ಸರಕು ಸಾಗಣೆ ಮಾರುಕಟ್ಟೆಗೆ ಬೆಸ್ಟ್ ಆಯ್ಕೆ-ಮುಂದಿನ ವರ್ಷ 10 ನಗರಗಳಲ್ಲಿ ಪೋರ್ಟರ್ ಸೇವೆ

ಟೀಮ್​ ವೈ.ಎಸ್​​. ಕನ್ನಡ

0

ಸರಕು ಸಾಗಣೆ ಈಗ ಬಲು ಸುಲಭ. ಸಾಮಾನು ಸರಂಜಾಮು ಸಾಗಿಸಬೇಕಂದ್ರೆ ನೀವು ಲಗೇಜ್ ಆಟೋಗಾಗಿ ಹುಡುಕಾಡಬೇಕಿಲ್ಲ. ಪರಿಚಯಸ್ಥರಿಲ್ಲ ಎಂದಾಕ್ಷಣ ಅರೆ ಹೇಗಪ್ಪಾ ಇವನ್ನೆಲ್ಲ ಸಾಗಿಸೋದು ಅಂತಾ ಚಿಂತಿಸಬೇಕಿಲ್ಲ. ನೀವು ಮಾಡ್ಬೇಕಾಗಿರೋದು ಇಷ್ಟೆ, ಪೋರ್ಟರ್ ಅಪ್ಲಿಕೇಷನ್ ಅನ್ನು ಇನ್‍ಸ್ಟಾಲ್ ಮಾಡ್ಕೊಳ್ಳಿ. ನಿಮಗೆ ಬೇಕಾದ ಸಮಯಕ್ಕೆ ವಾಣಿಜ್ಯ ವಾಹನಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತವೆ. ಹೌದು, ಗ್ರಾಹಕರು ಹಾಗೂ ಸರಕು ಸಾಗಣೆ ವಾಹನಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ `ಪೋರ್ಟರ್'. ಈಗಾಗಲೇ ಉತ್ತಮ ಸೇವೆಯಿಂದ ಜನಪ್ರಿಯವಾಗಿರುವ ಪೋರ್ಟರ್, ತನ್ನ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಮುಂದಿನ ವರ್ಷ ಜೂನ್ ತಿಂಗಳೊಳಗೆ 10 ನಗರಗಳಲ್ಲಿ `ಪೋರ್ಟರ್' ಸೇವೆ ಲಭ್ಯವಿರುವಂತೆ ಮಾಡುವುದು ಅವರ ಗುರಿ. ಮೂವರು ಐಐಟಿ ಪದವೀಧರರು ಈ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಪ್ರಣವ್ ಗೋಯೆಲ್, ಉತ್ತಮ್ ದಿಗ್ಗಾ ಹಾಗೂ ವಿಕಾಸ್ ಚೌಧರಿ ಜೊತೆಯಾಗಿ ಆಗಸ್ಟ್ 2014ರಲ್ಲಿ `ಪೋರ್ಟರ್' ಸಂಸ್ಥೆಯನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಹೈದ್ರಾಬಾದ್‍ನಲ್ಲೂ ಪೋರ್ಟರ್ ಸೇವೆಯನ್ನು ಆರಂಭಿಸಲಾಗಿದೆ. ಸದ್ಯ ಮುಂಬೈ, ದೆಹಲಿ, ಬೆಂಗಳೂರು, ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ `ಪೋರ್ಟರ್' ಕಂಪನಿ ಅತ್ಯುತ್ತಮ ಸೇವೆಯನ್ನು ಒದಗಿಸ್ತಾ ಇದೆ.

ಹೈದ್ರಾಬಾದ್‍ನಲ್ಲಿ ಪೋರ್ಟರ್ ವೇದಿಕೆ, 200 ವಾಹನಗಳನ್ನು ಹೊಂದಿದೆ. ಪ್ರತಿನಿತ್ಯ 400 ಟ್ರಿಪ್‍ಗಳಲ್ಲಿ ಪೋರ್ಟರ್ ವಾಹನಗಳು ಸಂಚರಿಸುತ್ತಿದೆ. ಇನ್ನು ಮೂರು ತಿಂಗಳಲ್ಲಿ ಪೋರ್ಟರ್ 500 ವೆಹಿಕಲ್‍ಗಳನ್ನು ಹೊಂದಲಿದ್ದು, ಪ್ರತಿದಿನ 1500 ಟ್ರಿಪ್‍ಗಳಲ್ಲಿ ಸಂಚರಿಸಲಿದೆ. ಸದ್ಯ ಹೈದ್ರಾಬಾದ್‍ನಲ್ಲಿ `ಏಸ್' ಮತ್ತು `ಸೂಪರ್ ಏಸ್' ಕೆಟಗರಿಯ ವಾಹನಗಳು ಲಭ್ಯವಿವೆ. ಪೋರ್ಟರ್ ಸೇವೆಯ ಬಗ್ಗೆ ಸಂಸ್ಥೆಯ ಸಿಇಓ ಹಾಗೂ ಸಹ ಸಂಸ್ಥಾಪಕ ಪ್ರಣವ್ ಗೋಯೆಲ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. `ಪೋರ್ಟರ್' ತಂತ್ರಜ್ಞಾನ ಅನುದಾನಿತ ಪರಿಹಾರದ ಮೂಲಕ ಪರಿಣಾಮಕಾರಿ ಹಾಗೂ ಸಮರ್ಥ ಸೇವೆಯನ್ನು ನೀಡ್ತಾ ಇದೆ, ಜೊತೆಗೆ ತಮ್ಮೊಂದಿಗೆ ಕಾರ್ಯನಿರತರಾಗಿರುವವರಿಗೆ ಸೂಕ್ತ ಮೌಲ್ಯವನ್ನೂ ಒದಗಿಸುತ್ತಿರುವುದಾಗಿ ಪ್ರಣವ್ ಹೇಳಿದ್ದಾರೆ.

ಪೋರ್ಟರ್ ಚಾಲಕರಿಗೂ ನೆರವಾಗುತ್ತಿದೆ. ವ್ಯಾಪಕ ಗ್ರಾಹಕರನ್ನು ಒದಗಿಸುವ ಮೂಲಕ ಚಾಲಕರು ಹೆಚ್ಹೆಚ್ಚು ಸಂಪಾದಿಸಲು ಸಹಾಯ ಮಾಡುತ್ತಿದೆ. `ಪೋರ್ಟರ್' ಕಂಪನಿಯ ಹೇಳಿಕೆ ಪ್ರಕಾರ ಚಾಲಕರ ವಾಹನ ಬಳಕೆಯನ್ನು ಕೂಡ ಹೆಚ್ಚಿಸಲಾಗ್ತಿದೆ. ವಿಶ್ವಾಸಾರ್ಹ ಮತ್ತು ಪ್ರಮಾಣಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ `ಪೋರ್ಟರ್' ವ್ಯಾಪಕ ಚಾಲನಾ ತರಬೇತಿ ಆಯೋಜಿಸುತ್ತಿದೆ. ಅಷ್ಟೇ ಅಲ್ಲ ಚಾಲಕರ ಸಾಮಥ್ರ್ಯ, ದಾಖಲೆ ಪರಿಶೀಲನೆ ಹಾಗೂ ವಾಹನಗಳ ಆಡಿಟ್‍ಗೂ ಪೋರ್ಟರ್ ಮುಂದಾಗಿದೆ. ಸದ್ಯ ಭಾರತದಲ್ಲಿ ಪೋರ್ಟರ್ ಕಂಪನಿಯ 1500 ವಾಹನಗಳಿದ್ದು, ಪ್ರತಿದಿನ 3000 ಟ್ರಿಪ್‍ಗಳಲ್ಲಿ ಸಂಚರಿಸುತ್ತಿವೆ.

ಪೋರ್ಟರ್ ಸಂಸ್ಥೆಯ ಗ್ರಾಹಕ ಸಮೂಹ ಕೂಡ ದೊಡ್ಡದಾಗಿದೆ. `ಐಟಿಸಿ, `ರಿಲಯನ್ಸ್' ಮತ್ತು `ಗೋದ್ರೇಜ್'ನಂತಹ ದೊಡ್ಡ ದೊಡ್ಡ ಕಂಪನಿಗಳು ಕೂಡ ಪೋರ್ಟರ್ ಗ್ರಾಹಕರಾಗಿವೆ. ಮುಂದಿನ ವರ್ಷದ ವೇಳೆಗೆ ಒಟ್ಟೂ ಹತ್ತು ನಗರಗಳಲ್ಲಿ ಪೋರ್ಟರ್ ಸೇವೆ ಲಭ್ಯವಾಗಲಿದೆ. ಪೋರ್ಟರ್ ತನ್ನ ಗ್ರಾಹಕರಿಗಾಗಿ ಮೊಬೈಲ್ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದೆ. ಸರಕು ಸಾಗಾಣೆ ಸಂದರ್ಭದಲ್ಲಿ ವಾಣಿಜ್ಯ ವಾಹನಗಳು ಮತ್ತು ಗ್ರಾಹಕರ ನಡುವೆ ಪೋರ್ಟರ್ ಆ್ಯಪ್ ಸಂಪರ್ಕ ಕಲ್ಪಿಸುತ್ತೆ. ಹತ್ತಿರದಲ್ಲಿ ಲಭ್ಯವಿರುವ ವಾಹನಗಳ ವಿವರವನ್ನು ಗ್ರಾಹಕರು ಪೋರ್ಟರ್ ಆ್ಯಪ್‍ನಲ್ಲಿ ನೋಡಬಹುದು. ಜೊತೆಗೆ ಸರಿಯಾಗಿ ಎಷ್ಟು ಸಮಯಕ್ಕೆ ಆ ವಾಹನ ನಿಮಗೆ ಲಭ್ಯವಾಗಲಿದೆ ಎಂಬುದನ್ನು ಕೂಡ ಆ್ಯಪ್ ಮೂಲಕ ವೀಕ್ಷಿಸಬಹುದು. ಗ್ರಾಹಕರು ಟ್ರಿಪ್ ಬುಕ್ ಮಾಡಿದ ತಕ್ಷಣ, ಚಾಲಕರ ಹೆಸರು, ಮೊಬೈಲ್ ನಂಬರ್ ಎಲ್ಲವೂ ಅವರಿಗೆ ತಲುಪುತ್ತವೆ. ಹಾಗಾಗಿ ಎಷ್ಟು ಸಮಯದಲ್ಲಿ ನಿಗದಿತ ಸ್ಥಳ ತಲುಪಬಹುದು ಎಂಬೆಲ್ಲಾ ಲೆಕ್ಕಾಚಾರಗಳನ್ನು ಗ್ರಾಹಕರು ಹಾಕಿಕೊಳ್ಳಬಹುದು.

ಸರಕು ಸಾಗಣೆ ಬಗ್ಗೆ ಗ್ರಾಹಕರು ಇನ್ಮೇಲೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಎಲ್ಲೆಲ್ಲಿ ಪೋರ್ಟರ್ ಸೇವೆ ಇದೆಯೋ ಅಲ್ಲೆಲ್ಲಾ ಈಸಿಯಾಗಿ ಸಾಮಾಗ್ರಿಗಳನ್ನು ಸಾಗಿಸಬಹುದು. ಗ್ರಾಹಕರು ಪೋರ್ಟರ್ ಆ್ಯಪ್ ಇನ್‍ಸ್ಟಾಲ್ ಮಾಡಿಕೊಂಡ್ರೆ ಅಗತ್ಯ ಬಿದ್ದಾಗ ಈ ಸೇವೆಯನ್ನು ಪಡೆದುಕೊಳ್ಳಬಹುದು. ನಗರದೊಳಗಿನ ಪಿಕ್‍ಅಪ್ ಹಾಗೂ ಡೆಲಿವರಿಗೆ ಪೋರ್ಟರ್ ವಾಹನಗಳು ಹೇಳಿಮಾಡಿಸಿದಂತಿವೆ. ಭಾರತದಲ್ಲಿ ಈಗಾಗ್ಲೇ ಪೋರ್ಟರ್ ಸೇವೆ ಜನಪ್ರಿಯವಾಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಪ್ರಣವ್ ಗೋಯೆಲ್ ಹತ್ತಾರು ಯೋಜನೆಗಳನ್ನು ರೂಪಿಸಿದ್ದಾರೆ. ಅವರು ಅಂದುಕೊಂಡಿದ್ದನ್ನೆಲ್ಲ ಯಶಸ್ವಿಯಾಗಿ ಮಾಡಿ ಮುಗಿಸಿದ್ರೆ ಗ್ರಾಹಕರು ಇನ್ನಷ್ಟು ನಿರಾಳರಾಗಬಹುದು. ಸುಲಭ ಸೇವೆಯನ್ನು ಪಡೆದುಕೊಳ್ಳಬಹುದು.

ಅನುವಾದಕರು: ಭಾರತಿ ಭಟ್​​​

Related Stories

Stories by YourStory Kannada