ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!

ಟೀಮ್​ ವೈ.ಎಸ್​. ಕನ್ನಡ

1

ಇವತ್ತಿನ ಜಮಾನದಲ್ಲಿ ಕಾರು ಖರೀದಿ ಮಾಡುವುದು ದೊಡ್ಡ ವಿಷಯವೇ ಅಲ್ಲ. ಕಾರಿನ ಆಯ್ಕೆಯಿಂದ ಹಿಡಿದು, ಫೈನಾನ್ಸ್ ತನಕ ಎಲ್ಲವೂ ಕೂಡ ನೀವು ಕುಳಿತುಕೊಂಡಲ್ಲೇ ನಡೆದು ಬಿಡುತ್ತದೆ. ಆದ್ರೆ ಮಹಾನಗರಗಳಲ್ಲಿ ಕಾರು ಕೊಂಡುಕೊಳ್ಳುವುದು ದೊಡ್ಡ ಪ್ರಶ್ನೆಯಲ್ಲ. ಆದ್ರೆ ಅದ್ರ ಸೇಫ್ಟಿ ಮತ್ತು ಪಾರ್ಕಿಂಗ್​ನದ್ದೇ ದೊಡ್ಡ ತಲೆ ನೋವು. ಮನೆ ಎಲ್ಲೋ, ಕಾರು ಇನ್ನೆಲ್ಲೋ ನಿಂತಿರುತ್ತದೆ. ಆದ್ರೆ ಇನ್ನು ಮುಂದೆ ಎಲ್ಲೋ ನಿಂತಿರುವ ಕಾರಿನ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ನಿಮ್ಮ ಕಾರು ಎಲ್ಲಿದೆಯೋ ಅಲ್ಲಿಂದಲೇ ಟ್ರ್ಯಾಕ್ ಆಗುತ್ತದೆ. ರಾಂಗ್ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ಟೋ ಮಾಡಿದಾಗ, ಕಾರು ಕಳವಾದಾಗ, ಕಾರು ಕೆಟ್ಟು ನಿಂತಾಗ ಹೀಗೆ ಎಲ್ಲಿಂದ ಬೇಕಾದ್ರೂ ಕಾರಿನ ಬಗ್ಗೆ ಅಪ್​ಡೇಟ್ ಪಡೆದುಕೊಳ್ಳಬಹುದು. ಐಐಟಿಯ ನಾಲ್ವರು ಕಾರಿನ ರಿಯಲ್ ಟೈಮ್ ಅಪ್​ಡೇಟ್ ಪಡೆದುಕೊಳ್ಳಲೆಂದೇ ಹೊಸ ಡಿಸೈಸ್ ಒಂದರ ಆವಿಷ್ಕಾರ ಮಾಡಿದ್ದಾರೆ. ಚಿಕ್ಕದೊಂದು ಪ್ಲಗ್ ಅಂಡ್ ಪ್ಲೇ ಡಿವೈಸ್ ಮೂಲಕ ಸ್ಮಾರ್ಟ್ ಫೋನ್​ನಲ್ಲೇ ಕಾರಿನ ಬಗ್ಗೆ ನೀವು ಲೈವ್ ಟ್ರ್ಯಾಕ್ ಮಾಡಬಹುದು.

ಆವಿಷ್ಕಾರದ ರೂವಾರಿಗಳು ಇವರು..!

ಮುಂಬೈನ ಪುಷ್ಕರ್ ಲಿಮಯೆ, ಪ್ರಥಮೇಶ್ ಜೋಶಿ, ಉರ್ಮಿಲ್ ಷಾ ಮತ್ತು ನಾಸಿಕ್​ನ ರೋಹನ್ ವಡ್ಗಾಂವ್ಕರ್ ಐಐಟಿ ಬಾಂಬೆಯಿಂದ ಎಂಜಿನಿಯನಿರಿಂಗ್ ಪದವಿ ಪಡೆದವರು. ಆರಂಭದಲ್ಲಿ ಇವರು ಎಂಎನ್​ಸಿ ಕಂಪನಿಗಳಾದ ಬ್ರೈನ್& ಕಂಪನಿ, ಪಿ&ಜಿ ಮತ್ತು ಶ್ಲುಂಬರ್ಗ್​ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದ್ರೆ ತಾವೇ ಏನಾದ್ರೂ ಮಾಡಬೇಕು ಅನ್ನುವುದು ಈ ಯುವಕರ ಮೊದಲ ಕನಸಾಗಿತ್ತು.

“ ಕೆಲಸಕ್ಕೆ ರಾಜಿನಾಮೆ ನೀಡುವುದು ಮತ್ತು ನಮ್ಮದೇ ಕಂಪನಿ ಆರಂಭಿಸುವುದು ನಮಗೆ ಸುಲಭವಾಗಿತ್ತು. ಆದ್ರೆ ನಮ್ಮ ಪೋಷಕರಿಗೆ ಈ ಬಗ್ಗೆ ತಿಳಿ ಹೇಳುವುದೇ ನಮಗೆ ಸವಾಲಾಗಿತ್ತು. ನನ್ನ ತಂದೆಗೆ ನಾನು ಹೊಸತನ್ನು ಆರಂಭಿಸುವ ಬಗ್ಗೆ ಅರ್ಥ ಮಾಡಿಸುವುದೇ ಅತೀ ದೊಡ್ಡ ಕೆಲಸವಾಗಿತ್ತು. ”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​​  ಸಹ ಸಂಸ್ಥಾಪಕ

ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 2015ರ ಆಗಸ್ಟ್​​ನಲ್ಲಿ ಆರಂಭವಾಗಿತ್ತು. ಕಂಪನಿಯ ಸಂಸ್ಥಾಪಕರಾದ ನಾಲ್ವರು ಐಐಟಿ ಬಾಂಬೆಯ ರೇಸಿಂಗ್ ಟೀಮ್ ನಲ್ಲಿದ್ದರು. ಪಿಟ್​ಸ್ಟಾಪ್​​ನಲ್ಲೇ ಅವರು ಕಾರಿಗೆ ಫಿಟ್ ಮಾಡಿದ್ದ ಡಿವೈಸ್ ಮೂಲಕ ರೇಸಿಂಗ್ ಕಾರ್​ನ ಫರ್ಫಾಮೆನ್ಸ್ ಅನ್ನು ಮಾನಿಟರ್ ಮಾಡುತ್ತಿದ್ದರು. ಇದೇ ಕೆಲಸದಲ್ಲಿದ್ದಾಗ ಜನ ಸಾಮಾನ್ಯರ ಕಾರಿನಲ್ಲಿ ಈ ವ್ಯವಸ್ಥೆ ಯಾಕಿಲ್ಲ ಅನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಭಾರತೀಯ ಕುಟುಂಬದಲ್ಲಿ ಕಾರಿಗೆ ಅದರದ್ದೇ ಆದ ಸ್ಥಾನವಿದೆ. ಆದ್ರೆ ಅವರ ಕಾರಿನ ಬಗ್ಗೆ ಮಾನಿಟರ್ ಮಾಡುವ ಅಥವಾ ಅದನ್ನು ಟ್ರ್ಯಾಕ್ ಮಾಡುವ ತಂತ್ರಜ್ಞಾನವಿಲ್ಲ. ಹೀಗಾಗಿ ಅವರ ಯೋಚನೆ ಅದರ ಬಗ್ಗೆಯೇ ಹೆಚ್ಚಾಗಿತ್ತು.

ಈ ಯೋಜನೆಯಂತೆ 2015ರ ಮೇ ತಿಂಗಳಲ್ಲಿ ಐಐಟಿಯ ಹೊರಭಾಗದ ಕ್ಯಾಂಪಸ್​ನಲ್ಲಿ ಮೊದಲ ಪೈಲಟ್ ಪ್ರಾಜೆಕ್ಟ್ ಪರೀಕ್ಷೆ ನಡೆಸಿದ್ದರು. ಆದ್ರೆ ಕೈಯಿಂದಲೇ ಸೋಲ್ಡರಿಂಗ್ ಆಗಿದ್ದ ಕಾರ್ನೊಟ್ ಡಿವೈಸ್ ಹೆಚ್ಚು ಪರಿಣಾಮಕಾರಿ ಆಗಿರಲಿಲ್ಲ. ಮಳೆ ಬಂದಾಗ ಅಥವಾ ಹೆಚ್ಚು ಹ್ಯೂಮಿಡಿಟಿ ಇದ್ದಾಗ ಡಿವೈಸ್​​ನ ಕಾರ್ಯಕ್ಷಮತೆ ಚೆನ್ನಾಗಿರಲಿಲ್ಲ.

ಇದನ್ನು ಓದಿ: ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!

ಸಮಸ್ಯೆಗೆ ಪರಿಹಾರ

ಕಾರ್ನೊಟ್ ಅನ್ನುವುದು ಚಿಕ್ಕದೊಂದು ಡಿವೈಸ್. ಇದನ್ನು ಕಾರಿನ ಆನ್ ಬೋರ್ಡ್ ಡಯಾಗ್ನಸ್ಟಿಕ್ಸ್​​ನಲ್ಲಿ ಫಿಕ್ಸ್ (OBD) ಮಾಡಲಾಗುತ್ತದೆ. 2008ರಿಂದ ಪ್ರತಿಯೊಂದು ಕಾರಿನಲ್ಲೂ OBD ಫೀಚರ್ ಮಾಮೂಲಿ ಆಗಿದೆ. ಆದ್ರೆ ಇದರ ಬಗ್ಗೆ ಯಾರಿಗೂ ಹೆಚ್ಚು ಅರಿವು ಇಲ್ಲ. ಆದ್ರೆ ಇದೇ OBD ಪೋರ್ಟ್​ಗೆ  ಕಾರ್ನೊಟ್ ಡಿವೈಸ್ ಅಳವಡಿಸಿದ್ರೆ ಅಲ್ಲಿಂದ ಸೆನ್ಸಾರ್​ಗಳ ಮೂಲಕ ಸಿಗ್ನಲ್​ಗಳು ರವಾನೆ ಆಗುತ್ತದೆ. ಆ ಸಿಗ್ನಲ್​ಗಳು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ನಿಮಗೆ ಕಾರಿನ ಸ್ಥಿತಿಗಳನ್ನು ಟ್ರ್ಯಾಕ್ ಮಾಡಲು ನೆರವು ನೀಡುತ್ತದೆ. ಈ ಡಿವೈಸ್​​ನಲ್ಲಿ 2ಜಿ ಸಿಮ್ ಅಳವಡಿಸಿರುವುದರಿಂದ ಅದು ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಸಿಗ್ನಲ್​​ಗಳನ್ನು ರವಾನೆ ಮಾಡುತ್ತಿರುತ್ತದೆ. ಈ ಮೂಲಕ ನಿಮ್ಮ ಕಾರಿನ ಟ್ರ್ಯಾಕಿಂಗ್ ತುಂಬಾ ಸುಲಭವಾಗುತ್ತದೆ.

ಈ ಕಾರ್ನೊಟ್ ಡಿವೈಸ್ ನಿಮ್ಮ ಕಾರಿನಲ್ಲಿರುವ ಎಂಜಿನ್ ಸಮಸ್ಯೆ ಮತ್ತು ಬ್ಯಾಟರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಪತ್ತೆ ಹಚ್ಚುತ್ತದೆ. ಅಷ್ಟೇ ಅಲ್ಲ ಭಾರತದಾದ್ಯಂತ ರೋಡ್ ಸೈಡ್ ಅಸಿಸ್ಟಂಟ್ ಪಡೆಯಲು ಕೂಡ ಇದು ಸಹಾಯ ನೀಡಬಲ್ಲದು. ನಿಮ್ಮೆಲ್ಲಾ ಟ್ರಿಪ್​​ನ ಮೈಲೇಜ್​ಗಳನ್ನ ಕೂಡ ಕಾರ್ನೊಟ್ ಮೂಲಕ ಟ್ರ್ಯಾಕ್ ಮಾಡಬಹುದು. ಈ ಎಲ್ಲಾ ವ್ಯವಸ್ಥೆಗಳ ಜೊತೆಗೆ ಕಾರಿನ ಇನ್ಶೂರೆನ್ಸ್ ಬಗ್ಗೆ ಕೂಡ ಅಪ್ಡೇಟ್​​ಗಳನ್ನು ಪಡೆದುಕೊಳ್ಳಬಹುದು. ಕಾರ್ನೊಟ್ ಡಿವೈಸ್​​ನಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಶ್ರಮ ಮತ್ತು ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗಿದೆ.

ಯಾಂತ್ರೀಕೃತ ತಯಾರಿಕೆಯ ಮೊದಲ ಕಾರ್ನೊಟ್ ಡಿವೈಸ್ 5 ತಿಂಗಳ ಬಳಿಕ ತಯಾರಾಯಿತು. ಇದಾದ ಮೇಲೆ ರೋಹನ್ ಮತ್ತು ಗೆಳೆಯರು ಲಿಂಕ್ಡ್ ಇನ್ ಮೂಲಕ ಎಲ್ಲಾ ಇನ್ಶೂರೆನ್ಸ್ ಕಂಪನಿಯ ಸಿಇಒಗಳಿಗೆ ಪತ್ರ ಬರೆದು ತಮ್ಮ ಅನ್ವೇಷಣೆಯ ಬಗ್ಗೆ ತಿಳಿಸಿದ್ರು. ಈ ಪೈಕಿ ಕೆಲವರು ಪೈಲಟ್ ಪ್ರಾಜೆಕ್ಟ್​ನ ಪ್ರಯೋಗಕ್ಕೆ ಮುಂದಾದರು. ಈ ಮಧ್ಯೆ 2015ರ ನವೆಂಬರ್​​ನಲ್ಲಿ ಫ್ರೀ ಚಾರ್ಜ್​ನ  ಕಮಲ್ ಷಾ ಮತ್ತು ಸಂದೀಪ್ ಟಂಡನ್ ಮೂಲಕ ಸೀಡ್ ಪಂಡಿಂಗ್ ಅನ್ನು ಕೂಡ ಪಡೆದುಕೊಂಡರು. ಕಂಪನಿಯ ಕನಸುಗಳು ಗಟ್ಟಿಯಾಗಿ ನನಸಾಗುವ ಸಮಯ ಹತ್ತಿರ ಬಂದಿತ್ತು.

ಈ ಮಧ್ಯೆ ಕಾರ್ ಡೀಲರ್​ಶಿಪ್ ಒಂದರ ಮೂಲಕ ಕಾರ್ನೊಟ್ ಡಿವೈಸ್​​ನ  ಬಗ್ಗೆ ಗ್ರಾಹಕರ ಅಭಿಪ್ರಾಯ ಏನಿರುತ್ತೆ ಮತ್ತು ಅದರ ಬಗ್ಗೆ ಗ್ರಾಹಕರು ಏನು ಹೇಳುತ್ತಾರೆ ಅನ್ನುವುದನ್ನು ಕಲಿತುಕೊಂಡರು. ಹೀಗಾಗಿ ಡೀಲರ್​ಗಳ ಮೂಲಕ ತಮ್ಮ ಪ್ರಾಡಕ್ಟ್​​ನ ಮಾರ್ಕೆಟಿಂಗ್​ನ ಮೊದಲ ಹೆಜ್ಜೆ ಇರಿಸಿದ್ರು. ಈ ಡಿವೈಸ್​ನ  ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕಾರ್ನೊಟ್ ಮೂಲಕ, ಇನ್ಶೂರೆನ್ಸ್ ರಿನಿವಲ್, ಸರ್ವೀಸ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಕೂಡ ಈ ಡಿವೈಸ್ ಮೂಲಕವೇ ಹ್ಯಾಂಡಲ್ ಮಾಡುವಂತೆ ಮಾಡುವ ಗುರಿಯನ್ನು ಕಾರ್ನೊಟ್ ಕಂಪನಿ ಇಟ್ಟುಕೊಂಡಿದೆ.

ಹೊಸತರ ಆರಂಭ

ಫಂಡಿಂಗ್ ಸಿಕ್ಕಮೇಲೆ ತಂಡದೊಂದಿಗೆ ಡಿವೈಸ್​​ನ  ಅಪ್​ಗ್ರೇಡ್ ಮಾಡಿ ಹೊಸ ಡಿವೈಸ್ ಡಿಸೈನ್ ಮಾಡಿ ಗ್ರಾಹಕರ ಗಮನ ಸೆಳೆಯುವ ಕೆಲಸ ಮಾಡಿದ್ರು. ಆದ್ರೆ ನಾನ್ ಸ್ಟಾಂಡರ್ಡ್ OBD ಪೋರ್ಟ್​ನಿಂದಾಗಿ ಮತ್ತೆ ಸಮಸ್ಯೆ ಎದುರಿಸಿದ್ರು. ಆದ್ರೆ ಹಠ ಬಿಡದ ಕಂಪನಿ ಕಾರ್​​ನಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬಲ್ಲ ಡಿವೈಸ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ರು.

“ ನಾವು ತಯಾರಿಸಿದ ಮಾಸ್ ಮ್ಯಾನ್ಯುಫಾಕ್ಚರಿಂಗ್ ಡಿವೈಸ್ ಬೇಟಾ ಟೆಸ್ಟ್​​ನಲ್ಲಿ ವೈಫಲ್ಯ ಅನುಭವಿಸಿತು. ಆ ಪರೀಕ್ಷೆಯಲ್ಲಿ ಎಲ್ಲವೂ ಕೈ ಕೊಟ್ಟಿತ್ತು. ಆದ್ರೆ ಪರೀಕ್ಷೆಯ ಪ್ರತಿಯೊಂದು ಹಂತವೂ ನಮಗೆ ಹೊಸ ಪಾಠ ಕಲಿಸಿತ್ತು.”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​  ಸಹ ಸಂಸ್ಥಾಪಕ

ತಪ್ಪುಗಳಿಂದ ಕಲಿತ ಪಾಠದಿಂದ 2016ರ ಜುಲೈನಲ್ಲಿ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಂಡು ಹೊಸ ಡಿವೈಸ್ ತಯಾರಿಸಿದ್ರು. 2016ರ ನವೆಂಬರ್ ವೇಳೆಯಲ್ಲಿ ಸರಿಯಾಗಿ ಕೆಲಸ ಮಾಡಬಲ್ಲ ಮತ್ತು ಪಕ್ಕಾ ಮಾಹಿತಿ ನೀಡಬಲ್ಲ ಕಾರ್ನೊಟ್ ಡಿವೈಸ್ ತಯಾರಿಸಿದ್ರು. ಅಷ್ಟೇ ಅಲ್ಲ ಹಳೆಯ ಡಿವೈಸ್​​ನಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದರು.

ಕಾರ್ನೊಟ್ ಬಳಸಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ರು. ಒಬ್ಬರು ಗ್ರಾಹಕರಂತೂ ತನ್ನ ತಂದೆ ಎಲ್ಲಿ ಹೋದ್ರೂ ಅಲರ್ಟ್​ಗಳು ಬರುತ್ತಿವೆ. ಹೀಗಾಗಿ ನಾನೂ ನನ್ನ ತಂದೆ ಎಲ್ಲೇ ಹೊರಗಡೆ ಕಾರು ತೆಗೆದುಕೊಂಡು ಹೋದ್ರೂ ಅವರಿಗೆ ಪದೇ ಪದೇ ಫೋನ್ ಮಾಡುವುದನ್ನು ಬಿಟ್ಟಿದ್ದೇನೆ. ಅಷ್ಟೇ ಅಲ್ಲ ಕಾರಿನ ಬಗ್ಗೆ ಎಲ್ಲಾ ರೆಕಾರ್ಡ್​ಗಳು ಕೂಡ ಸಿಗುತ್ತಿವೆ ಅನ್ನುವ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಡ್ರೈವರ್​ಗಳು ಕಾರನ್ನು ಮಿಸ್ ಯೂಸ್ ಮಾಡಿಕೊಳ್ಳುವುದು ಕೂಡ ನಿಂತಿದೆ. ಈ ನಡುವೆ ಕಂಪನಿ ಭಾರತದ ಅತಿ ದೊಡ್ಡ ಮೊಟಾರ್ ಇನ್ಶೂರೆನ್ಸ್ ಕಂಪನಿ ಮೂಲಕ ತಮ್ಮ ಡಿವೈಸ್​​ನ  ಉಪಯೋಗ ಮತ್ತು ಅದರ ಲಾಭದ ಬಗ್ಗೆ ಗ್ರಾಹಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎರಡೇ ಎರಡು ತಿಂಗಳ ಹಿಂದೆ ಈ ಡಿವೈಸ್ ಸರಿಯಾಗಿ ಕೆಲಸ ಆರಂಭಿಸಿದ್ದರೂ ಸುಮಾರು 1500ಕ್ಕಿಂತಲೂ ಹೆಚ್ಚಿನ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

“ ನಮ್ಮ ಸದ್ಯದ ಸಮಸ್ಯೆ ಅಂದ್ರೆ ಕಾರ್ನೊಟ್​​ಗೆ ಬೇಡಿಕೆ ಹೆಚ್ಚಾಗಿದೆ, ಆದ್ರೆ ಅದ್ರ ದಾಸ್ತಾನು ಕಡಿಮೆ ಇದೆ. ನಾವು ಫುಲ್ ಲಾಂಚ್ ಆಗುವ ಮೊದಲು ಹೆಚ್ಚು ಡಿವೈಸ್​​ಗಳನ್ನು ಸಜ್ಜುಗೊಳಿಸಬೇಕು. ನಾವು ಈಗಾಗಲೇ 1ಲಕ್ಷ ಡಾಲರ್ ಆದಾಯದ ಹತ್ತಿರದಲ್ಲಿದ್ದೇವೆ. ಯೂನಿಟ್ ಬೇಸಿಸ್​​ನಲ್ಲೂ ನಾವು ಲಾಭಗಳಿಸುತ್ತಿದ್ದೇವೆ.”
- ರೋಹನ್, ಸಿಇಒ ಮತ್ತು ಕಾರ್ನೊಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​​ನ  ಸಹ ಸಂಸ್ಥಾಪಕ

ಕಾರ್ನೊಟ್ ಆನ್​ಲೈನ್ ಮೂಲಕ ಬೇಡಿಕೆ ಹೆಚ್ಚಿಕೊಂಡಿದೆ. ರಿಟೈಲ್ ಪ್ರೈಸ್​ಗಿಂತ ಶೇಕಡಾ 10ರಷ್ಟು ಬೆಲೆ ಆನ್​ಲೈನ್​ನಲ್ಲಿ ಹೆಚ್ಚಿದ್ದರೂ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಡಿವೈಸ್​​ ಅನ್ನು ದ್ವಿಚಕ್ರವಾಹನಗಳಿಗೆ ಫಿಕ್ಸ್ ಮಾಡುವಂತೆ ಬೇಡಿಕೆ ಬಂದಿದೆ. ಆದ್ರೆ ಭಾರತದ ಬೈಕ್​ಗಳಲ್ಲಿ ಯಾವುದೇ ಸೆನ್ಸಾರ್​ಗಳಾಗಲಿ ಅಥವಾ OBD ಪೋರ್ಟ್​ಗಳಿಲ್ಲ. ಹೀಗಾಗಿ ಸದ್ಯಕ್ಕೆ ದ್ವಿಚಕ್ರವಾಹನಗಳಿಗೆ ಕಾರ್ನೊಟ್ ಅಳವಡಿಸುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕಾರ್ನೊಟ್ ಟೆಕ್ನಾಲಜಿಸ್ ಕಳೆದ ತಿಂಗಳು ಕ್ವಾಲ್ಕಂಸ್ ಡಿಸೈನ್ ಇನ್ ಇಂಡಿಯಾ ಚಾಲೆಂಜ್ ಪ್ರಶಸ್ತಿ ಜೊತೆಗೆ ಸುಮಾರು 1 ಲಕ್ಷ ಡಾಲರ್ ಸಹಾಯ ಧನವನ್ನು ಕೂಡ ಪಡೆದುಕೊಂಡಿದೆ.

ಬೇಡಿಕೆ ಬಗ್ಗೆ..

ಕಾರ್ನೊಟ್ ಪ್ರಾಡಕ್ಟ್​​ನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರಾಟವಾಗುವ ಕಾರುಗಳ ಸಂಖ್ಯೆಯನ್ನು ಆಧರಿಸಿದ್ರೆ ಸುಮಾರು 1 ಬಿಲಿಯನ್ ಡಾಲರ್ ವಹಿವಾಟು ನಡೆಯುವುದು ಬಹುತೇಕ ಖಚಿತ. 2014ರಲ್ಲಿ ಆರಂಭವಾದ CarIQ ಕಾರ್ನೊರ್ಟ್​ಗೆ  ಪ್ರತಿಸ್ಪರ್ಧೆ ನೀಡುತ್ತಾ ಇದ್ರೂ ಅದು ಕೇವಲ ಇನ್ಶೂರೆನ್ಸ್ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ. ಕಾರ್ನೊಟ್ ಟೆಕ್ನಾಲಾಜಿಸ್ ಮುಂದಿನ ತ್ರೈಮಾಸಿಕದಲ್ಲೇ ಬ್ರೇಕ್ ಈವನ್ ಸಾಧಿಸುವ ಸಾಧ್ಯತೆ ಹೆಚ್ಚಿದೆ. 2017-18ರ ವರ್ಷದಲ್ಲಿ ಸುಮಾರು 2 ಮಿಲಿಯನ್ ಡಾಲರ್ ವಹಿವಾಟಿನ ನಿರೀಕ್ಷೆಯಲ್ಲಿದೆ. ಒಟ್ಟಿನಲ್ಲಿ ಕಾರ್ನೊಟ್ ಇಟ್ಟಿರುವ ಹೆಜ್ಜೆ ಹೊಸ ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಅನುಮಾನವಿಲ್ಲ.

ಇದನ್ನು ಓದಿ:

1. ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!

2. ಸೌಂದರ್ಯ ಇದ್ದರೆ ಉದ್ಯೋಗಕ್ಕೊಂದು ಬೆಲೆ- ಆತ್ಮವಿಶ್ವಾಸಕ್ಕೆ ಕೈಗನ್ನಡಿ ಹೆಣ್ಣಿನ ಸೌಂದರ್ಯ

3. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್

Related Stories