ವಿಶೇಷ ಜನರ ಶಕ್ತಿ -ವಿಕಲಾತೀತರ ಶಕ್ತಿ

ಟೀಮ್​​ ವೈ.ಎಸ್​. ಕನ್ನಡ

0

ಶಕ್ತಿ ವಡಕ್ಕೆಪಟ್. ಹಲವರಿಗೆ ಹಲವು ರೀತಿ ಕಾಣುವ ವ್ಯಕ್ತಿ. ಪತ್ನಿಯ ಸರ್ವಸ್ವ. ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸುವ ಸದಸ್ಯ. ಮಗನ ಪಾಲಿಗೆ ಸೂಪರ್‍ಹೀರೋ. ತಾಯಿಯ ಪಾಲಿನ ಮಾಣಿಕ್ಯ. ಇನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಲೋಕಕ್ಕೆ, ಒಬ್ಬ ಸೆಲೆಬ್ರಿಟಿ. ಅವರನ್ನು ಓದುವವರಿಗೆ ಒಬ್ಬ ಟೆಕ್ ಗೀಕ್ ಅರ್ಥಾತ್ ತಂತ್ರಜ್ಞಾನಗಳ ಕುರಿತು ಅದ್ಭುತ ಮಾಹಿತಿಯಿರುವ ವ್ಯಕ್ತಿ. ಇನ್ನು ಸ್ಟಾರ್ಟಪ್‍ಗಳ ಪಾಲಿಗೆ ಗುರುವೂ ಹೌದು, ಕಿಂಗ್‍ಪಿನ್ ಅನ್ನೋದೂ ನಿಜವೇ. ಅವರೊಂಥರಾ ಪ್ರಕೃತಿಯ ಒಂದು ಶಕ್ತಿ.

ಆದ್ರೆ ಭಾರತೀಯ ಸಮಾಜಕ್ಕೆ, ಆತ ಅಂಗವಿಕಲ..!

ಬಾಲ್ಯದಲ್ಲಿ ಎಲ್ಲಾ ಮಗುವಿನಂತೆಯೇ ಇದ್ದ ಶಕ್ತಿ ಒಮ್ಮೆ ಅನಾರೋಗ್ಯಕ್ಕೆ ತುತ್ತಾದರಂತೆ. ಹಲವು ದಿನಗಳ ಕಾಲ ಹಾಸಿಗೆ ಹಿಡಿದಿದ್ದ ಅವರಿಗೆ ಡಾಕ್ಟರ್ ತಿಳಿಯದೆಯೇ ಅಲರ್ಜಿಯಾಗುವ ಇಂಜೆಕ್ಷನ್ ನೀಡಿದ ಕಾರಣ ಶಕ್ತಿಯ ಜ್ವರ ಕಡಿಮೆಯಾಗುವ ಬದಲು ಹೆಚ್ಚಾಗತೊಡಗಿತು. ಆಗ ಶಕ್ತಿಯ ದೇಹದ ಬಲಭಾಗ ಊದಿಕೊಳ್ಳತೊಡಗಿತು. ‘ವೈದ್ಯಕೀಯವಾಗಿ ನಾನು ಸತ್ತೇಹೋಗಿದ್ದೆ ಎನ್ನಲಾಗಿತ್ತು. ಒಬ್ಬ ವೈದ್ಯನಂತೂ ನನ್ನನ್ನು ಆಶ್ರಮವೊಂದರಲ್ಲಿ ಬಿಟ್ಟು, ಮತ್ತೊಂದು ಆರೋಗ್ಯಯುತ ಮಗುವನ್ನು ದತ್ತು ಪಡೆಯಲು ನನ್ನ ತಂದೆ ತಾಯಿಗೆ ಬುದ್ಧಿವಾದ ಹೇಳಿದ್ದರಂತೆ. ಅಷ್ಟೇ ಯಾಕೆ ನಾನು ಬದುಕಿರುವಾಗಲೇ, ಸತ್ತಿರುವುದಾಗಿ ಸಹಿ ಹಾಕುವಂತೆಯೂ ಒತ್ತಡ ಹೇರಿದ್ದರಂತೆ. ಆದ್ರೆ ನನ್ನಮ್ಮ ಅದಕ್ಕೊಪ್ಪದೇ, ನನ್ನನ್ನು ಎಲ್ಲಾ ಮಗುವಿನಂತೆಯೇ ಸಾಕೋದಾಗಿ ಹೇಳಿದ್ರು. ಅಷ್ಟರಲ್ಲಾಗಲೇ ಊದಿಕೊಂಡಿದ್ದ ನನ್ನ ಬಲಭಾಗದ ದೇಹಕ್ಕೆ ಸಂಪೂರ್ಣವಾಗಿ ಪಾರ್ಶ್ವವಾಯು ಬಡಿದಿತ್ತು’ ಅಂತ ಸ್ಮರಿಸಿಕೊಳ್ತಾರೆ ಶಕ್ತಿ.

ಬಹುತೇಕ ಬಾಲ್ಯವನ್ನು ಎದ್ದು ನಡೆಯಲಾಗದ ಕಾರಣ ಶಕ್ತಿ ತೆವಳುತ್ತಲೇ ಕಳೆಯಬೇಕಾಯ್ತು. ಆದ್ರೆ ಅವರ ಓದಿನಲ್ಲಿ, ಸಾಫ್ಟ್​ವೇರ್ ಎಂಜಿನಿಯರ್ ಆಗಲು, ಅಷ್ಟೇ ಯಾಕೆ ಪ್ರೀತಿಸಿ ಮದುವೆಯಾಗಲೂ ಅದು ಅಡ್ಡಿಯಾಗಲಿಲ್ಲ.

‘ನಾನು ಅಂತಿಮ ವರ್ಷದ ಎಂಜಿನಿಯರಿಂಗ್ ಓದುವಾಗ, ಕಂಪ್ಯೂಟರ್ ಕ್ಲಾಸ್‍ನಲ್ಲಿ ಒಬ್ಬ ಅದ್ಭುತ ಹುಡುಗಿಯನ್ನು ಭೇಟಿಯಾದೆ. ಅದೇ ಕ್ಲಾಸ್‍ನಲ್ಲಿ ನಾವು ಗೆಳೆಯರಾದೆವು, ದಿನಕಳೆದಂತೆ ಬೆಸ್ಟ್ ಫ್ರೆಂಡ್ಸ್ ಆದೆವು. ಕ್ರಮೇಣ ಅದೇ ಕಂಪ್ಯೂಟರ್ ಕ್ಲಾಸ್‍ನಲ್ಲೇ ನಾನು ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡೆ. ಈಗ ನಾವು ಮದುವೆಯಾಗಿ 18 ವರ್ಷಗಳೇ ಕಳೆದಿವೆ. ಇಬ್ಬರೂ ಅನ್ಯೋನ್ಯವಾಗಿ, ಸುಖ ಸಂತೋಷದಿಂದ ಬಾಳುತ್ತಿದ್ದೇವೆ’ ಅಂತ ನಗುಬೀರ್ತಾರೆ ಶಕ್ತಿ.

ನಂತರ ಸತತ 2 ದಶಕಗಳ ಕಾಲ ಶಕ್ತಿ ಐಟಿ ವಲಯದಲ್ಲಿ ಸಾಕಪ್ಪಾ ಸಾಕು ಅನ್ನುವವರೆಗೂ ಕೆಲಸ ಮಾಡಿದರು. ಕ್ರಮೇಣ ತಾವೇ ಕಂಪನಿಯೊಂದನ್ನು ಪ್ರಾರಂಭಿಸಿದ್ರು. ‘ಡೇಟಾ ಸೆಂಟರ್ ಒಂದರಲ್ಲಿ ಸಿಸ್ಟಮ್ ಅಡ್ಮಿನ್‍ಆಗಿ ನಾನು ನನ್ನ ವೃತ್ತಿ ಜೀವನ ಪ್ರಾರಂಭಿಸಿದೆ. ಆಗ ನನ್ನ ಸಂಬಳ ಕೇವಲ 1 ಸಾವಿರ ರೂಪಾಯಿ. ನನ್ನ ತಂದೆ ನನ್ನನ್ನು ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಡಲು ಹಾಗೂ ವಾಪಸ್ ಮನೆಗೆ ಕರೆದುಕೊಂಡು ಬರಲೇ ಅದಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತು. ನಾನು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರಲ್ಲಿ ಎಷ್ಟು ಮುಳುಗಿ ಹೋಗಿದ್ದೆ ಅಂದ್ರೆ, ಇದ್ಯಾವುದೂ ನನ್ನ ಅರಿವಿಗೇ ಬಂದಿರಲಿಲ್ಲ. ಕೆಲವೊಮ್ಮೆ ನಾನು ಸೋಮವಾರ ಕೆಲಸಕ್ಕೆ ಹೋದರೆ, ಗುರುವಾರದವರೆಗೂ ಮನೆಗೆ ಬಾರದೇ, ಕಚೇರಿಯಲ್ಲೇ ಇದ್ದುಬಿಡುತ್ತಿದ್ದೆ.’ ಅಂತ ತಮ್ಮ ವೃತ್ತಿ ಜೀವನದ ಪ್ರಾರಂಭದ ಬಗ್ಗೆ ಹೇಳಿಕೊಳ್ಳುತ್ತಾರೆ ಶಕ್ತಿ. ಯಾಕಂದ್ರೆ ಅವರಲ್ಲಿ ಆಗ ಹೊಸತನ್ನು ಕಲಿಯುವ, ಏನನ್ನಾದ್ರೂ ಸಾಧಿಸುವ ಛಲ ಅಷ್ಟರ ಮಟ್ಟಿಗೆ ಮನೆ ಮಾಡಿತ್ತು.

ಕ್ರಮೇಣ ಮತ್ತೊಂದು ಕಂಪನಿ ಸೇರಿದ ಶಕ್ತಿ ಅಮೆರಿಕಾ ದೇಶಕ್ಕೆ ಹಾರಿದರು. ಅಲ್ಲೇ ಅವರಿಗೆ ಬ್ಲಾಗ್ ಮತ್ತು ಟ್ವಿಟರ್‍ಗಳ ಪರಿಚಯವಾಗಿದ್ದು, ಹಾಗೂ ತಾವೂ ಆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಒಂದೊಂದು ಅಕೌಂಟ್ ಪ್ರಾರಂಭಿಸಿದ್ದು. ಬಳಿಕ ಎಲ್ಲವೂ ಇತಿಹಾಸ. ಅವರಿಗೆ ಟ್ವಿಟರ್ ಈಗ ಚಕ್ರವರ್ತಿ ಅಲೆಗ್ಸಾಂಡರ್ ತನ್ನ ಸಾಮ್ರಾಜ್ಯವನ್ನು ಸರ್ವೇ ಮಾಡುತ್ತಿರುವಂತ ಅನುಭವ ನೀಡುತ್ತೆ. ಟ್ವೀಟಿಸುತ್ತಾ, ಸಲಹೆಗಳನ್ನು ನೀಡುತ್ತಾ, ಅಸಂಖ್ಯ ಅಭಿಮಾನಿಗಳನ್ನು ಗೆದ್ದುಕೊಂಡಿದ್ದಾರೆ.

ನೀವು ಶಕ್ತಿ ಅವರನ್ನು ಟೋಲ್‍ಫ್ರೀ ಕರೆ ಮಾಡಿಯೂ ಸಂಪರ್ಕಿಸಬಹುದಾ?

ಆದ್ರೆ ಅವರ ಕೆಲ ಟ್ವಿಟರ್ ಫಾಲೋವರ್‍ಗಳಿಗೆ ಆ ಅನುಭವವಾಗಿದೆ. ಹಾಗೇ ಕೆಲವರು ಅವರ ಮೇಲೆ ಈ ಟ್ವಿಟರ್ ಮೂಲಕ ವಿಷ ಉಗುಳಿದ್ದೂ ಇದೆ. ಅವರೇ ಹೇಳೋ ಪ್ರಕಾರ, ‘ಒಂದು ಸಂದರ್ಭದಲ್ಲಂತೂ ಕೆಲ ಮಂದಿ ನಾನು ಆನ್‍ಲೈನ್‍ನಲ್ಲಿ ಇರೋದೇ ದೊಡ್ಡ ಅಪರಾಧ ಎಂಬಂತೆ ಕ್ಯಾತೆ ತೆಗೆದರು. ಆದ್ರೆ ನನ್ನ ಮೂವರು ಗೆಳೆಯರು, ಟ್ವಿಟರ್ ಅಕೌಂಟ್‍ನಿಂದ ನಾನು ದೂರ ಉಳಿಯಲು ಮಾಡಿದ್ದ ನಿರ್ಧಾರವನ್ನು ಕೈಬಿಟ್ಟು, ಬ್ಲಾಗಿಂಗ್ ಪ್ರಾರಂಭಿಸಲು ಹೇಳಿದ್ರು’.

ಡಿಜಿಟಲ್ ಲೋಕದಲ್ಲಿ ಒಂದು ಬಾಗಿಲು ಮುಚ್ಚಿದ್ರೆ, ಮತ್ತೊಂದು ಬಾಗಿಲು ತೆರೆದುಕೊಳ್ಳುತ್ತದೆ. ‘ಅಲೆಕ್ಸಾನಲ್ಲಿ ನಂಬರ್ ಒನ್ ಸ್ಥಾನ ಗಳಿಸಬೇಕು ಅಂತಲೋ ಅಥವಾ ಪ್ರತಿ ಪೋಸ್ಟ್‍ಗೆ 2 ಸಾವಿರ ಡಾಲರ್ ಹಣ ಮಾಡಬೇಕು ಅನ್ನೋದಾಗಲೀ ನನ್ನ ಉದ್ದೇಶವಾಗಿರಲಿಲ್ಲ. ಈಗಲೂ ನನಗೆ ಆ ಆಸೆಯಿಲ್ಲ. ನನ್ನ ಅಭಿಪ್ರಾಯ ತಿಳಿಸೋದಷ್ಟೇ ನನ್ನ ಉದ್ದೇಶ. ಹೀಗಾಗಿಯೇ ನನಗೆ ಕ್ವಿಲ್ ಇಷ್ಟವಾಯ್ತು.’ ಅಂತ ಹೇಳುತ್ತಾರೆ ಶಕ್ತಿ. ಹಾಗೇ ಕ್ವಿಲ್ ಮೂಲಕ ಅವರಿಗೆ ಹ್ಯೂಗೋ ಬಾರ್ರಾ, ಮನು ಕುಮಾರ್ ಜೈನ್ ಸೇರಿದಂತೆ ಹಲವು ಅದ್ಭುತ ಜನಗಳ ಪರಿಚಯವಾಗಿದ್ದಾರಂತೆ. ಹೀಗಾಗಿಯೇ ಕ್ವಿಲ್‍ಗೆ ಥ್ಯಾಂಕ್ಸ್ ಹೇಳೋದನ್ನೂ ಶಕ್ತಿ ಮರೆಯುವುದಿಲ್ಲ.

‘ಈಗಲೂ ನಾನು ಸುಳ್ಳು ವಿಷಯಗಳನ್ನ ಅಥವಾ ರೂಮರ್‍ಗಳ ಬಗ್ಗೆ ಬ್ಲಾಗ್‍ನಲ್ಲಿ ಬರೆಯುವುದಿಲ್ಲ. ಓದುಗರು ನಾನು ಬರೆಯುವುದನ್ನು ಇಷ್ಟಪಡುವುದಕ್ಕೆ ಇದೂ ಒಂದು ಕಾರಣ ಇರಬಹುದು. ನನ್ನಂತೆಯೇ ವಿಕಲಾತೀತರಿಗೆ ಕೆಲಸ ನೀಡಲು ಕ್ವಿಲ್ ಒಂದು ಡಿಜಿಟಲ್ ಏಜೆನ್ಸಿ ಸ್ಥಾಪಿಸಿದ್ರೆ ಒಳ್ಳೆಯದು’ ಅಂತ ತಮ್ಮ ಅಭಿಪ್ರಾಯ ಹಂಚಿಕೊಳ್ತಾರೆ ಶಕ್ತಿ.

ಟ್ವಿಟರ್ ಸ್ಟಾರ್ ಶಕ್ತಿ

ಕೆಲಸಗಳ ಮಧ್ಯೆಯೂ ಕ್ವಿಲ್ ಆಗಲೀ ಬ್ಲಾಗ್ ಆಗಲೀ ಅಥವಾ ಟ್ವಿಟರ್‍ಅನ್ನಾಗಲೀ ಶಕ್ತಿ ಯಾವುದೇ ಕಾರಣಕ್ಕೂ ಬಿಡಲಿಲ್ಲ. ತಾವೂ ಹೊಸ ಹೊಸ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರು. ಜೊತೆಗೆ ಜನರಿಂದ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಓದಿ ಉತ್ತರವನ್ನೂ ನೀಡುತ್ತಿದ್ದರು. ‘ಅವುಗಳಲ್ಲಿ ಟ್ವಿಟರ್ ಅಂತೂ ಸಮಯಕ್ಕಾಗಿ ನನ್ನ ಹೆಂಡತಿಯೊಂದಿಗೇ ಸ್ಪರ್ಧಿಸುತ್ತಿತ್ತು. ಹಾಸ್ಯ ಪಕ್ಕಕ್ಕಿಟ್ಟು ನೋಡೋದಾದ್ರೆ ಟ್ವಿಟರ್ ಮೆಗಾಫೋನ್ ಇದ್ದಂತೆ, ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್‍ಗಳೆರಡೂ ಇರುವ ಒಂದೇ ಸಾಧನ. ಯಾರು ಬೇಕಾದ್ರೂ, ಪ್ರಪಂಚದ ಯಾವ ಮೂಲೆಯಲ್ಲಿ ಕುಳಿತು ಬೇಕಾದ್ರೂ ನಿಮ್ಮ ಚಟುವಟಿಕೆಗಳ ಬಗ್ಗೆ ತಿಳಿಯಬಹುದು. ನಿಮ್ಮ ಕುರಿತ ಸೂಕ್ಷ್ಮ ವಿಷಯಗಳನ್ನೂ ತಿಳಿಯಬಹುದು. ನೀವೇನು ಮಾಡಿದ್ರೂ, ಏನು ಹೇಳಿದ್ರೂ ಅದು ಚರ್ಚೆಗೊಳಪಡುತ್ತೆ. ಆದ್ರೆ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದೇನಂದ್ರೆ ನನಗೆ ಬರುವ ಪ್ರತಿಯೊಂದು ಟ್ವೀಟ್‍ಗೂ ನಾನು ಉತ್ತರಿಸುತ್ತೇನೆ’ ಅಂತ ದೃಢ ನಿರ್ಧಾರದೊಂದಿಗೆ ನುಡಿಯುತ್ತಾರೆ ಶಕ್ತಿ.

‘ಪ್ರಾರಂಭದಲ್ಲಿ ನನ್ನನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ನನ್ನ ಟ್ವಿಟರ್ ಅಕೌಂಟ್ ಬಂದ್ ಮಾಡುವ ನಿರ್ಧಾರಕ್ಕೂ ಬಂದಿದ್ದೆ. ಆದ್ರೆ ಮೌಲ್ಯಯುತ ವಿಷಯಗಳನ್ನು ತಿಳಿಸದಿದ್ದರೆ, ಆನ್‍ಲೈನ್‍ನಲ್ಲಿರುವ ಜನರನ್ನೂ ಮೌಲ್ಯಯುತಗೊಳಿಸದಿದ್ದರೆ, ಅವರು ನಿಮ್ಮ ಬಳಿ ಸುಳಿಯುವುದಿಲ್ಲ, ನನ್ನನ್ನು ನಂಬುವುದಿಲ್ಲ. ಆ ನಿಟ್ಟಿನಲ್ಲಿ ನಾನು ಗಮನ ಹರಿಸಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಹೀಗೆ ಸಾಕಷ್ಟು ಶ್ರಮವಹಿಸಿದೆ. ಅದೀಗ ನನಗೆ ಕೊನೆಗೂ ಉತ್ತಮ ಪ್ರತಿಫಲ ನೀಡುತ್ತಿದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಸಂಸದ ರೆಹ್ಮಾನ್ ಮಲಿಕ್ ನನ್ನನ್ನು ಫಾಲೋ ಮಾಡುತ್ತಿರೋದು ನೋಡಿ ನನಗೆ ಆಶ್ಚರ್ಯವಾಯ್ತು. ಹಾಗಂತ ನಾನು ಬೆಳ್ಳಂಬೆಳಗ್ಗೆಯೇ ಎದ್ದು, ಇವತ್ತು ನನ್ನ ಟ್ವಿಟರ್ ಫಾಲೋವರ್ಸ್‍ಗೆ ಏನ್ ಹೇಳಲಿ ಅಂತ ಯೋಚನೆ ಮಾಡ್ತಾ ಕೂರೋದಿಲ್ಲ. ನಾನು ಜಸ್ಟಿನ್ ಬೀಬರ್ ಅಲ್ವಲ್ಲಾ’ ಅಂತ ನಗುತ್ತಾರೆ ಶಕ್ತಿ.

ಆನ್‍ಲೈನ್ ಇರಲಿ, ಆಫ್‍ಲೈನ್ ಇರಲಿ ಸತ್ಯದಿಂದಿರಿ

‘ನೀವು ಆಫ್‍ಲೈನ್‍ನಲ್ಲಿ ನಿಜ ಜೀವನದಲ್ಲಿ ಹೇಗಿರ್ತೀರೋ, ಆನ್‍ಲೈನ್‍ನಲ್ಲಿ ಕೂಡ ಹಾಗೇ ಇರಿ. ಆನ್‍ಲೈನ್‍ನಲ್ಲಿ ಸೀಕ್ರೆಟ್ ಅಂತಾಗಲೀ ಅಥವಾ ಪ್ರೈವಸಿ ಅಂತ ಏನೂ ಇಲ್ಲ. ಏನೇ ಇದ್ರೂ ಕೆಲವೇ ದಿನಗಳಲ್ಲಿ ಎಲ್ಲವೂ ಬಹಿರಂಗವಾಗಿಬಿಡುತ್ತೆ. ಯಾರಿಗಾದ್ರೂ ಸಹಾಯ ಬೇಕಿದ್ರೆ, ಸಹಾಯ ಮಾಡಲು ಪ್ರಯತ್ನಿಸಿ. ನಿಮಗೇ ಏನಾದ್ರೂ ಸಹಾಯ ಬೇಕು ಅಂದ್ರೆ, ಸಹಾಯ ಕೇಳಿ ಪಡೆಯಿರಿ. ಫಾಲೋವರ್ಸ್‍ಗಳ ಸಂಖ್ಯೆಗಿಂತ ಇರುವ ಫಾಲೋವರ್‍ಗಳೊಂದಿಗೆ ಚರ್ಚೆಗಳು, ಸಂಭಾಷಣೆಗಳು ಮುಖ್ಯ. ಪ್ರತಿಯೊಬ್ಬರ ಟ್ವೀಟ್‍ಗೂ ಉತ್ತರಿಸಲು ಪ್ರಯತ್ನಿಸಿ’ ಅಂತ ಕಿವಿ ಮಾತು ಹೇಳ್ತಾರೆ ಶಕ್ತಿ.

ಸೂರ್ಯಕಿರಣಗಳ ಬೆನ್ನಟ್ಟಿ...

ಶಕ್ತಿ ಅವರ ಪ್ರಕಾರ ಇದಿನ್ನೂ ಪ್ರಾರಂಭವಷ್ಟೇ. ಯಾಕಂದ್ರೆ ಸಾಧಿಸುವುದು ಇನ್ನೂ ತುಂಬಾ ಇದೆ. ತಮ್ಮಂತಹ ವಿಕಲಾತೀತರಿಗೆ ಬೆಳೆಯಲು ಸಮಾಜದಲ್ಲಿ ಒಂದೊಳ್ಳೆ ವೇದಿಕೆ ನೀಡಬೇಕಿದೆ. ಅದರಲ್ಲೂ ಹೆಚ್ಚಾಗಿ ಅಂಗವಿಲರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಶಕ್ತಿ.

‘ನೀವು ಏನೆಲ್ಲಾ ಮಾಡ್ತಿರೋ, ನಾನೂ ಅವನ್ನೆಲ್ಲಾ ಮಾಡೋಕ್ಕಾಗುತ್ತಾ? ಅದೇ ಈಗಿನ ದೊಡ್ಡ ಸಮಸ್ಯೆ. ನಮ್ಮನ್ನು ಕರುಣೆಯಿಂದ ನೋಡಬೇಡಿ. ಬೇರೆ ವೃತ್ತಿಪರರಂತೆಯೇ ನೋಡಿ. ನಮಗೂ ಬದುಕಲು ಬಿಡಿ. ವೀಲ್‍ಚೇರ್‍ನಲ್ಲಿ ಓಡಾಡಲು ಸಾಧ್ಯವಾಗುವಂತಹ ವ್ಯವಸ್ಥೆ ತುಂಬಾ ಕಡಿಮೆ. ರಸ್ತೆ, ಫುಟ್‍ಪಾತ್, ಕಟ್ಟಡಗಳು, ಆಸ್ಪತ್ರೆ, ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್... ಹೀಗೆ ಎಲ್ಲಾ ಕಡೆಗಳಲ್ಲೂ ಈ ಸಮಸ್ಯೆಯಿದೆ. ಇನ್ನು ಪ್ರಯಾಣಿಸುವ ವ್ಯವಸ್ಥೆಯಂತೂ ತೀರಾ ಕಡಿಮೆ. ಒಮ್ಮೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನನಗೆ ನನ್ನ ಪ್ರಾಸ್ಥೆಟಿಕ್ ಸಪೋರ್ಟ್‍ಅನ್ನು ತೆಗೆದು, ವೀಲ್‍ಚೇರ್‍ನಿಂದ ಮೇಲೇಳಲು ತಿಳಿಸಿದ್ದರು. ನಾನು ಭಾರತದ ಯಾವ ಭಾಗದಲ್ಲೂ ಬಸ್ ಹತ್ತಲಾಗುವುದಿಲ್ಲ’ ಅಂತ ಗಂಭೀರವಾಗುತ್ತಾರೆ ಶಕ್ತಿ.

‘ನಮ್ಮಂತೆ ವಿಕಲಾತೀತ ರಾಜಕಾರಿಣಿ ಇದ್ದಿದ್ದರೆ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೋ? ಆದ್ರೆ ಸುಮಾರು 2 ಕೋಟಿ ಮಂದಿ ವಿಕಲಾಂಗರಿರುವ ಭಾರತದಲ್ಲಿ ನಮ್ಮನ್ನು ಪ್ರತಿನಿಧಿಸುವಂತಹ ಒಬ್ಬ ವ್ಯಕ್ತಿಯೂ ಇಲ್ಲದಿರುವುದೇ ವಿಪರ್ಯಾಸ.’ ಅಂತ ಅಸಮಾಧಾನ ಹೊರ ಹಾಕ್ತಾರೆ ಶಕ್ತಿ.

ಲೇಖಕರು: ಬಿಂಜಾಲ್​ ಷಾ
ಅನುವಾದಕರು: ವಿಶಾಂತ್​​

Related Stories

Stories by YourStory Kannada