ಕಾಫಿ ಪುಡಿ, ಟೀ ಪೌಡರ್​ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!

ಟೀಮ್​ ವೈ.ಎಸ್​. ಕನ್ನಡ

1

ಬೆಳಗ್ಗೆ ಎದ್ದು ಒಂದ್​ ಕಪ್​ ಕಾಫಿ ಕುಡಿಯೋಣ ಅಂದ್ರೆ ಕಾಫಿ ಪುಡಿ ಖಾಲಿ ಆಗಿದೆ. ದೋಸೆ ತಿನ್ನಬೇಕು ಅನಿಸಿದ್ರೂ ಮನೆಯಲ್ಲಿ ಹಿಟ್ಟಿಲ್ಲ. ಅಂಗಡಿಗೆ ಹೋಗಿ ತರೋಣ ಅಂದ್ರೆ ಅದಕ್ಕೆ ಟೈಮ್​ ಇಲ್ಲ. ಆಫೀಸ್​ಗೆ ಹೋಗುವ ಅರ್ಜೆಂಟ್​ ಬೇರೆ. ಒಂದೈದು ನಿಮಿಷ ಹೆಚ್ಚು ಕಡಿಮೆ ಆದ್ರೂ, ಪಿಕ್​ಅಪ್​ ಕ್ಯಾಬ್​ ಹೊರಟು ಹೋಗುತ್ತದೆ. ಬಸ್​ ಮಿಸ್​ ಆಗಿ ಎಲ್ಲವೂ ಉಲ್ಟಾ ಆಗುತ್ತದೆ. ಆಫೀಸ್​ನಲ್ಲಿ ಬಾಸ್​ ಬೇರೆ ಟೈಮ್​ ಮಿಸ್​ ಆದ್ರೆ ಕಿರಿ ಕಿರಿ ಮಾಡ್ತಾರೆ. ಪಂಚಿಂಗ್​ ಟೈಮ್​ ಹೆಚ್ಚು ಕಡಿಮೆ ಆದ್ರೆ ಹೆಚ್​.ಆರ್​. ನಿಂದ ಕಿರಿ ಕಿರಿ ಗ್ಯಾರೆಂಟಿ.  ಹೀಗಾಗಿ ಮನೆಯಿಂದ ಹೊರಗಡೆ ಹೋಗಿ ಅಗತ್ಯ ವಸ್ತುಗಳನ್ನು  ತರಲು ಆಗುವುದಿಲ್ಲ. ಇದ್ದಿದ್ದರಲ್ಲೇ ಅಡ್ಜಸ್ಟ್​ ಮಾಡಿಕೊಂಡು ಆಫೀಸ್​ಗೆ ಹೋಗುವ ಅನಿವಾರ್ಯತೆ. ಆದ್ರೆ ಇನ್ನುಮುಂದೆ ಹೀಗೆ ಮಾಡಬೇಕಿಲ್ಲ. ನಿಮ್ಮ ಅಗತ್ಯ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ. ಅದಕ್ಕಾಗೇ ಆರಂಭವಾಗಿದೆ "ಡೈಲಿ ನಿಂಜಾ".

ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ನಿತ್ಯದ ಅಗತ್ಯ ವಸ್ತುಗಳ ಪೂರೈಕೆಯೇ ಒಂದು ಸವಾಲಾಗಿದೆ. ಇನ್ನು ಅಪಾರ್ಟ್​ಮೆಂಟ್​ಗಳಲ್ಲಿ ವಾಸವಿರುವ ಬಹುತೇಕರಿಗೆ ಅಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಹೋಗಿ ತರುವುದೂ ಕಿರಿಕಿರಿಯಾಗಿ ಪರಿಣಮಿಸಿದೆ. ಹಾಗಾಗಿ ಅಪಾರ್ಟ್​ಮೆಂಟ್​ಗಳ ನಿವಾಸಿಗಳು ಪ್ರತಿದಿನ ತಮ್ಮ ಜೀವನ ನಿರ್ವಹಣೆಗೆ ಬೇಕಾದ ವಸ್ತುಗಳನ್ನು ವಸ್ತುಗಳನ್ನು ತಾವೇ ಕುದ್ದು ಹೋಗಿ ತರಲು ಬಿಡುವಾಗದೆ, ಮತ್ತಿನ್ಯಾರನ್ನೋ ಅವಲಂಭಿಸುವುದು ಅನಿವಾರ್ಯ. ಆದರೆ ಈಗ ಇಂತಹ ಸಮಸ್ಯೆ ಎದುರಸಬೇಕಾಗಿಲ್ಲ. ಬೆಳಗ್ಗೆ ಹಾಲಿನೊಂದಿಗೆ ಹಿಡಿದು ನಿಮಗೆ ಅಗತ್ಯ ವಸ್ತುಗಳನ್ನು ಹೋಮ್ ಡೆಲಿವರಿ ಪಡೆಯಬಹುದು. ಇಂತಹ ಸೇವೆಯ ಜತೆಗೆ ನಿಮ್ಮ ಸಮಯ ಮತ್ತು ಶ್ರಮ ಉಳಿಸಲೆಂದೇ "ಡೈಲಿ ನಿಂಜಾ" ಈಗ ಮಾರುಕಟ್ಟೆಗೆ ಬಂದಿದೆ.

" ಈ "ಡೈಲಿನಿಂಜಾ"ದಿಂದ ಸಾಕಷ್ಟು ಹಾಲಿನ ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕವಾಗಿದೆ. ಇದರಿಂದ ಸಣ್ಣ ಮಟ್ಟದ ವ್ಯಾಪಾರಿಗಳು ಸಹ ಲಾಭ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ರೀಚ್ ಆಗಲು ಪ್ರಯತ್ನ ಪಡಲಾಗುತ್ತಿದೆ."
- ಶ್ರೀನಿವಾಸ್​ಮೂರ್ತಿ, ಡೈಲಿನಿಂಜಾ ಬ್ಯುಸಿನೆಸ್ ಡೆವಲಪರ್

ಹೌದು "ಡೈಲಿ ನಿಂಜಾ" ಪ್ರತಿ ಅಪಾರ್ಟ್​ಮೆಂಟ್​ನ ಪರಿಚಯಸ್ಥ ಹಾಲಿನ ವ್ಯಾಪಾರಿಯ ಮೂಲಕವೇ ನಿತ್ಯದ ಅಗತ್ಯ ವಸ್ತುಗಳನ್ನು ಬೆಳಗ್ಗೆ ಹಾಲಿನ ಜತೆಗೇ ಗ್ರಾಹಕರಿಗೆ ತಲುಪುವಂತೆ ಮಾಡುತ್ತಿದೆ.  ಹಾಲಿನ ವ್ಯಾಪಾರಿಗಳಿಗೂ ಹೊಸ ರೀತಿಯ ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಇನ್ನು ಪ್ರತಿದಿನ ಹಾಲಿನ ವ್ಯಾಪಾರಿ ಹಾಲನ್ನಷ್ಟೇ ಅಲ್ಲದೆ ನಿಮಗೆ ಆ ದಿನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನೂ ಇದರ ಮೂಲಕ ಪೂರೈಸುತ್ತಾನೆ.

ಡೆಲಿವರಿ ಹೇಗೆ..?

"ಡೈಲಿನಿಂಜಾ" ಸೇವೆಗಾಗಿ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ. ಗೂಗಲ್ ಪ್ಲೇ ಸ್ಟೋರ್​ನಲ್ಲಿ "ಡೈಲಿ ನಿಂಜಾ" ಆ್ಯಪ್ ಡೌನ್​ಲೋಡ್​ ಮಾಡಬೇಕು ಪ್ರತಿ ದಿನ ನಿಮಗೆ ಅಂದಿಗೆ ಬೇಕಾದ ತರಕಾರಿ, ಹಾಲು ಮೊಟ್ಟೆ ದಿನಸಿಯನ್ನು ಹಿಂದಿನ ದಿನವೇ "ಡೈಲಿನಿಂಜಾ" ಆ್ಯಪ್ ಮೂಲಕ ಆರ್ಡರ್ ಮಾಡಿದರೆ ಸಾಕು ಅದು ಮರುದಿನ ಬೆಳಗ್ಗೆ ಹಾಲು ತಲುಪಿಸುವ ವೇಳೆಗೆ ನಿಮ್ಮ ಮನೆಗೆ ಬಾಗಿಲಿಗೆ ಬಂದು ಸೇರುತ್ತದೆ.

ಇದನ್ನು ಓದಿ: ಐಟಿ ತಂತ್ರಜ್ಞನಿಂದ ಹೈನುಗಾರಿಕೆ.. ! ಇದು ಅಮೃತ ಡೈರಿಯ ಕಥೆ

ಬೆಂಗಳೂರು ಮೂಲದ ಕಂಪನಿ

ವಿಶೇಷ ಎಂದರೆ ಈ "ಡೈಲಿ ನಿಂಜಾ"ದ ಮೂಲ ಬೆಂಗಳೂರು. 2005ರ ಜೂನ್​ನಲ್ಲಿ ಈ "ಡೈಲಿ ನಿಂಜಾ" ಬೆಂಗಳೂರಿನಲ್ಲಿ ಆರಂಭವಾಯಿತು. ಈ ಕಂಪನಿಯಲ್ಲಿ ತಾಂತ್ರಿಕ ಸಿಬ್ಬಂದಿ ಸೇರಿ 120 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಸುಮಾರು 22 ಸಾವಿರ ಜನರು ಈ ಆ್ಯಪ್ ಬಳಸುತ್ತಿದ್ದಾರೆ. ನಗರದ 400ಕ್ಕೂ ಹೆಚ್ಚಿನ ಪ್ರತಿಷ್ಠಿತ ಅಪಾರ್ಟ್​ಮೆಂಟ್​ಗಳಿಗೆ ಈ "ಡೈಲಿನಿಂಜಾ"ದಿಂದ ಅವರ ಅಗತ್ಯದ ವಸ್ತುಗಳನ್ನು ಡೆಲಿವರಿ ಮಾಡಲಾಗುತ್ತಿದೆ. ಏನಿಲ್ಲವೆಂದರೂ ಪ್ರತಿ ನಿತ್ಯ 10000 ಆರ್ಡರ್​ಗಳು ಬರುತ್ತಿವೆ. ಪ್ರತಿ ನಿತ್ಯ ಹದಿನೈದು ಲಕ್ಷ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಯುತ್ತಿದೆ.

ಸಣ್ಣ ವ್ಯಾಪಾರಿಗಳಿಗೆ ಉದ್ಯೋಗಾವಕಾಶ

ಕನಿಷ್ಠ ನೂರು ಮನೆಗಳಿಗೆ ಹಾಲು ತಲುಪಿಸುವ ಸಣ್ಣ ಹಾಲಿನ ವ್ಯಾಪಾರಿಗಳಿಗೂ "ಡೈಲಿ ನಿಂಜಾ" ತನ್ನ ಮೂಲಕ ಉದ್ಯೋಗಾವಕಾಶ ಒದಗಿಸಲು ಚಿಂತಿಸಿದೆ. ಅಷ್ಟೇ ಅಲ್ಲದೆ ದೇಶದ ಇತರ ನಗರಗಳಿಗೂ ತನ್ನ ಸೇವೆ ವಿಸ್ತರಿಸುತ್ತಿದೆ. ಕೇವಲ ಅಪಾರ್ಟ್​ಮೆಂಟ್​ಗಳಷ್ಟೇ ಅಲ್ಲದೇ ಮನೆಗಳ ಗ್ರಾಹಕರಿಗೂ ಸೇವೆ, ಮತ್ತಷ್ಟು ಸಣ್ಣ ಹಾಲಿನ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲು ಮುಂದಾಗಿದೆ. ಸದ್ಯ ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಅಪಾರ್ಟ್​ಮೆಂಟ್​ಗಳಿಗೆ ಹಾಲು ತಲುಪಿಸುವ ಸಣ್ಣ ವ್ಯಾಪಾರಿಗಳು ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ವ್ಯಾಪಾರಿಗಳ ಸಂಖ್ಯೆಯನ್ನು 1000ಕ್ಕೆ ಹೆಚ್ಚಿಸಿ ಒಂದು ಲಕ್ಷ ಮನೆಗಳಿಗೆ ಸೇವೆ ನೀಡುವ ಉದ್ದೇಶ ಹೊಂದಿದೆ. ನಗರದ ವೇಗದ ಜೀವನ ಶೈಲಿಗೆ ತಕ್ಕಂತೆ ದಿನಬಳಕೆ ವಸ್ತುಗಳನ್ನೂ ಪೂರೈಸಲು ಈ ಮೂಲಕ "ಡೈಲಿ ನಿಂಜಾ" ಮುಂದಾಗಿದೆ.

"ಮನೆಗೆ ಅಗತ್ಯ ವಸ್ತುಗಳನ್ನು ತರುವ ನಮ್ಮ ಚಿಂತೆ ಕೊಂಚ ಕಡಿಮೆ ಆಗಿದೆ. ಯಾಕಂದ್ರೆ ಡೈಲಿ ನಿಂಜಾ ಮೂಲಕ ನಾವು ಎಲ್ಲವನ್ನೂ ಪಡೆಯುತ್ತಿದ್ದೇವೆ. ನಮ್ಮ ಸಮಯದ ಉಳಿತಾಯವಾಗುತ್ತಿದೆ. ರಜಾ ದಿನಗಳಲ್ಲಿ ಮನೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ತರುವ ಕೆಲಸವೂ ಕಡಿಮೆ ಆಗಿದೆ."
-  ಸೌಮ್ಯ, ಗೃಹಿಣಿ

ಈ ಆ್ಯಪ್​ನ್ನು ಮಹರಾಷ್ಟ್ರ ಮೂಲದ ಅನುರಾಗ್ ಗುಪ್ತ ಅಭಿವೃದ್ಧಿಪಡಿಸಿದವರು. ಅಪಾರ್ಟ್​ಮೆಂಟ್ ​ಒಂದರಲ್ಲಿ ವ್ಯಾಪಾರಿಯೊಬ್ಬರು ಅವರ ಬಳಿ ನಮಗೂ ಒಂದು ಆ್ಯಪ್ ತಯಾರಿಸಿಕೊಡಿ ಎಂದು ಕೇಳಿದ್ದರಂತೆ. ಆಗ ಅಭಿವೃದ್ಧಿಯಾಗಿದ್ದೇ ಈ ಡೈಲಿ ನಿಂಜಾ.

ಸಣ್ಣ ವ್ಯಾಪಾರಿಗಳಿಗೂ ಭರವಸೆ

ಕೇವಲ ಹಾಲಿನ ವ್ಯಾಪಾರಿಗಳಷ್ಟೇ ಅಲ್ಲದೆ, ಸ್ಥಳೀಯ ಸಣ್ಣ ವ್ಯಾಪಾರಿಗಳೂ ಈ ಆ್ಯಪ್​ನೊಂದಿಗೆ ಕೈಜೋಡಿಸಿ ತಮಗೆ ಬೇಕಾದ ನಿತ್ಯದ ತಾಜಾ ವಸ್ತುಗಳನ್ನು ಡೈಲಿ ನಿಂಜಾ ಮೂಲಕ ಆರ್ಡರ್ ಪಡೆದು ತಮ್ಮ ಗ್ರಾಹಕರಿಗೆ ತಲುಪಿಸಬಹುದಾಗಿದೆ. ನಗರದೆಲ್ಲೆಡೆ ಬಹುತೇಕ ಅಪಾರ್ಟ್​ಮೆಂಟ್​ಗಳಲ್ಲಿ ತನ್ನ ವ್ಯವಹಾರ ಹೊಂದಿರುವ "ಡೈಲಿ ನಿಂಜಾ" ತನ್ನ ಸೇವೆಯನ್ನು ವಿಸ್ತರಿಸಿ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲು ಹಾಕಿದೆ.

ಇದನ್ನು ಓದಿ:

1. ಲಿಂಗ ಪರಿವರ್ತನೆ ಮಾಡಿಸಿಕೊಂಡ ಅಂಜಲಿ ಆಮಿರ್ ಈಗ ಮಮ್ಮುಟ್ಟಿ ಚಿತ್ರಕ್ಕೆ ನಾಯಕಿ..!

2. ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!

3. ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..!

Related Stories