ಯಶಸ್ಸಿನ ದಾರಿಯನ್ನ ತಾನೇ ಹೆಣೆದುಕೊಂಡ ರೀನಾ ಬಿನೋ

ಟೀಮ್​​ ವೈ.ಎಸ್​​. ಕನ್ನಡ

ಯಶಸ್ಸಿನ ದಾರಿಯನ್ನ ತಾನೇ ಹೆಣೆದುಕೊಂಡ ರೀನಾ ಬಿನೋ

Monday December 07, 2015,

3 min Read

ಏಳೆಂಟು ವರ್ಷದ ಬಾಲಕಿಯರು ಸಾಮಾನ್ಯವಾಗಿ ಆಟವಾಡುವ ಕಡೆಗಷ್ಟೇ ಗಮನ ನೀಡುತ್ತಾರೆ. ಆದ್ರೆ ಕೆಲವರು ಮಾತ್ರ ಬೆಳೆಯುವ ಸಿರಿ ಮೊಳಕೆಯಲ್ಲೇ ಅನ್ನುವ ಹಾಗೆ ಪ್ರೌಢಾವಸ್ಥೆಯಲ್ಲೇ ತಮ್ಮ ಉಜ್ವಲ ಭವಿಷ್ಯದ ಸೂಚನೆ ನೀಡುತ್ತಾರೆ. ಇಂತಹ ಅಪರೂಪದ ಗುಂಪಿನಲ್ಲಿ ಗುರುತಿಸಿಕೊಳ್ಳುವವರು ರೀನಾ ಬಿನೋ. ಬಾಲ್ಯದಲ್ಲಿ ಇತರೆ ಹುಡುಗಿಯರಂತೆ ಆಟದ ಬಯಲಿನಲ್ಲಿ ಕಾಲ ಕಳೆಯದ ಈಕೆ ಅಮ್ಮನನ್ನು ಹೆಚ್ಚು ಹಚ್ಚಿಕೊಂಡಿದ್ರು. ರೀನಾರ ಅಮ್ಮ ಕಸೂತಿಯಲ್ಲಿ ಅದ್ಭುತವಾದ ಚಿತ್ತಾರಗಳನ್ನ ಬಿಡಿಸುತ್ತಿದ್ರು. ಅಲ್ಲದೆ ಆಕೆ ಕರಕುಶಲ ವಸ್ತಗಳ ತಯಾರಿಕೆಯಲ್ಲಿ ವಿಶೇಷ ಪ್ರಾವಿಣ್ಯತೆ ಹೊಂದಿದ್ದು, ರೀನಾ ಆಕೆ ಕೆಲಸಗಳನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ರು. ಅಲ್ಲದೆ ಅಮ್ಮನಂತೆ ತಾನೂ ಕಸೂತಿಯಲ್ಲಿ ಪಳಗಬೇಕು ಅನ್ನುವ ಆಸೆಯೂ ಚಿಗುರಿತ್ತು.

ಎರಡು ಸೂಜಿ ಮೊನೆಗಳು ಅರಳಿಸುತ್ತಿದ್ದ ಕಸೂತಿಯಂತೆ ರೀನಾ ಬಿನೋ ಭವಿಷ್ಯ ಕೂಡ ಅರಳಿತು. ಕ್ರಮೇಣ ಕಸೂತಿಯಲ್ಲಿ ವಿಶೇಷ ಕಲೆಗಳನ್ನ ಕಲಿತುಕೊಂಡ ರೀನಾ ಇದೀಗ ನಿಟ್ ಎನ್ ಪರ್ಲ್ ಓಶನ್ (Knit N Purl Ocean ) ಕಂಪನಿಯ ಸಂಸ್ಥಾಪಕಿ. ಅದ್ಭುತವಾಗಿ ಬೆಳೆದು ನಿಂತಿರುವ ಈ ಕಂಪನಿ ಅಪೂರ್ವವಾದ ಹೆಣೆದ ಕಲಾಕೃತಿಗಳು, ಮಕ್ಕಳು ಬಳಸುವ ಉತ್ಪನ್ನಗಳು, ಗೃಹಲಂಕಾರಿಕಗಳು ಹಾಗೂ ಹೊಸ ಡಿಸೈನ್ ಗಳ ದೊಡ್ಡ ಸಾಗರವಾಗಿ ಹಬ್ಬುತ್ತಿದೆ. ಇನ್ನು ಗ್ರಾಹಕರನ್ನ ತಲುಪಲು ಪರ್ಲ್ ಓಶನ್ ಸುಲಭ ಮಾರ್ಗವನ್ನ ಆಯ್ದುಕೊಂಡಿದೆ. ಉತ್ಪನ್ನಗಳನ್ನ ಬಯಸುವ ಗ್ರಾಹಕರು ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ರೂ ಮನೆಬಾಗಿಲಿಗೆ ವಸ್ತುಗಳು ಡೆಲಿವರಿ ಆಗುತ್ತೆ.

image


“ ಮೊದಲ ಬಾರಿಗೆ ನಾನು ಕಸೂತಿ ಹೆಣೆದ ಕ್ಷಣ ಯಾವತ್ತಿಗೂ ಮರೆಯಲು ಅಸಾಧ್ಯ. ಅದ್ರಲ್ಲೂ 5 ಸೂಜಿಗಳನ್ನ ಬಳಸಿ ಹೆಣೆಯುವ ಪ್ರಯತ್ನ ಮಾಡಿದ್ದು, ಅದು ಸಕ್ಸಸ್ ಆಗಿತ್ತು ” ಅಂತ 40ರ ಹರೆಯದ ಗೋವಾದ ಈ ಉದ್ಯಮಿ ತನ್ನ ಹಳೆಯ ದಿನಗಳನ್ನ ಮೆಲುಕು ಹಾಕುತ್ತಾರೆ. ಕಠಿಣವಾದ ಪ್ಯಾಟರ್ನ್ ಗಳನ್ನ ಪ್ರಯೋಗಗಳ ಮೂಲಕ ಕಲಿಯುವುದು, ಹೊಸ ಪ್ಯಾಟರ್ನ್ ಗಳನ್ನ ಹುಟ್ಟುಹಾಕುವುದು ಹಾಗೂ ಸ್ಟಿಚಿಂಗ್ ಗೆ ಸಂಬಂಧಪಟ್ಟ ವಿಷಯಗಳು ಅತ್ಯಂತ ಸೂಕ್ಷ್ಮ ಅಂತಾರೆ ರೀನಾ ಬಿನೋ.

ಬಾಲ್ಯದಲ್ಲೇ ಕಲೆಗೆ ಒತ್ತು ನೀಡಿದ ಪ್ರತಿಭಾವಂತೆ

ರೀನಾ ಚಿಕ್ಕ ವಯಸ್ಸಿನಲ್ಲೇ ಕಾರ್ಡ್ ಗಳನ್ನ ತಯಾರಿಸುವುದರಲ್ಲಿ, ಪೇಂಟಿಂಗ್, ಫೋಟೋ ಫ್ರೇಮಿಂಗ್ , ಹೂಗಳ ಮಾದರಿಗಳನ್ನ ವಿವಿಧ ಸಂದರ್ಭಕ್ಕೆ ತಕ್ಕಂತೆ ತಯಾರಿಸುತ್ತಿದ್ದರು. ಅಲ್ಲದೆ ಕಸೂತಿಯಲ್ಲಿ ಹಲವು ಪ್ರಯೋಗಗಳನ್ನ ಮಾಡಿದ್ರು. ತಾನೇ ಕ್ಯಾಂಡಲ್ ಮಾಡುವುದು, ಮಣ್ಣಿನ ಮೂರ್ತಿಗಳ ನಿರ್ಮಾಣ, ಗ್ಲಾಸ್ ಪೇಂಟಿಂಗ್ , ಅಲ್ಯುಮಿನಿಯಂ ಆರ್ಟ್ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ಗಳನ್ನ ಕಲಿತಿದ್ದು ವಿಶೇಷ. ಹೀಗೆ ವಿಶೇಷ ಕಲೆಗಳಲ್ಲಿ ನೈಪುಣ್ಯತೆ ಸಾಧಿಸಿದ್ದ ರೀನಾ ಬಿನೋ ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನ ಬಳಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ಗೋವಾದ ಫಾರ್ಮಾ ಕಂಪನಿಯೊಂದಲ್ಲಿ ಪಾರ್ಟ್ ಟೈಂ ಉದ್ಯೋಗಿಯಾಗಿಯೂ ರೀನಾ ಬಿನೋ ದುಡಿಯುತ್ತಿದ್ದಾರೆ. ಇನ್ನು ಇಷ್ಟೆಲ್ಲಾ ಎಕ್ಸಪರಿಮೆಂಟ್ ಗಳನ್ನ ಮಾಡಿದ್ರೂ, ಕೆಲವೊಮ್ಮೆ ಕಸೂತಿ ವಸ್ತುಗಳನ್ನ ಪ್ಲಾಸ್ಟಿಕ್ ವಸ್ತುಗಳೊಂದಿಗೆ ಹೋಲಿಸಿದಾಗ ರೀನಾ ಬಿನೋ ಬೇಸರಿಸಿಕೊಂಡಿದ್ದೂ ಇದೆ.

“ ಕೈಯ್ಯಲ್ಲೇ ಹೆಣೆದ ವಸ್ತುಗಳನ್ನ ಫ್ಯಾಕ್ಟರಿಯಲ್ಲಿ ನಿರ್ಮಾಣವಾದ ಉತ್ಪನ್ನಗಳಿಗೆ ಹೋಲಿಸಿದಾಗ ಇರಿಸುಮುರಿಸು ಉಂಟಾಗುತ್ತದೆ. ಹೀಗಾಗಿ ಪ್ರತೀ ಕಸೂತಿ ಪ್ರಾಡೆಕ್ಟ್ ಗಳನ್ನ ಡೆಲಿವರಿ ಮಾಡುವಾಗ ಆ ವಸ್ತು ತಯಾರಿಕೆಯ ಹಿಂದಿರುವ ಶ್ರಮವನ್ನು ತಿಳಿಸುವ ಪಾಂಪ್ಲೆಟ್ಸ್ ಅಂಟಿಸುತ್ತೇನೆ ” ಅಂತ ರೀನಾ ಬಿನೋ ತಮ್ಮ ಕಂಪೆನಿಯ ಕಾರ್ಯವೈಖರಿಯನ್ನ ವಿವರಿಸುತ್ತಾರೆ. ಸದ್ಯ ಫೇಸ್ ಬುಕ್ ಮೂಲಕವೇ ಗ್ರಾಹಕರನ್ನ ತಲುಪುತ್ತಿರುವ ನಿಟ್ ಎನ್ ಪರ್ಲ್ ಓಶನ್ ಕಂಪನಿಗಾಗಿ ವೆಬ್ ಸೈಟ್ ರೂಪಿಸುವುದರಲ್ಲಿ ರೀನಾ ಬ್ಯುಸಿಯಾಗಿದ್ದಾರೆ.

ವ್ಯಕ್ತಿತ್ವಕ್ಕೆ ಮೆರುಗು ನೀಡಿದ ಕಲೆ

ಕಸೂತಿ ಕೆಲಸಕ್ಕೆ ವೈಯುಕ್ತಿಕವಾಗಿ ರೀನಾ ಬಿಳಿ ಹಾಗೂ ಇತರೆ ಗಾಢ ಬಣ್ಣವನ್ನ ಆಯ್ಕೆ ಮಾಡುತ್ತಾರೆ. ಆದ್ರೆ ಗ್ರಾಹಕರು ಮನೆಯ ಫರ್ನಿಚರ್ ಗೆ ತಕ್ಕಂತೆ ಬೇರೆ ಬಣ್ಣವನ್ನ ಬಯಸಿದರೆ ಮಾತ್ರ ಕಸೂತಿಯಲ್ಲಿ ಬಳಸುತ್ತಾರೆ. ಇನ್ನು ಮಕ್ಕಳು ಬಳಸುವ ಕಸೂತಿಯ ಬಟ್ಟೆ ಅಥವಾ ಸ್ವೆಟರ್ ಗೆ ವಿಶೇಷವಾದ ಉಲ್ಲನ್ ಹೊಂದಿಸುತ್ತಾರೆ. ಇದಿಷ್ಟೇ ಅಲ್ಲದೆ ಹೆಣೆದ ಅಲಂಕಾರಿಕ ಬಟ್ಟೆಗಳು, ಚಿಕ್ಕ ಬೊಂಬೆಗಳು, ವಿವಿಧ ಆಕಾರಗಳ ಟೇಬಲ್ ಬಟ್ಟೆಗಳು, ಮರದ ಫರ್ನೀಚೆರ್ ಗಳಿಗೆ ಬಳಸುವ ಬಟ್ಟೆಗಳು ಹಾಗೂ ಉಡುಗೊರೆ ನೀಡಬಹುದಾದ ವಸ್ತುಗಳನ್ನ ರೀನಾ ಕಂಪೆನಿ ಬಹಳ ಸುಂದರವಾಗಿ ರೂಪಿಸುವುದರ ಮೂಲಕ ಗೋವಾದಲ್ಲೇ ದೊಡ್ಡ ಹೆಸರುಗಳಿಸಿದೆ.

ಕುಟುಂಬವೇ ರೀನಾಗೆ ಸ್ಫೂರ್ತಿ

ರೀನಾ ಬಿನೋ ಸಾಧನೆಗೆ ಆಸರೆ ಮತ್ತು ಸ್ಫೂರ್ತಿಯಾಗಿರೋದು ಅವರ ಕುಟುಂಬ. ಅದ್ರಲ್ಲೂ ರೀನಾ ಅವರ ಅಮ್ಮ ಚಿಕ್ಕಂದಿನಿಂದಲೂ ನೀಡಿದ ಬೆಂಬಲ ಸಾಧನೆಗೆ ಬಲ ನೀಡಿದೆ. ಅಲ್ಲದೆ ಆಕೆಗೆ ಸಾಕಷ್ಟು ಮಂದಿ ಗೆಳೆಯರು ಹಾಗೂ ಹಿರಿಯರು ಮಾರ್ಗದರ್ಶನ ಹಾಗೂ ನೆರವು ನೀಡಿದ್ದಾರೆ. ಮಹಿಳೆಯರ ಬದುಕಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ರೀನಾ, ಸ್ವತಂತ್ರವಾಗಿ ಬದುಕಲು ಹಾಗೂ ಕನಸನ್ನ ನನಸು ಮಾಡಿಕೊಳ್ಳಲು ಕಲೆ ನೆರವು ನೀಡುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಸೂತಿಯನ್ನ ಬದುಕಿನಲ್ಲಿ ತೀರಾ ಹಚ್ಚಿಕೊಂಡಿರುವ ರೀನಾ, ಪ್ರತೀ ದಿನ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲೇಬೇಕಂತೆ. ಕೊಂಚ ಬಿಡುವು ಸಿಕ್ಕರೂ ಕುಳಿತಲ್ಲೇ ಅವರ ಕೈಗಳು ಚಿತ್ತಾರವನ್ನ ಬಿಡಿಸುತ್ತವೆ. ಹೀಗೆ ಕಸೂತಿ ಕಲೆಯಿಂದಲೇ ತನ್ನ ಬದುಕನ್ನ ಹೆಣೆದುಕೊಂಡಿರುವ ರೀನಾ ಬಿನೋ, ಅತಂತ್ರ ಸ್ಥಿತಿಯಲ್ಲಿರುವ ಅದೆಷ್ಟೋ ಮಹಿಳೆಯಿರಿಗೆ ಸ್ಫೂರ್ತಿ.

ಲೇಖಕರು: ಸಾಸ್ವತಿ ಮುಖರ್ಜಿ

ಅನುವಾದಕರು: ಬಿಆರ್​​ಪಿ