ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

ಟೀಮ್​ ವೈ.ಎಸ್​.ಕನ್ನಡ

9

ಈಗೇನಿದ್ರೂ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಕೆಲಸ ಮುಗಿಸಿಬಿಡುವ ಕಾಲ. ಬೆವರು ಸುರಿಸುವ ಅವಶ್ಯಕತೆ ಇಲ್ಲ. ಕಷ್ಟಪಡಬೇಕು ಅನ್ನೋ ಟೆನ್ಷನ್ ಕೂಡ ಇಲ್ಲ. ಕುಳಿತಲ್ಲೇ ಯಾವುದನ್ನು ಬೇಕಾದ್ರೂ ತರಿಸಿಕೊಳ್ಳಬಹುದಾದ ಯುಗವಿದು. ಬೆಂಗಳೂರಿನಲ್ಲಂತೂ ಇ-ಕಾಮರ್ಸ್​ ಹೋಮ್ ಡೆಲಿವರಿ ಹೀಗೇ ಗ್ರಾಹಕ ಸ್ನೇಹಿ ಉದ್ಯಮಗಳಿಗಂತೂ ಕೊರತೆ ಇಲ್ಲ.

ಸಿಲಿಕಾನ್ ಸಿಟಿ ಜನಕ್ಕೆ ಎಲ್ಲವೂ ಸುಲಭದಲ್ಲಿ ಸಿಗಬೇಕು. ಈಗಾಗಲೇ ತರಕಾರಿ, ದಿನಸಿ ಐಟಮ್​ಗಳು ಮನೆ ಬಾಗಿಲಿಗೆ ಬರುತ್ತಿವೆ. ಆದ್ರೆ ಈಗ ಪೂಜಾ ಐಟಮ್​ಗಳು ಕೂಡ ಕುಳಿತಲ್ಲಿಗೇ ಬರುತ್ತಿದೆ. ಅದಕ್ಕೆಲ್ಲಾ ಕಾರಣವಾಗಿದ್ದು ರೆಡಿಪೂಜಾ.ಕಾಂ (readypooja.com). ಬೆಂಗಳೂರಿನ ಜನರಿಗೆ ದೇವರು ಹಾಗೂ ಪೂಜೆಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ. ಆದ್ರೆ ಪೂಜಾ ಸಾಮಾಗ್ರಿಗಳನ್ನು ಕೊಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅಷ್ಟೇ ಅಲ್ಲ ಎಲ್ಲಾ ಪೂಜಾ ಐಟಂಗಳು ಒಂದೇ ಕಡೆ ಸಿಗುವುದಿಲ್ಲ. ಆದ್ರೆ ರೆಡಿಪೂಜಾ.ಕಾಂ ಎಲ್ಲವನ್ನೂ ನಿಮ ಮನೆ ಬಾಗಿಲಿಗೆ ತಂದುಕೊಡಲಿದೆ.

ರೆಡಿಪೂಜಾ.ಕಾಂ ಸ್ಪೆಷಾಲಿಟಿ ಏನು..?

ರೆಡಿಪೂಜಾ.ಕಾಂ ಬೆಂಗಳೂರಿನ ಮೂವರು ಯುವಕರು ಸೇರಿಕೊಂಡು ಹುಟ್ಟುಹಾಕಿದ ಇ-ಕಾಮರ್ಸ್ ಪೋರ್ಟಲ್. ಪೂಜಾ ಐಟಂಗಳ ಎಕ್ಸ್​ಕ್ಲೂಸಿವ್ ಪೋರ್ಟಲ್ ಕೂಡ ಇದಾಗಿದೆ. ಎಂಜಿನಿಯರ್​ಗಳಾಗಿರುವ ಶ್ರೀಕಾಂತ್ ಕಟ್ಟೆ , ಕಾರ್ತಿಕ್ ರಾಮನ್ ಮತ್ತು ಅಜಿತ್ ಭಾರಾಧ್ಜಾಜ್ ಸೇರಿಕೊಂಡು ಹುಟ್ಟುಹಾಕಿದ ಉದ್ಯಮ ಇದು. ಗಣೇಶ ಹಬ್ಬದ ವೇಳೆಯಲ್ಲಿ ಇದಕ್ಕೆ ಚಾಲನೆ ಸಿಕ್ತು. ಹಲವು ವರ್ಷಗಳ ಕಾಲ ಐಟಿ ಉದ್ಯಮದಲ್ಲಿದ್ದ ಯುವಕರು, ಹೊಸದಾಗಿ ಏನನ್ನಾದರೂ ಮಾಡಬೇಕು ಅನ್ನುವ ಯೋಚನೆಯಲ್ಲಿದ್ದಾಗ ಹುಟ್ಟಿಕೊಂಡ ಐಡಿಯಾವೇ ರೆಡಿಪೂಜಾ.ಕಾಂ.

“ರೆಡಿಪೂಜಾ.ಕಾಂ ಹಲವು ವಿಭಿನ್ನತೆಗಳಿಂದ ಕೂಡಿದೆ. ಬೆಂಗಳೂರಿನ ಜನ ಪೂಜಾ ಐಟಂಗಳ ಖರೀದಿಗೆ ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ರೂ ಸಮಯಕ್ಕೆ ಸರಿಯಾಗಿ ಪೂಜಾ ಐಟಂಗಳು ಸಿಗದೇ ಪರದಾಡುತ್ತಿದ್ದಾರೆ. ಇಂತಹ ಕಷ್ಟಗಳನ್ನು ದೂರ ಮಾಡಬೇಕು ಅನ್ನೊದೇ ನಮ್ಮ ಕನಸು. ಸುಲಭವಾಗಿ ಪೂಜಾ ಸಾಮಾಗ್ರಿಗಳನ್ನು ಮನೆಗೆ ತಲುಪಿಸುವುದು ನಮ್ಮ ಮೊದಲ ಆದ್ಯತೆ. ಗ್ರಾಹಕರ ತೃಪ್ತಿಯೇ ನಮಗೆ ಅತೀ ಮುಖ್ಯ. ಅದಕ್ಕೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ.”
- ಶ್ರೀಕಾಂತ್ ಕಟ್ಟೆ, ರೆಡಿಪೂಜಾ.ಕಾಂ ಪಾರ್ಟ್​ನರ್

ಗಣೇಶ ಹಬ್ಬವೇ ಇವರ ಮೊದಲ ಪ್ರಯತ್ನ

ರೆಡಿಪೂಜಾ.ಕಾಂ ಮೊದಲ ಅಸೈನ್​ಮೆಂಟ್​ನಲ್ಲೇ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ಉದ್ಯಮ ಆರಂಭವಾದ್ರೂ, ಗಣೇಶ ಹಬ್ಬ ಮುಗಿಯುವ ಹೊತ್ತಿಗೆ ರೆಡಿಪೂಜಾ.ಕಾಂ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಅಂದಹಾಗೇ, ಲಾಭದ ಆಸೆಗೆ ಬಿದ್ದು ರೆಡಿಪೂಜಾ.ಕಾಂ ಪರಿಸರಕ್ಕೆ ಹಾನಿಯಾಗುವ ಗಣೇಶ ಮೂರ್ತಿಗಳನ್ನು ತಯಾರು ಮಾಡಲಿಲ್ಲ. ಬದಲಾಗಿ ಇಕೋ ಫ್ರೆಂಡ್ಲಿ ಗಣೇಶನನ್ನು ನಿರ್ಮಿಸಿ ಗಮನ ಸೆಳೆಯಿತು. ದರಗಳ ಮಟ್ಟಿಗೂ ರೆಡಿಪೂಜಾ.ಕಾಂ ಇತರೆ ಕಡೆಗಳಿಗೆ ಹೋಲಿಸಿದ್ರೆ ದುಬಾರಿ ಆಗಿ ಕಂಡುಬರಲಿಲ್ಲ.

ಡಿಫರೆಂಟ್ ಗಣೇಶನೇ ಸ್ಪೆಷಾಲಿಟಿ..!

“ ಗಣೇಶ ಆಂದ್ರೆ ಗ್ರಾಂಡ್ ಫೆಸ್ಟಿವಲ್. ಹೀಗಾಗಿ ಗಣೇಶ ಮೂರ್ತಿಯೂ ಸ್ಪೆಷಲ್ ಆಗಿ ಇರಬೇಕು. ಆದ್ರೆ ಪರಿಸರಕ್ಕೆ ಯಾವುದೇ ಹಾನಿ ಆಗಬಾರದು ಅನ್ನೋ ಯೋಚನೆ ನಮ್ಮಲ್ಲಿತ್ತು. ಅದನ್ನು ಕಾರ್ಯರೂಪಕ್ಕೆ ಕೂಡ ತಂದಿದ್ದೇವೆ. ಗಣೇಶನಿಗೆ ವಿಭಿನ್ನ ಕಾನ್ಸೆಪ್ಟ್​ಗಳ ಮೂಲಕ ಅಲಂಕಾರ ಮಾಡಿ, ರೆಡಿಪೂಜಾ.ಕಾಂ ಸ್ಪೆಷಲ್ ಸೆಲೆಬ್ರೆಷನ್​ಗೆ ವ್ಯವಸ್ಥೆ ಮಾಡಿಕೊಟ್ಟಿತು ಅನ್ನೋ ಹೆಮ್ಮೆ ನಮ್ಮಲ್ಲಿದೆ. ”
- ಶ್ರೀಕಾಂತ್ ಕಟ್ಟೆ, ರೆಡಿಪೂಜಾ.ಕಾಂ ಪಾರ್ಟ್​ನರ್

ಜೇಡಿ ಮಣ್ಣಿನ ಗಣೇಶನ ಮೂರ್ತಿ ಮಾಡಿದ್ರೂ ಗಣಪತಿ ಮೂರ್ತಿಗಳು ಗಮನ ಸೆಳೆದಿದ್ದು ವಿಭಿನ್ನ ಅಲಂಕಾರಗಳ ಮೂಲಕ. ಅದ್ರಲ್ಲೂ ಗಣಪತಿಗೆ ಧೋತಿ ಉಡಿಸಿ ಅಲಂಕಾರ ಮಾಡಿದ್ದು ಹಲವು ಗ್ರಾಹಕರ ಮನ ಸೆಳೆದಿತ್ತು. ಅಷ್ಟೇ ಅಲ್ಲದೆ ಪುಟಾಣಿ ಕಡಲೆಕಾಳುಗಳನ್ನು ಬಳಸಿಕೊಂಡು ಗಣೇಶನ ಮೂರ್ತಿ ತರಿಸಿದ್ದು ಕೂಡ ಸಾಕಷ್ಟು ಗಮನ ಸೆಳೆದಿತ್ತು. ಪರಿಸ್ನೇಹಿ ಗಣೇಶನನ್ನು ನಿರ್ಮಿಸುವ ಉದ್ದೇಶ ಇದ್ದುದರಿಂದ ಗಂಗಳನ್ನು ಕೂಡ ಮೈದಾ ಮತ್ತು ಇತರ ಎಡಿಬಲ್ ಐಟಂಗಳ ಮೂಲಕ ಮಾಡಲಾಗಿತ್ತು ಅನ್ನೋದು ಗಮನಾರ್ಹ.

ಪಿಕ್ಅಪ್ ಲೊಕೇಷನ್ ಕಾನ್ಸೆಪ್ಟ್ ವಿಭಿನ್ನ

ರೆಡಿಪೂಜಾ.ಕಾಂ ತಮ್ಮಲ್ಲಿ ಖರೀದಿ ಮಾಡಿದ ಐಟಂಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕೂಡ ಹೊಂದಿದೆ. ಆದ್ರೆ ಈ ವ್ಯವಸ್ಥೆ ಉಳಿದೆಲ್ಲಾ ಇ-ಕಾಮರ್ಸ್ ಮಾದರಿಗಳಿಗಿಂತ ವಿಭಿನ್ನ. ಬೆಂಗಳೂರಿನ 17 ಕಡೆ ಪಿಕಪ್ ಲೊಕೇಷನ್ ಗುರುತು ಮಾಡಿಕೊಂಡು ಅಲ್ಲಿಂದ ಡೆಲಿವರಿ ವ್ಯವಸ್ಥೆ ಮಾಡಲಾಗಿತ್ತು. ಇದು ಗ್ರಾಹಕರಿಗೆ ಆನ್​ಟೈಮ್​ನಲ್ಲಿ ಡೆಲಿವರಿ ಸಿಗುವಂತೆ ಮಾಡುವಲ್ಲಿ ದೊಡ್ಡ ಪಾತ್ರವಹಿಸಿತ್ತು. ಅಷ್ಟಕ್ಕೂ ಇದಕ್ಕೇನು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಯಾಕಂದ್ರೆ ಫ್ರೆಂಡ್ಸ್ ಸರ್ಕಲ್ ಮೂಲಕ ಈ ಕೆಲಸವನ್ನು ಸುಲಭವಾಗಿ ನಿರ್ವಹಸಿದ್ರು. ಕೆಲವೊಂದು ಕಡೆಗಳಲ್ಲಿ ರೆಸಿಡೆಂಟ್ ಅಸೋಸಿಯೇಶನ್​ಗಳ ಮೂಲಕ ರೆಡಿಪೂಜಾ.ಕಾಂ ಸ್ಪೆಷಲ್ ಸ್ಟಾಲ್ ಹಾಕಿಕೊಂಡು ಮಾರಾಟ ಹೆಚ್ಚಿಸಿಕೊಂಡಿತ್ತು.

ದಸರಾ ಬಗ್ಗೆ ಸ್ಪೆಷಲ್ ಪ್ಲಾನ್

ಈಗಷ್ಟೇ ರೆಡಿಪೂಜಾ.ಕಾಂ ಉದ್ಯಮಕ್ಕೆ ಕಾಲಿಟ್ರೂ, ಲಾಂಗ್​ಟರ್ಮ್ ಪ್ಲಾನ್​ಗಳನ್ನು ಮಾಡಿದೆ. ಗಣೇಶ ಹಬ್ಬ ಮುಗಿಯುತ್ತಾ ಇದ್ದಂತೆ, ಮುಂದೆ ಬರುವ ದಸಾರಾ ಹಬ್ಬಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅಂದಹಾಗೇ, ಪೂಜೆ ಅನ್ನೋದು ಭಕ್ತಿಯ ವಿಷಯವಾಗಿದೆ. ಅದಕ್ಕೊಂದು ವ್ಯಾಲ್ಯೂ ಕೂಡ ಇದೆ. ಹೀಗಾಗಿ ಈ ವ್ಯಾಲ್ಯೂ ಅನ್ನು ಕೂಡ ಮೀರಬಾರದು ಅನ್ನೋದು ಕೂಡ ರೆಡಿಪೂಜಾ.ಕಾಂಗಿದೆ. ದಸರಾ ಹಬ್ಬಕ್ಕಾಗಿ ಹೊಸಹೊಸ ಗೊಂಬೆಗಳನ್ನು ಮಾಡುವ ಪ್ಲಾನ್ ಮಾಡಿಕೊಂಡಿದೆ. ಆದ್ರೆ ಅದು ಯಾವುದೇ ಕಾರಣಕ್ಕೂ ನೀತಿ ನಿಯಮಗಳನ್ನು ಮೀರುವ ಮಾತಿಲ್ಲ ಅಂತ ಭರವಸೆ ನೀಡ್ತಿದೆ ರೆಡಿಪೂಜಾ.ಕಾಂ.

ರೆಡಿಪೂಜಾ.ಕಾಂ ಈಗಷ್ಟೇ ಆರಂಭವಾಗಿದ್ರೂ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದೆ. ಬೆಂಗಳೂರಿನಲ್ಲಿ ಈಗಷ್ಟೇ ಮನೆಮಾತಾಗುತ್ತಿರುವ ರೆಡಿಪೂಜಾ.ಕಾಂ ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಚೆನ್ನೈಗಳಿಗೆ ಉದ್ಯಮವನ್ನು ವಿಸ್ತರಿಸುವ ಬಗ್ಗೆ ಪ್ಲಾನ್ ಮಾಡಿಕೊಂಡಿದೆ.

ಇದನ್ನು ಓದಿ:

1. ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

2. ಬ್ಯಾಂಡ್ ಲೋಕದಲ್ಲಿ ವಿಶಿಷ್ಟ“ಧ್ರುವ”ತಾರೆ

3. ಸಹೋದ್ಯೋಗಿಗಳ ಜೊತೆ ಡೇಟಿಂಗಾ? ಹುಷಾರು ಕಣ್ರೀ...Related Stories