ಎಂಥಾ ಕಾಲ ಬಂತಯ್ಯಾ..! ಆನ್​​ಲೈನ್​​ನಲ್ಲಿ ಬೆರಣಿ, ಸೆಗಣಿ ಗೊಬ್ಬರ..!

ಉಷಾ ಹರೀಶ್​​​​

0

ಬೆಂಗಳೂರು ಜನ ಛೀ.. ಸೆಗಣಿ ಅಂತ ಮುಖ ತಿರುಗಿಸಿಕೊಂಡು ಹೋಗ್ತಾ ಇದ್ರು. ಆದ್ರೆ ಕಾಲ ಬದಲಾಗುತ್ತದೆ. ಎಲ್ಲದಕ್ಕೂ ಅದರದ್ದೇ ಆದ ಬೆಲೆ ಇದ್ದೇ ಇರುತ್ತೆ. ಇದಕ್ಕೊಂದು ಎಕ್ಸಾಂಪಲ್​​​​​​​ ಸೆಗಣಿ. ಇನ್ನು ಮುಂದೆ ಸೆಗಣಿ ನೀವು ಹೋಗುವ ದಾರಿಯಲ್ಲಿ ಸಿಕ್ಕಿದ್ರೆ ಅದನ್ನು ಅಲ್ಲೇ ಬಿಟ್ಟು ಹೋಗುವವರು ಅಪರೂಪವಾಗಿ ಕಾಣಬಹುದು. ಯಾಕಂದ್ರೆ ಈಗ ಸೆಗಣಿಗೂ ಡಿಮ್ಯಾಂಡ್​​ ಕ್ರಿಯೇಟ್​ ಆಗಿದೆ. ಸೆಗಣಿ ಕೂಡ ಆನ್​​ಲೈನ್​​ನಲ್ಲಿ ಮಾರಾಟವಾಗುವ ಕಾಲ ಬಂದಿದೆ.

ಹಳ್ಳಿಗಳಲ್ಲಿ ಸೆಗಣಿಯನ್ನು ಬೆರಣಿ ತಟ್ಟಿ ಅದನ್ನು ಬಿಸಿ ನೀರು ಕಾಯಿಸಲು, ಹೋಮಗಳಿಗೆ, ಗೊಬ್ಬರಕ್ಕೆ, ಕೆಲವೆಡೆ ಕೀಟನಾಶಕವಾಗಿಯೂ ಬಳಸುತ್ತಾರೆ. ಕಳೆದ 10 ವರ್ಷಗಳ ಕೆಳಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರು ಕಾಯಿಸಲು ಬೆರಣಿಯನ್ನು ಉಪಯೋಗಿಸುತ್ತಿದ್ದರು. ಹಸು ಸಾಕಿದ್ದವರು ಸೆಗಣಿ ಮಾರಾಟ ಮಾಡಿ ಪುಡಿಗಾಸು ಸಂಪಾದಿಸಿಸ್ತಾ ಇದ್ರು. ಆದರೆ ಈಗ ಕಾಲ ಬದಲಾಗಿದೆ. ಸೆಗಣಿ ಕೊಳ್ಳಲು ಹರಸಾಹಸ ಪಡಬೇಕು ಅನ್ನುವಾಗಲೇ ಅದು ಆನ್​​ಲೈನ್ ಮೂಲಕ ಪ್ರತ್ಯಕ್ಷವಾಗಿದೆ.

ಇ ಕಾಮರ್ಸ್​ ಯಾವರೀತಿ ಬೆಳೆಯುತ್ತಾ ಇದೆ ಅಂದ್ರೆ ಸೆಗಣಿಗೂ ಮಹತ್ವ ಬಂದಿದೆ. ಸೆಗಣಿಯನ್ನು ಆನ್​ಲೈನ್​​ ಮೂಲಕ ಮಾರಾಟ ಮಾಡಿ ಕಾಸು ಮಾಡಿಕೊಳ್ಳುವ ಪ್ರಯೋಗ ಹುಟ್ಟಿಕೊಂಡಿದೆ. ಪ್ರಸ್ತುತ ಆನ್​​ಲೈನ್​​​ನಲ್ಲಿ ಬಟ್ಟೆ, ಫೋನ್, ಟಿವಿ ಫ್ರಿಡ್ಜ್ ಕಡೆಗೆ ಮನೆಯ ದಿನಸಿಯೂ ಸಹ ಸಿಗುತ್ತಿದೆ. ಇತ್ತೀಚೆನ ಬೆಳವಣಿಗೆಯೆಂದರೆ ಇ ಕಾಮರ್ಸ್​ನಲ್ಲಿ ಸೆಗಣಿ ಕೇಕ್ ಅಥವಾ ಬೆರಣಿ ಮತ್ತು ಸೆಗಣಿಯುಕ್ತ ಗೊಬ್ಬರ ಕೂಡ ಅಂತರ್ಜಾಲದಲ್ಲಿ ಲಭ್ಯ.

ನಾಲ್ಕು ಬೆರಣಿಗಳಿಗೆ ಮಾರಾಟ ದರ ಎಲ್ಲ ತೆರಿಗೆಗಳು ಸೇರಿ 100 ರೂ. ಅದರಲ್ಲಿ ಶೇ.60 ರಿಯಾಯಿತಿ, ಅಂದರೆ 40 ರೂಪಾಯಿಗೆ ಬೆರಣಿ ನಿಮ್ಮದಾಗುತ್ತದೆ. ವಿತರಣಾ ಶುಲ್ಕ 50 ರೂಪಾಯಿ. ಅದೇ ರೀತಿ ಇ-ಬೇ ತಾಣದಲ್ಲಿ 24 ಕೇಕ್​​ಗಳನ್ನು (ಬೆರಣಿ!) ನೀವು 280 ರೂಪಾಯಿಯೊಳಗೆ ಖರೀದಿಸಬಹುದು.

ಆನ್​​ಲೈನ್ ಮಾರಾಟ ತಾಣಗಳಾದ ಫ್ಲಿಫ್​​ಕಾರ್ಟ್, ಸ್ನ್ಯಾಪ್​ಡೀಲ್ ಹಾಗೂ ಅಮೆಜಾನ್​​ಗಳಲ್ಲಿ ಭರ್ಜರಿ ಕೊಡುಗೆಗಳ ಮೇಳ ನಡೆಯುತ್ತಿದೆ. ಇದರ ಜತೆಗೆ ಇತರ ಕೆಲವು ಇ-ಕಾಮರ್ಸ್ ತಾಣಗಳೂ ಬಗೆಬಗೆಯ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ.

ಸಾಮಾನ್ಯವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಬೆರಣಿಯನ್ನು ಒಲೆಯ ಉರುವಲಾಗಿ ಬಳಸಲಾಗುತ್ತದೆ. ಬೆರಣಿ ಮಾರಾಟವನ್ನು ಶಾಪ್ ಕ್ಲೂಸ್ ಡಾಟ್ ಕಾಮ್ನಲ್ಲಿ ಕಂಡುಬಂದಿದೆ. ಅದರಲ್ಲೂ ಅದಕ್ಕೆ ರಿಯಾಯತಿಯನ್ನು ಸಹ ಆ ತಾಣ ಘೋಷಿಸಿದೆ. ಅಮೆಜಾನ್ನಲ್ಲಿ ಹಸುವಿನ ಗೊಬ್ಬರ ಮಾರಾಟಕ್ಕಿದೆ. ಅದರಲ್ಲಿ ಲಭ್ಯವಿರುವ ಹಸು ಗೊಬ್ಬರಕ್ಕೆ 2 ಕೆಜಿ ಟ್ಯಾಕ್ಸ್ ಸೇರಿ 175 ರೂಪಾಯಿ. 75 ರೂಪಾಯಿ ಡೆಲಿವರಿ ಚಾರ್ಜ್ ಕೊಟ್ಟರೆ ಹಸುವಿನ ಗೊಬ್ಬರ ನಿಮ್ಮ ಮನೆಗೆ ಬಂದು ಬೀಳುತ್ತದೆ.

ಗೋವು ಉತ್ಪನ್ನಗಳು ಲಭ್ಯ:

ಇನ್ನು ವೇದಿಕ್ ಎಂಬ ಗಿಫ್ಟ್ ಶಾಪ್ ತಾಣ ತುಪ್ಪದ ಜತೆ, ಗೋಮೂತ್ರ, ಗೋಮೂತ್ರದ ಮಾತ್ರೆಗಳು, ಬೆರಣಿಯನ್ನು ಮಾರಾಟ ಮಾಡುವುದಾಗಿ ತನ್ನ ಸೈಟ್​​ನಲ್ಲಿ ಹಾಕಿಕೊಂಡಿದೆ. ಗೋಮಾತಾ ಸೇವಾ ಡಾಟ್ ಆರ್ಗ್(gomathaseva.org), ದೇವ್​​ಶಾಪಿ ಡಾಟ್ ಕಾಮ್ (www.devshoppe.com), ವೇದಿಕ್​​ವಾಣಿ ಡಾಟ್ ಕಾಮ್(vedicvani.com), ಹೋಮ್​ಥೆರಪಿಇಂಡಿಯಾ ಡಾಟ್ ಕಾಮ್ ಮುಂತಾದ ಜಾಲ ತಾಣಗಳಲ್ಲಿ ಕೂಡ ಸಗಣಿಯಿಂದ ತಟ್ಟಿದ ಬೆರಣಿ ಸಹಿತ ಗೋ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಮನೆಬಾಗಿಲಿಗೆ ನೀವು ಬುಕ್ ಮಾಡಿದ ಸಾಮಾನು ಸರಂಜಾಮುಗಳನ್ನು ತಂದು ಹಾಕುವ ತಾಣಗಳ ನಡುವೆ. ಇಂಟರ್ನೆಟ್​​ ಒಂದಿದ್ದರೆ ಸಾಕು ಏನು ಬೇಕಾದರೂ ಸಿಗುತ್ತದೆ ಎಂಬ ಮಾತಿಗೆ ಅನ್ವರ್ಥವಾಗುವಂತೆ ಆನ್​​ಲೈನ್​​ನಲ್ಲಿ ಸೆಗಣಿ, ಬೆರಣಿ, ಹಸು ಗೊಬ್ಬರ ಕೂಡಾ ಸೇರಿಕೊಂಡಿದೆ!

ಇ-ಬೇ ತಾಣವು ಬೆರಣಿ ಮಾರುತ್ತಿದ್ದು, ಬೇರೆ ಎಲೆಕ್ಟ್ರಾನಿಕ್ ಸಾಧನಗಳ ರೀತಿಯಲ್ಲೇ ಬೆರಣಿಯ ಗಾತ್ರವನ್ನೂ ನಮೂದಿಸಿದೆ. 6 ಸೆ.ಮೀ. ಸುತ್ತಳತೆ, 1 ಸೆ.ಮೀ. ದಪ್ಪ ಇರುತ್ತದೆ. ಮತ್ತು ಇದರ ಇಎಂಐ ಸೌಲಭ್ಯ:

ನೀವು ಬೆರಣೆಯನ್ನು ಖರೀದಿಸಬೇಕಾದರೆ ಬೇರೆಲ್ಲಾ ವಸ್ತುಗಳನ್ನು ಖರೀದಿಗೆ ಬಳಸುವಂತೆ ಕ್ರೆಡಿಟ್ ಕಾರ್ಡ್​, ಡೆಬಿಟ್ ಕಾರ್ಡ್​, ಇಂಟರ್ನೆಟ್ ಬ್ಯಾಂಕಿಂಗ್, ಕ್ಯಾಶ್ ಆನ್ ಡೆಲಿವರಿ ಸೇರಿದಂತೆ ಎಲ್ಲಾ ವ್ಯವಸ್ಥೆಯೂ ಇದೆ.ಅಷ್ಟೇ ಅಲ್ಲದೆ ಇಎಂಐ (ಮಾಸಿಕ ಕಂತು) ಸೌಲಭ್ಯವನ್ನು ತಾಣಗಳು ಆಯ್ಕೆಯೂ ಇದೆ. ಇನ್ನೆನು ನೀವು ಕುಳಿತಲ್ಲಿಗೇ ಬೆರಣಿ ಗೊಬ್ಬರ ಲಭ್ಯ.

"ಆನ್​​ಲೈನ್​​ನಲ್ಲಿ ಬೆರಣಿ, ಗೊಬ್ಬರವೂ ಸಿಗುತ್ತದೆ ಎನ್ನುವ ಕಾಲ ಬಂದಿದೆ ಇದರರ್ಥ ಇಂಟರ್​​ನೆಟ್ ಇದ್ದರೆ ಏನು ಬೇಕಾದರು ಸಿಗುತ್ತದೆ ಎಂಬ ಮಾತು ನಿಜ. ಇದು ಒಂದು ರೀತಿಯಲ್ಲಿ ಒಳ್ಳೆ ಬೆಳವಣಿಗೆ" -ರಮಕಾಂತ್, ಗ್ರಾಹಕ