ಸಂಪೂರ್ಣ – ಸ್ವಲೀನತೆಗೊಳಗಾದ ಮಕ್ಕಳ ಸಂವಹನಕ್ಕೆ ಸಂಗೀತ ಸಾಧನ

ಟೀಮ್​​ ವೈ.ಎಸ್​​.

0

ಸಂಪೂರ್ಣ- ಕಿಲಿಕಿಲಿ ಟ್ರಸ್ಟ್​​ನ ಅಂಗಸಂಸ್ಥೆ. ಕವಿತ, ಗಣೇಶ್ ಮತ್ತು ಕೆಲವು ಗೆಳೆಯರು ಸೇರಿಕೊಂಡು ಕಿಲಿಕಿಲಿ ಟ್ರಸ್ಟ್ ಸ್ಥಾಪಿಸಿದ್ದರು. ಕಿಲಿಕಿಲಿ ಟ್ರಸ್ಟ್, ಬೆಂಗಳೂರಿನ ಸಾರ್ವಜನಿಕ ಪಾರ್ಕ್​ಗಳು ವಿಕಲಚೇತನರಿಗೂ ಲಭ್ಯವಾಗುವಂತೆ ಮಾಡುತ್ತಿದೆ. ಅವರು ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ನಗರಗಳ ಪಾಲಿಕೆಗಳ ಜೊತೆಗೂ ಕೆಲಸ ಮಾಡಿದ್ದಾರೆ. ವಿಕಲಚೇತನ ಮಕ್ಕಳಿಗೆ ಎಲ್ಲಾ ಸಾರ್ವಜನಿಕ ಸ್ಥಳಗಳು ಮುಕ್ತವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಕಿಲಿಕಿಲಿಯ ಹೊಸ ವಿಭಾಗ – ಸಂಪೂರ್ಣ

ಕವಿತಾ ಮತ್ತು ಗಣೇಶ್ ಅವರ ಮಗ ಅನಂತ್ ಹುಟ್ಟುತ್ತಲೇ ಸ್ವಲೀನತೆಯಿಂದ ಬಳಲುತ್ತಿದ್ದ. ಮೂರು ವರ್ಷ ತುಂಬಿದರೂ ಆತ ಮಾತನಾಡುತ್ತಿರಲಿಲ್ಲ. ಆಟಿಕೆಗಳ ಜೊತೆ ಆಡುತ್ತಿರಲಿಲ್ಲ. ಆದರೆ, ಸಂಗೀತಕ್ಕೆ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದ. ಅವನಿಗೆ ಇಷ್ಟವಾದ ಹಾಡು ಬಂದಾಗ ಅದನ್ನು ಗುನುಗಳು ಆರಂಭಿಸುತ್ತಿದ್ದ. ಸ್ವಲ್ಪ ಮಾತು ಕಲಿತ ಮೇಲೆ ಹಾಡಲು ಆರಂಭಿಸಿದ. ಅಷ್ಟೇ ಅಲ್ಲ, ಅದೇ ರಾಗದಲ್ಲಿ ಬರುವ ಬೇರೆ ಹಾಡುಗಳನ್ನೂ ಗುರುತಿಸಲು ಆರಂಭಿಸಿದ್ದ. ಅನಂತ್​​ಗೆ ಈಗ 13 ವರ್ಷ. ಚೆನ್ನೈನಲ್ಲಿ ತನ್ನ ವಿದ್ಯಾಭ್ಯಾಸದ ಜೊತೆಗೆ ಕರ್ನಾಟಕ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದಾನೆ.

ಅನಂತ್ ಸಂಗೀತಕ್ಕೆ ಸ್ಪಂದಿಸುತ್ತಾ ಬೆಳೆಯುತ್ತಿರುವುದನ್ನು ಕಂಡ ಕವಿತಾ ಮತ್ತು ಗಣೇಶ್, ಈಗ ಅನಂತ್ ನಂತೆಯೇ ಇರುವ ಉಳಿದ ಮಕ್ಕಳಿಗೂ ಸಹಾಯ ಮಾಡಲು ಆರಂಭಿಸಿದ್ದಾರೆ. ಕಿಲಿಕಿಲಿ ಟ್ರಸ್ಟ್ ಅಡಿಯಲ್ಲಿ ಸಂಪೂರ್ಣವನ್ನು 2013ರ ಜನವರಿಯಲ್ಲಿ ಸ್ಥಾಪಿಸಿದರು. ಇದು ಸ್ವಲೀನ ಮಕ್ಕಳಿಗೆ ಸಹಾಯ ಮಾಡಲೆಂದೇ ಆರಂಭಿಸಿರುವ ಸಂಸ್ಥೆ. ವಿಕಲಚೇತನ ಮಕ್ಕಳನ್ನು ತಲುಪಲು ಸಂಪೂರ್ಣವು ಸಂಗೀತವನ್ನೇ ಸಂವಹನ ಮಾಧ್ಯಮವಾಗಿ ಬಳಸುತ್ತಿದೆ. ಸಂಪೂರ್ಣದಲ್ಲಿ ಸಂಗೀತ ಥೆರಪಿಸ್ಟ್, ಸಂಗೀತಗಾರ, ಗಾಯಕರಿದ್ದು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಶಾಲೆಯ ಬಳಿಕ 4-14 ವರ್ಷ ವಯಸ್ಸಿನೊಳಿಗೆನ ಸ್ವಲೀನ ವಿದ್ಯಾರ್ಥಿಗಳು ಸಂಗೀತದ ಮೂಲಕ ಕಲಿಕೆ ಮುಂದುವರಿಸುತ್ತಿದ್ದಾರೆ.

2012ರಲ್ಲಿ ಇಂಡಿಯಾ ಎಸ್ಎಪಿ ಲ್ಯಾಬ್ಸ್ ಅವರು ಇಂಡಿಯಾ ಇನ್​​ಕ್ಲುಷನ್ ಸಮ್ಮಿಟ್ ಹಮ್ಮಿಕೊಂಡು ನಿಧಿಸಂಗ್ರಹಿಸಿದ್ದರು. ಇದರಿಂದ ಸ್ಪೂರ್ತಿ ಪಡೆದ ಸಂಪೂರ್ಣ ಕೂಡಾ ಸಂಸ್ಥೆ ಆರಂಭಿಸಲು ನಿಧಿ ಸಂಗ್ರಹಿಸಿತ್ತು ಎನ್ನುತ್ತಾರೆ ಕವಿತಾ.

ಸಂಪೂರ್ಣ – ಸ್ವಲೀನ ಮಕ್ಕಳಿಗಾಗಿ ಮ್ಯೂಸಿಕ್ ಥೆರಪಿ

ಸಂಪೂರ್ಣದಲ್ಲಿ ಮಕ್ಕಳ ಪೋಷಣೆಗಾಗಿ, ಅಭಿವೃದ್ಧಿಗಾಗಿ ಕೆಲವು ನಿರ್ದಿಷ್ಟ ಗುರಿಗಳನ್ನು ಹಾಕಿಕೊಳ್ಳಲಾಗುತ್ತದೆ. ಸ್ವಲೀನ ಮಕ್ಕಳಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಬಹುದು ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಸ್ವಲೀನತೆಗೆ ಒಳಗಾಗಿರುವವರು ತಮ್ಮ ಸುತ್ತಲಿನ ಜನರ ಜೊತೆ ಸಂವಹನ ನಡೆಸಲು ಕಷ್ಟಪಡುತ್ತಾರೆ. ಸಂಗೀತ ಥೆರಪಿ ಪಡೆದ ಮಕ್ಕಳು ಸುತ್ತಲಿನವರೊಂದಿಗೆ ಹೆಚ್ಚು ಬೆರೆಯಲಾರಂಭಿಸಿದ್ದಾರೆ ಮತ್ತು ಅವರಲ್ಲಿ ಉದ್ವಿಗ್ನತೆಯ ಪ್ರಮಾಣ ಕಡಿಮೆಯಾಗಿದೆ.

ಸಂಬಂಧ ಸೃಷ್ಟಿಸುವಿಕೆ

ಸಂಗೀತಕ್ಕೆ ಸ್ವಲೀನ ಮಕ್ಕಳು ಧನಾತ್ಮಕವಾಗಿ ಸ್ಪಂದಿಸುವುದನ್ನು ಅವರ ಪೋಷಕರೂ ಗಮನಿಸಿದ್ದಾರೆ. “ಬಹುತೇಕ ಜನರಿಗೆ ಇದನ್ನು ಹೇಗೆ ಮುಂದುವರಿಸುವುದು ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಅವರು ನಮ್ಮಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ನಮ್ಮಲ್ಲಿ ದಾಖಲು ಮಾಡಿಕೊಂಡ ಬಳಿಕ, ಮಕ್ಕಳನ್ನು ಸಂಗೀತಕ್ಕೆ ಎಕ್ಸ್​ಪೋಸ್​​​ ​ ಮಾಡುತ್ತೇವೆ.”ಎನ್ನುತ್ತಾರೆ ಕವಿತಾ. ಆರಂಭದಲ್ಲೇ ನಾವು ಸಾಧ್ಯವಾದಷ್ಟು ಸಂಗೀತದ ವಿವಿಧ ಮಜಲುಗಳಿಗೆ ನಾವು ಮಕ್ಕಳನ್ನು ಪರಿಚಯಿಸುತ್ತೇವೆ ಮತ್ತು ಮಕ್ಕಳು ಅದನ್ನು ಆಸ್ವಾದಿಸುತ್ತಾರೆ.

ಸಂಹವನ

ಒಮ್ಮೆ ಮಕ್ಕಳು ಸಂಗೀತದತ್ತ ಆಕರ್ಷಿತಗೊಂಡರು ಎನ್ನುವುದು ಖಚಿತವಾದ ಬಳಿಕವಷ್ಟೇ ಸಂಪೂರ್ಣದ ತಂಡ ಮುಂದಿನ ಹಂತದ ಚಿಕಿತ್ಸೆ ಆರಂಭಿಸುತ್ತದೆ. ಅದು ಸಂವಹನದ ಕಲಿಕೆ. ಸ್ವಲೀನ ಮಗುವನ್ನು ಸಂವಹನಕ್ಕೆ ಸಿದ್ಧಪಡಿಸುವುದು ಅತ್ಯಗತ್ಯ. “ಸಂಗೀತದಲ್ಲಿರುವ ಸ್ಪೂರ್ತಿ ತುಂಬಾ ಬಲಿಷ್ಟವಾಗಿದೆ. ಅದರಿಂದ ಆಕರ್ಷಣೆಗೊಳಗಾಗಿ ಅವರು ಮಾತನಾಡಲು ಆರಂಭಿಸುತ್ತಾರೆ,” ಎನ್ನುತ್ತಾರೆ ಕವಿತಾ. ಮಾತನಾಡಲು ಸಾಧ್ಯವಾಗದ ಮೂಕ ಮಕ್ಕಳೂ ಸಂಗೀತ ಥೆರಪಿ ಬಳಿಕ ತಾವು ಏನನ್ನು ಹೇಳಲು ಬಯಸುತ್ತಿದ್ದೇವೆ ಎನ್ನುವುದನ್ನು ಕನಿಷ್ಟ ಸನ್ನೆಯ ಮೂಲಕವಾದರೂ ಅಭಿವ್ಯಕ್ತಿಪಡಿಸುತ್ತಾರೆ. ಮಗುವಿಗೆ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡು ಬೇಕೆಂದರೆ, ಅದು ಸಂಗೀತ ಅಧ್ಯಾಪಕರ ಬಳಿಗೆ ಹೋಗಿ ಆಕ್ಷನ್ ಮಾಡುತ್ತದೆ. ನಾವು ಎಲ್ಲಾ ರೀತಿಯ ಸಂವಹನ ರೀತಿಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ, ವರ್ಬಲ್, ನಾನ್-ವರ್ಬಲ್, ಗೇಜ್, ಆಕ್ಷ್, ಹೀಗೆ ಎಲ್ಲಾ ರೀತಿಯ ಸಂವಹನಕ್ಕೆ ಸಿದ್ಧಪಡಿಸುತ್ತೇವೆ. ಆರಂಭದಲ್ಲಿ ಪದಗಳನ್ನು ಕಲಿಸಿ, ಬಳಿಕ, ವಾಕ್ಯರಚನೆಯನ್ನೂ ಹೇಳಿಕೊಡಲಾಗುತ್ತದೆ.

ನಡವಳಿಕೆ

ಬಹುತೇಕ ಸ್ವಲೀನ ಮಕ್ಕಳಿಗೆ ನಡವಳಿಕೆ ಸಮಸ್ಯೆ ಇರುತ್ತದೆ. ಸಮಾಜದ ಮಧ್ಯದಲ್ಲಿ ಅವರು ಅಸಹಜವಾಗಿ ವರ್ತಿಸುತ್ತಾರೆ. ಉದಾಹರಣೆಗೆ, ಮಗುವೊಂದು ಸುಖಾಸುಮ್ಮನೆ ತೊಡೆ ತಟ್ಟುತ್ತಾ ಕುಳಿತುಕೊಳ್ಳುತ್ತಿದ್ದರೆ, ನಾವು ಆ ಮಗುವಿಗೆ ತಾಳ ಹಾಕುವುದನ್ನು ಹೇಳಿಕೊಡುತ್ತೇವೆ. ಈ ವಿಚಾರದಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲವಾದರೂ, ಮಕ್ಕಳ ನಡವಳಿಕೆಯನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಪ್ರಯೋಗಗಳನ್ನಂತೂ ಇವರು ನಡೆಸುತ್ತಿದ್ದಾರೆ.

ಸಾಮಾಜಿಕ ಕೌಶಲ್ಯಗಳ ಅಭಿವೃದ್ಧಿ

ಪ್ರತಿ ಮಕ್ಕಳಿಗೂ ವಾರದಲ್ಲಿ ಎರಡು ಸೆಷನ್ ತರಗತಿಗಳು ಸಿಗುತ್ತವೆ. ಒಂದು ವೈಯುಕ್ತಿಕ ತರಗತಿಯಾದರೆ, ಮತ್ತೊಂದು ಸಾಮೂಹಿಕ ತರಗತಿಯಾಗಿತ್ತು. ಪ್ರತಿ ಹಾಡು ಮುಗಿದ ಬಳಿಕ ಚಪ್ಪಾಳೆ ತಟ್ಟುವ ಅಗತ್ಯವನ್ನೂ ಕೂಡಾ ಅವರಿಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಎಲ್ಲವನ್ನೂ ಸಂಗೀತದ ಮಾದರಿಯಲ್ಲೇ ಹೇಳಲಾಗುತ್ತದೆ. ಬಹುತೇಕ ಮಕ್ಕಳಿಗೆ ಒಳ್ಳೆಯ ಸಭಿಕರಾಗುವುದೂ ಗೊತ್ತಿರುವುದಿಲ್ಲ. ಮಕ್ಕಳಿಗೆ ಯಾವಾಗ ನೀವು ಗಾಯಕರಾಗಬೇಕು, ಯಾವಾಗ ನೀವು ಸಭಿಕರಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ.

ಒಂದು ವರ್ಷದ ಅವಧಿಯಲ್ಲಿ ಮಗುವಿಗೆ ಕಾರ್ಯಕ್ರಮ ಅರ್ಥವಾಗಲು ಆರಂಭವಾಗುತ್ತದೆ. ಬಳಿಕ ನಮ್ಮ ತಂಡವು ಮಗುವಿನ ಆಸಕ್ತಿ ಮತ್ತು ಯೋಚನಾ ಮಟ್ಟವನ್ನು ಅಧ್ಯಯನ ಮಾಡುತ್ತೇವೆ. ಬಳಿಕ, ಮಗುವಿಗೆ ತನ್ನ ಆಸಕ್ತಿಯ ಸಂಗೀತ ಪರಿಕರದಲ್ಲಿ ಮುಂದುವರಿಯಲು ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಸಂಪೂರ್ಣ ತಂಡದಲ್ಲಿ ನಿಗದಿತ ಪರಿಕರ ಕಲಿಸುವವರು ಇಲ್ಲದೇ ಇದ್ದಲ್ಲಿ, ಎಲ್ಲಿ ಅದನ್ನು ಕಲಿಸುತ್ತಾರೋ ಅಲ್ಲಿಗೆ ಮಕ್ಕಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಸಧ್ಯಕ್ಕೆ ಸಂಪೂರ್ಣದಲ್ಲಿರುವ ಮಕ್ಕಳು ಕೀಬೊರ್ಡ್, ಗಾಯನ, ಡ್ರಮ್ಸ್ ಕಲಿಯುತ್ತಿದ್ದಾರೆ.

ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 50-60 ಮಕ್ಕಳನ್ನು ತಲುಪಲು ಸಾಧ್ಯವಾಗಿದೆ. ಪ್ರತಿ ಬ್ಯಾಚ್ನಲ್ಲೂ 10-14 ಮಕ್ಕಳು ನೋಂದಾಯಿಸಿಕೊಳ್ಳುತ್ತಿದ್ದಾರೆ.

ಸವಾಲುಗಳು

ನಮಗೆ ಎದುರಾದ ದೊಡ್ಡ ಸವಾಲು ಏನೆಂದರೆ, ಮ್ಯೂಸಿಕ್ ಥೆರಪಿಯಲ್ಲಿ ಪರಿಣತರ ಸಂಖ್ಯೆ ಕಡಿಮೆ ಇರುವುದು. ಪೋಷಕರ ನಿರೀಕ್ಷೆಗಳೂ ಬೇರೆಯದ್ದೇ ಇರುತ್ತವೆ. “ದಾಖಲಾಗುವ ಮಕ್ಕಳು ಒಂದೋ ಸಂಗೀತ ಪರಿಕರ ಕಲಿಯಬೇಕು ಇಲ್ಲವೇ ಗಾಯಕರಾಗಬೇಕು ಎಂಬುದನ್ನು ಪೋಷಕರು ಬಯಸುತ್ತಾರೆ. ನಮಗೆ ಅದು ಅಂತಿಮ ಗುರಿಯಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಅದು ಗುರಿಯೂ ಆಗಿರುವುದಿಲ್ಲ. ಇದರಿಂದಾಗಿ, ಪೋಷಕರು ಮಕ್ಕಳನ್ನು ತರಗತಿಯಿಂದ ಕರೆದೊಯ್ಯತ್ತಾರೆ. ಅವರು ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗುವವರೆಗೂ ಕಾಯುವುದಿಲ್ಲ.” ಎನ್ನುತ್ತಾರೆ ಕವಿತಾ. ಮೂರನೇಯ ಸವಾಲು, ಹಣಕಾಸಿಗೆ ಸಂಬಂಧಿಸಿದ್ದು. ಎಸ್ಎಪಿಯವರು ಮೊದಲ ಎರಡುವರ್ಷಗಳ ಕಾಲ ಹಣಕಾಸು ವ್ಯವಸ್ಥೆ ಮಾಡಿದರೂ, ಆ ಬಳಿಕ ಖರ್ಚನ್ನು ನಿಭಾಯಿಸುವುದೇ ಕಷ್ಟವಾಗಿದೆ. ಇದನ್ನು ಉಳಿಸಿಕೊಳ್ಳಲೂ ಕಷ್ಟಪಡುತ್ತಿದ್ದೇವೆ ಎನ್ನುತ್ತಾರೆ ಕವಿತಾ. ಸಂಪೂರ್ಣದ ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮೂಲಕ ಧನಸಹಾಯ ಮಾಡಲಾಗುತ್ತಿದೆ. ಅಲ್ಲದೆ, ನಿಧಿಯನ್ನು ಸಂಗೀತ ಪರಿಕರಗಳ ರಿಪೇರಿ ಮತ್ತು ಹೊಸ ಉಪಕರಣಗಳ ಖರೀದಿಗೂ ಬಳಸಬೇಕಾಗುತ್ತದೆ. ನಾವು ಇನ್ನೂ ಹೆಚ್ಚು ಮಕ್ಕಳು ಮತ್ತು ಪೋಷಕರನ್ನು ತಲುಪಬೇಕಾಗಿದೆ, ಎನ್ನುತ್ತಾರೆ ಕವಿತಾ.

Related Stories