೆಲ್ಲ ಇ-ಕಾಮರ್ಸ್‍ನತ್ತ ಆಕರ್ಷಿತರಾಗ್ತಿದ್ದಾರೆ. ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕೂಡ ಇವುಗಳಲ್ಲೊಂದು. ಸಂಜೀವ್ ಗೋಯೆಂಕಾ ಗ್ರೂಪ್ ಒಡೆತನದ ಕಂಪನಿ ಬೆಂಗಳೂರಿನ ಬಸವನಗುಡಿಯಲ್ಲಿದೆ. ಸದ್ಯ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿ ಗ್ರಾಹಕರಿಗೆ ವ್ಯವಹಾರ ಪ್ರಕ್ರಿಯೆ ನಿರ್ವಹಣಾ ಸೇವೆಯನ್ನು ಒದಗಿಸುವುದರಲ್ಲಿ ತೊಡಗಿಕೊಂಡಿದೆ. ಸಂಸ್ಥೆಯ ಬಿಪಿಓ ಕಾರ್ಯಾಚರಣೆಯನ್ನು ನಿರ್ವಹಿಸಲು ಇ-ಕಾಮರ್ಸ್ ವಿಭಾಗವನ್ನು ಆರಂಭಿಸಲು ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಮುಂದಾಗಿದೆ. ಪ್ರಮುಖ ಮೂರು ಇ-ಕಾಮರ್ಸ್ ಕಂಪನಿಗಳ ಒಪ್ಪಂದವನ್ನು ಈಗಾಗಲೇ ಗೆದ್ದುಕೊಂಡಿದೆ. ಆ ಸಂಸ್ಥೆಗಳ ಗ್ರಾಹಕರಿಗೆ ಸೇವೆ ಒದಗಿಸಲಿದೆ ಅಂತಾ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್‍ನ ಅಧ್ಯಕ್ಷರಾದ ಸಂಜೀವ್ ಗೋಯೆಂಕಾ ತಿಳಿಸಿದ್ದಾರೆ.

ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಇರಾದೆ ಸಂಜೀವ್ ಗೋಯೆಂಕಾ ಅವರದ್ದು. ಈ ನಿಟ್ಟಿನಲ್ಲಿ ಇಂತಹ ಮತ್ತಷ್ಟು ಒಪ್ಪಂದಗಳನ್ನು ಮಾಡಿಕೊಳ್ಳಲು ಸಂಜೀವ್ ಗೋಯೆಂಕಾ ಯೋಜನೆ ರೂಪಿಸಿದ್ದಾರೆ. ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶ ಕೂಡ ಹೊರಬಿದ್ದಿದೆ. ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿ ಲಾಭದತ್ತ ಮುನ್ನುಗ್ತಾ ಇರೋದು ವಿಶೇಷ. ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ ಶೇಕಡಾ 1.1ರಷ್ಟು ಹೆಚ್ಚಳವಾಗಿದೆ. ಮೊದಲ ತ್ರೈಮಾಸಿಕದಲ್ಲಿ 61.2 ಕೋಟಿ ರೂಪಾಯಿ ಲಾಭ ಗಳಿಸಿದ್ದ ಸಂಸ್ಥೆ, ಎರಡನೇ ತ್ರೈಮಾಸಿಕದಲ್ಲಿ 61.8 ಕೋಟಿ ರೂಪಾಯಿ ಲಾಭದಲ್ಲಿದೆ. ಇದೇ ಅವಧಿಯಲ್ಲಿನ ವಹಿವಾಟಿನಿಂದ ಬಂದ ಆದಾಯದಲ್ಲಿ ಕೂಡ ಶೇಕಡಾ 1.2ರಷ್ಟು ಹೆಚ್ಚಳವಾಗಿದೆ. ಮೊದಲ ಅವಧಿಯಲ್ಲಿ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್‍ನ ಆದಾಯ 769 ಕೋಟಿ ರೂಪಾಯಿ ಇತ್ತು. ಈಗ 779 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಬ್ರಿಟನ್‍ನ ಹಣಕಾಸು ಸೇವಾ ಸಂಸ್ಥೆಯಿಂದಲೂ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಗೆ ಕಾಂಟ್ರಾಕ್ಟ್ ಸಿಕ್ಕದೆ. 119 ಮಿಲಿಯನ್ ಪೌಂಡ್ ಮೊತ್ತದ ಒಪ್ಪಂದವನ್ನು ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಬಾಚಿಕೊಂಡಿದೆ. ಈ ಒಪ್ಪಂದದಿಂದಾಗಿ ಮುಂಬರುವ ಕೆಲ ವರ್ಷಗಳಲ್ಲಿ ಸ್ಥಿರ ವ್ಯಾಪಾರ-ವ್ಯವಹಾರವನ್ನು ಕಾಯ್ದುಕೊಳ್ಳಬಹುದು ಅನ್ನೋ ವಿಶ್ವಾಸ ಸಂಜೀವ್ ಗೋಯೆಂಕಾ ಅವರದ್ದು. ಇನ್ನು ಮತ್ತಷ್ಟು ಲಾಭದತ್ತ ಕಂಪನಿಯನ್ನು ಮುನ್ನಡೆಸಲು ಕೂಡ ಸಂಜೀವ್ ಗೋಯೆಂಕಾ ತಂತ್ರ ರೂಪಿಸಿದ್ದಾರೆ. ಕಡಿಮೆ ಲಾಭ ತರುವ ವ್ಯವಹಾರಗಳಿಂದ ನಿರ್ಗಮಿಸಲು ಮುಂದಾಗಿದ್ದಾರೆ. ಅವರ ಈ ಪ್ರಯತ್ನ ಯಶಸ್ವಿಯಾದಲ್ಲಿ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಸಂಸ್ಥೆ ಇನ್ನಷ್ಟು ಲಾಭದೊಂದಿಗೆ ಜನಪ್ರಿಯತೆಯನ್ನೂ ಪಡೆಯೋದ್ರಲ್ಲಿ ಅನುಮಾನವಿಲ್ಲ. ಕಳೆದ ಒಂದು ದಶಕದಿಂದ್ಲೂ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿ ಗ್ರಾಹಕರ ಮನಗೆದ್ದಿದೆ. ಆರೋಗ್ಯ , ದೂರಸಂಪರ್ಕ ಮತ್ತು ಮಾಧ್ಯಮ, ಬ್ಯಾಂಕಿಂಗ್, ಹಣಕಾಸು ಸೇವೆ, ವಿಮೆ, ಪ್ರಕಾಶನ ಕೈಗಾರಿಕೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸ್ತಾ ಇದೆ.

ಗ್ರಾಹಕರಿಗೆ ವ್ಯವಹಾರ ಅತ್ಯಂತ ಸುಲಭ, ಪರಿಣಾಮಕಾರಿ ಮತ್ತು ತೃಪ್ತಿಕರವಾಗುವಂತೆ ಫಸ್ಟ್ ಸೋರ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯ ಸಿಬ್ಬಂದಿ ಕಾರ್ಯನಿರ್ವಹಿಸ್ತಿದ್ದಾರೆ. ವಿವಿಧ ಭಾಷೆಗಳ, ವಿವಿಧ ಪ್ರದೇಶಗಳ ಸಾವಿರಾರು ಗ್ರಾಹಕರಿಗೆ ಸಂಸ್ಥೆ ಸೇವೆ ಒದಗಿಸ್ತಾ ಇದೆ. 48ಕ್ಕೂ ಹೆಚ್ಚು ಡೆಲಿವರಿ ಘಟಕಗಳನ್ನು ಹೊಂದಿದೆ. ಭಾರತ, ಫಿಲಿಪೈನ್ಸ್, ಶ್ರೀಲಂಕಾ, ಅಮೆರಿಕ, ಬ್ರಿಟನ್, ಐರ್ಲೆಂಡ್ ಸೇರಿದಂತೆ 30,000ಕ್ಕೂ ಅಧಿಕ ಜಾಗತಿಕ ಕಾರ್ಯಕ್ಷೇತ್ರಗಳ ಬೆಂಬಲವಿದೆ.

Related Stories