ರೈತರ ಬಂಧು 'ಅಗ್ರಿ ಮಾರ್ಕೆಟ್' ಆ್ಯಪ್

ಎನ್​.ಎಸ್​. ರವಿ

2

ಆ್ಯಪ್​ಗಳು ಕೇವಲ ನಗರ ಪ್ರದೇಶದ ಜನರಿಗಾಗಿ ಅಥವಾ ಶ್ರೀಮಂತರ ಅವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವುದನ್ನು ನಾವು ನೋಡಿದ್ದೇವೆ. ಪ್ರತಿ ಆ್ಯಪ್​ನ ಉದ್ದೇಶ ಹಣ ಮಾಡುವುದಾಗಿರುತ್ತದೆ. ಆ್ಯಪ್ ಡೆವಲಪರ್​ಗಳು ಹೆಚ್ಚಾಗಿ ಯಾವುದೇ ಒಂದು ಸೇವೆಯನ್ನು ನೀಡಿ ಅದರಿಂದ ಸ್ಮಾರ್ಟ್ ಜನರ ಬಳಿ ಹಣಗಳಿಸುವ ರೀತಿಯಲ್ಲಿ ಆ್ಯಪ್ ಅಭಿವೃದ್ಧಿಪಡಿಸುತ್ತಾರೆ. ಆದರೆ ರೈತರಿಗಾಗಿ ಆ್ಯಪ್​ಗಳು ಬಂದಿರುವುದೇ ಕಡಿಮೆ. ರೈತರು ಹೆಚ್ಚು ಲಾಭ ಪಡೆಯುವಂತೆ ಕೇಂದ್ರ ಸರ್ಕಾರ ಆ್ಯಪ್​ ಒಂದನ್ನು ಅಭಿವೃದ್ಧಪಡಸಿದೆ. ಸರಿಯಾಗಿ ಈ ಆ್ಯಪ್​ನ್ನು ಬಳಸಿಕೊಂಡಲ್ಲಿ ರೈತರು ಸಂತಸದಿಂದ ಜೀವನ ನಡೆಸಬಹುದು.

ಹೌದು ಇತ್ತೀಚಿನ ವರ್ಷಗಳಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಹೆಚ್ಚಿದೆ. ರೈತರ ಸಾವಿಗೆ ಕಾರಣ ಸಮರ್ಪಕ ಬೆಲೆ ಸಿಗದಿರುವುದು. ದಲ್ಲಾಳಿಗಳು ರೈತರ ಶೋಷಣೆ ಮಾಡಿದ್ದು ಪ್ರ,ಮುಖ ಕಾರಣವಾಗಿತ್ತು. ಮಾರುಕಟ್ಟೆಯಲ್ಲಿ ಯಾವ ಕೃಷಿ ಉತ್ಪನ್ನಗಳಿಗೆ ಏನು ಬೆಲೆಯಿದೆ ಎಂಬುದು ರೈತರಿಗೆ ತಿಳಿಯದಂತಾಗಿತ್ತು. ಆದರೆ ಈಗ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕೂ, ಬೆರಳ ತುದಿಯಲ್ಲೇ ರೈತ ತನ್ನ ಬೆಳೆಯ ನಿಜವಾದ ಬೆಲೆಯನ್ನು ತಿಳಿಯಲು ಸಾಧ್ಯವಾಗಲಿದೆ.

ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ರೈತರಿಗಾಗಿ ‘ಅಗ್ರಿ ಮಾರ್ಕೆಟ್ ಆ್ಯಪ್’ ಅನ್ನು ಪರಿಚಯಿಸಿದ್ದು, ಇದು ರೈತರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಬೆಳೆ ವಿಮೆಯನ್ನು ರೈತರಿಗೆ ನೀಡುವಂತಹ ಕೆಲಸ ಮಾಡುತ್ತಿದೆ. ಈ ಆ್ಯಪ್ ಮೂಲಕ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಬೆಳಗಳ ಧಾರಣೆ ಲಭ್ಯವಿದೆ. ಇದರಲ್ಲಿ ನಿಮಗೆ ಬೇಕಾದ ಬೆಳೆಗಳ ಮಾಹಿತಿಯನ್ನು ತಳಿಗಳ ಪ್ರಕಾರ ನೋಡಬಹುದಾಗಿದೆ. ಜೊತೆಗೆ ರಾಜ್ಯವಾರು ಬೆಳೆಗಳ ಮಾಹಿತಿಯನ್ನು ಹಾಕಲಾಗಿದೆ. ಹೀಗಾಗಿ ನಿಮಗೆ ಬೇಕಾದ ರಾಜ್ಯದ, ಉತ್ಪನ್ನಗಳ ಧಾರಣೆಯನ್ನು ಕ್ಷಣ ಮಾತ್ರದಲ್ಲೇ ಪರಿಶೀಲಿಸಬಹುದಾಗಿದೆ. ಇದರ ವಿಶೇಷತೆಯಂದರೆ ಪ್ರತಿ ರಾಜ್ಯದ ಕೃಷ್ಟಿ ಮಾರುಕಟ್ಟೆಯಲ್ಲಿ ಏನು ಬೆಲೆಯಿದೆ ಎಂಬುದು, ಬೆರಳಂಚಿನಲ್ಲೇ ಸಿಗಲಿದೆ. ಗಡಿನಾಡ ರೈತರಿಗಂತೂ ಈ ಆ್ಯಪ್ ಬಂಪರ್ ಲಾಟರಿಯಂತೆ ಕೆಲಸ ಮಾಡಲಿದೆ. ಯಾವ ರಾಜ್ಯದಲ್ಲಿ ಹೆಚ್ಚು ಧಾರಣೆ ಸಿಗುತ್ತದೆಯೋ ಅಲ್ಲಿ ಹೋಗು ರೈತ ತನ್ನ ಫಸಲನ್ನು ಮಾರುವಂತೆ ಅವಕಾಶ ನೀಡಲಿದೆ.

ಅಗ್ರಿ ಮಾರ್ಕೆಟ್ ಆ್ಯಪ್​ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಯಾವ ದಿನ ಕೃಷಿ ಉತ್ಪನ್ನಗಳ ಧಾರಣೆ ಎಷ್ಟಿದೆ ಎಂಬುದು ತಿಳಿಯಲಿದೆ. ಅಲ್ಲದೆ ಹಿಂದಿನ ದಿನದ ಮಾಹಿತಿಯನ್ನು ಸಹ ನೋಡಬಹುದಾಗಿದೆ. ‘ಇನ್ ಹೌಸ್ ಐಟಿ ಡಿವಿಷನ್’ ಈ ಆ್ಯಪ್​ನ್ನು ಅಭಿವೃದ್ಧಪಡಿಸಿದೆ. ಗೂಗಲ್ ಪ್ಲೇನಿಂದ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸದ್ಯ ಈ ಆ್ಯಪ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು. ಕೇಂದ್ರ ಸರ್ಕಾರ ಪರಿಚಯಿಸಿರುವ ಆ್ಯಪ್​ನಲ್ಲಿ ಇದು ಅತ್ಯಂತ ಉತ್ತಮ ಆ್ಯಪ್ ಆಗಿ ಹೊರಹೊಮ್ಮಿದೆ.

‘ಅನಕ್ಷರಸ್ಥ ರೈತರು ಕೂಡ ತಮ್ಮ ವಿದ್ಯಾವಂತ ಮಕ್ಕಳು ಅಥವಾ, ಹಳ್ಳಿಯಲ್ಲಿರುವ ಕೆಲ ಬುದ್ದಿವಂತರಿಂದ ಮಾರುಕಟ್ಟೆ ಧಾರಣೆ ತಿಳಿಯುವಲ್ಲಿ ಈ ಆ್ಯಪ್ ಸಹಾಯ ಮಾಡಲಿದೆ ಎಂತಾರೆ ಕೊಟ್ಟೂರಿನ ರೈತ ದೊಡ್ಡ ಕೊಟ್ರಪ್ಪ’. ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ರೈತನಿಗೆ ಇದು ಸಹಾಯಕಾರಿಯಾಗಲಿದೆ.. ಭೂಮಿಯಲ್ಲಿ ಬಂಗಾರಂತಹ ಬೆಳೆ ಬೆಳೆಯುವ ರೈತರು, ಈ ಆ್ಯಪ್ನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಬಹುದು.

Related Stories