ಪ್ರವಾಸ ಪ್ರಿಯರು, ಭೋಜನ ರಸಿಕರಿಗೆ ಸದವಕಾಶ:"ಟಿಕ್ಕಾ ಸಫಾರಿ"ಯಲ್ಲಿ ಅದ್ಭುತ ಅನುಭವ

ಟೀಮ್​​ ವೈ.ಎಸ್​​.

ಪ್ರವಾಸ ಪ್ರಿಯರು, ಭೋಜನ ರಸಿಕರಿಗೆ ಸದವಕಾಶ:"ಟಿಕ್ಕಾ ಸಫಾರಿ"ಯಲ್ಲಿ ಅದ್ಭುತ ಅನುಭವ

Monday November 09, 2015,

3 min Read

ಚೇತನಾ ಮಿರ್‍ಚಂದಾನಿ, ಅವರ ನೆನಪುಗಳ ಬುತ್ತಿ ಬಿಚ್ಚಿದ್ರೆ ಪ್ರವಾಸ ಮತ್ತು ತಿನಿಸುಗಳ ಅವಿನಾಭಾವ ಸಂಬಂಧ ಅನಾವರಣಗೊಳ್ಳುತ್ತೆ. ಕುಟುಂಬದವರೊಂದಿಗೆ ಲೋನಾವಾಲಾ, ಪುಣೆ, ಮಹಾಬಲೇಶ್ವರ ಹೀಗೆ ವಿವಿಧೆಡೆಗೆ ಹೋದ ನೆನಪುಗಳು ಇನ್ನೂ ಹಸಿರಾಗಿವೆ. ಬಿರಿಯಾನಿ ಟೇಸ್ಟ್ ಮಾಡಲು ತಲೋಜಾದಲ್ಲಿ, ತಂದೂರಿ ಆಲೂ ಸವಿಯಲು ತಾಲೇಗಾಂವ್‍ನಲ್ಲಿ ನಿಂತು ಹೋದ ಮಧುರ ನೆನಪುಗಳವು. ದೆಹಲಿ ಪ್ರವಾಸವಂತೂ ಅಲ್ಲಿನ ಬೀದಿ ಬದಿಯ ತಿನಿಸು ಹಾಗೂ ಸರೋಜಿನಿ ನಗರ್ ಮತ್ತು ಖಾನ್ ಮಾರ್ಕೆಟ್‍ನ ಚಾಟ್ಸ್​​ನಿಂದಾಗಿಯೇ ಮರೆಯಲಾಗದ ಅನುಭವ ಎನಿಸಿದೆ. ಚಂಡಿಗಢದಲ್ಲಿ ಡಬ್ಬಾವಾಲಾಗಳು ಕೊಡುವ ಮಿಸ್ಸಿ ರೋಟಿ ಮತ್ತು ಮಖ್ಖಿ ದಾಲ್ ನೆನೆದ್ರೆ ಈಗಲೂ ಚೇತನಾ ಅವರ ಬಾಯಲ್ಲಿ ನೀರೂರುತ್ತೆ.

ಉದ್ಯಮಶೀಲತೆಯ ಕರೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎನಿಸಿದಾಗ ಚೇತನಾ, ತಮ್ಮ ಎರಡು ಶ್ರೇಷ್ಠ ಪ್ರೀತಿಯನ್ನು ಒಂದುಗೂಡಿಸಿದ್ರು. ಅದೇ ಪ್ರವಾಸ ಮತ್ತು ತಿನಿಸು. ವಿಶಿಷ್ಟ ಆಹಾರ ಸಫಾರಿಯನ್ನೊಳಗೊಂಡ `ಟಿಕ್ಕಾ ಸಫಾರಿ'ಯನ್ನು ಲಾಂಚ್ ಮಾಡಿದ್ರು. ಪ್ರತಿ ಸಫಾರಿ 5-7 ದಿನಗಳಷ್ಟು ದೀರ್ಘವಾಗಿರುತ್ತೆ. 2-4 ನಗರಗಳಿಗೆ ನೀವು ಭೇಟಿ ಕೊಡಬಹುದು. ಅಲ್ಲಿನ ವಿಶಿಷ್ಟ ತಿನಿಸುಗಳನ್ನು ತಿನ್ನಬಹುದು. ಶಾಪಿಂಗ್ ಮಾಡಬಹುದು. ಅಲ್ಲಿನ ತಿನಿಸುಗಳನ್ನು ತಯಾರಿಸುವ ಬಗ್ಗೆ ತರಬೇತಿಯನ್ನೂ ಪಡೆಯಬಹುದು. ಭೋಜನ ರಸಿಕರಿಗೆ ಇದು ಒಳ್ಳೆಯ ಅವಕಾಶ. ಟಿಕ್ಕಾ ಸಫಾರಿ ವಿಶೇಷ ಸ್ಥಳಗಳು, ನಗರಗಳು, ದೇವಾಲಯಗಳು, ಸ್ಮಾರಕಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತೆ. ಅಲ್ಲಿನ ಮನೆಗಳು ಮತ್ತು ಹೋಟೆಲ್‍ಗಳಲ್ಲಿ ಮಾಡುವ ವಿಶಿಷ್ಟ ಭಕ್ಷ್ಯ, ಆಹಾರ ಸಂಪ್ರದಾಯ, ಸ್ಥಳೀಯ ಪಾಕಪದ್ಧತಿಯನ್ನು ಪರಿಚಯಿಸುತ್ತೆ. ಭಾರತವನ್ನು ಆಹಾರದ ಮೂಲಕ ಶೋಧಿಸಲು ಇದು ನೆರವಾಗುತ್ತದೆ.

image


ಟಿಕ್ಕಾ ಸಫಾರಿಯಲ್ಲಿ 14-16 ಸೀಟ್‍ಗಳಿರುತ್ತೆ. ನೀವು ಒಬ್ಬರೇ ಬರಬಹುದು, ಅಥವಾ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಗುಂಪಿನೊಂದಿಗೂ ಬರಬಹುದು. ಊಟ, ತಂಗಲು ವ್ಯವಸ್ಥೆ, ಹಾಗೂ ಪ್ರಯಾಣ ಎಲ್ಲವನ್ನೂ ಸಫಾರಿ ಒಳಗೊಂಡಿರುತ್ತದೆ. ಟಿಕ್ಕಾ ಸಫಾರಿ ಆರಂಭಿಸುವ ಮುನ್ನ ಅಂತರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸಲಹೆಗಾರರಾಗಿ ಚೇತನಾ 13 ವರ್ಷ ಕೆಲಸ ಮಾಡಿದ್ದಾರೆ. 2014ರಲ್ಲಿ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಆರಂಭಿಸಲು ಚೇತನಾ ನಿರ್ಧರಿಸಿದ್ರು. ಪಾಲುದಾರರೊಬ್ಬರ ಜೊತೆಗೂಡಿ ಇಂಕ್ ಪಂಡಿತ್ ಎಂಬ ಸಂಸ್ಥೆಯನ್ನೂ ಅವರು ನಡೆಸ್ತಿದ್ದಾರೆ. ಆದ್ರೆ ಟಿಕ್ಕಾ ಸಫಾರಿ ಮೂಲಕ ಚೇತನಾ ಅವರ ಬಾಲ್ಯದ ಕನಸು ನನಸಾಗಿದೆ.

ಸಿಂಧಿ ಮನೆತನದಲ್ಲಿ ಹುಟ್ಟಿ ಬೆಳೆದಿದ್ರಿಂದ ಚೇತನಾಗೆ ಮೊದಲಿನಿಂದ್ಲೂ ತಿನಿಸುಗಳ ಬಗ್ಗೆ ಸಿಕ್ಕಾಪಟ್ಟೆ ಒಲವಿತ್ತು. ಪ್ರತಿಯೊಂದು ಸಮಸ್ಯೆ ಹಾಗೂ ಕಲಹಕ್ಕೆ ಊಟದಲ್ಲಿ ಪರಿಹಾರವಿದೆ ಎಂಬ ನಂಬಿಕೆ ಅವರಿಗೆ. ಅಂತರಾಷ್ಟ್ರೀಯ ತಿನಿಸು, ಉತ್ತಮ ಸಂದೇಶವುಳ್ಳ ಪಾರ್ಟಿ ಆಯೋಜನೆ, ವಿಶೇಷ ಆಹಾರ ಅನುಭವ ಹಂಚಿಕೊಳ್ಳಲು ವೇದಿಕೆ ಸೃಷ್ಟಿಸಬಹುದು ಎಂಬ ಆಲೋಚನೆ ಅವರಿಗಿತ್ತು. ಆದ್ರೆ ಆ ಕಲ್ಪನೆ ಮನಸ್ಸಿಗೆ ಸಮಾಧಾನ ತಂದಿರ್ಲಿಲ್ಲ. ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳಿಂದ್ಲೂ ಚೇತನಾಗೆ ಸಾಕಷ್ಟು ಆಫರ್‍ಗಳು ಬಂದಿದ್ವು. ಸಲಹೆಗಾರರಾಗಿದ್ದಾಗ ದೇಶ ಸುತ್ತಿದ್ದ ಚೇತನಾ, ಪ್ರತಿ ಊರಿಗೆ ಹೋದಾಗ್ಲೂ ಅಲ್ಲಿನ ತಿನಿಸುಗಳಿಗೇ ಆದ್ಯತೆ ಕೊಡ್ತಾ ಇದ್ರು. ಅಲ್ಲಿ ಸಿಗುವ ವಿಶಿಷ್ಟ ವಸ್ತುಗಳನ್ನು ಕೊಂಡುಕೊಳ್ತಿದ್ರು. ನಮ್ಮ ದೇಶದಲ್ಲಿ ಇಷ್ಟೊಂದು ವಿಭಿನ್ನತೆ ಇದೆ ಅನ್ನೋದು ಅವರಿಗೆ ಅರಿವಾಗಿತ್ತು. ಇದನ್ನೇ ಉದ್ಯಮದಲ್ಲಿ ಅಳವಡಿಸಿಕೊಳ್ಳಲು ಚೇತನಾ ಮುಂದಾದ್ರು.

ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿದಾಗ ಆಹಾರವನ್ನೇ ಮುಂದಾಗಿಟ್ಟುಕೊಂಡು ಆಯೋಜಿಸುವ ಪ್ರವಾಸಗಳೇ ಇಲ್ಲ ಅನ್ನೋದನ್ನು ಚೇತನಾ ಅರ್ಥಮಾಡಿಕೊಂಡ್ರು. ಯಾರು ತಿನಿಸು ಹಾಗೂ ಪ್ರವಾಸವನ್ನು ಪ್ರೀತಿಸುತ್ತಾರೋ ಅಂಥವರಿಗಾಗಿಯೇ ಟಿಕ್ಕಾ ಸಫಾರಿ ಆರಂಭಿಸಿದ್ರು. ಸಂಸ್ಥೆಗೆ ಹೆಸರು ಇಡುವುದೇ ದೊಡ್ಡ ಸವಾಲಾಗಿತ್ತು. ಆಗ ಭಾರತದ ಜನಪ್ರಿಯ ಟಿಕ್ಕಾ ಮಸಾಲಾವನ್ನು ನೆನಪಿಸಿಕೊಂಡ ಸ್ನೇಹಿತರೊಬ್ರು ಟಿಕ್ಕಾ ಸಫಾರಿ ಎಂಬ ಹೆಸರನ್ನು ಸೂಚಿಸಿದ್ರು. ಭಾರತ ಈಗ 21ನೇ ಶತಮಾನದಲ್ಲಿದೆ. ಎಲ್ಲಾ ಕಡೆ ಇಂಟರ್ನೆಟ್ ಹವಾ ಜೋರಾಗಿದೆ. ಕೊಳ್ಳುವಿಕೆಯ ಬಲ ದೇಶದಲ್ಲಿ ಹೆಚ್ಚಿದೆ. ನಗರದ ಜನತೆ ಮೂಲಭೂತ ಅಗತ್ಯಗಳನ್ನು ಬಿಟ್ಟು ಐಷಾರಾಮಿ ಬಯಕೆಗಳನ್ನು ಪೂರೈಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಹೊಸ ಹೊಸ ಅನುಭವಗಳನ್ನು ಪಡೆಯಲು ಉತ್ಸುಕರಾಗಿದ್ದಾರೆ. ಹಾಗಾಗಿ ಟಿಕ್ಕಾ ಸಫಾರಿ ಆರಂಭಕ್ಕೆ ಇದು ಸೂಕ್ತ ಸಮಯ ಅಂತಾ ಚೇತನಾ ಅವರಿಗೆ ಅನಿಸಿತ್ತು.

image


ಈ ಉದ್ಯಮ ನೇರವಾಗಿ ಆರ್ಥಿಕತೆಯ ಜೊತೆ ಸಂಬಂಧ ಹೊಂದಿದೆ. ಆರ್ಥಿಕತೆ ಕುಸಿದರೆ ಅದರ ನೇರ ಪರಿಣಾಮ ಉದ್ಯಮದ ಮೇಲಾಗಲಿದೆ. ಬಿಕ್ಕಟ್ಟು ಎದುರಾದಲ್ಲಿ ಐಷಾರಾಮಿ ವಸ್ತುಗಳು ಮತ್ತು ಪ್ರವಾಸದ ಮೇಲಿನ ವೆಚ್ಚ ಕಡಿಮೆಯಾಗಲಿದೆ. ಇದು ತಮ್ಮ ಉದ್ಯಮಕ್ಕಿರುವ ದೊಡ್ಡ ಸವಾಲು ಎನ್ನುತ್ತಾರೆ ಚೇತನಾ. ರಾಷ್ಟ್ರೀಯ ಹೆದ್ದಾರಿ, ರಸ್ತೆ, ದೂರವಾಣಿ ಸಂಪರ್ಕ, ರೈಲು, ಬಸ್, ನಿಲ್ದಾಣ, ಸಾರ್ವಜನಿಕ ವ್ಯವಸ್ಥೆ ಇವೆಲ್ಲವೂ ಪ್ರವಾಸ ವಲಯದ ಮೇಲೆ ಪರಿಣಾಮ ಬೀರುತ್ತವೆ. ವಿಶೇಷ ಅಂದ್ರೆ ಟಿಕ್ಕಾ ಸಫಾರಿಯಲ್ಲಿ ಪ್ರವಾಸಿಗರು ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಸದ್ಯ ಚೇತನಾ ಅವರು ಕೂಡಿಟ್ಟ ಹಣದಿಂದ ಟಿಕ್ಕಾ ಸಫಾರಿ ಮುನ್ನಡೆಯುತ್ತಿದೆ. ಭವಿಷ್ಯದಲ್ಲಿ ತಮ್ಮ ಸಂಸ್ಥೆಗೆ ಹಣಕಾಸಿನ ನೆರವು ಸಿಗಬಹುದೆಂಬ ಆಶಾವಾದ ಅವರದ್ದು.

ಟಿಕ್ಕಾ ಸಫಾರಿ ಇನ್ನೂ ಅಂಬೆಗಾಲಿಡುತ್ತಿರುವ ಸಂಸ್ಥೆ. ಇನ್ನಾರು ತಿಂಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂಬ ವಿಶ್ವಾಸ ಚೇತನಾ ಅವರಿಗಿದೆ. ಟಿಕ್ಕಾ ಸಫಾರಿ ಯಶಸ್ಸಿಗಾಗಿ ಚೇತನಾ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ತಿಂಡಿಪೋತರು ಹಾಗೂ ಪ್ರವಾಸ ಪ್ರಿಯರು ಸಾಥ್ ಕೊಟ್ರೆ ಟಿಕ್ಕಾ ಸಫಾರಿ ಜನಪ್ರಿಯತೆಯ ಉತ್ತುಂಗ ತಲುಪುವುದರಲ್ಲಿ ಅನುಮಾನವಿಲ್ಲ.