ಜೊತೆಯಾಗಿದ್ದು ಕಾಫಿ ಕುಡಿಯೋದಿಕ್ಕೆ- ಹುಟ್ಟಿದ್ದು ಬ್ಯುಸಿನೆಸ್​​​​​ ಐಡಿಯಾ..!

ಟೀಮ್​ ವೈ.ಎಸ್​​.

0

ಕರಿಷ್ಮಾ ಮತ್ತು ನೀಶ್ಶಿ. ಇಬ್ಬರು ಜೀವದ ಗೆಳತಿಯರು. ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಮಹದಾಸೆ ಇತ್ತು. ಆದ್ರೆ ಏನು ಮಾಡ್ಬೇಕು ಅನ್ನೋದರ ಐಡಿಯಾ ಸರಿಯಾಗಿ ಇರಲಿಲ್ಲ. ಹೀಗಾಗಿ ತಮ್ಮ ತಮ್ಮ ಕೆಲಸಗಳಲ್ಲಿ ಇಬ್ಬರೂ ಸಂಬಳ ಪಡೆಯುತ್ತಿದ್ದರೂ ಅದ್ರಲ್ಲಿ ತೃಪ್ತಿ ಇರಲಿಲ್ಲ. ಆದ್ರೆ ಕನಸುಗಳಿದ್ರೆ ಏನಾದರೂ ಒಂದು ಐಡಿಯಾ ಬಂದೇ ಬರುತ್ತದೆ. ಆ ದಿನ ಬಂದೇ ಬಿಟ್ಟಿತು. ಆವತ್ತು ಕರಿಷ್ಮಾ ಮತ್ತು ನೀಶ್ಶಿ ಕಾಫಿ ಕುಡಿಯಲು ಒಂದೇ ಕಡೆ ಸೇರಿಕೊಂಡಿದ್ದವು. ಅವತ್ತು ಹುಟ್ಟಿಕೊಂಡಿತ್ತು ಒಂದು ಹೊಸ ಸಂಸ್ಥೆಯ ಐಡಿಯಾ. ಅದೇ ಡೆಕೋಗ್ರಫಿ.

ಆವತ್ತು ಅವರಿಬ್ಬರು ಸೇರಿದ್ದು ಜಸ್ಟ್​​ ಕಾಫಿ ಕುಡಿಯಲು. ಆದ್ರೆ ಇಬ್ಬರು ಸ್ನೇಹಿತರು ಮುಂಬೈನಲ್ಲಿ ಡೆಕೋಗ್ರಫಿ ಎಂಬ ಗೃಹೋಪಯೋಗಿ ವಸ್ತುಗಳನ್ನು ನಿರ್ಮಿಸುವ ಸಂಸ್ಥೆಯ ಹುಟ್ಟಿಗೆ ಶ್ರೀಕಾರ ಬರೆದಿದ್ದರು. ಆದ್ರೆ ಈ ಗೆಳತಿಯರ ಯೋಚನೆ ಅಷ್ಟು ಸುಲಭವಾಗಿ ಯಶ ಕಾಣಲಿಲ್ಲ. ಎಲ್ಲಾ ಉದ್ಯಮಿಗಳಂತೆ ಇವರುಗಳು ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಪಟ್ರು.

ಕರಿಷ್ಮಾ ಮತ್ತು ನೀಶ್ಶಿ ಮೊದಲಿಗೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಕರೆದು ತಮ್ಮ ಉತ್ಪನ್ನಗಳ ಸಣ್ಣ ಸಂಗ್ರಹವನ್ನು ತೋರಿಸಿದರು . ಇದರ ಫಲಿತಾಂಶ ಅದ್ಭುತವಾಗಿತ್ತು. ಎಲ್ಲರೂ ಇವರ ಸಂಗ್ರಹವನ್ನು ಬಹುವಾಗಿ ಮೆಚ್ಚಿಕೊಂಡರು. ಈ ಮೂಲಕ ಒಂದು ಉತ್ತಮ ಇ- ಕಾಮರ್ಸ್ ವೇದಿಕೆ ಆರಂಭವಾಯಿತು.

ಕರಿಷ್ಮಾ ಶಾ, ಡೆಕೆಗ್ರಫಿ ಸಹಸಂಸ್ಥಾಪಕಿ
ಕರಿಷ್ಮಾ ಶಾ, ಡೆಕೆಗ್ರಫಿ ಸಹಸಂಸ್ಥಾಪಕಿ

ಕರಿಷ್ಮಾ ಮತ್ತು ನೀಶ್ಶಿಗೆ ಉದ್ಯಮಶೀಲ ಕುಟುಂಬದ ಹಿನ್ನೆಲೆ ಇದೆ. ಆದರೂ ಭವಿಷ್ಯದಲ್ಲಿ ತಮ್ಮದೇ ಆದ ಉದ್ಯಮದಲ್ಲೇ ಸಂಪೂರ್ಣವಾಗಿ ಬೇರೂರಬೇಕೆಂಬ ಗುರಿಯನ್ನು ಹೊಂದಿದ್ದರು. ಹೀಗಾಗಿ ಇಂತಹ ಒಂದು ಕ್ರಿಯಾಶೀಲ ಉದ್ಯಮವನ್ನು ಸ್ಥಾಪಿಸುವ ನಿರ್ಧಾರ ಮಾಡಿದರು.

ಪ್ರತಿ 2 ತಿಂಗಳಿಗೊಮ್ಮೆ ಇವರಿಬ್ಬರೂ ಹೊಸ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿರುತ್ತಾರೆ.

ನಾವು ಯಾವಾಗಲೂ ಗ್ರಾಹಕರ ಬೇಡಿಕೆಯತ್ತ ಗಮನಹರಿಸಿದ್ದೇವೆ ಮತ್ತು ಬಂದ ಬೇಡಿಕೆಗಳನ್ನು ನಮ್ಮದೇ ಆದ ರೀತಿಯಲ್ಲಿ ವಿಭಾಗಿಸುತ್ತೇವೆ. ಉದ್ದೇಶಪೂರ್ವಕವಾಗಿ ಅತಿರಂಜಿತವಲ್ಲದ ಉತ್ಪನ್ನಗಳನ್ನು ತಯಾರಿಸುತ್ತೇವೆ. ಅಲಂಕಾರಿಕ ವಸ್ತುಗಳನ್ನು ಮಾತ್ರ ತಯಾರಿಸುವುದಲ್ಲದೆ ವಿಷಯಾಧಾರಿತ ಉಪಯುಕ್ತ ಉತ್ಪನ್ನಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ ಡೆಕೋಗ್ರಫಿಯ ಸಹ ಸಂಸ್ಥಾಪಕಿ ಕರಿಷ್ಮಾ ಶಾ.

ನೀಶ್ಶಿ, ಸಹಸಂಸ್ಥಾಪಕಿ
ನೀಶ್ಶಿ, ಸಹಸಂಸ್ಥಾಪಕಿ

ಸದ್ಯಕ್ಕೆ ಇ-ಕಾಮರ್ಸ್ ವೇದಿಕೆಯಲ್ಲಿ ವ್ಯವಹಾರ ನಡೆಸುತ್ತಿರುವ ಈ ಯುವ ಉದ್ಯಮಿಗಳು ಕೆಲವೇ ದಿನಗಳಲ್ಲಿ ಮುಂಬೈನ ಒಂದು ಪ್ರದೇಶದಲ್ಲಿ ಸಣ್ಣ ಮಳಿಗೆಯನ್ನು ತೆರೆಯುವುದರತ್ತ ಕಣ್ಣಿಟ್ಟಿದ್ದಾರೆ.

ಕರಿಷ್ಮಾರ ಕಥೆ

ಯುಎಸ್‌ನಲ್ಲಿ ಫೈನಾನ್ಸ್ ವಿಚಾರದ ಕುರಿತು ಅಧ್ಯಯನ ಮಾಡಿದ್ದಾರೆ ಕರಿಷ್ಮಾ. ಕರಿಷ್ಮಾ ತಂದೆ ಸಹ ಓರ್ವ ಉದ್ಯಮಿ. ಕೆಲ ಕಾಲ ಅಮೆರಿಕಾದಲ್ಲೇ ಆಡಿಟರ್‌ ಆಗಿ ಕಾರ್ಯನಿರ್ವಹಿಸಿದ ಕರಿಷ್ಮಾ ನಂತರ ಯುಕೆಗೆ ತೆರಳಿ ಅಲ್ಲಿ ಇಂಟರ್ ನ್ಯಾಷನಲ್ ಮ್ಯಾನೇಜ್‌ಮೆಂಟ್ ಎಂಟರ್‌ಪ್ರೆನ್ಯೂರ್‌ಶಿಪ್‌ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದರು.

ಮುಂಬೈಗೆ ವಾಪಾಸಾದ ಬಳಿಕ ಕರಿಷ್ಮಾ ಫ್ರೆಂಚ್ ಭಾಷೆಯನ್ನು ಕಲಿಯಲು ಹಾಗೂ ಬೋಧಿಸಲು ಆರಂಭಿಸಿದರು. ಯುಎಸ್‌ಗೆ ತೆರಳುವುದಕ್ಕೂ ಮುನ್ನ 6 ತಿಂಗಳು ಸಮೂಹ ಮಾಧ್ಯಮ ವಿಚಾರದಲ್ಲಿ ಅಧ್ಯಯನ ಮಾಡಿ ಪದವಿ ಪಡೆದಿದ್ದರು. ಇಲ್ಲೇ ಅವರಿಗೆ ನೀಶ್ಶಿ ಎಂಬಾಕೆ ಸ್ನೇಹಿತೆಯಾಗಿದ್ದು.

ಕೆಲ ವರ್ಷಗಳ ಬಳಿಕ ತಮ್ಮ ಹಲವು ಸ್ನೇಹಿತರೊಂದಿಗೆ ನಿಶ್ಶಿಯವರನ್ನು ಭೇಟಿಯಾದರು ಕರಿಷ್ಮಾ. ಅಲ್ಲೇ ಹುಟ್ಟಿದ್ದು ಡೆಕೋಗ್ರಫಿಯ ಐಡಿಯಾ.

ನೀಶ್ಶಿ, ಒಳಾಂಗಣ ವಿನ್ಯಾಸ ಮಾಡುತ್ತಿದ್ದ ಮನೆಯಲ್ಲಿ ಒಬ್ಬರಿಗೆ ಫ್ರೆಂಚ್ ಕಲಿಸಲು ಕರಿಷ್ಮಾ ಹೆಸರನ್ನು ಶಿಫಾರಸು ಮಾಡಿದರು. ಇದಾದ ನಂತರ ಈ ಇಬ್ಬರೂ ಸ್ನೇಹಿತೆಯರು, ಮತ್ತೊಬ್ಬ ಸ್ನೇಹಿತರ ಮನೆಯಲ್ಲಿ ಪದೇ ಪದೇ ಭೇಟಿಯಾಗಲಾರಂಭಿಸಿದರು.

ಇಂತಹ ಭೇಟಿಯ ವೇಳೆಯಲ್ಲಿ ಹೊಸದಾಗಿ ವಿನ್ಯಾಸಗೊಂಡ ಅಥವಾ ನಿರ್ಮಾಣವಾದ ಮನೆಗೆ ಹಲವು ಅಗತ್ಯಗಳು ಇರುತ್ತವೆ ಎಂಬುದನ್ನು ಅವರು ಕಂಡುಕೊಂಡರು. ಹೀಗಾಗಿ ಕಾಫಿಶಾಪ್ ಒಂದರಲ್ಲಿ ಕುಳಿತಿದ್ದಾಗ ತಮ್ಮ ಕೈಚಳಕದ ಮೂಲಕ ಗೃಹಗಳ ವಿನ್ಯಾಸ ಮಾಡುವ ಉದ್ಯಮದ ರೂಪುರೇಷೆಯನ್ನು ಸಿದ್ಧಪಡಿಸಿದೆವು ಎನ್ನುತ್ತಾರೆ ಕರಿಷ್ಮಾ.

ಸೃಜನಾತ್ಮಕ ನಿರ್ದೇಶನದಿಂದ ಉದ್ಯಮಿಯಾಗುವತ್ತ- ನೀಶ್ಶಿಯವರ ಕಥೆ

ತಮ್ಮ ಸಮೂಹ ಮಾಧ್ಯಮದ ಕೋರ್ಸ್ ಮುಗಿಸಿದ ಬಳಿಕ ನೀಶ್ಶಿ ಬಾಲಾಜಿ ಟೆಲಿಫಿಲ್ಮ್ಸ್ ನಲ್ಲಿ ಇಂಟರ್ನಿಯಾಗಿ ಕಾರ್ಯನಿರ್ವಹಿಸಲಾರಂಭಿಸಿದರು. ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದ ಅವರು ಬಳಿಕ ಅನಿವಾರ್ಯವಾಗಿ ನಿರ್ದೇಶನ ಮಾಡಬೇಕಾಗಿ ಬಂದಿತ್ತು. ಇದರಿಂದ ಅವರು ಅಸಮಾಧಾನಗೊಂಡಿದ್ದರು. ಆಗ ಅಸಮಾಧಾನವಾಗಿದ್ದರೂ ನಂತರ ಆ ಅನುಭವ ಅವರಿಗೆ ನೆರವಿಗೆ ಬಂತು. ಕೆ ಸೀರಿಯಲ್​​ಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅವರು ಅದರಿಂದ ಅಷ್ಟು ಮಹತ್ತರವಾದ ಫಲಿತಾಂಶ ಪಡೆಯದಿದ್ದರೂ ಈ ಕ್ಷೇತ್ರದ ಪರಿಚಯ ಮಾಡಿಕೊಂಡರು

ಅವರೊಂದಿಗೆ ಕೆಲಸ ಮಾಡುತ್ತಿದ್ದ ಒಬ್ಬರು ನೀಶ್ಶಿಗೆ ಒಳಾಂಗಣ ವಿನ್ಯಾಸ ಮಾಡಲು ಸ್ಫೂರ್ತಿಯಾದರು. ನೀಶ್ಶಿ ಒಳಾಂಗಣ ವಿನ್ಯಾಸದ ವಿಚಾರದಲ್ಲಿ ಯಾವುದೇ ತರಬೇತಿ ಪಡೆಯದೇ ಒಳಾಂಗಣ ವಿನ್ಯಾಸ ಕ್ಷೇತ್ರಕ್ಕೆ ಕಾಲಿರಿಸಿದರು. ಇದು ತಮ್ಮದೇ ಆದ ಉದ್ಯಮವನ್ನು ಮಾಡಬೇಕೆಂದು ಇಚ್ಛಿಸುತ್ತಿದ್ದ ನೀಶ್ಶಿಗೆ ಬಹಳಷ್ಟು ಸಹಾಯ ಮಾಡಿತು.

ನೀಶ್ಶಿ ಮತ್ತು ಕರಿಷ್ಮಾ ಇಬ್ಬರೂ ಒಂದೇ ರೀತಿಯ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಡೆಕೋಗ್ರಫಿಯಂತಹ ಉದ್ಯಮವನ್ನುಆರಂಭಿಸಿದೆವು ಎನ್ನುತ್ತಾರೆ ನೀಶ್ಶಿ.

ಸಹಸಂಸ್ಥಾಪಕರಾದ ಸ್ನೇಹಿತೆಯರು

ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಕರಿಷ್ಮಾ ಪಳಗಿದ್ದರೆ ನೀಶ್ಶಿ ಯೋಜನೆ ನಿರ್ವಹಣೆಯಲ್ಲಿ ಪಳಗಿದ್ದರು. ಹೀಗೆ ಈ ಉದ್ಯಮದಲ್ಲಿ ಒಬ್ಬರ ದೌರ್ಬಲ್ಯ ಇನ್ನೊಬ್ಬರ ಬಲವಾಯಿತು.

28 ವರ್ಷದ ಈ ಉದ್ಯಮಿಗಳಿಗೆ ಕೆಲ ಸವಾಲುಗಳೂ ಸಹ ಎದುರಾದವು. ತಮ್ಮ ಉತ್ಪನ್ನಗಳಿಗೆ ಅಗತ್ಯ ವಿರುವ ಕಚ್ಛಾವಸ್ತುಗಳ ಮಾರಾಟಗಾರರನ್ನು ಹುಡುಕುವಲ್ಲಿ ಸ್ವಲ್ಪ ಕಷ್ಟ ಅನುಭವಿಸಿದರು. 6 ರಿಂದ 8 ತಿಂಗಳವರೆಗೆ ಈ ಉದ್ಯಮದ ಗಂಭೀರತೆಯನ್ನು ಜನರು ಗಮನಿಸಲೇ ಇಲ್ಲ.

ನಾವು ನಮ್ಮ ಕಾರ್ಯಾಚರಣೆಯನ್ನು ಕಾಫಿಶಾಪ್‌ನಿಂದ ಆರಂಭಿಸಿದೆವು. ನಂತರ ನಮ್ಮದೇ ಆದ ಆಫೀಸ್ ತೆರೆಯುವವರೆಗೆ ಮನೆಯಲ್ಲಿ ಕುಳಿತೇ ಕೆಲಸ ಮಾಡಿದೆವು. ನಮ್ಮ ಮದುವೆಯವರೆಗೂ ಒಟ್ಟಿಗೆ ಕೆಲಸ ಮಾಡಿದ್ದು ನಮ್ಮ ಮಟ್ಟಿಗೆ ಸಾಧನೆಯೇ ಸರಿ. ಇದು ನಮ್ಮ ಬದುಕಿನ ಗುರಿಯನ್ನು ಸ್ಪಷ್ಟಪಡಿಸಿತು ಅಂದಿದ್ದಾರೆ ಕರಿಷ್ಮ.

Related Stories