ಮತ್ತೆ ಕೆಲಸಕ್ಕೆ ಅಮ್ಮಂದಿರು - ವೃತ್ತಿ ಬದುಕಿನ ಯಶಸ್ಸಿಗೆ 10 ಟಿಪ್ಸ್

ಟೀಮ್​ ವೈ.ಎಸ್​. ಕನ್ನಡ

0


ಇದು ವೃತ್ತಿಪರ ಮಹಿಳೆ, ಪ್ರೀತಿಯ ಅಮ್ಮ, ಅತ್ಯುತ್ತಮ ಸಂಗಾತಿ ಹಾಗೂ ಗೃಹಿಣಿಯೊಬ್ಬಳ ಸಾಹಸಗಾಥೆ. `ಕ್ಲೌಡ್ ಮೆಂಟರ್ಸ್'ನ ಸಹ ಸಂಸ್ಥಾಪಕಿ ವೃಂದಾ ಬನ್ಸೊಡೆ ಅವರ ಅನುಭವದ ಮೂಟೆ ಇದು. ಕುಟುಂಬದ ಕಣ್ಣಾಗಿರುವ ಹೆಣ್ಣಿನ ವೃತ್ತಿ ಜೀವನದ ಯಶಸ್ಸಿಗೆ ಅವರು ಸರಳ ಸೂತ್ರಗಳನ್ನು ಕೊಟ್ಟಿದ್ದಾರೆ. ಅದನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಕೂಡ ಒಬ್ಬ ಮಹಿಳಾ ಉದ್ಯೋಗಿ. ಸುದೀರ್ಘವಾದ ಒಂದು ಬ್ರೇಕ್‍ನ ನಂತರ ಕೆಲಸಕ್ಕೆ ಮರಳಿದ್ದೇನೆ. ಒಂದ್ಕಡೆ ಅಡುಗೆ ಮೇಲ್ವಿಚಾರಣೆ ಮಾಡಬೇಕಿತ್ತು, ಕೆಲಸದವಳು ಸ್ವಚ್ಛತಾ ಕಾರ್ಯದಲ್ಲಿದ್ರೆ, ಮಗ ನಾಳಿನ ಪರೀಕ್ಷೆಗಾಗಿ ಓದಿಕೊಳ್ತಾ ಇದ್ದ. ಅದೇ ಸಮಯಕ್ಕೆ ನನಗೆ ಬ್ಯುಸಿನೆಸ್ ಕರೆಯೊಂದು ಬಂದಿತ್ತು, ಆದ್ರೆ ಇನ್ನರ್ಧ ಗಂಟೆಯಲ್ಲಿ ನಾನು ಬರ್ತಡೇ ಪಾರ್ಟಿಯೊಂದಕ್ಕೆ ಮಗನನ್ನು ಡ್ರಾಪ್ ಮಾಡಬೇಕು, ಅಷ್ಟರಲ್ಲೇ ದಿನಸಿ ಕೂಡ ಮನೆಗೆ ಡೆಲಿವರಿಯಾಗುವುದರಲ್ಲಿತ್ತು. ಮೇಲಿಂದ ಮೇಲೆ ರಿಂಗಣಿಸ್ತಾ ಇದ್ದ ಫೋನ್ ಅನ್ನು ಏನು ಮಾಡೋದು ಎನ್ನುವುದೇ ತೋಚದಂತಹ ಗಡಿಬಿಡಿಯ ಸಂದರ್ಭ. ಹಾಗಂತ ನಾನೇನು ಒತ್ತಡಕ್ಕೆ ಒಳಗಾಗಿಲ್ಲ. ಇದು ಪ್ರತಿನಿತ್ಯದ ಸಂಜೆ ಇರುವಂತಹ ಪರಿಸ್ಥಿತಿ ಅಷ್ಟೆ. ಇದು ನನ್ನೊಬ್ಬಳ ಸ್ಥಿತಿಯಲ್ಲ, ಜಗತ್ತಿನಲ್ಲಿ ಮಿಲಿಯನ್‍ಗಟ್ಟಲೆ ಮಹಿಳೆಯರ ಬದುಕು ಇದೇ ರೀತಿಯಾಗಿದೆ. ಹಾಗಾಗಿ ಒಂದು ಬ್ರೇಕ್ ತೆಗೆದುಕೊಳ್ಳುವುದೋ ಅಥವಾ ಮತ್ತೆ ಕೆಲಸಕ್ಕೆ ಸೇರುವುದೋ ಎಂಬ ಗೊಂದಲ ಮೂಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ನಿಮಗೆ ಅಡ್ಡಿಯಾಗುತ್ತಿರುವುದೇನು?

ನನ್ನ ಕಥೆಯನ್ನೇ ಕೇಳಿ. ನಾನು ಅತಿ ಬುದ್ಧಿವಂತ ವಿದ್ಯಾರ್ಥಿನಿ. ಎಂಬಿಎನಲ್ಲಿ ಕೂಡ ಕಾಲೇಜಿಗೆ ಟಾಪರ್. ವೃತ್ತಿ ಜೀವನದಲ್ಲಿ ಕೂಡ ನಾನು ಯಶಸ್ಸು ಗಳಿಸುತ್ತೇನೆ ಅನ್ನೋ ವಿಶ್ವಾಸ ಎಲ್ಲರಲ್ಲೂ ಇತ್ತು. ಆದ್ರೆ ಜರ್ಮನ್ ಎಂಎನ್‍ಸಿಯಲ್ಲಿದ್ದ ಒಳ್ಳೆ ಉದ್ಯೋಗವನ್ನು ಬಿಡಲು ನಿರ್ಧರಿಸಿದ ನನ್ನ ನಿರ್ಧಾರ ಕೇಳಿ ಅವರಿಗೆಲ್ಲ ಅಚ್ಚರಿಯೋ ಅಚ್ಚರಿ. ಅಮೆರಿಕಕ್ಕೆ ಹೊರಟು ನಿಂತಿದ್ದ ನನ್ನ ಪತಿಯ ಬೆಂಬಲಕ್ಕೆ ನಿಂತಿದ್ದ ನಾನು ಕೆಲಸಕ್ಕೆ ಗುಡ್‍ಬೈ ಹೇಳಿದ್ದೆ. ಅಪ್ಪಟ ಗೃಹಿಣಿಯಾಗಿರಲು ಒಪ್ಪಿದ ನಾನು ಡಿಪೆಂಡೆಂಟ್ ವೀಸಾದ ಮೇಲೆ ಅಮೆರಿಕಕ್ಕೂ ಹಾರಿದೆ. ಕೆಲವೇ ವರ್ಷಗಳಲ್ಲಿ ನಾವು ಮರಳಿ ಭಾರತಕ್ಕೇನೋ ವಾಪಸ್ಸಾದ್ವಿ. ಆದ್ರೆ ನನ್ನ ವೃತ್ತಿ ಜೀವನದ ಬ್ರೇಕ್ 10 ಸುದೀರ್ಘ ವರ್ಷಗಳವರೆಗೂ ಮುಂದುವರಿದಿತ್ತು. ಮಕ್ಕಳ ಲಾಲನೆ ಪಾಲನೆಯಲ್ಲಿ ನಾನು ಬ್ಯುಸಿಯಾಗಿದ್ದೆ. ಚಿಕ್ಕ ಮಗು ಶಾಲೆಗೆ ಹೋಗಲು ಆರಂಭಿಸುವವರೆಗೂ ಅವರ ಜೊತೆ ಆಡಿ ನಲಿಯುತ್ತ, ತಾಯಿಯಾಗಿ, ಗೃಹಿಣಿಯಾಗಿ ನಾನು ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡಿದ್ದೆ.

ಎಲ್ಲರ ಬದುಕಿನಲ್ಲೂ ಇದು ಸಹಜ. ಹಾಗಾಗಿ ನಾನು ನನ್ನ ವೃತ್ತಿ ಜೀವನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮನೆ, ಮಕ್ಕಳಿಗಾಗಿ ಸಮಯವನ್ನು ಮೀಸಲಿಟ್ಟಿದ್ದೆ. ಆದ್ರೆ ನನ್ನ ಕೆಲವು ಸ್ನೇಹಿತೆಯರು ಮನೆ ಹಾಗೂ ವೃತ್ತಿ ಎರಡನ್ನೂ ಜೊತೆ ಜೊತೆಗೆ ತೂಗಿಸಿಕೊಂಡು ಹೋಗುತ್ತಿದ್ರು. ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಾನು, ಅವರನ್ನು ಬೆಂಬಲಿಸಿದ್ದೆ. ನನ್ನ ಚಿಕ್ಕ ಮಗು ಮೊದಲ ಬಾರಿ ಶಾಲೆ ಮೆಟ್ಟಿಲು ಹತ್ತಿದಾಗ ನಾನು ಕೂಡ ಉದ್ಯೋಗಕ್ಕೆ ಮರಳಲು ಇದು ಸಕಾಲ ಎನಿಸಿತ್ತು. ನಾನು ಸಾಧಿಸಬೇಕಾದದ್ದು ಇನ್ನೂ ಇದೆ ಅನ್ನೋ ಅರಿವು ನನಗಿತ್ತು. ಆದ್ರೆ ದೀರ್ಘಕಾಲ ಉದ್ಯೋಗದಿಂದ ದೂರವಿದ್ದ ಕಾರಣ ನಾನು ಆತಂಕಕ್ಕೆ ಒಳಗಾಗಿದ್ದೆ, ನಿಜಕ್ಕೂ ನನಗೆ ಉದ್ಯೋಗ ಸಿಗುತ್ತಾ? ಹೊಸ ಹೊಸ ವಿಚಾರಗಳು, ತಂತ್ರಜ್ಞಾನಗಳ ಬಗ್ಗೆ ನನಗೆ ಸರಿಯಾಗಿ ತಿಳಿದಿಲ್ಲ ಅನ್ನೋ ಭಯ ನನ್ನನ್ನು ಆವರಿಸಿತ್ತು. ಆದ್ರೆ ಯಶಸ್ಸಿನ ಅವಕಾಶಗಳು ಕಡಿಮೆಯಾಗಿಲ್ಲ ಅನ್ನೋ ಸತ್ಯವೂ ತಿಳಿದಿತ್ತು. ಇಂತಹ ಭಯ, ಆತಂಕಗಳಿಂದ ದೂರವಾಗಿ ಅವರಿಗಿಷ್ಟ ಬಂದಿದ್ದನ್ನು ಮಾಡಲು ನನ್ನ ಮಕ್ಕಳಿಗೆ ಪ್ರೇರಣೆ ನೀಡಬೇಕೆಂದು ನಾನು ನಿರ್ಧರಿಸಿದ್ದೆ.

ಮಕ್ಕಳಿಗಾಗಿ ಕಾರ್ಯಾಗಾರ ಏರ್ಪಡಿಸಿದ್ದ ಎಂಜಿನಿಯರ್‍ಗಳ ತಂಡವೊಂದನ್ನು ನಾನು ಭೇಟಿಯಾದೆ. ಆ ಕಾರ್ಯಾಗಾರದಲ್ಲಿ ನನ್ನ ಮಗನೂ ಭಾಗವಹಿಸಿದ್ದ. ಎಂಜಿನಿಯರ್‍ಗಳ ಕಾರ್ಯವೈಖರಿ ಮತ್ತು ಅದರಿಂದ ಮಕ್ಕಳಿಗಾಗುವ ಪ್ರಯೋಜನಗಳ ಬಗ್ಗೆ ತಿಳಿದು ನಾನು ರೋಮಾಂಚನಗೊಂಡಿದ್ದೆ. ಟೆಕ್ಕಿಗಳ ತಂಡಕ್ಕೆ ಪೂರಕವಾದ ವ್ಯವಹಾರ ಕೌಶಲ್ಯಗಳನ್ನು ತಿಳಿಸಿಕೊಡಲು ನಾನು ನಿರ್ಧರಿಸಿದೆ. ಸರಿಯಾದ ಸಂಪನ್ಮೂಲ ಮತ್ತು ಸಲಹೆಗಳನ್ನು ಒದಗಿಸಿದೆ. ಈ ಸಂಯೋಜನೆ ಅದ್ಭುತವಾಗಿ ವರ್ಕೌಟ್ ಆಯ್ತು, ಬಳಿಕ ನಾವು `ಕ್ಲೌಡ್ ಮೆಂಟರ್' ಅನ್ನೋ ತಂಡವೊಂದನ್ನು ಕಟ್ಟಿ ಬೆಳೆಸಿದ್ವಿ.

ಅಲ್ಲಿಂದ ನಾನು ಕೂಡ ಉದ್ಯಮಿಯಾಗಿ ಗುರುತಿಸಿಕೊಂಡೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸುವುದು `ಕ್ಲೌಡ್ ಮೆಂಟರ್ಸ್'ನ ಪ್ರಮುಖ ಉದ್ದೇಶ. ಶಾಲಾ ಮಕ್ಕಳಿಗೆ ಅಗತ್ಯವಾದ ಸೃಜನಶೀಲ ಪ್ರಯೋಗಾತ್ಮಕ ಶಿಕ್ಷಣದ ವಿಷಯವನ್ನು ಅಭಿವೃದ್ಧಿಪಡಿಸಲು ತಜ್ಞರ ತಂಡವೇ ಕ್ಲೌಡ್ ಮೆಂಟರ್ಸ್‍ನಲ್ಲಿದೆ. ಬ್ಯುಸಿನೆಸ್ ಹೆಡ್ ಆಗಿರುವ ನಾನು ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ನಿರತಳಾಗಿದ್ದೇನೆ. ನನ್ನ ಕುಟುಂಬದವರು, ಸ್ನೇಹಿತರು ಮತ್ತು ಕ್ಲೌಡ್ ಮೆಂಟರ್ಸ್ ತಂಡದಿಂದ ನನಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಕಳೆದ 5 ವರ್ಷಗಳಲ್ಲಿ ನಾನು ಉದ್ಯಮಿಯಾಗಿ ಅಪಾರ ಅನುಭವ ಗಳಿಸಿದ್ದೇನೆ. ನನ್ನಂತೆ ಮತ್ತೆ ವೃತ್ತಿ ಜೀವನ ಆರಂಭಿಸಲು ಹಿಂದೇಟು ಹಾಕುವ ಹಲವು ಮಹಿಳೆಯರಿದ್ದಾರೆ. ಅವರು ಗಮನದಲ್ಲಿರಿಸಿಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ.

1. ನೀವು ಒಂಟಿಯಲ್ಲ : ಸಂಗಾತಿ, ಮಕ್ಕಳು, ಕುಟುಂಬಸ್ಥರು, ಸ್ನೇಹಿತರು ಮತ್ತು ಸಹೋದ್ಯೋಗಿಗಳಲ್ಲೇ ನಿಮ್ಮ ಮೈತ್ರಿಕೂಟವನ್ನು ಕಾಣಿರಿ. ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ, ನಿಮ್ಮ ಗುರಿಯನ್ನು, ಆಸಕ್ತಿಯನ್ನು ಬೆಂಬಲಿಸುತ್ತಾರೆ.

2. ನಿಮ್ಮಲ್ಲಿ ಸಾಮಥ್ರ್ಯವಿದೆ : ಪತಿ ಯಾವುದೋ ಬ್ಯುಸಿನೆಸ್ ಟೂರ್ ಮೇಲೆ ಹೋಗಿರ್ತಾರೆ, ಮನೆ ಕೆಲಸದವಳು ಕೂಡ ಚಕ್ಕರ್, ಮಕ್ಕಳಿಗೆ ಅರ್ಜೆಂಟಾಗಿ ಪ್ರಾಜೆಕ್ಟ್ ವರ್ಕ್ ಮಾಡಿಸಬೇಕು, ಪೋಷಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಪಾಯಿಂಟ್‍ಮೆಂಟ್ ಫಿಕ್ಸ್ ಆಗಿದೆ, ಹೀಗೆ ಎಲ್ಲ ಕೆಲಸವೂ ಒಂದೇ ದಿನ ಬಂದಿರುತ್ತೆ. ಇದನ್ನೆಲ್ಲ ನೀವು ಆರಾಮಾಗಿ ನಿಭಾಯಿಸಿದ್ದೀರಾ ಅಂತಾದ್ಮೇಲೆ, ಕಚೇರಿ ಕೆಲಸದ ಹೊರೆ ಲೆಕ್ಕಕ್ಕೇ ಇಲ್ಲ. ಅದನ್ನು ನೀವು ಆರಾಮಾಗಿ ಮಾಡಿ ಮುಗಿಸಬಲ್ಲಿರಿ.

3. ನಿಮ್ಮಲ್ಲಿ ಅನನ್ಯ ಶಕ್ತಿಯಿದೆ : ಮನೆ ಬಿಟ್ಟು ಕದಲದ ತಾಯಂದಿರು ಮತ್ತು ಗೃಹಿಣಿಯರು ಒಂದೇ ಬಾರಿಗೆ ನಾಲ್ಕಾರು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ನಿಮ್ಮ ಕೌಶಲ್ಯದ ಸಂಯೋಜನೆಯನ್ನು ನೋಡಿ ಎಲ್ಲರೂ ಬೆರಗಾಗುತ್ತಾರೆ. ನೀವು ಅತ್ಯುತ್ತಮ ಯೋಜಕರು, ಸಮಾಲೋಚಕರು, ಸಂಘಟಕರು ಮತ್ತು ಮ್ಯಾನೇಜರ್ ಕೂಡ ಆಗಬಲ್ಲಿರಿ. ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆಯಿಡಿ, ಸಂಘಟನಾ ಸಮಸ್ಯೆಗಳನ್ನು ಪರಿಹರಿಸಿ.

4. ವೃತ್ತಿಪರರಾಗಿರಿ : ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಮೃದುವಾಗಿ ನಡೆಸಿಕೊಳ್ಳಬೇಕೆಂದು ನಿರೀಕ್ಷಿಸಬೇಡಿ. ದ್ವಿತೀಯ ಇನ್ನಿಂಗ್ಸ್​ನಲ್ಲಿ ಮಹಿಳೆಯರು ಈ ವರ್ಗಕ್ಕೆ ಸೇರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ವೃತ್ತಿಪರರಾಗಿರಿ. ಸಮಾನ ಗೌರವಗಳನ್ನು ನಿರೀಕ್ಷಿಸಿ. ನಿಮ್ಮ ಕಾರ್ಯವೈಖರಿ ಈ ರೀತಿ ಇದ್ರೆ ನಿಮ್ಮ ಮಗಳಿಗೆ ನೀವೇ ರೋಲ್ ಮಾಡೆಲ್ ಆಗುತ್ತೀರಾ.

5. ನಿಮ್ಮ ಹೋರಾಟವನ್ನು ಆಯ್ದುಕೊಳ್ಳಿ : ಒಂದು ಕೆಲಸದ ಕರೆ/ಗಡುವು ನಿಮ್ಮ ಮಗುವಿಗೆ ಒಂದು ಸಂಜೆ ನ್ಯೂಟೆಲ್ಲಾ ಬಾಟಲಿ ಹಸ್ತಾಂತರಿಸುವುದಾಗಿದ್ದರೆ ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೆ ಅದನ್ನು ಮಾಡಿ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವುದನ್ನು ನಿಮ್ಮ ಮಕ್ಕಳಿಗೆ ಕಲಿಸಿ. ನಿಮಗೆ ಧನ್ಯವಾದ ಹೇಳಲೆಂದೆ ಅವರು ದೊಡ್ಡವರಾಗುತ್ತಾರೆ.

6. ನೀರಿನ ಅಲೆಗಳನ್ನು ಎದುರಿಸಲು ಸಿದ್ಧರಾಗಿರಿ : ದಿನದ 24 ಗಂಟೆಗಳು, ವಾರದ 7 ದಿನಗಳೂ ನಿಮ್ಮ ಜೊತೆಗೇ ಇರುವುದು ನಿಮ್ಮ ಕುಟುಂಬದವರಿಗೆ ಅಭ್ಯಾಸವಾಗಿರುತ್ತದೆ. ನೀವು ಕೆಲಸಕ್ಕೆ ಹೋಗಲು ಆರಂಭಿಸಿದ್ರೆ ಮೊದ ಮೊದಲು ಅವರು ನಿಮ್ಮನ್ನು ಮಿಸ್ ಮಾಡಿಕೊಳ್ತಾರೆ. ಮನೆ ಹಾಗೂ ಕಚೇರಿ ಎರಡನ್ನೂ ನಿಭಾಯಿಸುವುದು ನಿಮಗೆ ಕಷ್ಟವಾಗಬಹುದು. ಅದ್ಭುತ ಯೋಜನೆಗಳ ಹೊರತಾಗಿಯೂ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಕಠಿಣ ಸಂದರ್ಭಗಳಲ್ಲಿ ನೀವು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ನಿಧಾನವಾಗಿ ನೀವು ಸಮತೋಲನ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬಹುದು.

7. ನಿಮಗಾಗಿ ಸಮಯ ಮಾಡಿಕೊಳ್ಳಿ : ನೀವು ಕೆಲಸಕ್ಕೆ ಮರಳಿದ ಸಂದರ್ಭದಲ್ಲಿ, ನೀವು ಎಂಜಾಯ್ ಮಾಡ್ತಾ ಇದ್ದ ಕೆಲಸಗಳಿಗೆಲ್ಲ ಸಮಯ ಮಾಡಿಕೊಳ್ಳುವುದು ಕಷ್ಟವಾಗಬಹುದು. ಸ್ನೇಹಿತರ ಜೊತೆ ಕಾಫಿ, ಪುಸ್ತಕ ಓದುವುದು, ಹೊಸ ಹೊಸ ಹಾಡುಗಳನ್ನು ಡೌನ್‍ಲೋಡ್ ಮಾಡುವುದು, ಪಾರ್ಕ್‍ನಲ್ಲಿ ವಾಕಿಂಗ್ ಇದಕ್ಕೆಲ್ಲ ಸಮಯವೇ ಇಲ್ಲದಂತಾಗಬಹುದು. ಆದ್ರೆ ನಿಮಗೆ ಖುಷಿ ಕೊಡುವಂತಹ ಚಟುವಟಿಕೆಗಳಿಗೆ ಸಮಯ ಮೀಸಲಿಡಿ.

8. ಅರ್ಥ ಹುಡುಕಿ : ಖುಣಾತ್ಮಕ ಚಿಂತನೆ ಮತ್ತು ಕಾರ್ಯಕ್ಕಾಗಿ ವೇಸ್ಟ್ ಮಾಡಲು ನಿಮ್ಮ ಸಮಯ ಮತ್ತು ಶಕ್ತಿ ಅತ್ಯಂತ ಅವಶ್ಯಕ. ಆತ್ಮಾವಲೋಕನ ಮಾಡಿಕೊಳ್ಳಿ, ನೀವೇನು ಮಾಡುತ್ತಿದ್ದೀರಾ? ಯಾತಕ್ಕಾಗಿ ಮಾಡುತ್ತಿದ್ದೀರಾ ಅನ್ನೋದು ನಿಮಗೆ ತಿಳಿದಿರಲಿ. ಪ್ರಯತ್ನದ ಉಪಯುಕ್ತತೆ, ಉದ್ದೇಶವನ್ನು ಅವಲಂಬಿಸಿದೆ.

9. ಬದಲಾವಣೆಗೆ ತೆರೆದುಕೊಳ್ಳಿ : ಒಳ್ಳೆಯ ಕೆಲಸ ನಿಮಗೆ ಸಿಗದೇ ಇರಬಹುದು, ಅಥವಾ ಆ ಸಂಸ್ಥೆಗೆ ನಾನು ಸೂಕ್ತವಾದವಳಲ್ಲ ಎನಿಸಬಹುದು. ಅಂತಹ ಸಂದರ್ಭಗಳಲ್ಲಿ ಬದಲಾವಣೆಯನ್ನು ಸ್ವೀಕರಿಸಿ, ಬದಲಾವಣೆ ಬಗ್ಗೆ ಭಯ ಬೇಡ.

10. ಅಪೂರ್ಣತೆಯನ್ನೂ ಸ್ವೀಕರಿಸಿ : ಮನೆಯಲ್ಲೇ ಇರುವುದು ಅಥವಾ ಕೆಲಸಕ್ಕೆ ಹೋಗುವ ಮೂಲಕ ಚಮತ್ಕಾರದಂತೆ ನಿಮ್ಮ ಬದುಕು ಬದಲಾಗುವುದಿಲ್ಲ. ನಿಮ್ಮ ಮಾರ್ಗವನ್ನು ನೀವೇ ಆಯ್ದುಕೊಳ್ಳಿ. ಅಲ್ಲಿ ನಡೆಯುವ ಸಣ್ಣ ಪುಟ್ಟ ಸಿಹಿ ಘಟನೆಗಳು ನಿಮ್ಮ ಬದುಕನ್ನು ಆಸಕ್ತಿದಾಯಕವಾಗಿಸುತ್ತವೆ. ಅಪೂರ್ಣತೆಯನ್ನೂ ನೀವು ಸ್ವೀಕರಿಸಿ ಮುನ್ನಡೆಯಬೇಕು.


ಅನುವಾದಕರು: ಭಾರತಿ ಭಟ್​​

Related Stories

Stories by YourStory Kannada