ಕಾರ್ ಮಾಲೀಕರಿಗಾಗಿಯೇ `ಡ್ರೈವರ್ಸ್ ಕಾರ್ಟ್'- ಪ್ರಯಾಣ ಸಮಸ್ಯೆಗೆ ಫುಲ್‍ಸ್ಟಾಪ್

ಟೀಮ್​​ ವೈ.ಎಸ್​. ಕನ್ನಡ

ಕಾರ್ ಮಾಲೀಕರಿಗಾಗಿಯೇ `ಡ್ರೈವರ್ಸ್ ಕಾರ್ಟ್'- ಪ್ರಯಾಣ ಸಮಸ್ಯೆಗೆ ಫುಲ್‍ಸ್ಟಾಪ್

Tuesday December 08, 2015,

4 min Read

ಆ ಮನೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿವೆ ಅಂದ್ಕೊಳ್ಳಿ, ಎಲ್ಲರೂ ಕೆಲಸದಲ್ಲಿ ಬ್ಯುಸಿಯಾಗಿದ್ದ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರೋದು, ಮಹತ್ವದ ಮೀಟಿಂಗ್‍ಗೆ ಹೋಗುವ ತರಾತುರಿಯಲ್ಲೇ ಪಾರ್ಕಿಂಗ್ ಸ್ಥಳ ಹುಡುಕಾಡೋದು ನಿಜಕ್ಕೂ ಕಷ್ಟ. ನಿಮ್ಮ ದಿನನಿತ್ಯದ ಪ್ರಯಾಣ ಸವಾಲುಗಳಿಂದ ತುಂಬಿರುತ್ತೆ. ಯಾವಾಗಲೂ ಕ್ಯಾಬ್ ಅಥವಾ ಆಟೋ ಬುಕ್ ಮಾಡೋದು ಕೂಡ ಅಸಾಧ್ಯ. ಇಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಲೆಂದೇ `ಡ್ರೈವರ್ಸ್‍ಕಾರ್ಟ್' ಜನ್ಮ ತಳೆದಿದೆ.

ಇದೊಂದು ಮೊಬೈಲ್ ಆ್ಯಪ್, ಅಗತ್ಯವಿರುವವರಿಗೆ ವೃತ್ತಿಪರ ಚಾಲಕರನ್ನು ಒದಗಿಸುತ್ತೆ. ನೀವು ಬುಕ್ ಮಾಡಿದ್ರೆ ಸಾಕು, ಪರಿಶೀಲಿಸಲ್ಪಟ್ಟ, ಚೆನ್ನಾಗಿ ತರಬೇತಿ ಪಡೆದ ನುರಿತ ಚಾಲಕ ನಿಮ್ಮ ಕಾರ್‍ನಲ್ಲೇ ನಿಮ್ಮನ್ನು ಎಲ್ಲಿಗೆ ಬೇಕೆಂದಲ್ಲಿ ಕರೆದುಕೊಂಡು ಹೋಗ್ತಾನೆ. ಸಕ್ಷಮ್ ಗ್ರೋವರ್ ಒಮ್ಮೆ ಸ್ನೇಹಿತರ ಜೊತೆ ಪಾರ್ಟಿ ಮಾಡ್ತಾ ಇದ್ರು. ಆಗ ಅವರಲ್ಲೊಬ್ಬ ಮದ್ಯ ಸೇವಿಸಲು ನಿರಾಕರಿಸಿದ್ದ, ಯಾಕಂದ್ರೆ ಡ್ರೈವಿಂಗ್‍ನಲ್ಲಿ ನಿಪುಣನಾಗಿದ್ರಿಂದ ಕುಡಿದ ಅಮಲಿನಲ್ಲಿದ್ದ ಎಲ್ಲರನ್ನೂ ಅವನೇ ಸುರಕ್ಷಿತವಾಗಿ ಮನೆ ತಲುಪಿಸಬೇಕಿತ್ತು. ಈ ಘಟನೆಯಿಂದಾಗಿ ಸಕ್ಷಮ್ ಗ್ರೋವರ್ ಅವರಿಗೆ `ಡ್ರೈವರ್ಸ್‍ಕಾರ್ಟ್' ಆರಂಭಿಸುವ ಯೋಜನೆ ಹೊಳೆದಿತ್ತು.

image


ಆಲೋಚನೆಗಳ ಸಂಚಯನ...

ಈ ಬಗ್ಗೆ ಚಿಂತನೆ ಶುರುಮಾಡಿದ ಸಕ್ಷಮ್, ತಮ್ಮ ಆಪ್ತರೊಂದಿಗೂ ಸಮಾಲೋಚನೆ ನಡೆಸಿದ್ರು. ಜನರಿಗೆ ತುರ್ತಾಗಿ ಚಾಲಕರ ಅವಶ್ಯಕತೆ ಬರಬಹುದಾದ ಎಷ್ಟೋ ಸಂದರ್ಭಗಳಿರುತ್ತವೆ ಅನ್ನೋದು ಅವರಿಗೆ ಅಥವಾಗಿತ್ತು. ಕೆಲಸದ ದಿನಗಳಲ್ಲಿ ಕುಟುಂಬಸ್ಥರನ್ನು ಎಲ್ಲಿಗಾದ್ರೂ ಡ್ರಾಪ್ ಮಾಡುವುದು, ಸಂಚಾರ ದಟ್ಟಣೆಯಿಂದ ಕೂಡಿದ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳಕ್ಕಾಗಿ ಹುಡುಕಾಟ ಹೀಗೆ ಹತ್ತಾರು ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಸಕ್ಷಮ್ ಅವರಂತೆ ವಿನೀತ್ ಶ್ರೀವಾಸ್ತವ ಮತ್ತು ಲಕ್ಷ್ಮಿ ಪೊಟ್ಲುರಿ ಕೂಡ ಇದೇ ರೀತಿಯ ಉದ್ಯಮವೊಂದನ್ನು ಆರಂಭಿಸುವ ಯೋಚನೆಯಲ್ಲಿದ್ರು. ಜೊತೆಯಾಗಿ ಬ್ಯಾಡ್ಮಿಂಟನ್ ಆಡ್ತಾ ಇದ್ದ ಸಕ್ಷಮ್ ಹಾಗೂ ವಿನೀತ್ ಈ ಐಡಿಯಾದ ಬಗ್ಗೆ ಪ್ರತಿದಿನ ಚರ್ಚಿಸುತ್ತಿದ್ರು. ಕೊನೆಗೆ ಮೂವರೂ ಒಟ್ಟಾಗಿ `ಡ್ರೈವರ್ಸ್ ಕಾರ್ಟ್' ಅನ್ನು ಆರಂಭಿಸಿದ್ರು.

ರಸ್ತೆಯ ಉಬ್ಬು ತಗ್ಗುಗಳಲ್ಲೂ ಸರಾಗ ಸಂಚಾರ...

ನಿಪುಣ ಹಾಗೂ ತರಬೇತಿ ಪಡೆದ ಚಾಲಕರನ್ನು ಒದಗಿಸುವುದರಿಂದ ಅವರು ನಿಮ್ಮ ಕಾರ್‍ನಲ್ಲಿ ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಾರೆ ಅಂತಾ ವಿನೀತ್ ಭರವಸೆ ನೀಡ್ತಾರೆ. `ಡ್ರೈವರ್ಸ್ ಕಾರ್ಟ್' ಅನ್ನೋದು ವೃತ್ತಿಪರತೆ, ಭದ್ರತೆ ಹಾಗೂ ಅನುಕೂಲತೆಯ ಸಂಗಮ. ಇನ್ನು ಕೆಲಸ ಅರಸುತ್ತಿರುವ ಚಾಲಕರಿಗೂ ಕೂಡ ಈ ವೇದಿಕೆ ನೆರವಾಗಲಿದೆ. `ಡ್ರೈವರ್ಸ್ ಕಾರ್ಟ್' ನಿಮಿಷದ ಲೆಕ್ಕದಲ್ಲಿ ಶುಲ್ಕ ವಿಧಿಸುತ್ತದೆ. ಎಷ್ಟು ಸಮಯ ಚಾಲಕರನ್ನು ಕಾರ್ ಮಾಲೀಕರು ಬಳಸಿಕೊಳ್ತಾರೋ ಅಷ್ಟಕ್ಕೆ ಹಣ ಪಾವತಿಸಬೇಕು.

1. ಬೇಡಿಕೆಗೆ ಅನುಗುಣವಾಗಿ ಚಾಲಕರ ಪೂರೈಕೆ

2. ಸಬ್‍ಸ್ಕ್ರಿಪ್ಷನ್ ಪ್ಯಾಕೇಜ್‍ಗಳು

3. ಪಾರ್ಕಿಂಗ್ ಸೇವೆ

ಹೀಗೆ ಮುರು ವಿಭಾಗಗಳಲ್ಲಿ `ಡ್ರೈವರ್ಸ್ ಕಾರ್ಟ್' ಗ್ರಾಹಕರಿಗೆ ಸಹಾಯ ಮಾಡುತ್ತಿದೆ.

`ಡ್ರೈವರ್ಸ್ ಕಾರ್ಟ್' ಬಳಕೆದಾರರಲ್ಲಿರುವ ಸಾಮಾನ್ಯ ಅಂಶಗಳೆಂದ್ರೆ,

1. ಜನರು ತಮ್ಮದೇ ಸ್ವಂತ ಕಾರಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ, ಆದ್ರೆ ವಾಹನ ಚಾಲನೆ ಮಾಡುವುದು ಅವರಿಗಿಷ್ಟವಿಲ್ಲ.

2. ಜನರು ಕಚೇರಿ ಅಥವಾ ನಗರದ ಇತರ ಯಾವುದೇ ಸ್ಥಳಗಳಿಗೆ ಪ್ರಯಾಣ ಮಾಡುತ್ತಿರುವ ಸಂದರ್ಭಗಳಲ್ಲಿ ಬೇರೆ ಕೆಲಸಗಳನ್ನೂ ಮಾಡಲು ಇಚ್ಛಿಸುತ್ತಾರೆ.

3. ಶಾಪಿಂಗ್ ಮಾಲ್‍ಗಳು, ಆಸ್ಪತ್ರೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಜಗಳ ಮಾಡುವುದು ಜನರಿಗೆ ಇಷ್ಟವಾಗುವುದಿಲ್ಲ.

4. ಪಾರ್ಟಿಗಳಿಗೆ ಹೋದಂತಹ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಲು ಇಚ್ಛಿಸುತ್ತಾರೆ.

5. ಮಕ್ಕಳನ್ನು ಶಾಲೆಗೆ ಅಥವಾ ಟ್ಯೂಶನ್‍ಗೆ ಖುದ್ದಾಗಿ ಕರೆದೊಯ್ದು, ಬಳಿಕ ವಾಪಸ್ ಕರೆತರಲು ಪೋಷಕರು ಇಷ್ಟಪಡುತ್ತಾರೆ.

ಕೆಲಸದ ಮಾದರಿ...

ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್‍ನಲ್ಲಿ `ಡ್ರೈವರ್ಸ್ ಕಾರ್ಟ್' ಲಭ್ಯವಿದೆ. ಚಾಲಕರು ಬೇಕಾದಲ್ಲಿ ನಿರ್ಧಿಷ್ಟ ಸಮಯ ಹಾಗೂ ಸ್ಥಳದ ವಿವರ ನೀಡಿ ಬುಕ್ಕಿಂಗ್ ಮಾಡಬಹುದು. ಈ ಮಾಹಿತಿ ಪಡೆದ ನಿರ್ವಹಣಾ ತಂಡ ಸೂಕ್ತ ಚಾಲಕರನ್ನು ನಿಗದಿಪಡಿಸುತ್ತದೆ. ಟ್ರಿಪ್ ಸಮಯದ ಲೆಕ್ಕಾಚಾರ, ಬಿಲ್ಲಿಂಗ್ ಮತ್ತು ನೋಟಿಫಿಕೇಷನ್‍ಗಳು ಸಂಪೂರ್ಣ ಸ್ವಯಂಚಾಲಿತವಾಗಿವೆ. ಸಂಚಾರ ಮುಕ್ತಾಯವಾದ ಕೂಡಲೇ ಎಲ್ಲಾ ವಿವರಗಳು ಚಾಲಕ ಮತ್ತು ಗ್ರಾಹಕರನ್ನು ತಲುಪುತ್ತವೆ. ನಗದು ರಹಿತ ವಹಿವಾಟಿಗಾಗಿ `ಡ್ರೈವರ್ಸ್ ಕಾರ್ಟ್' ಪೇಟಿಮ್ ಮತ್ತು ಆನ್‍ಲೈನ್ ಪಾವತಿ ವ್ಯವಸ್ಥೆಯನ್ನು ಕಲ್ಪಿಸಿದೆ. ಗ್ರಾಹಕರು ದೀರ್ಘಾವಧಿ ಚಂದಾದಾರರಾಗಿದ್ದರೆ ಅವರನ್ನು `ಇನ್‍ಸ್ಟಾಮೋಜೋ' ಜೊತೆ ಪಾಲುದಾರರನ್ನಾಗಿಸಲಾಗುತ್ತದೆ.

ಚಾಲಕರಿಗೆ ಆದ್ಯತೆ...

ಚಾಲಕರು ತಮ್ಮ ಪ್ರಮುಖ ಆಸ್ತಿ ಅನ್ನೋದು `ಡ್ರೈವರ್ಸ್ ಕಾರ್ಟ್' ತಂಡದ ನಂಬಿಕೆ. ಸೂಕ್ತ ಪರಿಶೀಲನೆಯ ಬಳಿಕವೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತೆ. ಅವರ ಹಿನ್ನೆಲೆ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಅದನ್ನು ಗುರುತಿಸಲು ಹೊಂದಾಣಿಕೆಯಿಲ್ಲದಂತಹ ಕೆಲ ಲಕ್ಷಣಗಳನ್ನು ಅಳವಡಿಸಲಾಗಿದೆ. 5 ಹಂತಗಳ ಸ್ಕ್ರೀನಿಂಗ್ ಪರೀಕ್ಷೆ ಪಾಸ್ ಮಾಡಿದವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಈ ಪರೀಕ್ಷೆ ಮೂಲಕ ಚಾಲನಾ ಕೌಶಲ್ಯದ ಜೊತೆಗೆ ಅವರ ವ್ಯಕ್ತಿತ್ವ, ತಾಂತ್ರಿಕ ಜ್ಞಾನ ಮತ್ತು ನಡತೆಯನ್ನು ಪರಿಶೀಲಿಸಲಾಗುತ್ತದೆ. ಒಮ್ಮೆ ಅವರನ್ನು ಆಯ್ಕೆ ಮಾಡಿದ್ಮೇಲೆ ಆ್ಯಪ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತೆ. ಟಿ-ಶರ್ಟ್, ಬ್ಯಾಗ್, ಸ್ವಚ್ಛ ಮಾಡಲು ಬಟ್ಟೆ, ಫ್ಲೋರ್ ಮ್ಯಾಟ್ ಎಲ್ಲವನ್ನೂ ಒಳಗೊಂಡ ಕಿಟ್‍ಗಳನ್ನು ಚಾಲಕರಿಗೆ ಕೊಡಲಾಗುತ್ತದೆ. ಚಾಲಕರ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಇದ್ರೆ ಅದನ್ನು ಕೂಡ ಡ್ರೈವರ್ಸ್ ಕಾರ್ಟ್ ಒದಗಿಸುತ್ತೆ. ನಿರಂತರ ಆದಾಯ, ಇನ್‍ಸೆಂಟಿವ್ಸ್ ಮೂಲಕ ಚಾಲಕರನ್ನು ಉತ್ತೇಜಿಸಲಾಗುತ್ತೆ.

ಡ್ರೈವರ್ಸ್ ಕಾರ್ಟ್ ತಂಡ...

ಸಕ್ಷಮ್ ಮೊದಲು ಕಾಗ್ನಿಜಂಟ್ ಮೊಬಿಲಿಟಿಯಲ್ಲಿ ಹಿರಿಯ ಪ್ರಾಡಕ್ಟ್ ಡೆವಲಪರ್ ಆಗಿ ಕೆಲಸ ಮಾಡ್ತಾ ಇದ್ರು. ಉಪಯುಕ್ತತೆ, ಉತ್ತಮಗೊಳಿಸುವಿಕೆ, ಪ್ರದರ್ಶನದ ಬಗ್ಗೆ ಅವರ ಗಮನವಿತ್ತು. ಇನ್ನು ಲಕ್ಷ್ಮಿ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಇವರೊಬ್ಬ ಏಂಜೆಲ್ ಹೂಡಿಕೆದಾರರು, ಮೆಂಟರ್ ಹಾಗೂ ಸಲಹೆಗಾರರೂ ಹೌದು. ಜಬಾಂಗ್ ಸಂಸ್ಥಾಪಕರ ತಂಡದಲ್ಲಿ ಲಕ್ಷ್ಮಿ ಕೂಡ ಇದ್ರು. ಐಬಿಎಂ, ಗೋಲ್ಡ್‍ಮ್ಯಾನ್ ಸಾಚ್ಸ್‍ನಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಐಐಎಂ ಕೋಲ್ಕತ್ತಾದಲ್ಲಿ ಪದವಿ ಪಡೆದಿರುವ ವಿನೀತ್, ಶಿಕ್ಷಣ, ಆರೋಗ್ಯ ಮತ್ತು ಆತಿಥ್ಯ ವಿಭಾಗದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. `ಲಿಟಲ್ ಐನ್‍ಸ್ಟೈನ್ಸ್' ಎಂಬ ಪ್ರಿ-ಸ್ಕೂಲ್ ಒಂದರ ಸಹ ಸಂಸ್ಥಾಪಕರಾಗಿದ್ದ ವಿನೀತ್, `ದಿ ಚೆನ್ನೈ ಏಂಜೆಲ್ಸ್' ಮತ್ತು `ಲೆಟ್ಸ್ ವೆಂಚರ್'ನ ಸದಸ್ಯರೂ ಆಗಿದ್ದರು.

ಮಾರ್ಕೆಟಿಂಗ್, ಉದ್ಯಮ ಬೆಳವಣಿಗೆ, ಗ್ರಾಹಕರ ಕಾಳಜಿ, ಚಾಲಕರ ನಿರ್ವಹಣೆ, ಹಣಕಾಸು ಮತ್ತು ಖರ್ಚು-ವೆಚ್ಚದ ಲೆಕ್ಕ ಎಲ್ಲವನ್ನೂ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಡ್ರೈವರ್ಸ್ ಕಾರ್ಟ್‍ನ ಪೂರೈಕೆ ಮುಖ್ಯಸ್ಥರು ಮೊದಲು `ಟ್ಯಾಕ್ಸಿ ಫಾರ್ ಶ್ಯೂರ್'ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಈ ಚಟುವಟಿಕೆಗಳಲ್ಲಿ ನಿಪುಣರು. ಡ್ರೈವರ್ಸ್ ಕಾರ್ಟ್ ಯಾವುದೇ ಕಾರ್‍ಗಳ ಮಾಲೀಕತ್ವ ಹೊಂದಿಲ್ಲ. ಡ್ರೈವರ್ ಏಜೆನ್ಸಿಗಳೊಂದಿಗೆ ಟೈ ಅಪ್ ಮಾಡಿಕೊಂಡಿದೆ. `ಡ್ರೈವರ್ಸ್ ಕಾರ್ಟ್' ಸೇವೆಯ ಬಗ್ಗೆ ಗ್ರಾಹಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

`ಡ್ರೈವರ್ಸ್ ಕಾರ್ಟ್' ಮೈಲಿಗಲ್ಲು...

ಡ್ರೈವರ್ಸ್ ಕಾರ್ಟ್ ತಿಂಗಳಿನಿಂದ ತಿಂಗಳಿಗೆ ಶೇ.300ರಷ್ಟು ಪ್ರಗತಿ ಕಾಣುತ್ತಿದೆ. ಪ್ರತಿನಿತ್ಯ 80-100 ಸವಾರಿಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಸದ್ಯ 70ಕ್ಕೂ ಹೆಚ್ಚು ಚಾಲಕರು `ಡ್ರೈವರ್ಸ್ ಕಾರ್ಟ್' ಪರ ಕೆಲಸ ಮಾಡ್ತಿದ್ದಾರೆ. ಪಬ್‍ಗಳು, ಕ್ಲಬ್‍ಗಳು, ಪ್ರಮುಖ ಆಸ್ಪತ್ರೆಗಳು ಮತ್ತು ಹೋಟೆಲ್‍ಗಳ ಜೊತೆ ಡ್ರೈವರ್ಸ್ ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ. ಸದ್ಯ 6 ಸದಸ್ಯರ ತಂಡದ ಜೊತೆ ಆಪರೇಷನ್ ಟೀಮ್ ಕೂಡ ಕಾರ್ಯನಿರ್ವಹಿಸ್ತಾ ಇದೆ. ಇನ್ನೂ ಕೆಲವು ನಗರಗಳಲ್ಲಿ ತನ್ನ ಸೇವೆ ವಿಸ್ತರಿಸಲು ಮುಂದಾಗಿರುವ `ಡ್ರೈವರ್ಸ್ ಕಾರ್ಟ್' ಇನ್ನು ಕೆಲ ತಿಂಗಳುಗಳೊಳಗೆ 1000 ಚಾಲಕರನ್ನು ಹೊಂದಲಿದೆ.

ಕ್ಷೇತ್ರದಲ್ಲಿರುವ ಇತರರು...

ಚಾಲಕರ ನಿರ್ವಹಣೆಯನ್ನು ಬಿಟ್ರೆ `ಡ್ರೈವರ್ಸ್ ಕಾರ್ಟ್' `ಡ್ರೈವ್ ಯು' ಮಾದರಿಯಲ್ಲಿದೆ. ಎರಡೂ ಸಂಸ್ಥೆಗಳನ್ನು ದಿಗ್ಗಜರ ತಂಡ ಕಟ್ಟಿ ಬೆಳೆಸಿದೆ, ಒಂದೇ ತೆರನಾದ ಸಮಸ್ಯೆಯನ್ನು ಪರಿಹರಿಸಲು ಪಣತೊಟ್ಟಿವೆ. ಸದ್ಯ ಭಾರತದಲ್ಲಿ 1000 ಜನರ ಪೈಕಿ 13 ಮಂದಿ ಕಾರ್ ಮಾಲೀಕರಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ 6 ಪಟ್ಟು ಹೆಚ್ಚಾಗಲಿದೆ. ಮಾಲೀಕತ್ವ ಹೆಚ್ಚಾದ್ರೂ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಟೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಭಾರತಿ ಭಟ್​​​