ಭಾರತದಲ್ಲಿ ಮಹಿಳಾ ಸಬಲೀಕರಣ...ಸಾಮಾಜಿಕ ಉದ್ಯಮದಲ್ಲಿ ಮಹಿಳೆಯರ ಪಾಲು

ಟೀಮ್​​ ವೈ.ಎಸ್​​. ಕನ್ನಡ

0

ಚೇತನ್ ವಿಜಯ್ ಸಿನ್ಹಾ ಈ ಬಾರಿ ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶ್ವಾಬ್ ಫೌಂಡೇಶನ್ ಹಾಗೂ ಜುಬಿಲಂಟ್ ಫೌಂಡೇಶನ್ ಜೊತೆಯಾಗಿ `ಮನ್ ದೇಶೀ ಮಹಿಳಾ ಸಹಕಾರಿ ಬ್ಯಾಂಕ್'ನ ಸಂಸ್ಥಾಪಕ ಚೇತನ್ ವಿಜಯ್ ಸಿನ್ಹಾ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿವೆ. ಸಿನ್ಹಾ ಅವರ `ಮನ್ ದೇಶೀ ಗ್ರೂಪ್ ಆಫ್ ವೆಂಚರ್ಸ್' 2020ರ ವೇಳೆಗೆ ಗ್ರಾಮೀಣ ಪ್ರದೇಶದ ಒಂದು ಮಿಲಿಯನ್ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವ ಗುರಿಯನ್ನುಟ್ಟುಕೊಂಡಿದೆ. ಇನ್ನು ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿಯ ರೇಸ್‍ನಲ್ಲಿ ಅಂತಿಮ ಸುತ್ತು ತಲುಪಿದ್ದ ಉಳಿದ ನಾಲ್ವರು ಮಹಿಳೆಯರು ಅನ್ನೋದು ವಿಶೇಷ. `ಬ್ರೇಕ್‍ಥ್ರೂ'ನ ಸಂಸ್ಥಾಪಕಿ ಮಲ್ಲಿಕಾ ದತ್, `ಯುವ ಪರಿವರ್ತನ್' ಸಂಸ್ಥೆಯ ಸಂಸ್ಥಾಪಕಿ ಮೃಣಾಲಿನಿ ಖೇರ್, `ಆಪರೇಷನ್ ಆಶಾ'ವನ್ನು ಹುಟ್ಟು ಹಾಕಿದ್ದ ಶೀಲಿ ಬಾತ್ರಾ ಕೂಡ ಫೈನಲ್ ಪ್ರವೇಶಿಸಿದ್ರು.

ಸಾಮಾಜಿಕ ಉದ್ಯಮ ಮಹಿಳೆಯರಿಗೆ ಹೇಳಿ ಮಾಡಿಸಿದಂಥದ್ದು. ಅಂಕಿ-ಅಂಶಗಳು ಕೂಡ ಇದನ್ನು ಪುಷ್ಠೀಕರಿಸುತ್ತವೆ. ಜುಲೈನಲ್ಲಿ ಬ್ರಿಟನ್‍ನ ಸಾಮಾಜಿಕ ಉದ್ಯಮಿಗಳು ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ವರದಿಯ ಪ್ರಕಾರ ಬ್ರಿಟನ್‍ನಲ್ಲಿ ಸಾಮಾಜಿಕ ಉದ್ಯಮವನ್ನು ಮುನ್ನಡೆಸುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಶೇಕಡಾ 38ರಷ್ಟು ಸಾಮಾಜಿಕ ಉದ್ಯಮಗಳನ್ನು ಮಹಿಳೆಯರೇ ಆಳುತ್ತಿದ್ದಾರೆ. ಎಸ್‍ಎಂಇಗಳಲ್ಲಿ ಶೇಕಡಾ 19ರಷ್ಟು ಮಹಿಳೆಯರಿದ್ರೆ, ಎಫ್‍ಟಿಎಸ್‍ಇನಲ್ಲಿ ಶೇಕಡಾ 3ರಷ್ಟು ಪಾಲು ಮಹಿಳೆಯರದ್ದು. ಇನ್ನು ಶೇಕಡಾ 91ರಷ್ಟು ಸಾಮಾಜಿಕ ಉದ್ಯಮಗಳಲ್ಲಿ, ಸಂಸ್ಥೆಯನ್ನು ಮುನ್ನಡೆಸುತ್ತಿರುವ ತಂಡದಲ್ಲಿ ಕನಿಷ್ಠ ಒಬ್ಬ ಮಹಿಳೆಯಾದ್ರೂ ಇದ್ದಾಳೆ. ಎಸ್‍ಎಂಇಗಳಲ್ಲಿ ಶೇಕಡಾ 49ರಷ್ಟು ಮಂದಿ ಪುರುಷ ನಿರ್ದೇಶಕರಿದ್ದಾರೆ. ಮಲೇಶಿಯಾ, ಲೆಬನಾನ್, ರಷ್ಯಾ, ಇಸ್ರೇಲ್, ಐಲ್ಯಾಂಡ್, ಅರ್ಜೆಂಟೈನಾದಂತಹ ರಾಷ್ಟ್ರಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಸಾಮಾಜಿಕ ಉದ್ಯಮಗಳತ್ತ ಆಕರ್ಷಿತರಾಗಿದ್ದಾರೆ. ಸ್ತ್ರೀಯರೇ ಸಾಮಾಜಿಕ ಉದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಆದ್ರೆ ಭಾರತದ ಮಟ್ಟಿಗೆ ಆ ಕನಸು ಇನ್ನೂ ನನಸಾಗಿಲ್ಲ. ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕೂಡ ಉದ್ಯಮಗಳನ್ನು ಮುನ್ನಡೆಸಬೇಕೆಂಬ ಉದ್ದೇಶ ಇನ್ನೂ ಸಾಕಾರಗೊಂಡಿಲ್ಲ.

ಆದ್ರೆ ಲತ್ವಿಯಾ, ಅಮೆರಿಕ, ಫಿನ್‍ಲ್ಯಾಂಡ್ ಮತ್ತು ಚೀನಾದಂತಹ ದೇಶಗಳಲ್ಲಿ ಸಾಮಾಜಿಕ ಉದ್ಯಮಗಳಲ್ಲಿ ಮಹಿಳೆಯರು ಕೂಡ ಸೈ ಎನಿಸಿಕೊಂಡಿದ್ದಾರೆ. ಭಾರತದಲ್ಲೂ ಮಹಿಳೆಯರು ಉದ್ಯಮಗಳತ್ತ ಮುಖಮಾಡುವಂತೆ ಪ್ರೋತ್ಸಾಹಿಸಲು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಕಾಲೇಜು ದಿನಗಳಿಂದ್ಲೇ ಯುವತಿಯರಲ್ಲಿ ಉದ್ಯಮಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಬೇಕು. ಅಚ್ಚರಿಯ ವಿಷಯ ಅಂದ್ರೆ ಅಮೆರಿಕದಲ್ಲಿ ಸಾಮಾಜಿಕ ಉದ್ಯಮಗಳಿಗೆ ಕೈಹಾಕುವವರ ಪೈಕಿ ಬಹುತೇಕರು ವಿದ್ಯಾರ್ಥಿನಿಯರು. ಹಾಗಾಗಿ ಕಾಲೇಜಿನಲ್ಲಿದ್ದಾಗ್ಲೇ ಯುವತಿಯರಿಗೆ ಸಾಮಾಜಿಕ ಉದ್ಯಮಗಳ ಆಗು-ಹೋಗುಗಳ ಬಗ್ಗೆ ತಿಳಿಹೇಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಸಾಮಾಜಿಕ ಉದ್ಯಮಗಳತ್ತ ಬರುವಂತೆ ಪ್ರೋತ್ಸಾಹಿಸಬೇಕು. ಬಹುತೇಕ ಸಂದರ್ಭಗಳಲ್ಲಿ ಅವರಿಗೆ ಸಲಹೆ ಹಾಗೂ ಬಂಡವಾಳದ ಅಗತ್ಯವಿರುತ್ತದೆ. ಮಹಿಳಾ ಕಾರ್ಯಪಡೆಯನ್ನು ಭಾರತ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಮಹಿಳಾ ಉದ್ಯಮಿಗಳನ್ನು ಸರಿಯಾಗಿ ಉತ್ತೇಜಿಸುವ ಕಾರ್ಯ ಭಾರತದಲ್ಲಿ ಆಗ್ತಾ ಇಲ್ಲ. ಮಹಿಳಾ ಉದ್ಯೋಗಿಗಳನ್ನು ಅನ್ನು ಸರಿಯಾಗಿ ಬಳಸಿಕೊಂಡಲ್ಲಿ ಭಾರತದ ಜಿಡಿಪಿ ದರ 4.2ರಷ್ಟಾಗಲಿದೆ ಅನ್ನೋದು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಭಿಪ್ರಾಯ. ಸಾಮಾಜಿಕ ಉದ್ಯಮ ಮಹಿಳಾ ಸ್ವರೂಪವನ್ನು ಹೊಂದಿದೆ. ಇತ್ತೀಚೆಗಷ್ಟೆ ಪ್ರಕಟವಾದ ಲೇಖಲ `ದಿ ಇಂಡಿಪೆಂಡೆಂಟ್' ಕೂಡ ಇದೊಂದು ವಾಸ್ತವ ಅನ್ನೋದನ್ನು ಪುಷ್ಠೀಕರಿಸುತ್ತದೆ.

ಪ್ರಮುಖ ಉದ್ಯಮಗಳಿಗೆ ಹೋಲಿಸಿದ್ರೆ ಮಹಿಳೆಯರು ಸಾಮಾಜಿಕ ಉದ್ಯಮದಲ್ಲಿ ಉತ್ತುಂಗ ತಲುಪಲಿದ್ದಾರೆ. ಸಾಂಪ್ರದಾಯಿಕ ಕಾರ್ಪೊರೇಟ್ ಜೀವನವನ್ನು ಬಿಟ್ಟು, ಹೊಸ ವೃತ್ತಿ ಆರಂಭಿಸಲು ಭಾರತದ ಮಹಿಳೆಯರಿಗೆ ಸಾಮಾಜಿಕ ಉದ್ಯಮ ಒಳ್ಳೆಯ ಅವಕಾಶ ಕಲ್ಪಿಸಲಿದೆ. ವೃತ್ತಿಯಲ್ಲಿ ಏಳಿಗೆ ಸಾಧಿಸಲು ಭಾರತದ ಮಹಿಳೆಯರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಅನ್ನೋದು ಕಠು ಸತ್ಯ. ಮಹಿಳಾ ಸಬಲೀಕರಣದಲ್ಲಿ ಭಾರತ 128 ರಾಷ್ಟ್ರಗಳ ಪೈಕಿ 115ನೇ ಸ್ಥಾನದಲ್ಲಿದೆ. ಬೂಝ್ & ಕಂಪನಿ ಮಾಡಿದ್ದ ಥರ್ಡ್ ಬಿಲಿಯನ್ ಇಂಡೆಕ್ಸ್‍ನಲ್ಲಿ ಭಾರತ ಇಥಿಯೋಪಿಯಾ, ಬಾಂಗ್ಲಾದೇಶ ಮತ್ತು ಪಪುವಾ ನ್ಯೂ ಜಿನೆವಾದಂತಹ ದೇಶಗಳಿಗಿಂತಲೂ ಹಿಂದಿದೆ. ಸಾಮಾಜಿಕ ಉದ್ಯಮಗಳತ್ತ ಮಹಿಳೆಯರನ್ನು ಕರೆತರಲು ಸರ್ಕಾರಿ ಅಥವಾ ಕಾಸಗಿಯಾಗಿ ಯಾವುದೇ ಯೋಜನೆಗಳನ್ನು ಭಾರತದಲ್ಲಿ ಹಮ್ಮಿಕೊಳ್ಳುತ್ತಿಲ್ಲ. ಆದ್ರೆ ಬ್ರಿಟಿಷ್ ಕೌನ್ಸಿಲ್ ಭಾರತದಲ್ಲಿ `ಯಂಗ್ ವುಮೆನ್ ಸೋಶಿಯಲ್ ಎಂಟರ್‍ಪ್ರೆನ್ಯೂರ್‍ಶಿಪ್ ಡೆವಲಪ್‍ಮೆಂಟ್ ಪ್ರೋಗ್ರಾಮ್' ಅನ್ನು ಆಯೋಜಿಸಿದೆ. ಸಾಮಾಜಿಕ ಉದ್ಯಮದಲ್ಲಿ ನಿಪುಣ ತರಬೇತುದಾರರಾಗಲು ಮಹಿಳೆಯರಿಗೆ ಬ್ರಿಟಿಷ್ ಕೌನ್ಸಿಲ್ ನೆರವಾಗುತ್ತಿದೆ.

ಆದ್ರೆ ಮಹಿಳೆಯರನ್ನು ಪ್ರೋತ್ಸಾಹಿಸಲು ಇನ್ನಷ್ಟು ಯೋಜನೆಗಳ ಅಗತ್ಯವಿದೆ. ಸಾಲ, ಸಲಹೆ, ಮಹಿಳಾ ಸಾಮಾಜಿಕ ಉದ್ಯಮಿಗಳಿಗಾಗಿ ರಾಷ್ಟ್ರೀಯ ಸಂಘಟನೆ, ತೆರಿಗೆ ವಿನಾಯಿತಿ ಮತ್ತು ಮಹಿಳಾ ಸಿಬ್ಬಂದಿ ನೇಮಕಕ್ಕೆ ಒತ್ತು ಕೊಟ್ಟಲ್ಲಿ ಮಾತ್ರ ಮಹಿಳಾ ಸಬಲೀಕರಣದ ಕನಸು ನನಸಾಗಬಹುದು.

ಲೇಖಕರು: ನೆಲ್ಸನ್​​ ವಿನೋದ್​​ ಮೊಸೆಸ್​​
ಅನುವಾದಕರು: ಭಾರತಿ ಭಟ್​​​

Related Stories

Stories by YourStory Kannada